ಕತ್ತೆ ಹಾಲಿನ ಬೆಲೆ ಕೇಳಿದ್ರೆ ಬೆರಗಾಗೋದು ಗ್ಯಾರಂಟಿ. ಲೀಟರ್ ಗೆ 5 ಸಾವಿರ ರೂ. ಬೆಲೆಗೆ ಕತ್ತೆ ಹಾಲು ಮಾರಾಟ ಮಾಡಿ ಗುಜರಾತ್ ರೈತ ತಿಂಗಳಿಗೆ ಮೂರು ಲಕ್ಷ ಸಂಪಾದಿಸುತ್ತಿದ್ದಾನೆ.
ಅಹಮದಾಬಾದ್ (ಏ.22): ಯಾರ ಮೇಲಾದ್ರೂ ಕೋಪ ಬಂದ್ರೆ 'ಕತ್ತೆ' ಎಂದು ಬೈಯುತ್ತೇವೆ. ಆದರೆ, ಕತ್ತೆ ಹಾಲಿಗಿರುವ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ, ಅಷ್ಟೇ ಅಲ್ಲ, ಯಾರನ್ನಾದ್ರೂ ಕತ್ತೆ ಎಂದು ಕರೆಯೋ ಮುನ್ನ ಯೋಚಿಸುತ್ತೀರಿ ಕೂಡ. ಮಾರುಕಟ್ಟೆಯಲ್ಲಿ ಕತ್ತೆ ಹಾಲಿಗೆ ಒಂದು ಲೀಟರ್ ಗೆ 5,000ರೂ. ಬೆಲೆ ಇದೆ. ಕತ್ತೆ ಹಾಲನ್ನು ಮಾರಿ ಕೋಟ್ಯಧೀಶರಾದ ರೈತರು ಅನೇಕರಿದ್ದಾರೆ. ಇಂಥವರಲ್ಲಿ ಗುಜರಾತ್ ಪಟ್ನಾ ಜಿಲ್ಲೆಯ ಹಳ್ಳಿಯೊಂದರ ಧೀರೇನ್ ಸೋಲಂಕಿ ಕೂಡ ಒಬ್ಬರು. 42 ಕತ್ತೆಗಳನ್ನು ಸಾಕಿರುವ ಸೋಲಂಕಿ ಅವುಗಳ ಹಾಲನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಆನ್ ಲೈನ್ ನಲ್ಲಿ ಕತ್ತೆ ಹಾಲಿನ ಮಾರಾಟದ ಉದ್ಯಮ ಪ್ರಾರಂಭಿಸಿರುವ ಸೋಲಂಕಿ, ತಿಂಗಳಿಗೆ 3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಖಾಸಗಿ ವಲಯದಲ್ಲಿ ಸ್ಥಿರವಾದ ಉದ್ಯೋಗ, ವೇತನದ ಭರವಸೆಯಿಲ್ಲದ ಕಾರಣ ಸೋಲಂಕಿ ಉದ್ಯಮ ಮಾಡುವ ಬಗ್ಎ ಯೋಚಿಸಿದರು ಈ ಸಮಯದಲ್ಲಿ ಅವರಿಗೆ ಕತ್ತೆ ಹಾಲಿನ ಮಾರಾಟ ಪ್ರಾರಂಭಿಸುವ ಯೋಚನೆ ಮೂಡಿತು.
ಎಂಟು ತಿಂಗಳ ಹಿಂದೆ 22 ಲಕ್ಷ ರೂ. ಪ್ರಾರಂಭಿಕ ಹೂಡಿಕೆಯೊಂದಿಗೆ ಕೇವಲ 20 ಕತ್ತೆಗಳೊಂದಿಗೆ ಸೋಲಂಕಿ ಉದ್ಯಮ ಪ್ರಾರಂಭಿಸಿದ್ದರು. ಆರಂಭದಲ್ಲಿ ಗುಜರಾತ್ ನಲ್ಲಿ ಕತ್ತೆ ಹಾಲಿಗೆ ಯಾವುದೇ ಬೇಡಿಕೆಯಿರಲಿಲ್ಲ. ಹೀಗಾಗಿ ಐದು ತಿಂಗಳ ತನಕ ಸೋಲಂಕಿ ಅವರಿಗೆ ಕತ್ತೆ ಸಾಕಾಣೆಯಿಂದ ಯಾವುದೇ ಆದಾಯ ಬರಲಿಲ್ಲ. ಆದರೆ, ನಿಧಾನವಾಗಿ ಬೇಡಿಕೆ ಬರಲು ಪ್ರಾರಂಭವಾಯಿತು. ಇಂದು ಸೋಲಂಕಿ ಕರ್ನಾಟಕ ಹಾಗೂ ಕೇರಳದಲ್ಲಿನ ಗ್ರಾಹಕರಿಗೆ ಕತ್ತೆ ಹಾಲನ್ನು ಪೂರೈಕೆ ಮಾಡುತ್ತಿದ್ದಾರೆ. ತಮ್ಮ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಸುವ ಕಾಸ್ಮೆಟಿಕ್ಸ್ ಕಂಪನಿಗಳಿಗೆ ಕೂಡ ಇವರು ಹಾಲು ಪೂರೈಕೆ ಮಾಡುತ್ತಿದ್ದಾರೆ.
ಕತ್ತೆ ಹಿಂದೆ ಹೋದವ ಇಂದು ಕೋಟ್ಯಾಧಿಪತಿ! ಇವನಿಂದ ಕತ್ತೆ ಹಾಲು ಕೊಳ್ಳೋರ್ಯಾರು ಗೊತ್ತಾ?
ತಿಂಗಳಿಗೆ 3-4 ಲಕ್ಷ ಆದಾಯ
ಸೋಲಂಕಿ ಈಗ ತಿಂಗಳಿಗೆ 3-4ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಕತ್ತೆ ಹಾಲಿಗೆ ಲೀಟರ್ ಗೆ 5,000ರೂ.ನಿಂದ 7,000ರೂ. ತನಕ ಬೆಲೆಯಿದೆ. ಅದೇ ದನದ ಹಾಲಿಗೆ ಲೀಟರ್ ಗೆ 65 ರೂ. ಇದೆ. ತಾಜಾತನ ಉಳಿಸಿಕೊಳ್ಳಲು ಹಾಲನ್ನು ಫ್ರಿಜರ್ ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಅಲ್ಲದೆ, ಪೌಡರ್ ರೂಪದಲ್ಲಿ ಕೂಡ ಮಾರಾಟ ಮಾಡಲಾಗುತ್ತದೆ. ಕತ್ತೆ ಹಾಲಿನ ಪೌಡರ್ ಕೆಜಿಗೆ ಒಂದು ಲಕ್ಷ ರೂ. ಬೆಲೆಯಿದೆ.
ಹೂಡಿಕೆ ಎಷ್ಟು?
ಧೀರೇನ್ ಸೋಲಂಕಿ ಕತ್ತೆ ಫಾರ್ಮಾ ರಚನೆಗೆ ಈ ತನಕ ಒಟ್ಟು 38 ಲಕ್ಷ ವ್ಯಯಿಸಿದ್ದಾರೆ. ಇದರಲ್ಲಿ ಒಟ್ಟು 42 ಕತ್ತೆಗಳಿವೆ. ಇಲ್ಲಿಯ ತನಕ ಸೋಲಂಕಿ ಅವರಿಗೆ ಕತ್ತೆ ಸಾಕಾಣೆಗೆ ರಾಜ್ಯ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಂಬಲ ಹಾಗೂ ಮನ್ನಣೆ ಸಿಗುವ ಭರವಸೆಯನ್ನು ಅವರು ಹೊಂದಿದ್ದಾರೆ.
ಕತ್ತೆ ಹಾಲಿನಲ್ಲಿದೆ ಔಷಧೀಯ ಗುಣ
ಈ ಹಿಂದಿನಿಂದಲೂ ಕತ್ತೆ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳಿರೋದನ್ನು ಗುರುತಿಸಿದ್ದಾರೆ. ಈಜಿಪ್ಟ್ ಹಾಗೂ ಗ್ರೀಕ್ ಜನರು ಕೂಡ ಕತ್ತೆ ಹಾಲನ್ನು ಔಷಧ ರೂಪದಲ್ಲಿ ಬಳಸುತ್ತಿದ್ದರು. ಪಿತ್ತಕೋಶದ ಸಮಸ್ಯೆಗಳಿಂದ ಹಿಡಿದು ಸೋಂಕು ರೋಗಗಳ ತನಕ ಅನೇಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಕತ್ತೆ ಹಾಲನ್ನು ಬಳಸಲಾಗುತ್ತದೆ.
ಕಲಬುರಗಿಯಲ್ಲಿ ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ! ಲೀ ಹಾಲಿಗೆ ಎಷ್ಟು ಬೆಲೆ ಗೊತ್ತಾ!
ಇನ್ನು ಆಧುನಿಕ ಸಂಶೋಧನೆಗಳಲ್ಲಿ ಕೂಡ ಕತ್ತೆ ಹಾಲು ಮಾನವರ ಹಾಲಿನಲ್ಲಿರುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದೆ. ಅಲ್ಲದೆ, ಶಿಶುಗಳಿಗೆ ತಾಯಿ ಎದೆಹಾಲಿಗೆ ಇದು ಅತ್ಯುತ್ತಮ ಪರ್ಯಾಯವಾಗಬಲ್ಲದು ಎಂದು ಕೂಡ ಹೇಳಿದ್ದಾರೆ. ಅದರಲ್ಲೂ ಹಸುವಿನ ಹಾಲಿನ ಅಲರ್ಜಿ ಹೊಂದಿರೋರಿಗೆ ಕತ್ತೆ ಹಾಲು ಅತ್ಯುತ್ತಮ ಪರ್ಯಾಯವಾಗಿದೆ.