ಇಪಿಎಫ್ ಸದಸ್ಯರೇ ಗಮನಿಸಿ, ಜನ್ಮದಿನಾಂಕ ಅಪ್ಡೇಟ್ ಗೆ ಅರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಹೊರಗಿಟ್ಟ ಇಪಿಎಫ್ಒ

By Suvarna NewsFirst Published Jan 19, 2024, 3:11 PM IST
Highlights

ಇಪಿಎಫ್ ಒ ಆಧಾರ್ ಕಾರ್ಡ್ ಅನ್ನು ಜನ್ಮದಿನಾಂಕ ದೃಢೀಕರಣಕ್ಕೆ ಅರ್ಹವಾದ ದಾಖಲೆಗಳ ಪಟ್ಟಿಯಿಂದ ಹೊರಗಿಟ್ಟಿದೆ. ಇದಕ್ಕೇನು ಕಾರಣ?

Business Desk: ಜನ್ಮದಿನಾಂಕ ದೃಢೀಕರಣಕ್ಕೆ ಸ್ವೀಕರಿಸುವ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ಕೈಬಿಟ್ಟಿರೋದಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ಇತ್ತೀಚೆಗೆ ಮಾಹಿತಿ ಮಾಹಿತಿ ನೀಡಿದೆ. ಪರಿಷ್ಕರಣೆ ಹಾಗೂ ಉನ್ನತೀಕರಣ ಉದ್ದೇಶಕ್ಕೆ ಜನ್ಮದಿನಾಂಕ ಪರಿಶೀಲನೆಗೆ ಬಳಸುವ ಸ್ವೀಕರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ಹೊರಗಿಟ್ಟಿರೋದಾಗಿ ಇಪಿಎಫ್ ಒ ತಿಳಿಸಿದೆ. ಆಧಾರ್ ಕಾರ್ಡ್ ವಿತರಿಸುವ ಯುಐಡಿಎಐ ನಿರ್ದೇಶನದ ಅನ್ವಯ ಈ ನಿರ್ಧಾರ ಕೈಗೊಂಡಿರೋದಾಗಿ ಇಪಿಎಫ್ ಒ ತಿಳಿಸಿದೆ. ಈ ಬಗ್ಗೆ ಯುಐಡಿಎಐಯಿಂದ ಸ್ವೀಕರಿಸಿರುವ ಪತ್ರವನ್ನು ಕೂಡ ಜೊತೆಗಿಡಲಾಗಿದೆ. ಅಂದಹಾಗೇ ಆಧಾರ್ ಕಾರ್ಡ್ ಅನ್ನು ದೇಶಾದ್ಯಂತ ಅತ್ಯಂತ ವಿಶ್ವಾಸಾರ್ಹ ಹಾಗೂ ವಿಶಿಷ್ಟ ಗುರುತು ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದೆ. ಇದು ವಿಶಿಷ್ಟ 12 ಅಂಕೆಗಳನ್ನು ಹೊಂದಿದ್ದು, ಇದನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಸರ್ಕಾರದ ಪರವಾಗಿ ನೀಡುತ್ತದೆ. ಆದರೆ, ಇದನ್ನು ಈಗ ಜನ್ಮದಿನಾಂಕ ದೃಢೀಕರಣಕ್ಕೆ ಅರ್ಹ ದಾಖಲೆಯಾಗಿ ಪರಿಗಣಿಸಲಾಗುತ್ತಿಲ್ಲ. 

ಆಧಾರ್ ಕಾರ್ಡ್ ವಿಭಿನ್ನ ಹಾಗೂ ನಂಬಿಕಾರ್ಹ ಗುರುತು ದೃಢೀಕರಣ ದಾಖಲೆಯಾಗಿದ್ದರೂ ಇದನ್ನು ಜನ್ಮದಿನಾಂಕ ಪರಿಷ್ಕರಣೆಗೆ ನಂಬಿಕಾರ್ಹ ದಾಖಲೆಯಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಇಪಿಎಫ್ ಒ ಸುತ್ತೋಲೆಯಲ್ಲಿ ದೃಢೀಕರಿಸಲಾಗಿದೆ.

EPF Alert:ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸಿದ ಇಪಿಎಫ್ಒ; ಮೇ 3ರ ತನಕ ಕಾಲಾವಕಾಶ

ಜನ್ಮದಿನಾಂಕ ಬದಲಾವಣೆಗೆ ಅಗತ್ಯವಾದ ದಾಖಲೆಗಳು
2023ರ ಆಗಸ್ಟ್ ತಿಂಗಳಲ್ಲಿ ಹೊರಡಿಸಲಾಗಿರುವ ಇಪಿಎಫ್ ಒ ಸುತ್ತೋಲೆಯಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಜನ್ಮದಿನಾಂಕ ಅಪ್ಡೇಟ್ ಮಾಡಲು ಈ ಕೆಳಗಿನ ದಾಖಲೆಗಳು ಅಗತ್ಯ:
1.ಜನನ ಹಾಗೂ ಮರಣ ನೋಂದಣಾಧಿಕಾರಿ ಅವರು ವಿತರಿಸಿರುವ ಜನನ ಪ್ರಮಾಣಪತ್ರ.
2.ಯಾವುದೇ ಅಂಗೀಕೃತ ಸರ್ಕಾರಿ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ವಿತರಿಸಿರುವ ಅಂಕಪಟ್ಟಿ. ಇದರೊಂದಿಗೆ ಶಾಲೆ ಬಿಡುತ್ತಿರುವ ಕುರಿತ ಪ್ರಮಾಣಪತ್ರ ಅಥವಾ ಶಾಲೆ ವರ್ಗಾವಣೆ ಪ್ರಮಾಣಪತ್ರ/ ಇನ್ನು ಹೆಸರು ಹಾಗೂ ಜನ್ಮದಿನಾಂಕವಿರುವ ಎಸ್ಎಸ್ ಸಿ ಪ್ರಮಾಣಪತ್ರ.
3.ರಾಜ್ಯ ಅಥವಾ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿನ ಸೇವಾ ದಾಖಲೆಗಳನ್ನು ಆಧರಿಸಿರುವ ಪ್ರಮಾಣಪತ್ರ.
4.ಜನ್ಮದಿನಾಂಕದ ದೃಢೀಕರಣಕ್ಕೆ ಯಾವುದೇ ಸೂಕ್ತ ದಾಖಲೆಗಳು ಲಭ್ಯವಿರದ ಸಂದರ್ಭದಲ್ಲಿ ಆ ಸದಸ್ಯನ ವೈದ್ಯಕೀಯ ಪರೀಕ್ಷೆ ಬಳಿಕ ಸಿವಿಲ್ ಸರ್ಜನ್ ನೀಡುವ ವೈದ್ಯಕೀಯ ಪ್ರಮಾಣಪತ್ರ.
5.ಪಾಸ್ ಪೋರ್ಟ್
6.ಐಟಿ ಇಲಾಖೆ ವಿತರಿಸಿರುವ ಪ್ಯಾನ್ ಕಾರ್ಡ್
7.ಕೇಂದ್ರ/ರಾಜ್ಯ ಪಿಂಚಣಿ ಪಾವತಿ ಆರ್ಡರ್.
8.ಸಿಜಿಎಚ್ ಎಸ್ /ಇಸಿಎಚ್ ಎಸ್ /ರಾಜ್ಯ, ಕೇಂದ್ರ ಅಥವಾ ಕೇಂದ್ರಾಡಳಿತ ಸರ್ಕಾರಗಳು ವಿತರಿಸಿರುವ ಮೆಡಿ-ಕ್ಲೇಮ್ ಕಾರ್ಡ್. ಫೋಟೋ ಹಾಗೂ ಜನ್ಮದಿನಾಂಕ ಹೊಂದಿರುವ ಪಿಎಸ್ ಯುಎಸ್.
9.ಸರ್ಕಾರದಿಂದ ವಿತರಿಸಿರುವ ವಾಸ್ತವ್ಯ ದೃಢೀಕರಣ ಪ್ರಮಾಣಪತ್ರ.

ಏನಿದು ಇಪಿಎಫ್?
ಮಾಸಿಕ ವೇತನ ಪಡೆಯುವ ಬಹುತೇಕ ಎಲ್ಲ ಉದ್ಯೋಗಿಗಳು ಇಪಿಎಫ್ ಖಾತೆ ಹೊಂದಿರುತ್ತಾರೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಈ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಡಿಯಲ್ಲಿ, ಉದ್ಯೋಗಿ ಹಾಗೂ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ತಮ್ಮ ಮೂಲ ವೇತನದಿಂದ ಇಪಿಎಫ್ ಖಾತೆಗೆ ಶೇ.12ರಷ್ಟು ಮೊತ್ತವನ್ನು ಕೊಡುಗೆ ನೀಡುತ್ತಾರೆ.

ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಇಪಿಎಫ್ ಸದಸ್ಯರಿಗೆ ಅವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

ಯುಎಎನ್ ಅಂದ್ರೇನು?
ಇನ್ನು ಇಪಿಎಫ್ ಖಾತೆ ಹೊಂದಿರೋರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ವಿಶಿಷ್ಟ ಸಂಖ್ಯೆಯಾದ ಯುನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ನೀಡುತ್ತದೆ. ಉದ್ಯೋಗಿ ಸಂಸ್ಥೆ ಬದಲಾಯಿಸಿದ ಬಳಿಕವೂ ಆತನ ಯುಎಎನ್ ಅದೇ ಇರುತ್ತದೆ. ಯುಎಎನ್ ಬಳಸಿಕೊಂಡು ಉದ್ಯೋಗಿ ಇಪಿಎಫ್ ಪೋರ್ಟಲ್ ನಲ್ಲಿ ತನ್ನ ವೈಯಕ್ತಿಕ ಮಾಹಿತಿಗಳು ಹಾಗೂ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ, ಆನ್ ಲೈನ್ ನಲ್ಲಿ ಈ ಸೌಲಭ್ಯ ಬಳಸಲು ಉದ್ಯೋಗಿ ಇಪಿಎಫ್ಒನಲ್ಲಿ ಕೆವೈಸಿ ಮಾಹಿತಿಗಳನ್ನು ನವೀಕರಿಸುವುದು ಅಗತ್ಯ.

ಕೆವೈಸಿ ನವೀಕರಣದ ಪ್ರಯೋಜನಗಳು
*ಕೆವೈಸಿ ಮಾಹಿತಿಗಳು ನವೀಕರಣಗೊಂಡಿದ್ರೆ ಇಪಿಎಫ್ ಖಾತೆಗಳನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.
*ಯುಎಎನ್ ಜೊತೆಗೆ ಕೆವೈಸಿ ಮಾಹಿತಿಗಳನ್ನು ಸೇರ್ಪಡೆಗೊಳಿಸಿದ ಬಳಿಕ ಅಥವಾ ಇಪಿಎಫ್ ಕೆವೈಸಿ ನವೀಕರಣದ ನಂತರ ಆನ್ ಲೈನ್ ವಿತ್ ಡ್ರಾ ಕ್ಲೇಮ್ ಗಳನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.
*ಎಲ್ಲ ಸದಸ್ಯರಿಗೂ ಪಿಎಫ್ ಖಾತೆಯ ಪ್ರತಿ ತಿಂಗಳ ಮಾಹಿತಿ ಎಸ್ ಎಂಎಸ್ ಮೂಲಕ ಸಿಗುತ್ತದೆ.
 

click me!