
ನವದೆಹಲಿ(ಮೇ.22): ಜಾಗತಿಕವಾಗಿ ಏರಿಕೆಯಾಗುತ್ತಿರುವ ರಸಗೊಬ್ಬರ ಬೆಲೆಯಿಂದ ರೈತರನ್ನು ರಕ್ಷಿಸಲು ಕೇಂದ್ರ ರಸಗೊಬ್ಬರಕ್ಕಾಗಿ 1.1 ಲಕ್ಷ ಕೋಟಿ ರು. ಹೆಚ್ಚುವರಿ ಸಬ್ಸಿಡಿ ಘೋಷಣೆ ಮಾಡಿದೆ. ಶನಿವಾರ ಟ್ವೀಟ್ ಮೂಲಕ ನಿರ್ಮಲಾ ಸೀತಾರಾಮನ್ ಈ ವಿಷಯವನ್ನು ಘೋಷಿಸಿದ್ದಾರೆ. ಇದರಿಂದ ಮುಂಗಾರಿನಲ್ಲಿ ಬಿತ್ತನೆಗೆ ಸಿದ್ಧರಾಗಿರುವ ರೈತರಿಗೆ ಈ ಘೋಷಣೆ ತುಂಬಾ ಸಹಾಯವಾಗಲಿದ್ದು, ಬೆಲೆ ಏರಿಕೆಯ ಬಿಸಿ ತಾಗುವುದರಿಂದ ಪಾರಾಗಿದ್ದಾರೆ.
‘ಜಾಗತಿಕವಾಗಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿದ್ದರೂ ಅದರಿಂದ ನಮ್ಮ ರೈತರನ್ನು ರಕ್ಷಿಸಿದ್ದೇವೆ. ರೈತರ ಹಿತಕ್ಕಾಗಿ ಬಜೆಟ್‌ನಲ್ಲಿ 1.05 ಲಕ್ಷ ಕೋಟಿ ಸಬ್ಸಿಡಿ ನೀಡಲಾಗಿತ್ತು. ಈಗ ರೈತರಿಗೆ ಮತ್ತಷ್ಟುಸಹಾಯ ಒದಗಿಸಲು ಹೆಚ್ಚುವರಿಯಾಗಿ 1.1 ಲಕ್ಷ ಕೋಟಿ ರು. ಸಬ್ಸಿಡಿ ನೀಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಜನರಿಗೆ ಅನುಕೂಲವಾಗುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ್ದರು. ಅದರ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
‘ಯುದ್ಧದಿಂದಾಗಿ ಜಗತ್ತಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿಡಲು ನಾವು ಬದ್ಧರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ. ರಸಗೊಬ್ಬರಕ್ಕೆ ನೀಡಲಾಗಿರುವ ಸಬ್ಸಿಡಿಯನ್ನು 2.5 ಲಕ್ಷ ಕೋಟಿಗೆ ಏರಿಸಲಾಗುವದು ಎಂದು ಇತ್ತೀಚಿಗೆ ವಿತ್ತ ಸಚಿವೆ ಹೇಳಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.