30 ವರ್ಷಗಳ ಕನಿಷ್ಠಕ್ಕೆಕುಸಿಯಲಿದೆ ಜಿಡಿಪಿ!| ಈ ವರ್ಷ ಶೇ.2 ಅಭಿವೃದ್ಧಿ ದರ ಸಂಭವ| ಜಾಗತಿಕ ರೇಟಿಂಗ್ ಏಜೆನ್ಸಿ ಫಿಚ್ ಭವಿಷ್ಯ
ನವದೆಹಲಿ(ಏ.04): ಕೊರೋನಾ ವೈರಸ್ ನಿಗ್ರಹಕ್ಕಾಗಿ 21 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿರುವುದರಿಂದ ಭಾರತ ಪ್ರತಿನಿತ್ಯ ಬರೋಬ್ಬರಿ 35 ಸಾವಿರ ಕೋಟಿ ರು. ನಷ್ಟಅನುಭವಿಸುತ್ತಿದೆ ಎಂಬ ವರದಿಯ ಬೆನ್ನಲ್ಲೇ ಮತ್ತೊಂದು ತೀವ್ರ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಕೊರೋನಾ ಪರಿಣಾಮದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಕೇವಲ ಶೇ.2ಕ್ಕೆ ಕುಸಿಯಲಿದೆ. ಇದು 30 ವರ್ಷಗಳಲ್ಲೇ ಕನಿಷ್ಠ ಪ್ರಮಾಣವಾಗಿರಲಿದೆ ಎಂದು ಜಾಗತಿಕ ರೇಟಿಂಗ್ ಏಜೆನ್ಸಿಯಾಗಿರುವ ಫಿಚ್ ಭವಿಷ್ಯ ನುಡಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಡಿಪಿ ಇಳಿದರೂ ಭಾರತವೇ ಅತಿ ವೇಗದಲ್ಲಿ ಬೆಳೆಯುವ ಆರ್ಥಿಕತೆ!
ಏಪ್ರಿಲ್ 1ರಿಂದ ಪ್ರಾರಂಭವಾಗಿ ಮುಂದಿನ ವರ್ಷ ಮಾ.31ಕ್ಕೆ ಮುಕ್ತಾಯಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಇಡೀ ವಿಶ್ವವೇ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಒಳಗಾಗಲಿದೆ. ಭಾರತದ ಜಿಡಿಪಿ ಶೇ.2ಕ್ಕೆ ಕುಸಿಯಲಿದೆ ಎಂದು ಫಿಚ್ ಹೇಳಿಕೆ ಬಿಡುಗಡೆ ಮಾಡಿದೆ.
ಚೀನಾದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಪ್ರಾದೇಶಿಕ ಉತ್ಪಾದನಾ ವಲಯಕ್ಕೆ ಪೂರೈಕೆ ವ್ಯತ್ಯಯವಾಗಿತ್ತು. ಆದರೆ, ಈಗ ಚೀನಾದ ಹಲವು ಭಾಗ ಸಹಜಸ್ಥಿತಿಗೆ ಮರಳುತ್ತಿದ್ದರೂ, ವೈರಸ್ ವ್ಯಾಪಿಸಿರುವುದರಿಂದ ಸ್ಥಳೀಯವಾಗಿ ಜನರು ಮಾಡುವ ಖರ್ಚು ಹಾಗೂ ರಫ್ತು ಇಳಿಮುಖವಾಗಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವಲಯದ ಕೈಗಾರಿಕೆಗಳು ಹಾಗೂ ಸೇವಾ ವಲಯಗಳು ಗ್ರಾಹಕರ ವೆಚ್ಚ ಕುಸಿತದಿಂದ ಭಾರಿ ಹೊಡೆತ ತಿನ್ನುವ ಕ್ಷೇತ್ರಗಳಾಗಿವೆ ಎಂದು ಹೇಳಿದೆ.