ಚೀನಾದ ಆರ್ಥಿಕ ನೀತಿ ಪ್ರಶ್ನಾತೀತ ಎಂದ ಕ್ಸಿ ಜಿನ್ ಪಿಂಗ್| 'ಚೀನಾ ಆರ್ಥಿಕ ನೀತಿ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ'| ಪರೋಕ್ಷವಾಗಿ ಅಮೆರಿಕ, ಭಾರತದ ಮೇಲೆ ಗುಡುಗಿದ ಚೀನಾ ಅಧ್ಯಕ್ಷ| ಚೀನೀ ಪದ್ದತಿಯ ಸಮಾಜವಾದಿ ವ್ಯವಸ್ಥೆಗೆ ಹೆಚ್ಚಿನ ಅವಕಾಶ ಎಂದ ಕ್ಸಿ
ಬೀಜಿಂಗ್(ಡಿ.18): ಆರ್ಥಿಕ ಸುಧಾರಣೆ ಮತ್ತು ಮುಕ್ತ ಮಾರುಕಟ್ಟೆ ನೀತಿಗೆ ತೆರೆದುಕೊಳ್ಳಲು ಚೀನಾ ಸಿದ್ಧವಿದ್ದು, ಆದರೆ ತಾನು ಏನು ಮಾಡಬೇಕು ಎಂದು ನಿರ್ದೇಶಿಸುವ ಹಕ್ಕು ಯಾರಿಗೂ ಇಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಗುಡುಗಿದ್ದಾರೆ.
ಚೀನೀ ಕಮ್ಯೂನಿಸ್ಟ್ ಪಕ್ಷದ ಸುಧಾರಣಾ ನೀತಿಯ 40ನೇ ವರ್ಷಾಚರಣೆ ವೇಳೆ ಮಾತನಾಡಿದ ಕ್ಸಿ, ತನ್ನದೇ ಆರ್ಥಿಕ ನೀತಿ ಹೊಂದುವ ಚೀನಾದ ಹಕ್ಕನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
1978ರಲ್ಲಿ ಡೆಂಗ್ ಕ್ಸಿಯೋಪಿಂಗ್ ಆರಂಭಿಸಿದ್ದ ಆರ್ಥಿಕ ಸುಧಾರಣಾ ನೀತಿಯನ್ನು ಮುಂದುವರಿಸುವುದಾಗಿ ಘೋಷಿಸಿದ ಜಿನ್ ಪಿಂಗ್, ದೇಶದಲ್ಲಿ ಒಂದೇ ಪಕ್ಷ ಇರಬೇಕೆಂಬ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಚೀನೀ ಪದ್ಧತಿಯ ಸಮಾಜವಾದಿ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅವಕಾಶವಿದೆ ಎಂದ ಜಿನ್ ಪಿಂಗ್, ಆದರೆ ತನ್ನ ನೀತಿಗಳ ಕುತಿತು ಅಪಸ್ವರ ಎತ್ತುವ ರಾಷ್ಟ್ರಗಳಿಗೆ ನಾವು ಹೆದರಬೇಕಿಲ್ಲ ಎಂದೂ ಕ್ಸಿ ನುಡಿದರು.
ವ್ಯಾಪಾರ ಮತ್ತು ರಾಜತಾಂತ್ರಿಕ ವಲಯದಲ್ಲಿ ಚೀನಾಗೆ ಅಮೆರಿಕದಿಂದ ತೀವ್ರ ಸವಾಲುಗಳು ಎದುರಾಗುತ್ತಿದ್ದು, ಪ್ರಮುಖವಾಗಿ ಅಮೆರಿಕ-ಚೀನಾ ವಾಣಿಜ್ಯ ಯುದ್ಧ ವೇಗ ಪಡೆದುಕೊಂಡ ಬೆನ್ನಲ್ಲೇ ಕ್ಸಿ ಅವರ ಈ ಮಾತುಗಳು ಮಹತ್ವ ಪಡೆದಿವೆ.