ಮಳೆ ಮಧ್ಯೆ ಕೊಡೆ ಹಿಡಿದು ಪೂಜಾ ಸಾಮಗ್ರಿ ಖರೀದಿಸಿದ ಜನರು. ಪ್ರಮುಖ ವೃತ್ತ, ರಸ್ತೆಗಳಲ್ಲಿಯೂ ತಲೆ ಎತ್ತಿದ ಮಿನಿ ಮಾರುಕಟ್ಟೆಗಳು. ಪೂಜೆಗೆ ಅಗತ್ಯ ಹೂವು, ಹಣ್ಣು ಖರೀದಿಯಲ್ಲಿ ಜನರು ಮುಗಿ ಬಿದ್ದಿದ್ದರು. ಕೆ.ಆರ್.ಮಾರ್ಕೇಟ್ ನಲ್ಲಿ ವ್ಯಾಪಾರ ವಹಿವಾಟು ಹಿನ್ನಲೆ ಜಾಮ್
ಬೆಂಗಳೂರು (ಆ.30): ನಗರದ ಮಾರುಕಟ್ಟೆಗಳಲ್ಲಿ ಕಳೆದ ಎರಡು ದಿನಗಳಿಂದ ಗೌರಿ ಗಣೇಶ ಹಬ್ಬದ ಖರೀದಿ ಜೋರಾಗಿದ್ದು, ಮಳೆಯ ನಡುವೆಯು ವ್ಯಾಪಾರ ಭರದಿಂದ ನಡೆಯಿತು. ಈ ಬಾರಿ ನಿರಂತರ ಮಳೆಯಿಂದಾಗಿ ಗ್ರಾಹಕರಿಗೆ ಹೂ, ಹಣ್ಣಿನ ಬೆಲೆ ಏರಿಕೆ ಬಿಸಿ ಇಲ್ಲ. ಮಂಗಳವಾರ ಮತ್ತು ಬುಧವಾರ ಗೌರಿ ಹಾಗೂ ಗಣೇಶ ಹಬ್ಬದ ಕಾರಣ ಭಾನುವಾರದಿಂದಲೇ ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿಬಜಾರ್, ಮಡಿವಾಳ, ಚಿಕ್ಕಪೇಟೆ, ಗಂಗಾನಗರ, ಜಯನಗರ, ಶಿವಾಜಿನಗರ ಮಾರುಕಟ್ಟೆಯಲ್ಲಿ ಹೂ, ಹಣ್ಣು, ತರಕಾರಿ ಹಾಗೂ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿ ಭರ್ಜರಿಯಾಗಿ ನಡೆದಿದೆ. ನಗರದ ಪ್ರಮುಖ ಮಾರುಕಟ್ಟೆ ಕೆ.ಆರ್.ಮಾರ್ಕೇಟ್ ನಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದ್ದು, ಹೂ ಹಣ್ಣು ಪೂಜಾ ಸಾಮಾಗ್ರಿ ಖರೀದಿಸಲು ಜನರು ಸಾವಿರಾರು ಸಂಖ್ಯೆಯಲ್ಲಿ ಜಾಮಾಯಿಸಿದ್ದಾರೆ. ಜನರು ಮಳೆಯನ್ನು ಲೆಕ್ಕಿಸಿದೇ ಖರೀದಿಯಲ್ಲಿ ನಿರತರಾಗಿದ್ದು, ಇದರ ಪರಿಣಾಮ ಕೆ.ಆರ್.ಮಾರ್ಕೇಟ್ ಸುತ್ತ ಮುತ್ತ ಭಾರೀ ಟ್ರಾಫಿಕ್ ಜಾಮ್ ಆಗಿದೆ. ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿವೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ವಿವಿಧ ಬಗೆಯ ಹೂವು, ಹಣ್ಣು, ಬಾಳೆಕಂದು, ಮಾವಿನ ಎಲೆ ,ತುಳಸಿ ,ಗರಿಕೆ ಇವುಗಳನ್ನು ಜನ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ.
ಸೋಮವಾರ ಸಹ ಮಳೆಯ ನಡುವೆಯು ದಿನವಿಡೀ ಮಾರುಕಟ್ಟೆಗಳಲ್ಲಿ ಛತ್ರಿ ಹಿಡಿದುಕೊಂಡು ಜನರು ಹೂ, ಹಣ್ಣು ಖರೀದಿಸಿದರು. ಈ ಹಿಂದೆ ಹಬ್ಬ ಮೂರ್ನಾಲ್ಕು ದಿನ ಇರುವಾಗಲೇ ಹೂವಿನ ಬೆಲೆ ದುಬಾರಿಯಾಗುತ್ತಿತ್ತು. ಆದರೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಲೆಗಳು ಇಳಿಕೆಯಾಗಿವೆ. ಹೂವು ಕಿತ್ತ ಒಂದು ದಿನದಲ್ಲೇ ಮಾರಾಟವಾಗಬೇಕು. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಿಂದ ಬಂದ ಬೆಲೆ ಮಾರಾಟ ಮಾಡಲಾಗುತ್ತಿದೆ. ಈ ಬಾರಿ ಹೂಗಳ ಬೆಲೆ ಕಡಿಮೆ ಇದೆ ಎಂದು ಕೆ.ಆರ್.ಮಾರುಕಟ್ಟೆ ವ್ಯಾಪಾರಿ ಗೋಪಿ ತಿಳಿಸಿದರು.
ಮಲ್ಲಿಗೆ ಹೂವು ಹೊರತುಪಡಿಸಿ ಸೇವಂತಿ ಹೂವು, ಸುಗಂಧರಾಜ, ಕನಕಾಂಬರ ಹೂವು ಬೆಲೆ ಎಂದಿನಂತಿತ್ತು. ಬಾಳೆಹಣ್ಣು ಹೊರತುಪಡಿಸಿ ಬೇರೆ ಹಣ್ಣುಗಳ ಬೆಲೆಗಳು ಕೂಡಾ ಹೆಚ್ಚಿರಲಿಲ್ಲ. ಹೀಗಾಗಿ, ಸೇಬು, ದಾಳಿಂಬೆ, ಮೂಸಂಬಿ ಹಣ್ಣುಗಳಿಗೆ ಬೇಡಿಕೆ ಇತ್ತು. ಬೆಲೆ ಕಡಿಮೆ ಇದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಜನರು ಖರೀದಿಸುತ್ತಿದ್ದರು.
ಗೌರಿ ಗಣೇಶ ಗಣೇಶನ ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರ, ಪತ್ರೆ ಸೇರಿದಂತೆ ಇತ್ಯಾದಿಗಳ ಬೆಲೆ ಸ್ವಲ್ಪ ಏರಿಕೆಯಾಗಿತ್ತು.
ಹಬ್ಬದ ಹಿನ್ನೆಲೆ ಸೋಮವಾರ ನಗರದ ಬನಶಂಕರಿ, ಬಸವನಗುಡಿ, ಹೆಬ್ಬಾಳ, ಮಲ್ಲೇಶ್ವರ, ಕುಮಾರಸ್ವಾಮಿ ಲೇಔಟ್, ರಾಜಾಜಿ ನಗರ, ಮಹಾಲಕ್ಷ್ಮಿ ಲೇಔಟ್ ಗಾಯಿತ್ರಿ ನಗರ ಸೇರಿದಂತೆ ಪ್ರಮುಖ ಬಡಾವಣೆಗಳ ರಸ್ತೆಗಳು, ವೃತ್ತಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳ ತಲೆ ಎತ್ತಿವೆ. ಪ್ಲೈಓವರ್, ಮೆಟ್ರೋ ಸೇತುವೆ ಕೆಳಭಾಗ, ಪಾದಾಚಾರಿ ಮಾರ್ಗಗಳಲ್ಲಿ ಗ್ರಾಮಾಂತರ ಭಾಗಗಳಿಂದ ರೈತರು, ವ್ಯಾಪಾರಿಗಳ ಬಂದು ಬಾಳೆಕಂಬ, ಮಾವಿನಸೊಪ್ಪು, ಹೂವು, ಹಣ್ಣನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿತು.
ಗಣೇಶ ಚತುರ್ಥಿ 2022: ಬೆಂಗಳೂರು ನಗರದ 10 ಸುಪ್ರಸಿದ್ಧ ಗಣಪತಿ ದೇವಾಲಯಗಳಿವು..
ಹಣ್ಣುಗಳ ದರ (ಪ್ರತಿ 1 ಕೆ.ಜಿ.)
ದಾಳಿಂಬೆ .130-150
ಸೇಬು .100-130
ಏಲಕ್ಕಿ ಬಾಳೆಹಣ್ಣು .100-120
ಪಚ್ಚಬಾಳೆ .40-45
ಅನಾನಸ್ .25-30
ಕಿತ್ತಲೆ .50-60
ಸೀಬೆಹಣ್ಣು .55-60
ಸರ್ವರಿಗೂ ಗೌರಿ ಗಣೇಶ ಹಬ್ಬ 2022ರ ಹಾರ್ದಿಕ ಶುಭಾಶಯಗಳು
ಬಿಡಿ ಹೂವು ದರ (ಪ್ರತಿ ಕೆ.ಜಿ.ಗೆ)
ಮಲ್ಲಿಗೆ ಹೂವು .500-1600
ಸೇವಂತಿಗೆ .60-200
ಸುಗಂಧ ರಾಜ ಹೂವು .160
ಚೆಂಡು ಹೂವು .20-30
ಕನಕಾಂಬರ .600-1200
ಕಾಕಡ .200-600