
ಕೋಲ್ಕತಾ: ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಆಸ್ತಿ ವಿವರಕ್ಕೆ ಸಂಬಂಧಿಸಿದಂತೆ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್' (ADR) ಸಂಸ್ಥೆಯು ಮಹತ್ವದ ವರದಿಯೊಂದನ್ನು ಬಿಡುಗಡೆ ಮಾಡಿದೆ. ದೇಶದ ಒಟ್ಟು 31 ಮುಖ್ಯಮಂತ್ರಿಗಳ ಆಸ್ತಿ ಅಫಿಡವಿಟ್‌ಗಳನ್ನು ವಿಶ್ಲೇಷಿಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೇಶದಲ್ಲೇ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅತ್ಯಂತ ಕಡಿಮೆ ಆಸ್ತಿ ಹೊಂದಿರುವ ಬಡ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವರದಿಯ ಪ್ರಕಾರ, ದೇಶದ 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ ₹3,660 ಕೋಟಿ ರೂಪಾಯಿಗಳಾಗಿದೆ. ಈ ಪೈಕಿ ನಾಲ್ವರು ಮುಖ್ಯಮಂತ್ರಿಗಳು ನೂರಾರು ಕೋಟಿ ಒಡೆಯರಾಗಿದ್ದು, 'ಶತಕೋಟ್ಯಧಿಪತಿ'ಗಳ ಪಟ್ಟಿಯಲ್ಲಿದ್ದಾರೆ.
ಡಿ.ಕೆ. ಶಿವಕುಮಾರ್ (ಕರ್ನಾಟಕ): ₹1,413 ಕೋಟಿ ಮೌಲ್ಯದ ಆಸ್ತಿಯೊಂದಿಗೆ ದೇಶದ ಅತ್ಯಂತ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಎನ್. ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ): ₹931 ಕೋಟಿ ಆಸ್ತಿಯೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
ಸಿ. ಜೋಸೆಫ್ ವಿಜಯ್ (ತಮಿಳುನಾಡು): ₹648 ಕೋಟಿ ಘೋಷಿತ ಆಸ್ತಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಪೇಮಾ ಖಂಡು (ಅರುಣಾಚಲ ಪ್ರದೇಶ): ₹332 ಕೋಟಿ ಆಸ್ತಿ ಹೊಂದುವ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಅತಿ ಕಡಿಮೆ ಆಸ್ತಿ ಹೊಂದಿರುವ 'ಬಡ' ಮುಖ್ಯಮಂತ್ರಿಗಳು ದೇಶದ ಇಡೀ ಮುಖ್ಯಮಂತ್ರಿಗಳ ಪೈಕಿ ಕೇವಲ ಶೇ. 7 ರಷ್ಟು ಸಿಎಂಗಳು ಮಾತ್ರ ₹1 ಕೋಟಿಗಿಂತ ಕಡಿಮೆ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಒಮರ್ ಅಬ್ದುಲ್ಲಾ (ಜಮ್ಮು-ಕಾಶ್ಮೀರ): ಕೇವಲ ₹55.24 ಲಕ್ಷ ಆಸ್ತಿ ಹೊಂದುವ ಮೂಲಕ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.
ಸುವೇಂದು ಅಧಿಕಾರಿ (ಪಶ್ಚಿಮ ಬಂಗಾಳ): ₹85.87 ಲಕ್ಷ ಘೋಷಿತ ಆಸ್ತಿಯೊಂದಿಗೆ ದೇಶದಲ್ಲೇ ಎರಡನೇ ಅತಿ ಕಡಿಮೆ ಆಸ್ತಿ ಹೊಂದಿದ ಸಿಎಂ ಆಗಿದ್ದಾರೆ.
ಭಜನ್ ಲಾಲ್ ಶರ್ಮಾ (ರಾಜಸ್ಥಾನ): ₹1.46 ಕೋಟಿಗಿಂತ ಅಧಿಕ ಆಸ್ತಿ ಹೊಂದಿದ್ದು, ನಂತರದ ಸ್ಥಾನದಲ್ಲಿದ್ದಾರೆ.
ಬಂಗಾಳ ಸಿಎಂ ಸುವೇಂದು ಅಧಿಕಾರಿ ಆಸ್ತಿ ವಿವರದ ಮೇಲೊಂದು ನೋಟ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ, ಅವರ ಒಟ್ಟು ಆಸ್ತಿ ₹85 ಲಕ್ಷ ರೂಪಾಯಿಗಳಾಗಿದೆ. ಅವರ ಬಳಿ ಕೇವಲ ₹12,000 ನಗದು ಇದ್ದು, 13 ವಿವಿಧ ಬ್ಯಾಂಕ್ ಖಾತೆಗಳಲ್ಲಿ ಒಟ್ಟು ₹7.24 ಲಕ್ಷ ಠೇವಣಿ ಇದೆ. ಸ್ಥಿರ ಠೇವಣಿ (FD) ಮತ್ತು ಕಿಸಾನ್ ವಿಕಾಸ್ ಪತ್ರಗಳಲ್ಲಿ (KVP) ಸುಮಾರು ₹24.5 ಲಕ್ಷ ಹೂಡಿಕೆ ಮಾಡಿದ್ದಾರೆ.
ವಿಶೇಷವೆಂದರೆ, ಅವರ ಹೆಸರಿನಲ್ಲಿ ಯಾವುದೇ ಸ್ವಂತ ಕಾರು ಅಥವಾ ಚಿನ್ನಾಭರಣಗಳಿಲ್ಲ ಹಾಗೂ ಯಾವುದೇ ಸಾಲದ ಹೊಣೆಗಾರಿಕೆಯೂ ಇಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಇಗ್ರಾ ಮತ್ತು ನಂದಿಗ್ರಾಮದಲ್ಲಿ ಕೃಷಿ, ಕೃಷಿಯೇತರ ಭೂಮಿ ಹಾಗೂ ಮೂರು ವಸತಿ ಮನೆಗಳನ್ನು ಹೊಂದಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಅವರ ವಾರ್ಷಿಕ ಆದಾಯ ₹17 ಲಕ್ಷಕ್ಕೂ ಅಧಿಕವಾಗಿತ್ತು. 2021ರ ಚುನಾವಣೆಗೆ ಹೋಲಿಸಿದರೆ (ಆಗ ₹1 ಕೋಟಿ ಇತ್ತು) ಕಳೆದ ಐದು ವರ್ಷಗಳಲ್ಲಿ ಅವರ ಬ್ಯಾಂಕ್ ಠೇವಣಿ ಗಣನೀಯವಾಗಿ ಕುಸಿದಿದೆ.
ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮತ್ತು ಕ್ರಿಮಿನಲ್ ಹಿನ್ನೆಲೆ ಎಡಿಆರ್ ವರದಿಯ ಪ್ರಕಾರ, ದೇಶದ ಎಲ್ಲಾ 31 ಮುಖ್ಯಮಂತ್ರಿಗಳ ಸರಾಸರಿ ಆಸ್ತಿ ಮೌಲ್ಯ ₹118 ಕೋಟಿ ರೂಪಾಯಿಗಳಾಗಿದೆ. ಆಸ್ತಿಯಷ್ಟೇ ಅಲ್ಲದೆ, ಸಿಎಂಗಳ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ವಿವರವನ್ನೂ ಈ ವರದಿ ಬಹಿರಂಗಪಡಿಸಿದೆ. ಒಟ್ಟು 31 ಮುಖ್ಯಮಂತ್ರಿಗಳ ಪೈಕಿ ಶೇ. 45ರಷ್ಟು (ಅಂದರೆ 14 ಸಿಎಂಗಳು) ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಮುಕ್ತವಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ 11 ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಆಘಾತಕಾರಿ ಅಂಶವೂ ವರದಿಯಿಂದ ಬೆಳಕಿಗೆ ಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.