ಚಿನ್ನದ ಜೊತೆ ಸಿಗುತ್ತೆ ಉಚಿತ ವಿಮೆ, ಯಾವ ಸಂದರ್ಭಗಳಲ್ಲಿ ಕ್ಲೈಮ್ ಮಾಡಬಹುದು?

Published : May 10, 2025, 12:05 PM ISTUpdated : May 12, 2025, 11:52 AM IST
ಚಿನ್ನದ ಜೊತೆ ಸಿಗುತ್ತೆ ಉಚಿತ ವಿಮೆ, ಯಾವ ಸಂದರ್ಭಗಳಲ್ಲಿ  ಕ್ಲೈಮ್ ಮಾಡಬಹುದು?

ಸಾರಾಂಶ

ಚಿನ್ನಾಭರಣ ಖರೀದಿಸುವಾಗ ಉಚಿತ ವಿಮೆ ಸಿಗುತ್ತದೆ. ಕಳ್ಳತನ, ಅಪಘಾತ, ಪ್ರಾಕೃತಿಕ ವಿಕೋಪಗಳಿಂದ ಆಭರಣ ನಷ್ಟವಾದರೆ ವಿಮೆ ಪರಿಹಾರ ನೀಡುತ್ತದೆ. ಪೊಲೀಸ್ ದೂರು ಮತ್ತು ಚಲನ್ ಇದ್ದರೆ ಕ್ಲೈಮ್ ಮಾಡಬಹುದು. ಆಭರಣದ ಶೇ.95ರಷ್ಟು ಮೌಲ್ಯ ಸಿಗುತ್ತದೆ. ಒಂದು ವರ್ಷದ ವಿಮೆಯನ್ನು ಹೆಚ್ಚುವರಿ ಶುಲ್ಕದೊಂದಿಗೆ ನವೀಕರಿಸಬಹುದು.

ಭಾರತದಲ್ಲಿ ಚಿನ್ನ (Gold) ವನ್ನು ಹೂಡಿಕೆ (investment)ಯಾಗಿ ಪರಿಗಣಿಸೋರ ಸಂಖ್ಯೆ ಕಡಿಮೆ. ಬಂಗಾರವನ್ನು ಶ್ರೀಮಂತಿಕೆ, ಸಂಪ್ರದಾಯದ ಹೆಸರಿನಲ್ಲಿ ಖರೀದಿ ಮಾಡ್ತಾರೆ. ಹಾಗಾಗಿಯೇ ಹಬ್ಬದ ಸಂದರ್ಭಗಳಲ್ಲಿ ಬಂಗಾರದ ಆಭರಣ ಖರೀದಿಗೆ ಜನರು ಹೆಚ್ಚಿನ ಆಸಕ್ತಿ ತೋರ್ತಾರೆ. ಕೆಲ ದಿನಗಳ ಹಿಂದೆ ಗಗನಕ್ಕೇರಿದ್ದ ಬಂಗಾರದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಆದ್ರೂ ಬಂಗಾರ ಖರೀದಿ ಸುಲಭವಲ್ಲ. ಕಷ್ಟಪಟ್ಟು, ಹಣ ಕೂಡಿಟ್ಟು ಬಂಗಾರದ ಆಭರಣ ಖರೀದಿ ಮಾಡಿದ್ರೂ ಅದನ್ನು ಧರಿಸೋಕೆ ಭಯ. ಬಂಗಾರದ ಆಭರಣದ ಮೇಲೆ ಕಳ್ಳರ ಕಣ್ಣಿದ್ದೇ ಇರುತ್ತೆ. ಅನೇಕ ಸಂದರ್ಭಗಳಲ್ಲಿ ನಾವು ಆಭರಣ ಕಳೆದುಕೊಳ್ತೇವೆ. ತಕ್ಷಣ ಪೊಲೀಸರಿಗೆ ದೂರು ನೀಡಿ, ಆಭರಣ ಸಿಗ್ಬಹುದು ಎನ್ನುವ ಆಸೆಯಲ್ಲಿರ್ತೇವೆ. ಆದ್ರೆ ಎಲ್ಲರಿಗೂ ಕಳುವಾದ ಆಭರಣ ಸಿಗೋ ಗ್ಯಾರಂಟಿ ಇಲ್ಲ. ನೀವು ಬಂಗಾರ ಖರೀದಿ ನಿಯಮಗಳನ್ನು ತಿಳಿದುಕೊಂಡಿದ್ರೆ, ಆಭರಣ ಕಳ್ಳತನವಾದಾಗ ಆಗುವ ನಷ್ಟವನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.

ಬಂಗಾರಕ್ಕೆ ವಿಮೆ (Insurance) ಪಾಲಿಸಿ  : ಆಭರಣ ವ್ಯಾಪಾರಿ (jeweler)ಗಳಿಂದ ನೀವು ಚಿನ್ನಾಭರಣ ಖರೀದಿಸಿದಾಗ, ನಿಮ್ಮ ಚಿನ್ನದ ಆಭರಣಗಳ ಮೇಲೆ ಉಚಿತ ವಿಮೆ ನೀಡಲಾಗುತ್ತದೆ. ನೀವು ಖರೀದಿಸಿದ ಚಿನ್ನಾಭರಣ ಕಳೆದುಹೋದರೆ, ಆ ಪರಿಸ್ಥಿತಿಯಲ್ಲಿ ಈ ವಿಮೆ ಉಪಯೋಗಕ್ಕೆ ಬರುತ್ತೆ. ಅನೇಕ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ.  ಇದ್ರಿಂದ ವಿಮೆ ಲಾಭ ಪಡೆಯುವ ಅವಕಾಶವನ್ನು ಅವರು ಕಳೆದುಕೊಳ್ತಾರೆ. ನೀವು  ಮಲಬಾರ್, ತನಿಷ್ಕ್ ಮತ್ತು ಸೆಂಕೊ ಗೋಲ್ಡ್ & ಡೈಮಂಡ್ಸ್ನಂತಹ ಆಭರಣ ವ್ಯಾಪಾರಿಗಳಿಂದ ಚಿನ್ನ ಖರೀದಿ ಮಾಡಿದ್ದರೆ ನಿಮಗೆ ಉಚಿತ ವಿಮೆ ಸಿಗುತ್ತದೆ. 

ಯಾವೆಲ್ಲ ಸಂದರ್ಭದಲ್ಲಿ ಬಂಗಾರದ ಮೇಲಿನ ವಿಮೆ ಸಿಗುತ್ತೆ? : ಚಿನ್ನಾಭರಣ ಖರೀದಿ ಸಮಯದಲ್ಲಿ ನಿಮ್ಮ ಆಭರಣಕ್ಕೆ ಉಚಿತ ವಿಮೆ ಲಭ್ಯವಿದೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಲಭ್ಯವಿದೆ ಎಂದಾದ್ರೆ ಯಾವೆಲ್ಲ ಸಂದರ್ಭದಲ್ಲಿ ನೀವು ಈ ವಿಮೆ ಬಳಸಬಹುದು ಎಂಬ ಮಾಹಿತಿ ತಿಳಿಯಿರಿ. ಸಾಮಾನ್ಯವಾಗಿ ಭೂಕಂಪ, ಪ್ರವಾಹ, ಗಲಭೆ, ಕಳ್ಳತನ, ದರೋಡೆ,  ಅಪಘಾತದಂತಹ ಸಂದರ್ಭದಲ್ಲಿ ಆಗುವ ನಷ್ಟವನ್ನು ನೀವು ಕ್ಲೈಮ್ ಮಾಡಬಹುದು.

ಬಂಗಾರದ ವಿಮೆ ಲಾಭ ಸಿಗೋದು ಹೇಗೆ? : ನೀವು ಚಿನ್ನಾಭರಣ ಕಳೆದುಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದರೆ, ನಿಮ್ಮ ಬಳಿ ಚಲನ್ ಇದ್ರೆ ನೀವು ವಿಮಾ ಕಂಪನಿಗೆ ನಷ್ಟ ತುಂಬಿಕೊಡುವಂತೆ ಕ್ಲೈಮ್ ಮಾಡಬಹುದು. 

ವಿಮೆ ಕ್ಲೈಮ್ ಮಾಡಿದ್ರೆ ಎಷ್ಟು ಹಣ ಸಿಗುತ್ತೆ? : ಬಂಗಾರದ ಆಭರಣ ಕಳೆದುಕೊಂಡ ನಿಮಗೆ ಆಭರಣದ ಪೂರ್ಣ ಮೌಲ್ಯ ಲಭ್ಯವಾಗುವುದಿಲ್ಲ. ಆಭರಣದ ಬೆಲೆಯಲ್ಲಿ ಮೇಕಿಂಗ್ ಚಾರ್ಜ್ ಹಾಗೂ ತೆರಿಗೆ ಸೇರಿರುತ್ತದೆ. ವಿಮೆ ಕಂಪನಿಗಳು ಆಭರಣದ ಮೌಲ್ಯದ ಶೇಕಡಾ 95ರಷ್ಟು ಹಣವನ್ನು ನಿಮಗೆ ನೀಡುತ್ತವೆ. 

ಬಂಗಾರದ ವಿಮೆ ಪಾಲಿಸಿ ನವೀಕರಣ ಮಾಡಬಹುದಾ? : ಆಭರಣ ವ್ಯಾಪಾರಿಗಳು ನೀಡುವ ಉಚಿತ ವಿಮೆ ಸಾಮಾನ್ಯವಾಗಿ 1 ವರ್ಷದ್ದಾಗಿರುತ್ತದೆ.  ವಿಭಿನ್ನ ಆಭರಣಕಾರರು ವಿಭಿನ್ನ ನಿಯಮಗಳನ್ನು ಹೊಂದಿರುತ್ತಾರೆ. ಕೆಲವು ಆಭರಣಕಾರರು ವಿಮಾ ನವೀಕರಣದ ಸೌಲಭ್ಯವನ್ನು ಒದಗಿಸುತ್ತಾರೆ. ಆದರೆ ಕೆಲವು ಆಭರಣಕಾರರು ವಿಮಾ ನವೀಕರಣ ಮಾಡುವುದಿಲ್ಲ. ನಿಮಗೆ ನವೀಕರಣದ ಸೌಲಭ್ಯ ಸಿಕ್ಕಿದ್ರೂ ನೀವು ಅದಕ್ಕೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು. ನಿಮ್ಮ ಬಳಿ ಹೆಚ್ಚು ಮೌಲ್ಯದ ಆಭರಣವಿದೆ ಎಂದಾದ್ರೆ ನೀವು ಅದಕ್ಕೆ ವಿಮೆ ನವೀಕರಣ ಮಾಡುವುದು ಸೂಕ್ತ. ಇದ್ರಿಂದ ಮುಂದಾಗುವ ನಷ್ಟವನ್ನು ತಪ್ಪಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!