E20 ಇಂಧನ: ಆಟೋ ರಂಗದ ಆಂತರಿಕ ವರದಿಯಲ್ಲಿ ಬೆಚ್ಚಿಬೀಳಿಸೋ ಸತ್ಯ, ಅಪಾಯಕಾರಿ ಮಟ್ಟದ ಕ್ಲೋರೈಡ್ ಪತ್ತೆ, ಮೈಲೇಜ್ ಕುಸಿತ!

Published : Aug 13, 2026, 04:20 PM IST
E20

ಸಾರಾಂಶ

ದೇಶಾದ್ಯಂತ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯಂತಹ ದೂರುಗಳು ಹೆಚ್ಚಾಗಿವೆ. ಆಟೋ ಉದ್ಯಮದ ಆಂತರಿಕ ತನಿಖೆಯಲ್ಲಿ ಇಂಧನದಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ. ಆದರೆ, ಆಟೋಮೊಬೈಲ್ ತಯಾರಕರ ಸಂಘವು (SIAM) ಸರ್ಕಾರಕ್ಕೆ ನೀಡಿದ್ದ ದೂರನ್ನು ಹಿಂಪಡೆದಿದ್ದು, ಸಾರ್ವಜನಿಕರಲ್ಲಿ ಗೊಂದಲ ಮುಂದುವರೆದಿದೆ.

ಹೊಸದೆಹಲಿ: ದೇಶಾದ್ಯಂತ ಕಾರುಗಳಲ್ಲಿ ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯ ಪರಿಣಾಮಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ, ಆಟೋಮೊಬೈಲ್ ಉದ್ಯಮದ ಹಿರಿಯ ಅಧಿಕಾರಿಗಳ ನಡುವೆ ವಿನಿಮಯವಾದ ಆಂತರಿಕ ಸಂವಹನಗಳು (ಇಮೇಲ್‌ಗಳು) ಇಂಧನ ಮಾಲಿನ್ಯದ ಕುರಿತಾದ ನೈಜ ಕಳವಳಗಳನ್ನು ಬಹಿರಂಗಪಡಿಸಿವೆ. E20 ಪೆಟ್ರೋಲ್ (20% ಎಥೆನಾಲ್ ಮಿಶ್ರಿತ) ಬಿಡುಗಡೆಯಾದಂದಿನಿಂದ ವಾಹನ ಚಾಲಕರಲ್ಲಿ ತೀವ್ರ ಅತೃಪ್ತಿ ವ್ಯಕ್ತವಾಗುತ್ತಿದೆ. ಈ ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ, ಎಂಜಿನ್ ಮತ್ತು ಬಿಡಿಭಾಗಗಳು ಬೇಗನೆ ಸವೆಯುತ್ತಿವೆ ಎಂದು ನೂರಾರು ಗ್ರಾಹಕರು ದೂರಿದ್ದಾರೆ. ಈ ಪೈಕಿ ಕನಿಷ್ಠ ಒಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ರಾಯಿಟರ್ಸ್ ಬೆಚ್ಚಿಬೀಳಿಸುವ ವರದಿ

ಇಂಧನದಲ್ಲಿರುವ ಅತಿಯಾದ ಕ್ಲೋರೈಡ್ ಅಂಶವು ವಾಹನದ ಆಟೋಮೋಟಿವ್ ಭಾಗಗಳನ್ನು ಸವೆಸಬಹುದು ಮತ್ತು ತೇವಾಂಶವು (Moisture) ಇಂಧನ ತುಂಬಿದ ತಕ್ಷಣವೇ ವಾಹನ ಸ್ತಬ್ಧಗೊಳ್ಳುವಂತೆ ಮಾಡಬಹುದು ಎಂದು 'ಭಾರತೀಯ ಆಟೋಮೊಬೈಲ್ ತಯಾರಕರ ಸಂಘ' (SIAM) ಈ ಹಿಂದೆ ಎಚ್ಚರಿಸಿತ್ತು.

ರಾಯಿಟರ್ಸ್ ಸಂಸ್ಥೆ ಪರಿಶೀಲಿಸಿದ ಆಂತರಿಕ ದಾಖಲೆಗಳ ಪ್ರಕಾರ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳ ಹಿರಿಯ ಅಧಿಕಾರಿಗಳು ಇಂಧನ ಮಾಲಿನ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಮೂರು ಕಂಪನಿಗಳು ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆಯ ಶೇ. 67ರಷ್ಟು ಪಾಲನ್ನು ಹೊಂದಿವೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕಚ್ಚಾ ತೈಲ ಆಮದು ಕಡಿಮೆ ಮಾಡಲು E20 ಜಾರಿಗೆ ತಂದ ನಂತರ, ಆಟೋ ಉದ್ಯಮವು ದೇಶದ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 250ಕ್ಕೂ ಹೆಚ್ಚು ಪಂಪ್‌ಗಳಿಂದ ಇಂಧನ ಮಾದರಿಗಳನ್ನು ಸಂಗ್ರಹಿಸಿ ವ್ಯಾಪಕ ಪರೀಕ್ಷೆ ನಡೆಸಿತ್ತು.

ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದ ಭೀಕರ ಸತ್ಯವೇನು?

ಆಟೋ ಉದ್ಯಮ ನಡೆಸಿದ ಪರೀಕ್ಷೆಯಲ್ಲಿ 18 ರಾಜ್ಯಗಳ ಇಂಧನ ಮಾದರಿಗಳಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ.

ಕ್ಲೋರೈಡ್ ಮಟ್ಟ: ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಿತಿ 3 ppm (ಪಾರ್ಟ್ಸ್ ಪರ್ ಮಿಲಿಯನ್). ಆದರೆ ಪರೀಕ್ಷೆಯಲ್ಲಿ ರಾಜಸ್ಥಾನದಲ್ಲಿ 570 ppm, ದೆಹಲಿಯಲ್ಲಿ 420 ppm ಮತ್ತು ಮಹಾರಾಷ್ಟ್ರದಲ್ಲಿ 357 ppm ವರೆಗೆ ಕ್ಲೋರೈಡ್ ಕಂಡುಬಂದಿದೆ!

ತೇವಾಂಶ ಮಟ್ಟ: ಸರ್ಕಾರದ ಮಿತಿ 3,000 ppm ಇದ್ದರೆ, ಆಂಧ್ರಪ್ರದೇಶದಲ್ಲಿ 13,000 ppm ಹಾಗೂ ಉತ್ತರ ಪ್ರದೇಶದಲ್ಲಿ 12,500 ppm ವರೆಗೆ ತೇವಾಂಶ ದಾಖಲಾಗಿದೆ.

ಭಾರತೀಯ ಆಟೋಮೊಬೈಲ್ ಉದ್ಯಮದ ಖಾಸಗಿ ಇಂಧನ ಪರೀಕ್ಷೆಯ ವರದಿ

ರಾಜಸ್ಥಾನದಲ್ಲಿ ಗರಿಷ್ಠ ಮಾಲಿನ್ಯ: ರಾಜಸ್ಥಾನದಿಂದ ಸಂಗ್ರಹಿಸಲಾದ 14 ಇಂಧನ ಮಾದರಿಗಳಲ್ಲಿ ಗರಿಷ್ಠ ಅಂದರೆ 6.0 ರಿಂದ 570 ppm ವರೆಗೆ ಕ್ಲೋರೈಡ್ ಪತ್ತೆಯಾಗಿದ್ದು, ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ.

ಮಧ್ಯಪ್ರದೇಶ ಮತ್ತು ದೆಹಲಿ: ಮಧ್ಯಪ್ರದೇಶದಲ್ಲಿ ಪರೀಕ್ಷಿಸಲಾದ 11 ಮಾದರಿಗಳಲ್ಲಿ 550 ppm ವರೆಗೆ ಹಾಗೂ ದೆಹಲಿ/ಎನ್‌ಸಿಆರ್‌ನ 28 ಮಾದರಿಗಳಲ್ಲಿ 420 ppm ವರೆಗೆ ಅಪಾಯಕಾರಿ ಮಟ್ಟದ ಕ್ಲೋರೈಡ್ ಕಂಡುಬಂದಿದೆ.

ಕರ್ನಾಟಕ ಮತ್ತು ಕೇರಳದಲ್ಲಿ ಸುರಕ್ಷಿತ ಮಟ್ಟ: ಕರ್ನಾಟಕದಲ್ಲಿ ಪರೀಕ್ಷಿಸಿದ 15 ಮಾದರಿಗಳು (1-2.2 ppm) ಮತ್ತು ಕೇರಳದ 24 ಮಾದರಿಗಳಲ್ಲಿ (1.0-2.2 ppm) ಕ್ಲೋರೈಡ್ ಪ್ರಮಾಣವು ಸರ್ಕಾರದ ಗರಿಷ್ಠ ಮಿತಿಯಾದ 3 ppm ಗಿಂತಲೂ ಕಡಿಮೆ ಇದ್ದು, ಇಂಧನವು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

ಇತರ ರಾಜ್ಯಗಳ ಸ್ಥಿತಿ: ಉತ್ತರ ಪ್ರದೇಶದಲ್ಲಿ (175 ppm), ಪಂಜಾಬ್‌ನಲ್ಲಿ (110 ppm), ಮಹಾರಾಷ್ಟ್ರದಲ್ಲಿ (357 ppm) ಮತ್ತು ತಮಿಳುನಾಡಿನಲ್ಲಿ (24.0 ppm) ಕೂಡ ಅನುಮತಿಸಿದ ಮಿತಿಗಿಂತ ಹೆಚ್ಚಿನ ಕ್ಲೋರೈಡ್ ದಾಖಲಾಗಿದೆ.

ತಜ್ಞರು ಏನಂತಾರೆ?

ಮಾರುತಿ ಸುಜುಕಿ ಹಿರಿಯ ಅಧಿಕಾರಿ ಅನೂಪ್ ಭಟ್ ಹೇಳಿಕೆ ಪ್ರಕಾರ ಹಾಲಿ ಇರುವ ಇಂಧನ ಇಂಜೆಕ್ಟರ್‌ಗಳು ಗರಿಷ್ಠ 1 ppm ಕ್ಲೋರೈಡ್ ಅನ್ನು ಮಾತ್ರ ಸಹಿಸಿಕೊಳ್ಳಬಲ್ಲವು. ಅಂತರರಾಷ್ಟ್ರೀಯ ಮಾನದಂಡವೂ ಇದನ್ನೇ ಹೇಳುತ್ತದೆ ಎಂದಿದ್ದಾರೆ.

ಮಹೀಂದ್ರಾ ಹಿರಿಯ ಎಂಜಿನಿಯರ್ ಆರ್. ರಾಮಪ್ರಭು ಅವರು ಇಂಧನದಲ್ಲಿರುವ ಸಾವಯವ ಕ್ಲೋರೈಡ್ ತ್ವರಿತ ವಾಹನ ವೈಫಲ್ಯಕ್ಕೆ ಕಾರಣವಾಗುತ್ತಿದೆ. ಇಂಧನ ತುಂಬಿದ 200 ಕಿ.ಮೀ. ಒಳಗಾಗಿಯೇ ಎಂಜಿನ್‌ಗಳು ತೀವ್ರ ಹಾನಿಗೊಳಗಾಗುತ್ತಿವೆ. ಇದಕ್ಕೆ ನಮ್ಮ ಬಳಿ ಬಲವಾದ ಪುರಾವೆಗಳಿವೆ ಎಂದಿದ್ದಾರೆ.

ಸರ್ಕಾರದ ಸ್ಪಷ್ಟನೆ, ದೂರು ಹಿಂಪಡೆದ SIAM, ಕಂಪನಿಗಳ ಮರು-ಹೇಳಿಕೆ:

ಕಳಪೆ ಇಂಧನದ ಕುರಿತು ಜುಲೈ 28 ರಂದು ಸರ್ಕಾರಕ್ಕೆ ಸಲ್ಲಿಸಿದ್ದ ದೂರನ್ನು SIAM ಏಕಾಏಕಿ ಹಿಂತೆಗೆದುಕೊಂಡಿತು. ಸರ್ಕಾರದಿಂದ ಬಂದ ತೀವ್ರ ಟೀಕೆಗಳ ನಂತರ, ಸಲ್ಲಿಸಲಾದ ಅಂಕಿಅಂಶಗಳು ಅಲ್ಪಮಟ್ಟದ ಮಾದರಿಗಳನ್ನು ಆಧರಿಸಿದ್ದವು, ಇನ್ನು ಹೆಚ್ಚಿನ ವೈಜ್ಞಾನಿಕ ಪರಿಶೀಲನೆ ಅಗತ್ಯವಿದೆ ಎಂದು ಹೇಳಿ SIAM ತನ್ನ ದೂರನ್ನು ಅಜಾಗರೂಕತೆಯಿಂದ ಕಳುಹಿಸಲಾದ ಪತ್ರವೆಂದು ಸಮಜಾಯಿಷಿ ನೀಡಿತು.

ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ತೈಲ ಮಾರುಕಟ್ಟೆ ಕಂಪನಿಗಳು ನಡೆಸಿದ ಕಠಿಣ ಪರೀಕ್ಷೆಯಲ್ಲಿ ಕೇವಲ 4 ಕಡೆಗಳಲ್ಲಿ ಮಾತ್ರ ದೋಷ ಪತ್ತೆಯಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಹೀಂದ್ರಾ ಕಂಪನಿಯು ಆಂತರಿಕ ಇಮೇಲ್‌ಗಳಿಂದ ತಪ್ಪಾದ ತೀರ್ಮಾನಕ್ಕೆ ಬರಬಾರದು, E20 ಇಂಧನದಿಂದ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ನಂತರ ಸಮರ್ಥಿಸಿಕೊಂಡರೆ, ಮಾರುತಿ ಮತ್ತು ಟಾಟಾ ಸಂಸ್ಥೆಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ. ಏಪ್ರಿಲ್ 1 ರಿಂದ E20 ಪೆಟ್ರೋಲ್ ಪ್ರಮುಖ ಇಂಧನವಾಗಿ ಲಭ್ಯವಿರುವುದರಿಂದ, ವಾಹನಗಳ ಬಾಳಿಕೆ ಮತ್ತು ಕಾರ್ಯಕ್ಷಮತೆಯ ಮೇಲಿನ ಅದರ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್? ದಶಕದ ಕಾನೂನು ಸಮರ ಅಂತ್ಯಗೊಳಿಸಲು ಬಾಂಬೆ ಹೈಕೋರ್ಟ್ ಸೂಚನೆ!
ಸೈಕಲ್‌ನಿಂದ ಶುರುವಾದ ಪಯಣ, ಈಗ ಸ್ವಂತ ಮನೆಯತ್ತ: ಕಠಿಣ ಪರಿಶ್ರಮದಿಂದಲೇ ಗೆದ್ದ ಬೆಂಗಳೂರಿನ ಡೆಲಿವರಿ ಪಾರ್ಟ್‌ನರ್‌ ಯಶೋಗಾಥೆ