ಐತಿಹಾಸಿಕ 2410 ರು.ಗೆ ಈರುಳ್ಳಿ ಖರೀದಿ: ಕೇಂದ್ರ ಸರ್ಕಾರ ಘೋಷಣೆ

Published : Aug 23, 2023, 11:50 AM ISTUpdated : Aug 23, 2023, 11:59 AM IST
ಐತಿಹಾಸಿಕ 2410 ರು.ಗೆ ಈರುಳ್ಳಿ ಖರೀದಿ: ಕೇಂದ್ರ ಸರ್ಕಾರ ಘೋಷಣೆ

ಸಾರಾಂಶ

ಈರುಳ್ಳಿಯನ್ನು 1 ಕ್ವಿಂಟಲ್‌ಗೆ ‘ಐತಿಹಾಸಿಕ’ 2,410 ರು. ದರ ನೀಡಿ ಖರೀದಿಸಲು ಕೇಂದ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ನವದೆಹಲಿ/ಮುಂಬೈ: ಏರುತ್ತಿರುವ ಈರುಳ್ಳಿ ಬೆಲೆ ನಿಯಂತ್ರಿಸಲು ರಫ್ತಿನ ಮೇಲೆ ಶೇ.40ರಷ್ಟು ಸುಂಕ ಹೇರಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ರೈತರು ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಾಸಲಗಾಂವ್‌ನಲ್ಲಿ ಸತತ 2ನೇ ದಿನವೂ ಮಾರಾಟ ಸ್ಥಗಿತಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಈರುಳ್ಳಿಯನ್ನು 1 ಕ್ವಿಂಟಲ್‌ಗೆ ‘ಐತಿಹಾಸಿಕ’ 2,410 ರು. ದರ ನೀಡಿ ಖರೀದಿಸಲು ಕೇಂದ್ರ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ಮಹಾರಾಷ್ಟ್ರದ ಕೃಷಿ ಸಚಿವ ಧನಂಜಯ ಮುಂಡೆ (Dhananjaya Munde) ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಕಟಿಸಿದ ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪೀಯೂಶ್‌ ಗೋಯಲ್‌, ‘ಈರುಳ್ಳಿ ದರ (Onion Price) ನಿಯಂತ್ರಣಕ್ಕಾಗಿ ರಫ್ತಿನ ಮೇಲೆ ಸುಂಕ ಹೇರಲಾಗಿದೆ. ಆದರೆ ಇದರಿಂದ ರೈತರಿಗೆ ನಷ್ಟವಾಗದು. ಕೇಂದ್ರ ಸರ್ಕಾರ (central Govt) 1 ಕ್ವಿಂಟಾಲ್‌ಗೆ ಐತಿಹಾಸಿಕ 2410 ರು. ನೀಡಿ ಈರುಳ್ಳಿ ಖರೀದಿಸಲು ನಿರ್ಧರಸಿದೆ. ರಫ್ತು ಮಾಡಿದರೆ ರೈತರಿಗೆ 1 ಕ್ವಿಂಟಲ್‌ಗೆ ಸರಾಸರಿ 1800-1900 ರು. ಸಿಗಬಹುದು. ಆದರೆ ಅದಕ್ಕಿಂತ ಹೆಚ್ಚು ದರ ನೀಡಲು ಕೇಂದ್ರ ನಿರ್ಧರಿಸಿದೆ’ ಎಂದರು.

ಡಿ.31ರ ವರೆಗೆ ಈರುಳ್ಳಿ ರಫ್ತು ಮೇಲೆ ಶೇ.40 ರಷ್ಟು ಸುಂಕ

‘ಈರುಳ್ಳಿ ಖರೀದಿಸುವಂತೆ ಕೇಂದ್ರದ ಎನ್‌ಸಿಸಿಎಫ್‌ (NCCF) ಹಾಗೂ ನ್ಯಾಫೆಡ್‌ಗೆ ನಾವು ಸೂಚಿಸಿದ್ದೇವೆ. ರೈತರು ವಿಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೇ ಲಾಸಲಗಾಂವ್‌ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟ ಬಂದ್‌ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಮನವಿ ಮಾಡಿದರು.

ಸಮಯಕ್ಕೆ ಸರಿಯಾಗಿ ಬಾರದ ಮಳೆ‌, ಈರುಳ್ಳಿ ಬಿತ್ತನೆ ಮಾಡದ ರೈತ, ಬೆಲೆ ಗಗನಕ್ಕೇರುವ ಸಾಧ್ಯತೆ! 


ದೇಶಿಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮತ್ತು ಪೂರೈಕೆಯನ್ನು ಸಮತೋಲನದಲ್ಲಿರಿಸುವ ಉದ್ದೇಶದಿಂದ ಡಿ.31, 2023ರವರೆಗೆ ಈರುಳ್ಳಿ ರಫ್ತು ಮೇಲೆ ಶೇ.40ರಷ್ಟು ತೆರಿಗೆಯನ್ನು ವಿಧಿಸಿ  ಸರ್ಕಾರವು ಕಳೆದ ವಾರ ಆದೇಶ ಹೊರಡಿಸಿತ್ತು. ಸುಂಕ ಹೆಚ್ಚಿಸಿದ್ದರಿಂದ ಈರುಳ್ಳಿ ರಫ್ತು ಕಡಿಮೆಯಾಗಿ, ದೇಶೀಯ ಮಾರುಕಟ್ಟೆಯಲ್ಲೇ ಅದು ಉಳಿದುಕೊಳ್ಳುತ್ತದೆ. ಹೀಗಾಗಿ ಯಾವುದೇ ಕೊರತೆಯಾಗಲು ಸಾಧ್ಯವಿಲ್ಲ ಎಂಬ ಉದ್ದೇಶದಿಂದ ಹಣಕಾಸು ಸಚಿವಾಲಯ ಈ ಆದೇಶ ಹೊರಡಿಸಿದೆ.

ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಲಿದ್ದು ಪೂರೈಕೆಯಲ್ಲಿ ಕೊರತೆಯಾಗಲಿದೆ ಎಂಬ ವರದಿಗಳ ಬೆನ್ನಲ್ಲೇ ಆ.11 ರಂದು ಸರ್ಕಾರವು ಸಂಗ್ರಹಿಸಿಟ್ಟಿದ್ದ 3ಲಕ್ಷ ಟನ್‌ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದಾಗ್ಯೂ ಇತ್ತೀಚೆಗೆ ದೇಶದಲ್ಲಿ ಟೊಮೆಟೋ ಪೂರೈಕೆಯಲ್ಲಿ ಕೊರತೆಯಾಗಿ ಬೆಲೆ ಏರಿಕೆ ಬಿಸಿ ತಟ್ಟಿದಂತೆ ಈರುಳ್ಳಿ ಬೆಲೆಯಲ್ಲೂ ವ್ಯತ್ಯಯವಾಗದಿರಲಿ ಎಂದು ಕೇಂದ್ರ ಈ ನಿರ್ಧಾರ ಕೈಗೊಂಡಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!