
ನವದೆಹಲಿ (ನ.13): ದೇಶದ ಮುಂಚೂಣಿ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ (Airtel) ಸಂಸ್ಥಾಪಕ ಮತ್ತು ಭಾರ್ತಿ ಎಂಟರ್ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಅವರ ಇತ್ತೀಚಿನ ಹೇಳಿಕೆ ದೇಶಾದ್ಯಂತ ಮೊಬೈಲ್ ಯೂಸರ್ಗಳಲ್ಲಿ ದರ ಏರಿಕೆಯ ಆತಂಕ ಮೂಡಿಸಿದೆ. ಭಾರತದಲ್ಲಿ ಮೊಬೈಲ್ ಸೇವೆಗಳ ಬೆಲೆ ತೀರಾ ಕಡಿಮೆಯಿದ್ದು, ಪ್ರತಿ ಬಳಕೆದಾರರಿಂದ ಟೆಲಿಕಾಂ ಕಂಪನಿಗಳಿಗೆ ತಿಂಗಳಿಗೆ ಸರಾಸರಿ ₹350 ಆದಾಯ (ARPU) ಸಿಗಬೇಕು ಎಂದು ಮಿತ್ತಲ್ ಹೇಳಿದ್ದಾರೆ. ಪೆಪ್ಸಿ ಬಾಟಲಿ ಹಾಗೂ ಚಿಪ್ಸ್ ಪ್ಯಾಕೆಟ್ಗೆ ಮೊಬೈಲ್ ರೀಚಾರ್ಜ್ ದರವನ್ನು ಹೋಲಿಕೆ ಮಾಡಿರುವ ಸುನಿಲ್ ಮಿತ್ತಲ್, ದಿನನಿತ್ಯದ ವಸ್ತುಗಳ ಮೇಲೆ ಜನರು ಹಿಂಜರಿಕೆಯಿಲ್ಲದೆ ಖರ್ಚು ಮಾಡುತ್ತಾರೆ, ಆದರೆ ಮೊಬೈಲ್ ಸೇವೆಯ ಬೆಲೆಯ ಬಗ್ಗೆ ಪ್ರಶ್ನೆ ಎತ್ತುತ್ತಾರೆ ಎಂದಿದ್ದಾರೆ. ಆದರೆ, ರೀಚಾರ್ಜ್ ದರಗಳು ಯಾವಾಗ ಹೆಚ್ಚಾಗಲಿವೆ ಎಂಬ ನಿಖರ ಸಮಯವನ್ನು ಅವರು ಬಹಿರಂಗಪಡಿಸಿಲ್ಲ.
ನೀವು ಒಂದು ಬಾಟಲಿ ಪೆಪ್ಸಿ ಖರೀದಿಸುತ್ತೀರಿ, ಚಿಪ್ಸ್ ಪ್ಯಾಕೆಟ್ ತೆಗೆದುಕೊಳ್ಳುತ್ತೀರಿ ಅಥವಾ ಮೊಬೈಲ್ ರೀಚಾರ್ಜ್ ಮಾಡಿಸುತ್ತೀರಿ. ಈ ಮೂರರ ಮೇಲಿನ ವೆಚ್ಚ ಈಗ ಹೊಸ ಚರ್ಚೆಗೆ ಕಾರಣವಾಗಿದೆ. ಮಿತ್ತಲ್ ಅವರ ಪ್ರಕಾರ, ಇಂದು ಮೊಬೈಲ್ ಸಂಪರ್ಕವು ಕೇವಲ ಕರೆ ಮಾಡಲು ಅಥವಾ ಇಂಟರ್ನೆಟ್ ಬಳಸಲು ಮಾತ್ರ ಸೀಮಿತವಾಗಿಲ್ಲ. ಇದೇ ನೆಟ್ವರ್ಕ್ ಮೂಲಕ ಜನರು ಬ್ಯಾಂಕಿಂಗ್, ಯುಪಿಐ (UPI) ಪಾವತಿ, ಶಿಕ್ಷಣ, ಸರ್ಕಾರಿ ಯೋಜನೆಗಳ ಹಣ ಮತ್ತು ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಜೊತೆಗೆ ಯೂಟ್ಯೂಬ್, ಇನ್ಸ್ಟಾಗ್ರಾಮ್ ಮತ್ತು ಸಿನಿಮಾಗಳಂತಹ ಮನರಂಜನೆಗೂ ಇದೇ ಆಧಾರವಾಗಿದೆ.
ಹಾಗಾದರೆ ಇನ್ನು ಮುಂದೆ ಪ್ರತಿಯೊಬ್ಬ ಮೊಬೈಲ್ ಯೂಸರ್ ₹350 ರೀಚಾರ್ಜ್ ಮಾಡಿಸಬೇಕೇ? ಸದ್ಯಕ್ಕೆ ಹಾಗಿಲ್ಲ. ಮಿತ್ತಲ್ ಯಾವುದೇ ಹೊಸ ಪ್ಲಾನ್ ಅಥವಾ ತಕ್ಷಣದ ದರ ಏರಿಕೆಯನ್ನು ಘೋಷಿಸಿಲ್ಲ. ಬದಲಿಗೆ, ಟೆಲಿಕಾಂ ಕಂಪನಿಗಳ ಸುಸ್ಥಿರ ಬೆಳವಣಿಗೆಗೆ ಪ್ರತಿ ಬಳಕೆದಾರರಿಂದ ತಿಂಗಳಿಗೆ ಸರಾಸರಿ ₹350 ಆದಾಯ ಬರುವುದು ಸೂಕ್ತ ಮಟ್ಟವಾಗಿದೆ ಎಂದಷ್ಟೇ ಹೇಳಿದ್ದಾರೆ.
ಸುಮಾರು 10 ವರ್ಷಗಳ ಹಿಂದೆ ಟೆಲಿಕಾಂ ಕಂಪನಿಗಳಿಗೆ ಪ್ರತಿ ಬಳಕೆದಾರರಿಂದ ತಿಂಗಳಿಗೆ ಸರಾಸರಿ ₹300 ಆದಾಯ ಸಿಕ್ಕರೆ ಸಾಕು ಎಂದು ತಾವು ಭಾವಿಸಿದ್ದಾಗಿ ಮಿತ್ತಲ್ ಸ್ಮರಿಸಿದ್ದಾರೆ. ಆದರೆ ಕಳೆದ ಒಂದು ದಶಕದಲ್ಲಿ ಹಣದುಬ್ಬರ ಮತ್ತು ನೆಟ್ವರ್ಕ್ ನಿರ್ವಹಣಾ ವೆಚ್ಚ ವಿಪರೀತವಾಗಿ ಏರಿದೆ.
ಪೆಟ್ರೋಲ್-ಡೀಸೆಲ್, ವಿದ್ಯುತ್, ಉದ್ಯೋಗಿಗಳ ವೇತನ ಹಾಗೂ ಆಡಳಿತಾತ್ಮಕ ವೆಚ್ಚಗಳು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಮೊಬೈಲ್ ನೆಟ್ವರ್ಕ್ ನಡೆಸುವುದು ಎಂದರೆ ಕೇವಲ ಟವರ್ ಅಳವಡಿಸುವುದಷ್ಟೇ ಅಲ್ಲ; ನಿರಂತರವಾಗಿ ನೆಟ್ವರ್ಕ್ ಸಾಮರ್ಥ್ಯ ಹೆಚ್ಚಿಸಬೇಕು, ಫೈಬರ್ ಕೇಬಲ್ಗಳನ್ನು ಅಳವಡಿಸಬೇಕು ಮತ್ತು ದೇಶದ ಮೂಲೆ ಮೂಲೆಗೂ ಉತ್ತಮ ಸಂಪರ್ಕ ಕಲ್ಪಿಸಬೇಕು. ಇಂಟರ್ನೆಟ್ ಬಳಕೆ ಹೆಚ್ಚಾದಂತೆ ನೆಟ್ವರ್ಕ್ ಮೇಲಿನ ಒತ್ತಡವೂ ಹೆಚ್ಚಾಗುತ್ತಿದ್ದು, ಇದಕ್ಕೆ ಬೃಹತ್ ಹೂಡಿಕೆಯ ಅಗತ್ಯವಿದೆ ಎಂದು ಅವರು ವಾದಿಸಿದ್ದಾರೆ.
ಭಾರತ ಮತ್ತು ಚೀನಾದ ಮೊಬೈಲ್ ನೆಟ್ವರ್ಕ್ ಮೂಲಸೌಕರ್ಯವನ್ನು ಹೋಲಿಕೆ ಮಾಡಿರುವ ಮಿತ್ತಲ್, ಚೀನಾದಲ್ಲಿ 10 ಲಕ್ಷಕ್ಕೂ ಹೆಚ್ಚು ಮೊಬೈಲ್ ಟವರ್ಗಳಿದ್ದರೆ, ಭಾರತದಲ್ಲಿ ಇವುಗಳ ಸಂಖ್ಯೆ ಕೇವಲ 3.5 ಲಕ್ಷದಷ್ಟಿದೆ. ಭಾರತವು ತನ್ನ ಪ್ರಸ್ತುತ ಟವರ್ ನೆಟ್ವರ್ಕ್ ಅನ್ನು ಕನಿಷ್ಠ ದ್ವಿಗುಣಗೊಳಿಸಬೇಕಿದೆ. ಟವರ್ಗಳ ಜೊತೆಗೆ ಫೈಬರ್ ನೆಟ್ವರ್ಕ್ ಮತ್ತು ಸಮುದ್ರದಾಳದಲ್ಲಿ ಅಳವಡಿಸುವ ಇಂಟರ್ನೆಟ್ ಕೇಬಲ್ಗಳ (Subsea cables) ಮೇಲೂ ಭಾರಿ ಹೂಡಿಕೆ ಅಗತ್ಯವಿದೆ. ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಇಂಟರ್ನೆಟ್ ಒದಗಿಸಲು ಸ್ಪೆಕ್ಟ್ರಮ್, ಫೈಬರ್ ಮತ್ತು ನೆಟ್ವರ್ಕ್ ಸಾಮರ್ಥ್ಯ ಬಲಪಡಿಸುವುದು ಅನಿವಾರ್ಯವಾಗಿದೆ.
ದರ ಏರಿಕೆಯ ಪ್ರತಿಪಾದನೆಯ ಹಿಂದೆ 5G ನೆಟ್ವರ್ಕ್ ಮೇಲಿನ ಭಾರಿ ಹೂಡಿಕೆಯೂ ಪ್ರಮುಖ ಕಾರಣವಾಗಿದೆ. ಟೆಲಿಕಾಂ ಕಂಪನಿಗಳು 5G ಸ್ಪೆಕ್ಟ್ರಮ್ ಖರೀದಿಸಲು ಲಕ್ಷಾಂತರ ಕೋಟಿ ರೂಪಾಯಿ ವ್ಯಯಿಸಿವೆ ಮತ್ತು ನೆಟ್ವರ್ಕ್ ಸಿದ್ಧಪಡಿಸಲು ಸುಮಾರು ₹1.5 ಲಕ್ಷ ಕೋಟಿ ಹೆಚ್ಚುವರಿ ಹೂಡಿಕೆ ಮಾಡಿವೆ.
ಇಷ್ಟೆಲ್ಲಾ ಖರ್ಚು ಮಾಡಿದರೂ, 5G ಸೇವೆಯಿಂದ ಕಂಪನಿಗಳು ನಿರೀಕ್ಷಿಸಿದಷ್ಟು ಹೆಚ್ಚುವರಿ ಆದಾಯ ಬಂದಿಲ್ಲ ಎಂದು ಮಿತ್ತಲ್ ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದ ದೇಶದಲ್ಲಿ ಡಿಜಿಟಲ್ ಸೇವೆಗಳಿಗೆ ಬೇಕಾದ ಬಲಿಷ್ಠ ಮೂಲಸೌಕರ್ಯ ನಿರ್ಮಾಣವಾಗಿದ್ದರೂ, ಅದೇ ನೆಟ್ವರ್ಕ್ ಬಳಸಿಕೊಂಡು ಲಾಭ ಗಳಿಸುತ್ತಿರುವ ಡಿಜಿಟಲ್ ಆ್ಯಪ್ ಕಂಪನಿಗಳಿಗೆ ಸಿಗುತ್ತಿರುವ ಲಾಭದಂತೆ ನೆಟ್ವರ್ಕ್ ನಿರ್ಮಿಸಿದ ಟೆಲಿಕಾಂ ಕಂಪನಿಗಳಿಗೂ ಸೂಕ್ತ ಆದಾಯ ಸಿಗಬೇಕು ಎಂಬುದು ಅವರ ವಾದವಾಗಿದೆ.
ಏರ್ಟೆಲ್ನ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳ ಪ್ರಕಾರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಪ್ರತಿ ಬಳಕೆದಾರರ ಸರಾಸರಿ ಆದಾಯ (ARPU) ₹271 ಆಗಿದೆ (ಕಳೆದ ವರ್ಷ ಇದೇ ಅವಧಿಯಲ್ಲಿ ₹256 ಇತ್ತು). ಇದನ್ನು ₹350ಕ್ಕೆ ತಲುಪಿಸಬೇಕಾದರೆ, ಪ್ರಸ್ತುತ ಸರಾಸರಿಗಿಂತ ಸುಮಾರು ಶೇ. 29 ರಷ್ಟು ಹೆಚ್ಚಳವಾಗಬೇಕಿದೆ.
ಪ್ರತಿ ಗ್ರಾಹಕರೂ ತಿಂಗಳಿಗೆ ₹271 ರೀಚಾರ್ಜ್ ಮಾಡಿಸುತ್ತಾರೆ ಎಂದರ್ಥವಲ್ಲ. ಕಂಪನಿಯ ಒಟ್ಟು ಮೊಬೈಲ್ ಆದಾಯವನ್ನು ಒಟ್ಟು ಗ್ರಾಹಕರ ಸಂಖ್ಯೆಯಿಂದ ಭಾಗಿಸಿದಾಗ ಬರುವ ಸರಾಸರಿ ಮೊತ್ತವೇ ARPU. ಕೆಲವರು ಕಡಿಮೆ ಬೆಲೆಯ ಪ್ಲಾನ್ ಬಳಸಿದರೆ, ಇನ್ನು ಕೆಲವರು ದುಬಾರಿ ಪೋಸ್ಟ್ಪೇಯ್ಡ್ ಅಥವಾ ಡೇಟಾ ಪ್ಲಾನ್ ಬಳಸುತ್ತಾರೆ.
₹350ರ ಸರಾಸರಿ ತಲುಪಲು ವಿವಿಧ ಶ್ರೇಣಿಯ ಪ್ಲಾನ್ಗಳ ಬಗ್ಗೆ ಪ್ರಸ್ತಾಪಿಸಿರುವ ಮಿತ್ತಲ್, ಆರಂಭಿಕ ಪ್ಲಾನ್ಗಳು ₹200ಕ್ಕಿಂತ ಹೆಚ್ಚಿರಬಹುದು, ಹಾಗೂ ಹೆಚ್ಚಿನ ಸೌಲಭ್ಯ ಬಯಸುವವರಿಗೆ ₹500, ₹700, ₹800 ಅಥವಾ ₹1,000 ವರೆಗಿನ ಪ್ಲಾನ್ಗಳಿರಬಹುದು ಎಂದಿದ್ದಾರೆ. ಅಂದರೆ, ಎಲ್ಲರಿಂದಲೂ ಒಂದೇ ದರ ವಸೂಲಿ ಮಾಡದೆ, ಗ್ರಾಹಕರ ಅಗತ್ಯ ಮತ್ತು ಖರ್ಚು ಮಾಡುವ ಸಾಮರ್ಥ್ಯಕ್ಕೆ ತಕ್ಕಂತೆ ಪ್ಲಾನ್ ರೂಪಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಮುಂದಿನ ಬಾರಿ ರೀಚಾರ್ಜ್ ದರಗಳು ಯಾವಾಗ ಏರಿಕೆಯಾಗಲಿವೆ ಎಂಬುದನ್ನು ಮಿತ್ತಲ್ ಸ್ಪಷ್ಟಪಡಿಸಿಲ್ಲ. ₹350ರ ಸರಾಸರಿ ಗುರಿಯನ್ನು ಕಂಪನಿಗಳು ಯಾವಾಗ ತಲುಪಲಿವೆ ಎಂಬ ಪ್ರಶ್ನೆಗೆ, ತಮಗೆ ಅದರ ಕಾಲಮಿತಿ ತಿಳಿದಿಲ್ಲ ಎಂದು ಉತ್ತರಿಸಿದ್ದಾರೆ. ಭಾರತದಲ್ಲಿ ಈ ಹಿಂದೆ ಜೂನ್ 2024 ರಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳು ಮೊಬೈಲ್ ಪ್ಲಾನ್ ದರಗಳನ್ನು ಭಾರಿ ಪ್ರಮಾಣದಲ್ಲಿ ಏರಿಸಿದ್ದವು. ಇದೀಗ ನೆಟ್ವರ್ಕ್ ವಿಸ್ತರಣೆ ಮತ್ತು 5G ಹೂಡಿಕೆಯ ನೆಪದಲ್ಲಿ ಮತ್ತೊಮ್ಮೆ ದರ ಪರಿಷ್ಕರಣೆಯ ಚರ್ಚೆ ಮುನ್ನೆಲೆಗೆ ಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಓದಿರಿ.