
ನವದೆಹಲಿ(ಅ.27): ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಕ ಕಂಪನಿ ಅರ್ಸೆಲರ್ ಮಿತ್ತಲ್ ಅಧ್ಯಕ್ಷ, ರಾಜಸ್ಥಾನ ಮೂಲದ ಉದ್ಯಮಿ ಲಕ್ಷ್ಮೀ ಮಿತ್ತಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಲಕ್ಷ್ಮೀ ಮಿತ್ತಲ್ ಬರೋಬ್ಬರಿ 42 ಸಾವಿರ ಕೋಟಿ ರೂ.ಗಳಿಗೆ ಎಸ್ಸಾರ್ ಸ್ಟೀಲ್ ಕಂಪನಿಯನ್ನು ಖರೀದಿಸಿ ಭಾರತದ ವಾಣಿಜ್ಯ ಕ್ಷೇತ್ರದ ಹುಬ್ಬೇರುವಂತೆ ಮಾಡಿದ್ದಾರೆ. ಸಾಲದ ಬಿಕ್ಕಟ್ಟಿಗೆ ಸಿಕ್ಕು ದಿವಾಳಿಯಾಗಿದ್ದ ಎಸ್ಸಾರ್ ಸ್ಟೀಲ್ ಕಂಪನಿಯನ್ನು ಮಿತ್ತಲ್ ಹರಾಜಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಎಸ್ಸಾರ್ ಸ್ಟೀಲ್ ಖರೀದಿ ಏಕೆ?:
ಎಸ್ಸಾರ್ ಸ್ಟೀಲ್ ನ್ನು ಮಿತ್ತಲ್ ಖರೀದಿಸುತ್ತಿದ್ದಂತೇ ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ತೀವ್ರ ಚಟುವಟಿಕೆಗಳು ಗರಿಗೆದರಿವೆ. ಅಲ್ಲದೇ ಮಿತ್ತಲ್ ಏಕೆ ಭಾರತದ ಸ್ಟೀಲ್ ಕಂಪನಿ ಖರೀದಿಸಲು ಆಸಕ್ತರಾಗಿದ್ದಾರೆ ಎಂಬ ಚರ್ಚೆಗಳೂ ಶುರುವಾಗಿವೆ.
ಈ ಕುತೂಹಲಕ್ಕೆಲ್ಲಾ ಉತ್ತರ ನೀಡಿರುವ ಲಕ್ಷ್ಮೀ ಮಿತ್ತಲ್, ನಾನು ಭಾರತದಲ್ಲಿ ಹುಟ್ಟಿ ಬೆಳೆದವನು. ನನ್ನ ಜನ್ಮ ಸ್ಥಳ ಮತ್ತು ರಾಷ್ಟ್ರದ ಸಾಮಿಪ್ಯ ನನಗೆ ಸದಾ ಬಲು ಇಷ್ಟದ ವಿಚಾರ ಎಂದು ತಿಳಿಸಿದ್ದಾರೆ.
ಆದರೆ ಕೇವಲ ಭಾರತದೊಂದಿಗಿನ ಭಾವನಾತ್ಮಕ ನಂಟಿನ ಸಂಗತಿಯೊಂದೇ ಎಸ್ಸಾರ್ ಸ್ಟೀಲ್ ಕಂಪನಿ ಖರೀದಿಗೆ ಕಾರಣವಾಗಿರಲಾರದು ಎಂಬುದು ಕೂಡ ಸತ್ಯ. ಕಾರಣ ಎಸ್ಸಾರ್ ಸ್ಟೀಲ್ ಖರೀದಿಗೆ 42 ಸಾವಿರ ರೂ. ನೀಡಲಿರುವ ಮಿತ್ತಲ್, ಕಂಪನಿಯ ಉತ್ಪಾದನೆಯನ್ನು ಹೆಚ್ಚಿಸಲು 8 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ.
ಒಟ್ಟು 50 ಸಾವಿರ ಕೋಟಿ ರೂ.ಗಳ ಒಪ್ಪಂದ ಇದಾಗಿದ್ದು, ವ್ಯಾವಹಾರಿಕವಾಗಿಯೂ ಮಿತ್ತಲ್ ಅವರಿಗೆ ತಮ್ಮ ಉಕ್ಕಿನ ಸಾಮ್ರಾಜ್ಯ ವಿಸ್ತರಿಸಲು ಇದು ಸಹಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಭಾರತದಲ್ಲಿ ಶುರುವಾಗಲಿದೆ ಮಿತ್ತಲ್ ಯುಗ?:
ವಿಶ್ವದ ಅಗ್ರಗಣ್ಯ ಉದ್ಯಮಿ. ಜಾಗತಿಕ ಮಟ್ಟದಲ್ಲಿ ತಮ್ಮ ವ್ಯವಹಾರವನ್ನು ಬಲವಾಗಿ ವಿಸ್ತರಿಸಲು ಎಸ್ಸಾರ್ ಸ್ಟೀಲ್ ಸಹಕಾರಿಯಾಗಲಿದೆ ಎಂಬುದು ವಾಣಿಜ್ಯ ಜಗತ್ತಿನ ತಜ್ಞರ ಅಂಬೋಣ. ಭಾರತದಲ್ಲಿ ಉಕ್ಕಿನ ವಹಿವಾಟನ್ನು ಹೆಚ್ಚಿಸಲು ಮಿತ್ತಲ್ ಯತ್ನಿಸಿರುವುದು ಇದೇ ಮೊದಲ ಸಲವೇನಲ್ಲ. 2005ರಿಂದಲೇ ಲಕ್ಷ್ಮಿ ಮಿತ್ತಲ್ ಭಾರತದಲ್ಲಿ ತಮ್ಮ ವಹಿವಾಟು ವೃದ್ಧಿಸಲು ಯತ್ನಿಸಿದ್ದರು.
ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಮಿತ್ತಲ್ ಅವರಿಗೆ ಎಸ್ಸಾರ್ ಸ್ಟೀಲ್ ಖರೀದಿಯು ಭಾರತದಲ್ಲಿ ವಹಿವಾಟು ವಿಸ್ತರಣೆಗೆ ಉತ್ತಮ ಅವಕಾಶ ಸೃಷ್ಟಿಸಿದೆ. ಎಸ್ಸಾರ್ ಸ್ಟೀಲ್ ನಾನಾ ದೇಶಗಳಲ್ಲಿ ಘಟಕಗಳನ್ನು ಹೊಂದಿದ್ದು, ಈಗ ವಿಶ್ವದ ಅತಿ ದೊಡ್ಡ ಉಕ್ಕು ಕಂಪನಿನಿ ಭಾಗವಾಗಿದೆ. ಇದರ ಉತ್ಪಾದನೆಯನ್ನು ಹೆಚ್ಚಿಸುವುದಾಗಿಯೂ ಮಿತ್ತಲ್ ಭರವಸೆ ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.