ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ 2024ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಷ್ಟೇ ಅಲ್ಲ, 2023ರಲ್ಲಿ ರವೀಂದ್ರನ್ ನಿವ್ವಳ ಸಂಪತ್ತು 17,545 ಕೋಟಿ ರೂ. ಇತ್ತು, ಆದರೆ ಈ ವರ್ಷ ಶೂನ್ಯಕ್ಕೆ ಜಾರಿದೆ.
ನವದೆಹಲಿ (ಏ.4): ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಯಶಸ್ಸು, ಹಣ ಕೂಡ ಎಂಬುದಕ್ಕೆ ಭಾರತದ ಜನಪ್ರಿಯ ಎಡ್ ಟೆಕ್ ಸಂಸ್ಥೆಗಳಲ್ಲಿ ಒಂದಾಗಿದ್ದ ಬೈಜುಸ್ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್ ಅತ್ಯುತ್ತಮ ನಿದರ್ಶನ. ಕಳೆದ ವರ್ಷ ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್ಗಳ ಸಾಲಿನಲ್ಲಿದ್ದ ರವೀಂದ್ರನ್ ಬಳಿ ಈ ವರ್ಷ ನಯಾಪೈಸೆಯೂ ಇಲ್ಲ. ಒಬ್ಬ ವ್ಯಕ್ತಿ ಉದ್ಯಮದಲ್ಲಿ ಅತೀಎತ್ತರಕ್ಕೇರಿದಷ್ಟೇ ವೇಗವಾಗಿ ಪಾತಾಳಕ್ಕೆ ಕುಸಿಯಬಲ್ಲ ಎಂಬುದಕ್ಕೆ ಇವರೇ ಸಾಕ್ಷಿ. ಇತ್ತೀಚೆಗೆ ಫೋರ್ಬ್ಸ್ ಬಿಡುಗಡೆಗೊಳಿಸಿದ ಬಿಲಿಯನೇರ್ಗಳ ಪಟ್ಟಿ 2024ರಲ್ಲಿ ರವೀಂದ್ರನ್ ಸ್ಥಾನ ಪಡೆದಿಲ್ಲ. 2023ರಲ್ಲಿ ಫೋರ್ಬ್ಸ್ ಬಿಲಿಯನೇರ್ ಸೂಚ್ಯಂಕದಲ್ಲಿ ರವೀಂದ್ರನ್ ಅವರ ನಿವ್ವಳ ಸಂಪತ್ತು 17,545 ಕೋಟಿ ರೂ. (2.1 ಬಿಲಿಯನ್ ಡಾಲರ್) ಎಂದು ದಾಖಲಾಗಿತ್ತು. ಆದರೆ, 2024ರ ಸೂಚ್ಯಂಕದ ಪ್ರಕಾರ ಅವರ ನಿವ್ವಳ ಸಂಪತ್ತು ಶೂನ್ಯ. ಅಂದರೆ ಬರೀ ಒಂದೇ ವರ್ಷದ ಅವಧಿಯಲ್ಲಿ ರವೀಂದ್ರನ್ ಸಂಪತ್ತು ಸಂಪೂರ್ಣವಾಗಿ ಕರಗಿದೆ.
ಕೋವಿಡ್ ಸಮಯದಲ್ಲಿ ಬೈಜುಸ್ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಈ ಸಮಯದಲ್ಲಿ ಶಾಲಾ, ಕಾಲೇಜುಗಳು ಬಾಗಿಲು ಮುಚ್ಚಿದ್ದು, ಆನ್ ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಪರಿಣಾಮ ಬೈಜುಸ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದರೆ, ಇತ್ತೀಚೆಗೆ ಬೈಜುಸ್ ಒಂದರ ಮೇಲೊಂದರಂತೆ ಸಂಕಷ್ಟಗಳನ್ನು ಎದುರಿಸುತ್ತಿದೆ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲು ಆಗದಂತಹ ಪರಿಸ್ಥಿತಿಯಲ್ಲಿ ಈ ಸಂಸ್ಥೆಯಿದೆ.
ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಜೂಸ್ ಕಚೇರಿಗೆ ಬೀಗ, ಉದ್ಯೋಗಿಗಳಿಗೆ ಒಂದು ಆಯ್ಕೆ!
ಫೋಬ್ಸ್ 2023ರ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 189 ಮಂದಿ 2024ರ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದಾರೆ. ಹೀಗೆ ಈ ಪಟ್ಟಿಯಿಂದ ಈ ವರ್ಷ ಹೊರಬಿದ್ದಿರುವ 189 ಜನರಲ್ಲಿ ಭಾರತದ ನಾಲ್ವರಿದ್ದಾರೆ. ಅವರಲ್ಲಿ ಬೈಜು ರವೀಂದ್ರನ್ ಕೂಡ ಒಬ್ಬರು. 2.1 ಬಿಲಿಯನ್ ಡಾಲರ್ ಸಂಪತ್ತಿನಿಂದ ಶೂನ್ಯಕ್ಕೆ ಇಳಿದಿರುವ ಏಕೈಕ ವ್ಯಕ್ತಿ ಕೂಡ ಇವರಾಗಿದ್ದಾರೆ.
ಒಂದು ಕಡೆ ಬೈಜುಸ್ ಸಂಸ್ಥೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರೆ, ಇನ್ನೊಂದೆಡೆ ಬೈಜು ರವೀಂದ್ರನ್ ಅವರನ್ನು ಸಂಸ್ಥೆಯಿಂದ ಬಲವಂತವಾಗಿ ಹೊರದೂಡುವ ಪ್ರಯತ್ನಗಳು ನಡೆಯುತ್ತಿವೆ. ಬೈಜುಸ್ ನಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳು ರವೀಂದ್ರನ್ ಮತ್ತು ಅವರ ಕುಟುಂಬ ಸದಸ್ಯರನ್ನು ಬೋರ್ಡ್ನಿಂದ ಹೊರಹಾಕಲು ಪ್ರಯತ್ನಿಸುತ್ತಿವೆ.
ಕಳೆದ ಕೆಲವು ತಿಂಗಳಿಂದ ಉದ್ಯೋಗಿಗಳಿಗೆ ಸಮರ್ಪಕವಾಗಿ ವೇತನ ಪಾವತಿಸಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಬೈಜುಸ್ ಎದುರಿಸುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬೈಜುಸ್ ಸಿಇಒ ರವೀಂದ್ರನ್ ತಮ್ಮ ಸ್ವಂತ ಮನೆ ಹಾಗೂ ಕುಟುಂಬದವರ ಮನೆಯನ್ನು ಅಡವಿಟ್ಟು ಉದ್ಯೋಗಿಗಳಿಗೆ ಕೆಲವು ತಿಂಗಳ ವೇತನ ಪಾವತಿಸಿದ್ದರು ಕೂಡ.
9300 ಕೋಟಿ ರೂಪಾಯಿ ಫೆಮಾ ನಿಯಮ ಉಲ್ಲಂಘನೆ ಆರೋಪದಡಿ 43 ವಯಸ್ಸಿನ ಬೈಜುಸ್ ಸ್ಥಾಪಕರ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ ಔಟ್ ಸರ್ಕ್ಯೂಲರ್ (ಎಲ್ ಒಸಿ) ಹೊರಡಿಸಿತ್ತು. ಪ್ರೊಸಸ್, ಜಿಎ, ಸೋಫಿನ ಹಾಗೂ ಪೀಕ್ XV ಎಂಬ ನಾಲ್ಕು ಹೂಡಿಕೆದಾರರು ಕೂಡ ರವೀಂದ್ರನ್ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸುವ ಜೊತೆಗೆ ಅವರನ್ನು ಸಂಸ್ಥೆಯಿಂದ ಹೊರಹಾಕಲು ಮುಂದಾಗಿದ್ದಾರೆ ಕೂಡ.
ಬೈಜುಸ್ ರವೀಂದ್ರನ್‌ಗೆ ಹೆಚ್ಚಿದ ಸಂಕಷ್ಟ, ಸಿಇಒ ಹೊರಹಾಕಲು ಹೂಡಿಕೆದಾರರಿಂದ ಮೊಕದ್ದಮೆ!
ಈ ನಡುವೆ ಇತ್ತೀಚೆಗಷ್ಟೇ ಬೈಜುಸ್ ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಬೆಂಗಳೂರಿನ ಕೇಂದ್ರ ಕಚೇರಿ ಹೊರತುಪಡಿಸಿ ದೇಶದ ಎಲ್ಲಾ ಭಾಗದಲ್ಲಿರುವ ಕಚೇರಿಗಳನ್ನು ಮುಚ್ಚಿದೆ. ಬಾಡಿಗೆ ಹಾಗೂ ಇತರ ನಿರ್ವಹಣಾ ವೆಚ್ಚ ಉಳಿಸಲು ಕಂಪನಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕಚೇರಿ ಮುಚ್ಚಿದ ಕಾರಣ ಬೈಜುಸ್ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಮಾತ್ರ ಕಚೇರಿಗೆ ತೆರಳುವಂತೆ ಸೂಚಿಸಿದೆ. ಬೈಜುಸ್ ದೇಶಾದ್ಯಂತ 300ಕ್ಕೂ ಹೆಚ್ಚು ಟ್ಯೂಶನ್ ಸೆಂಟರ್ ಹೊಂದಿದೆ.