ಸೆಪ್ಟೆಂಬರ್ ತಿಂಗಳ ಆರಂಭಕ್ಕೆ ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಈ ತಿಂಗಳಲ್ಲಿ 2000ರೂ. ನೋಟು ಠೇವಣಿ /ವಿನಿಮಯ, ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆ ಸಲ್ಲಿಕೆ ಹಾಗೂ ಉಚಿತ ಆಧಾರ್ ಅಪ್ಡೇಟ್ ಸೇರಿದಂತೆ ಅನೇಕ ಪ್ರಮುಖ ಕೆಲಸಗಳಿಗೆ ಅಂತಿಮ ಗಡುವು ನೀಡಲಾಗಿದೆ.
ನವದೆಹಲಿ (ಆ.29): ಸೆಪ್ಟೆಂಬರ್ ತಿಂಗಳ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರತಿ ತಿಂಗಳಲ್ಲಿ ಕೂಡ ಒಂದಿಷ್ಟು ಹಣಕಾಸಿನ ವಿಚಾರಗಳಿಗೆ ಸಂಬಂಧಿಸಿದ ನಿಯಮಗಳು ಬದಲಾವಣೆಯಾಗೋದು ಮಾತ್ರವಲ್ಲ, ಕೆಲವು ಕೆಲಸಗಳಿಗೆ ಅಂತಿಮ ಗಡುವು ಕೂಡ ಇರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಪ್ರಮುಖ ಯೋಜನೆಗಳು ಹಾಗೂ ಸರ್ಕಾರದ ನಿಯಮಗಳಿಗೆ ಸಂಬಂಧಿಸಿ ಅಂತಿಮ ಗಡುವು ವಿಧಿಸಲಾಗಿದೆ. 2000ರೂ.. ನೋಟು ಠೇವಣಿ/ವಿನಿಮಯ, ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆ ಸಲ್ಲಿಕೆ ಹಾಗೂ ಉಚಿತ ಆಧಾರ್ ಅಪ್ಡೇಟ್ ಸೇರಿದಂತೆ ಅನೇಕ ಪ್ರಮುಖ ಕೆಲಸಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಅಂತಿಮ ಗಡುವು ವಿಧಿಸಲಾಗಿದೆ. ಬಹುತೇಕ ಈ ಎಲ್ಲ ಗಡುವುಗಳನ್ನು ಈ ಹಿಂದೆ ವಿಸ್ತರಿಸಲಾಗಿರುವ ಕಾರಣ ಸೆಪ್ಟೆಂಬರ್ ನಲ್ಲಿ ಮತ್ತೆ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಎಲ್ಲ ಕೆಲಸಗಳನ್ನು ಅಂತಿಮ ಗಡುವಿನೊಳಗೆ ಮಾಡಿ ಮುಗಿಸೋದು ಉತ್ತಮ. ಸೆಪ್ಟೆಂಬರ್ ತಿಂಗಳಲ್ಲಿ ಇಂಥ ಒಟ್ಟು 7 ಪ್ರಮುಖ ಹಣಕಾಸಿನ ಕೆಲಸಗಳಿಗೆ ಸಂಬಂಧಿಸಿ ಗಡುವು ವಿಧಿಸಲಾಗಿದೆ. ಅವುಗಳ ಮಾಹಿತಿ ಇಲ್ಲಿದೆ.
1. 2,000ರೂ. ನೋಟು ಹಿಂತಿರುಗಿಸಲು ಅಂತಿಮ ಗಡುವು
ಭಾರತೀಯ ರಿಸರ್ವ್ ಬ್ಯಾಂಕ್ (RBI) 2,000ರೂ. ನೋಟುಗಳ ಠೇವಣಿ ಅಥವಾ ವಿನಿಮಯಕ್ಕೆ ನೀಡಿರುವ ಗಡುವನ್ನು ಹಣಕಾಸು ಸಚಿವಾಲಯ ವಿಸ್ತರಿಸುವ ಸಾಧ್ಯತೆ ಕಾಣಿಸುತ್ತಿಲ್ಲ. ಜುಲೈ ಕೊನೆಯಲ್ಲಿ ಲೋಕಸಭೆಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, ಬ್ಯಾಂಕ್ ಗಳಲ್ಲಿ 2,000ರೂ. ನೋಟುಗಳನ್ನು ಸೆಪ್ಟೆಂಬರ್ 30ರ ಬಳಿಕ ಕೂಡ ವಿಸ್ತರಿಸುವ ಸಾಧ್ಯತೆಗಳಿವೆಯಾ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅಂಥ ಸಾಧ್ಯತೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು.
ಸೆಪ್ಟೆಂಬರ್ ತಿಂಗಳಲ್ಲಿ ಸಾಲು ಸಾಲು ಹಬ್ಬ; ಬ್ಯಾಂಕಿಗೆ ಒಟ್ಟು 16 ದಿನ ರಜೆ
2.ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಸಂಖ್ಯೆ ಸಲ್ಲಿಕೆ
ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ) ಇತ್ಯಾದಿಗಳಲ್ಲಿ ಹೂಡಿಕೆ ಮಾಡಿರುವ ಚಂದಾದಾರರಿಗೆ ನೋ ಯುವರ್ ಕಸ್ಟಮರ್ (ಕೆವೈಸಿ) ಅಪ್ಡೇಟ್ ಮಾಡಲು ಆಧಾರ್ ಸಂಖ್ಯೆ ಸಲ್ಲಿಕೆಗೆ ಸೆ.30ರ ತನಕ ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಬಗ್ಗೆ ಮಾ.31ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಪ್ರಸ್ತುತ ಇರುವ ಚಂದಾದಾರರಿಗೆ ನೀಡಿರುವ ಅಂತಿಮ ಗಡುವಿನೊಳಗೆ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ ಅವರ ಖಾತೆಗಳನ್ನು ಅಕ್ಟೋಬರ್ 1ರಿಂದ ನಿಷ್ಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಲಾಗಿದೆ.
3.ಡಿಮ್ಯಾಟ್, ಟ್ರೇಡಿಂಗ್ ಖಾತೆಗಳಿಗೆ ನಾಮನಿರ್ದೇಶನ ಸಲ್ಲಿಕೆಗೆ ಅಂತಿಮ ಗಡುವು
ಪ್ರಸ್ತುತ ಇರುವ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರಿಗೆ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸೆಪ್ಟೆಂಬರ್ 30ರ ತನಕ ತಮ್ಮ ಖಾತೆಗಳಿಗೆ ಫಲಾನುಭವಿಯನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಿದೆ. ಈ ಹಿಂದೆ ಈ ಕೆಲಸಕ್ಕೆ 2023ರ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಅದಕ್ಕೂ ಮುನ್ನ 2022ರ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು.
4.ಆಧಾರ ಉಚಿತ ಅಪ್ಡೇಟ್
ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸೆಪ್ಟೆಂಬರ್ 14ರ ತನಕ ಜೂನ್ ನಲ್ಲಿ ವಿಸ್ತರಿಸಿತ್ತು.
5.ಆಕ್ಸಿಸ್ ಬ್ಯಾಂಕ್ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ಟರ್ಮ್ಸ್ ಹಾಗೂ ಕಂಡೀಷನ್ಸ್
ಆಕ್ಸಿಸ್ ಬ್ಯಾಂಕ್ ಮ್ಯಾಗ್ನಸ್ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ವಾರ್ಷಿಕ ಶುಲ್ಕವನ್ನು ಸೆಪ್ಟೆಂಬರ್ 1ರಿಂದ ಏರಿಕೆ ಮಾಡಲಾಗಿದೆ. 10,000ರೂ. + GST ಯಿಂದ 12,500ರೂ. + GST ಏರಿಕೆ ಮಾಡಲಾಗಿದೆ. ಇನ್ನು 10,000 ರೂ. ವಾರ್ಷಿಕ ಲಾಭದ ವೋಚರ್ ಅನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಹಾಗೆಯೇ ತಿಂಗಳಲ್ಲಿ 1,00,000ರೂ. ವೆಚ್ಚದ ಮೇಲೆ ನೀಡಲಾಗುತ್ತಿದ್ದ ತಿಂಗಳ ಮೈಲ್ ಸ್ಟೋನ್ ಬೆನಿಫಿಟ್ ಆದ 25,000 ಏಡ್ಜ್ ಪಾಯಿಂಟ್ಸ್ ಅನ್ನು ಕೂಡ ಸೆ.1ರಿಂದ ಸ್ಥಗಿತಗೊಳಿಸಲಾಗುತ್ತದೆ.
ಜನ್ ಧನ್ ಯೋಜನೆಗೆ 9 ವರ್ಷ; ಬ್ಯಾಂಕಿಂಗ್ ವ್ಯವಸ್ಥೆಗೆ 50 ಕೋಟಿಗೂ ಹೆಚ್ಚು ಜನ ಸೇರ್ಪಡೆ
6.ಹಿರಿಯ ನಾಗರಿಕರಿಗೆ ಎಸ್ ಬಿಐ ವಿಕೇರ್ ಎಫ್ ಡಿ
ಹಿರಿಯ ನಾಗರಿಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ರೂಪಿಸಿರುವ ಎಸ್ ಬಿಐ ವಿಕೇರ್ ವಿಶೇಷ ಸ್ಥಿರ ಠೇವಣಿ ಯೋಜನೆ ಗಡುವನ್ನು ಸೆ.30ರ ತನಕ ವಿಸ್ತರಿಸಲಾಗಿದೆ.
7.ಐಡಿಬಿಐ ಅಮೃತ ಮಹೋತ್ಸವ ಎಫ್ ಡಿ
ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಎಫ್ ಡಿ ಯೋಜನೆ 'ಅಮೃತ ಮಹೋತ್ಸವ' ಮುಕ್ತಾಯದ ಅವಧಿಯನ್ನು ಸೆಪ್ಟೆಂಬರ್ 30ರತನಕ ವಿಸ್ತರಣೆ ಮಾಡಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಎರಡು ಅವಧಿಗಳಲ್ಲಿ ಶೇ.7.10ರಿಂದ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತಿದೆ.