ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್‌: ನ.1 ರಿಂದ ಬರ್ತಿದೆ ₹1,500 ರ ವಾರ್ಷಿಕ FASTag ಲೋಕಲ್ ಪಾಸ್!

Published : Oct 27, 2026, 10:50 PM IST
Toll Plaza

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವವರಿಗೆ ಕೇಂದ್ರ ಸರ್ಕಾರವು ರಿಯಾಯಿತಿ ದರದ ವಾರ್ಷಿಕ 'ಲೋಕಲ್ ಫಾಸ್ಟಾಗ್ ಪಾಸ್' ಘೋಷಿಸಿದೆ. ನವೆಂಬರ್ 1, 2026 ರಿಂದ ಜಾರಿಗೆ ಬರುವ ಈ ಪಾಸ್‌ಗೆ ₹1,500 ಅಥವಾ ₹3,000 ದರ ನಿಗದಿಪಡಿಸಲಾಗಿದೆ.

ನವದೆಹಲಿ (ಅ.27): ರಾಷ್ಟ್ರೀಯ ಹೆದ್ದಾರಿಗಳ (National Highways) ಟೋಲ್ ಪ್ಲಾಜಾ ಸಮೀಪದಲ್ಲಿ ವಾಸಿಸುವ ಸಾರ್ವಜನಿಕರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಭಾರೀ ರಿಲೀಫ್‌ ನೀಡಿದೆ. ಟೋಲ್ ಪ್ಲಾಜಾಗಳ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ವಾಣಿಜ್ಯೇತರ (Non-commercial) ವಾಹನ ಮಾಲೀಕರಿಗಾಗಿ 2026 ರ ನವೆಂಬರ್ 1 ರಿಂದ ಜಾರಿಗೆ ಬರುವಂತೆ ರಿಯಾಯಿತಿ ದರದ ವಾರ್ಷಿಕ 'ಲೋಕಲ್ ಫಾಸ್ಟಾಗ್ ಪಾಸ್' ಸೌಲಭ್ಯವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಟೋಲ್ ಪ್ಲಾಜಾ ಇರುವು ಸ್ಥಳ ಹಾಗೂ ನಗರಸಭೆ/ಪುರಸಭೆ ಗಡಿ ಆಧಾರದ ಮೇಲೆ ಈ ವಾರ್ಷಿಕ ಪಾಸ್‌ಗೆ ₹1,500 ಅಥವಾ ₹3,000 ನಿಗದಿಪಡಿಸಲಾಗಿದೆ ಎಂದು ಸಚಿವಾಲಯ ಮಂಗಳವಾರ ಹೊರಡಿಸಿದ ಅಧಿಕೃತ ಸೂಚನೆಯಲ್ಲಿ ತಿಳಿಸಿದೆ.

ಎರಡು ಪ್ರತ್ಯೇಕ ದರಗಳ ಲೆಕ್ಕಾಚಾರ

ಕೇಂದ್ರ ಸರ್ಕಾರದ ನೂತನ ಆದೇಶದ ಪ್ರಕಾರ ಸ್ಥಳೀಯ ಪುರಸಭೆ/ನಗರಸಭೆ ಗಡಿಯಿಂದ ಹೊರಗಿರುವ (Outside Municipal Limits) ಟೋಲ್ ಪ್ಲಾಜಾಗಳಿಗೆ ವಾರ್ಷಿಕ ರಿಯಾಯಿತಿ ಪಾಸ್ ದರ ₹1,500 ಆಗಿರಲಿದೆ. ನಗರಸಭೆ/ಪುರಸಭೆ ಗಡಿಯ ಒಳಗಿರುವ (Within Municipal Limits) ಟೋಲ್ ಪ್ಲಾಜಾಗಳಿಗೆ ವಾರ್ಷಿಕ ರಿಯಾಯಿತಿ ಪಾಸ್ ದರ ₹3,000 ಆಗಿರಲಿದೆ.

ಈ ನೂತನ ಕಲ್ಪನೆಯಡಿ, ಸಕ್ರಿಯ ಮತ್ತು ಮಾನ್ಯವಾದ ಫಾಸ್ಟಾಗ್ ಹೊಂದಿರುವ 20 ಕಿಲೋಮೀಟರ್ ವ್ಯಾಪ್ತಿಯ ಅರ್ಹ ವಾಣಿಜ್ಯೇತರ ವಾಹನ ಮಾಲೀಕರು ಪ್ರಸ್ತುತ ಚಾಲ್ತಿಯಲ್ಲಿರುವ 'ಮಾಸಿಕ ಪಾಸ್' (Monthly Pass) ಅಥವಾ ಈ ನೂತನ 'ವಾರ್ಷಿಕ ಲೋಕಲ್ ಪಾಸ್' (Concessional Local Pass) ಎರಡರಲ್ಲಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಲೋಕಲ್ ಪಾಸ್ ಅನ್ನು ನಿರ್ದಿಷ್ಟವಾಗಿ ಯಾವ ಟೋಲ್ ಪ್ಲಾಜಾಗೆ ಪಡೆಯಲಾಗುತ್ತದೆಯೋ, ಅದಕ್ಕೆ ಮಾತ್ರ ಬಳಸಲು ಸಾಧ್ಯವಿದ್ದು, ಬೇರೆ ಯಾವುದೇ ಟೋಲ್ ಪ್ಲಾಜಾಗಳಿಗೆ ವರ್ಗಾಯಿಸಲು (Non-transferable) ಅವಕಾಶವಿರುವುದಿಲ್ಲ.

ಹಣ ಭಾರಿ ಉಳಿಮಾಯ - ಗ್ರಾಹಕರಿಗೆ ಸಿಗಲಿದೆ ನೆಮ್ಮದಿ

ಪ್ರಸ್ತುತ ನಿಯಮಾವಳಿಗಳ ಪ್ರಕಾರ, ಟೋಲ್ ಪ್ಲಾಜಾ ಸಮೀಪದ ನಿವಾಸಿಗಳು ಪ್ರತಿ ತಿಂಗಳಿಗೆ ₹360 ರಂತೆ ಮಾಸಿಕ ಪಾಸ್ ಪಡೆಯುತ್ತಿದ್ದರು. ಇದು ಲೆಕ್ಕಾಚಾರ ಹಾಕಿದರೆ ವಾರ್ಷಿಕವಾಗಿ ₹4,320 ತಗುಲುತ್ತಿತ್ತು. ಆದರೆ ನವೆಂಬರ್ 1 ರಿಂದ ಜಾರಿಗೆ ಬರಲಿರುವ ಹೊಸ ವಾರ್ಷಿಕ ಲೋಕಲ್ ಪಾಸ್‌ನಿಂದಾಗಿ ಸ್ಥಳೀಯ ನಿವಾಸಿಗಳಿಗೆ ವಾರ್ಷಿಕ ಕನಿಷ್ಠ ₹2,820 ರಷ್ಟು ಭಾರಿ ಹಣ ಉಳಿತಾಯವಾಗಲಿದೆ.

ಯಾವ ಟೋಲ್‌ಗಳಿಗೆ ಈ ಪಾಸ್ ಅನ್ವಯಿಸುವುದಿಲ್ಲ?

ಸಚಿವಾಲಯವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಕೆಲವು ಪ್ರಮುಖ ವಿನಾಯಿತಿಗಳನ್ನು ಸ್ಪಷ್ಟಪಡಿಸಿದೆ. 'ಕ್ಲೋಸ್ಡ್ ಯೂಸರ್ ಫೀ ಕಲೆಕ್ಷನ್ ಸಿಸ್ಟಮ್' (Closed User Fee Collection System - ಅಂದರೆ ಪ್ರವೇಶ ಮತ್ತು ನಿರ್ಗಮನ ಆಧಾರದಲ್ಲಿ ಪಾವತಿಸುವ ವ್ಯವಸ್ಥೆ) ಹೊಂದಿರುವ ರಾಷ್ಟ್ರೀಯ ಹೆದ್ದಾರಿಗಳು ಅಥವಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಈ ಲೋಕಲ್ ಪಾಸ್ ಸೌಲಭ್ಯ ಸಿಗುವುದಿಲ್ಲ. ಸಾರ್ವಜನಿಕರು ಮತ್ತು ಪ್ರಯಾಣಿಕರು ಬಳಸಲು ಪರ್ಯಾಯ ರಸ್ತೆಗಳು (Alternative Roads) ಅಥವಾ ಸರ್ವಿಸ್ ರಸ್ತೆಗಳು (Service Roads) ಲಭ್ಯವಿರುವ ಸ್ಥಳಗಳಲ್ಲೂ ಈ ವಾರ್ಷಿಕ ಲೋಕಲ್ ಪಾಸ್ ನೀಡಲಾಗುವುದಿಲ್ಲ.

13 ಕೋಟಿ ಫಾಸ್ಟಾಗ್ ಬಳಕೆದಾರರಿಗೆ ಅನುಕೂಲ

"ದೇಶಾದ್ಯಂತ ಪ್ರಸ್ತುತ 13 ಕೋಟಿಗೂ ಹೆಚ್ಚು ಫಾಸ್ಟಾಗ್‌ಗಳನ್ನು (FASTags) ವಿತರಿಸಲಾಗಿದೆ. ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ನಿವಾಸಿಗಳ ದೈನಂದಿನ ಪ್ರಯಾಣವನ್ನು ಅತ್ಯಂತ ಮಿತವ್ಯಯಕಾರಿಯನ್ನಾಗಿ ಮಾಡುವುದು ಹಾಗೂ ಸ್ಥಳೀಯರ ಪ್ರಯಾಣದ ಸುಲಭತೆಯನ್ನು (Ease of Commuting) ಉತ್ತೇಜಿಸುವ ಉದ್ದೇಶದಿಂದ ಈ ಹೊಸ ಆಯ್ಕೆಯನ್ನು ನೀಡಲಾಗಿದೆ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. 1956 ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆಯಡಿ ನೀಡಿರುವ ಅಧಿಕಾರವನ್ನು ಬಳಸಿ, 'ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹಣೆ) (ಐದನೇ ತಿದ್ದುಪಡಿ) ನಿಯಮಗಳು, 2026' (National Highways Fee Rules, 2026) ರ ಮೂಲಕ ಈ ತಿದ್ದುಪಡಿಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ದೀಪಾವಳಿಗೆ ಚಿನ್ನ ತಗೊಳ್ಬೇಕಾ, ಕಾಯ್ಬೇಕಾ? 2027ಕ್ಕೆ ₹2 ಲಕ್ಷ ಮುಟ್ಟಲಿದೆ ಬಂಗಾರದ ಬೆಲೆ !
ದೀಪಾವಳಿ ಹೊಸ್ತಿಲಲ್ಲೇ ಮತ್ತೆ ಜಿಗಿದ ಚಿನ್ನದ ದರ: ಪ್ರಮುಖ ನಗರಗಳ ಇಂದಿನ ಗೋಲ್ಡ್ ರೇಟ್ ಇಲ್ಲಿದೆ ನೋಡಿ!