
ನವದೆಹಲಿ (ಮೇ.31): ಒಂದು ವರ್ಷ ಚಿನ್ನ ಖರೀದಿಯನ್ನು ಮುಂದೂಡಿ ಎಂಬ ಪ್ರಧಾನಿ ಮೋದಿ ಅವರ ಕರೆ ಹಾಗೂ ಚಿನ್ನದ ಮೇಲಿನ ಆಮದು ಸುಂಕ ಶೇ.6ರಿಂದ ಶೇ.15ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದಲ್ಲಿ ಹಳದಿ ಲೋಹದ ಬೇಡಿಕೆ ಶೇ.70ರಷ್ಟು ಕುಸಿದಿದೆ. ಮೇ 13ರಂದು ಕೇಂದ್ರ ಸರ್ಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.15ಕ್ಕೇರಿಸಿ ಆದೇಶಿಸಿತ್ತು. ಇದಾದ 15 ದಿನಗಳಲ್ಲಿ ಅಂದರೆ ಮೇ 27ರ ವರೆಗೆ ಚಿನ್ನದ ಬೇಡಿಕೆ 7.5 ಟನ್‌ಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 25 ಟನ್ ಚಿನ್ನಕ್ಕೆ ಬೇಡಿಕೆ ಇತ್ತು.
ಭಾರತದ ಬುಲಿಯನ್ ಮತ್ತು ಜ್ಯುವೆಲ್ಲರಿ ಅಸೋಸಿಯೇಷನ್(Bullion and Jewellery Association of India)ನ ರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಮೆಹ್ತಾ(Surendra mehta) ಅವರ ಪ್ರಕಾರ, ಸುಂಕ ಹೆಚ್ಚಳದಿಂದ ದೇಶಾದ್ಯಂತ ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನದ ಖರೀದಿ ಪ್ರಕ್ರಿಯೆ ಶೇ.70ರಷ್ಟು ಕುಸಿದಿದೆ. ದೇಶದಲ್ಲಿ ಶೇ.65ರಷ್ಟು ಚಿನ್ನದ ವಹಿವಾಟು ನಡೆಸುವ ಅಸಂಘಟಿತ ವಲಯದ ಮೇಲೆ ಚಿನ್ನದ ಬೇಡಿಕೆ ಕುಸಿತದಿಂದ ಭಾರೀ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ.
ವಿದೇಶಿ ವಿನಿಮಯದ ಹೊರಹರಿವು ಹಾಗೂ ರುಪಾಯಿ ಮೌಲ್ಯ ಕುಸಿತ ತಡೆಯಲು ಕೇಂದ್ರ ಸರ್ಕಾರವು ಚಿನ್ನದ ಆಮದು ಮೇಲೆ ಕಡಿವಾಣ ಹಾಕಲು ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಅಬಕಾರಿ ಸುಂಕ ಹೇರಿಕೆಯಿಂದಾಗಿ ಜಿಎಸ್ಟಿ ಸೇರಿ ಚಿನ್ನದ ಮೇಲಿನ ಒಟ್ಟಾರೆ ತೆರಿಗೆ ಶೇ.9.18ರಿಂದ ಶೇ.18.45ಕ್ಕೇರಿದಂತಾಗಿದೆ.
ಸುಂಕ ಏರಿಕೆ ಜೊತೆಗೆ, ಅಧಿಕ ಮಾಸ ಹಾಗೂ ಪೆಟ್ರೋಲ್ ದರ ಏರಿಕೆಯೂ ಪ್ರಮುಖ ಕಾರಣ ಎಂದು ಚಿನ್ನಾಭರಣ ಅಂಗಡಿಗಳ ಮಾಲೀಕರು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.