* ಕಚ್ಚಾತೈಲ ಪುನಃ ಏರಿದರೆ ಮತ್ತೊಮ್ಮೆ ಅಬಕಾರಿ ಸುಂಕ ಕಡಿತ
* ಹಣದುಬ್ಬರ ತಡೆಗೆ ಸರ್ಕಾರದ ಮತ್ತಷ್ಟುಕ್ರಮದ ಸುಳಿವು
* ಹೆಚ್ಚುವರಿ 2 ಲಕ್ಷ ಕೋಟಿ ರು. ವೆಚ್ಚಕ್ಕೆ ಸರ್ಕಾರ ಸಿದ್ಧ
ನವದೆಹಲಿ(ಮೇ.23): ಬೆಲೆ ಏರಿಕೆ ಮತ್ತು ಹಲವು ವರ್ಷಗಳ ಅಧಿಕವಾದ ಹಣದುಬ್ಬರವನ್ನು ತಡೆಗಟ್ಟಲು ಈ ಹಣಕಾಸು ವರ್ಷದಲ್ಲಿ ಸರ್ಕಾರ ಹೆಚ್ಚುವರಿಯಾಗಿ 2 ಲಕ್ಷ ಕೋಟಿ ರು. ವೆಚ್ಚ ಮಾಡಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೈಲ ಅಬಕಾರಿ ಸುಂಕ ಕಡಿತದ ಕ್ರಮದಿಂದಾಗಿ ಸರ್ಕಾರಕ್ಕೆ ಈಗಾಗಲೇ 1 ಲಕ್ಷ ಕೋಟಿ ರು. ಹೊರೆ ಬೀಳಲಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದರೆ, ಸರ್ಕಾರ ಅಬಕಾರಿ ಮತ್ತೊಮ್ಮೆ ಅಬಕಾರಿ ಸುಂಕ ಕಡಿತ ಮಾಡಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಆಗ ಇನ್ನೂ 2 ಲಕ್ಷ ಕೋಟಿ ರು. ಹೆಚ್ಚುವರಿ ವೆಚ್ಚಕ್ಕೆ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
ಪ್ರಸ್ತುತ ಭಾರತದ ಚಿಲ್ಲರೆ ಹಣದುಬ್ಬರ 8 ವರ್ಷದ ಗರಿಷ್ಠಕ್ಕೆ ಮತ್ತು ಸಗಟು ಹಣದುಬ್ಬರ 17 ವರ್ಷದ ಗರಿಷ್ಠಕ್ಕೆ ಏರಿಕೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಉಕ್ರೇನ್ ರಷ್ಯಾ ನಡುವಿನ ಯುದ್ಧದ ಪರಿಣಾಮ ಹಣದುಬ್ಬರದ ಮೇಲೆ ಊಹಿಸಲಾಗದ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ.
ರಸಗೊಬ್ಬರಕ್ಕೆ ಈಗಾಗಲೇ ನೀಡಿರುವ 2.15 ಲಕ್ಷ ಕೋಟಿ ರು. ಸಹಾಯಧನದ ಮೇಲೆ ಹೆಚ್ಚುವರಿಯಾಗಿ 50 ಸಾವಿರ ಕೋಟಿ ರು. ಸಹಾಯಧನ ನೀಡಬೇಕಾಗಬಹುದು ಎಂದು ಸರ್ಕಾರ ಅಂದಾಜಿಸಿದೆ.