
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ನನ್ನ ಗೆಳೆಯ (ಮೈ ಫ್ರೆಂಡ್) ಎಂದು ಹೇಳುತ್ತಲೇ ಭಾರತಕ್ಕೆ ಬರೋಬ್ಬರಿ 38,000 ಕೋಟಿ ರೂಪಾಯಿಯ ಶಾಕ್ ನೀಡಿದ್ದಾರೆ. ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಆಮದು ಸುಂಕವನ್ನು ಡೊನಾಲ್ಡ್ ಟ್ರಂಪ್ ಏರಿಕೆ ಮಾಡಿದ್ದಾರೆ. ಭಾರತ ಉಕ್ಕು ಮತ್ತು ಅಲ್ಯುಮಿನಿಯಂ ಪ್ರಮುಖ ರಾಷ್ಟ್ರವಾಗಿರೋದರಿಂದ ಸುಂಕ ಏರಿಕೆ ನಿರ್ಧಾರ ನಮ್ಮ ದೇಶದ ನೇರ ಪರಿಣಾಮ ಬೀರಲಿದೆ. ಇದು ಬರೋಬ್ಬರಿ 38 ಸಾವಿರ ಕೋಟಿ ರೂಪಾಯಿ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಸುಮಾರು ರೂ. 38,000 ಕೋಟಿ
ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ (ಜಿಟಿಆರ್‌ಟಿಐ) ಟ್ರಂಪ್ ಸುಂಕದ ಕುರಿತಾದ ವರದಿಯೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತದ ಮೇಲೆ ಹೇಗೆ ಟ್ರಂಪ್ ಸುಂಕ ಪರಿಣಾಮ ಬೀರುತ್ತೆ ಎಂಬುದನ್ನು ವಿಶ್ಲೇಷಿಸಲಾಗಿದೆ. ಜಿಟಿಆರ್‌ಟಿಐ ವರದಿ ಪ್ರಕಾರ, ಭಾರತದ $4.56 ಬಿಲಿಯನ್ (ಸುಮಾರು ರೂ. 38,000 ಕೋಟಿ) ಮೌಲ್ಯದ ಲೋಹ ರಫ್ತಿಗೆ ಅಪಾಯವನ್ನುಂಟುಮಾಡುತ್ತದೆ ಎಂಬ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.
ಶೇ.25 ರಿಂದ ಶೇ.50ಕ್ಕೆ ಹೆಚ್ಚಳ
ಯುಎಸ್ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್, 30ನೇ ಮೇ 2025ರಂದು ಅಮೆರಿಕ ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯೂಮಿನಿಯಂ ಲೋಹಗಳ ಮೇಲಿನ ಸುಂಕವನ್ನು ಶೇ.25 ರಿಂದ ಶೇ.50ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದರು. ಭಾರತವೇ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉಕ್ಕು ಮತ್ತು ಅಲ್ಯೂಮಿನಿಯಂ ಪೂರೈಕೆ ಮಾಡುವ ರಾಷ್ಟ್ರವಾಗಿದೆ. "ರಾಷ್ಟ್ರೀಯ ಭದ್ರತೆ"ಯನ್ನು ಉಲ್ಲೇಖಿಸಿ ಸುಂಕದ ಪ್ರಮಾಣವನ್ನು ಏರಿಕೆ ಮಾಡಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಹೊಸ ಸುಂಕಗಳು 4ನೇ ಜೂನ್ 2025ರಿಂದ ಚಾಲನೆಗೆ ಬರಲಿವೆ.
ಭಾರತದ ರಫ್ತು ಪ್ರಮಾಣ
2025ನೇ ಹಣಕಾಸಿನ ವರ್ಷದಲ್ಲಿ ಭಾರತ ಒಟ್ಟು $4.56 ಶತಕೋಟಿ ಮೌಲ್ಯದ ಉಕ್ಕು ಮತ್ತು ಅಲ್ಯೂಮಿನಿಯಂ ಸಂಬಂಧಿತ ಸರಕುಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಇದರಲ್ಲಿ $587.5 ಮಿಲಿಯನ್ ಮೌಲ್ಯದ ಕಬ್ಬಿಣ ಮತ್ತು ಉಕ್ಕು, $3.1 ಬಿಲಿಯನ್ ಮೌಲ್ಯದ ಕಬ್ಬಿಣ ಅಥವಾ ಉಕ್ಕು ಉತ್ಪನ್ನಗಳು ಮತ್ತು $860 ಮಿಲಿಯನ್ ಮೌಲ್ಯದ ಅಲ್ಯೂಮಿನಿಯಂ ಮತ್ತು ಸಂಬಂಧಿತ ಉತ್ಪನ್ನಗಳು ಸೇರಿವೆ. ಈ ಅಂಕಿಅಂಶಗಳನ್ನು ಗಮನಿಸಿದ್ರೆ ಅಮೆರಿಕಾಗೆ ಭಾರತ ಅತಿದೊಡ್ಡ ಪೂರೈಕೆದಾರನಾಗಿದೆ.
ಅಮೆರಿಕ ಸರ್ಕಾರದ ಸುಂಕ ಹೆಚ್ಚಳ ಹಿನ್ನೆಲೆ ಭಾರತದ ಸರಕುಗಳ ಬೆಲೆ ಯುಎಸ್ ದೇಶಗಳಲ್ಲಿ ಏರಿಕೆಯಾಗಿಲಿದೆ. ಬೆಲೆ ಏರಿಕೆಯಾದ್ರೆ ಭಾರತದ ಉತ್ಪನ್ನಗಳ ಬೇಡಿಕೆ ಪ್ರಮಾಣ ಇಳಿಕೆಯಾಗುತ್ತದೆ. ಇತರೆ ದೇಶದ ಉತ್ಪನ್ನಗಳ ಜೊತೆ ಭಾರತದ ಸ್ಪರ್ಧೆ ತೀವ್ರ ಕಠಿಣವಾಗಲಿದೆ. ಇದು ಭಾರತದ ವ್ಯವಹಾರಿಕ ಜಗತ್ತಿನ ಮೇಲೆ ನಕಾರಾತ್ಮಕ ಪ್ರಮಾಣ ಬೀರಲಿದೆ.
ಭಾರತದ ಮುಂದಿನ ನಡೆ ಏನು?
ಭಾರತವು ಈ ನಿರ್ಧಾರದ ಬಗ್ಗೆ ವಿಶ್ವ ವ್ಯಾಪಾರ ಸಂಸ್ಥೆಗೆ (WTO) ಮಾಹಿತಿ ನೀಡಿದೆ ಮತ್ತು ಸರ್ಕಾರವು ಪ್ರತೀಕಾರದ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಮೆರಿಕ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಚಿಂತನೆ ನಡೆಸಿದೆ ಎಂದು ವರದಿಯಾಗಿತ್ತು.
ಆತಂಕ ವ್ಯಕ್ತಪಡಿಸಿದ ಜಿಟಿಆರ್‌ಐ
ಡೊನಾಲ್ಡ್ ಟ್ರಂಪ್ ಸರ್ಕಾರದ ಈ ನಿರ್ಧಾರ ವ್ಯವಹಾರಕ್ಕೆ ಮಾತ್ರವಲ್ಲ, ಪರಿಸರಕ್ಕೂ ಹಾನಿ ಮಾಡುತ್ತದೆ ಎಂದು ಜಿಟಿಆರ್‌ಐ ಆತಂಕ ವ್ಯಕ್ತಪಡಿಸಿದೆ. ಉಕ್ಕು ಮತ್ತು ಅಲ್ಯೂಮಿನಿಯಂ ತಯಾರಿಕೆಯಲ್ಲಿ ಅಪಾರ ಪ್ರಮಾಣದ ಇಂಗಾಲ ಬಿಡುಗಡೆಯಾಗುತ್ತದೆ. ಜಗತ್ತು ಹಸಿರು ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುತ್ತಿದ್ದರೂ, ಟ್ರಂಪ್ ಅವರ ನಿರ್ಧಾರದಲ್ಲಿ ಪರಿಸರದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ತೋರುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸುಂಕ ಹೆಚ್ಚಿಸುತ್ತಿರುವ ಟ್ರಂಪ್ ಉದ್ದೇಶವೇನು?
ಸುಂಕ ಏರಿಕೆಯ ಡೊನಾಲ್ಡ್ ಟ್ರಂಪ್ ನಿರ್ಧಾರ ಅಮೆರಿಕದ 'ಆರ್ಥಿಕ ರಾಷ್ಟ್ರೀಯತೆ' ಅಂದರೆ "ಅಮೆರಿಕ ಮೊದಲು" ನೀತಿಯ ಒಂದು ಭಾಗವಾಗಿದೆ ಎಂದು ತಜ್ಞರು ಅಂದಾಜಿಸುತ್ತಿದ್ದಾರೆ. ಇದು ಅಮೆರಿಕದ ದೇಶೀಯ ಕೈಗಾರಿಕೆಗಳಿಗೆ ಪ್ರಯೋಜನವನ್ನು ನೀಡಬಹುದಾದರೂ, ಜಾಗತಿಕ ವ್ಯಾಪಾರ ಮತ್ತು ಹವಾಮಾನ ಗುರಿಗಳಿಗೆ ಇದು ಅಪಾಯಕಾರಿ ಸಂಕೇತವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.