ಯಾರ ಹಂಗಿಲ್ಲದೆ ಸ್ವಂತ ಉದ್ಯಮ ಪ್ರಾರಂಭಿಸೋ ಯೋಚನೆ ನಿಮಗಿದ್ರೆ, ಈ 5 ವಿಚಾರಗಳನ್ನು ಮರೆಯಬೇಡಿ!

By Suvarna News  |  First Published Apr 9, 2024, 5:31 PM IST

ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬುದು ಈಗ ಬಹುತೇಕರ ಕನಸು. ಆದ್ರೆ ಉದ್ಯಮ ಪ್ರಾರಂಭಿಸೋದು ಅಷ್ಟು ಸುಲಭದ ಕೆಲಸವಂತೂ ಅಲ್ಲ. ಅದಕ್ಕೊಂದಿಷ್ಟು ಸಿದ್ಧತೆ ಅಗತ್ಯ. ಅದರಲ್ಲೂ ಈ 5 ವಿಚಾರಗಳನ್ನು ಎಂದಿಗೂ ಮರೆಯಬಾರದು. 


Business Desk: ಸ್ವಂತ ಉದ್ಯಮ ಪ್ರಾರಂಭಿಸೋರ ಸಂಖ್ಯೆ ಇಂದು ಹೆಚ್ಚಿದೆ. ಅದೂ ಕೋವಿಡ್  ಬಳಿಕ ಈ ಟ್ರೆಂಡ್ ಹೆಚ್ಚಾಗಿದೆ. ಯಾರದ್ದೋ ಕೈಕೆಳಗೆ ದಿನಕ್ಕೆ 8-10 ಗಂಟೆ ದುಡಿಯುವ ಬದಲು ಅದೇ ಶ್ರಮವನ್ನು ಸ್ವಂತ ಉದ್ಯಮದಲ್ಲಿ ತೊಡಗಿಸಿದ್ರೆ ಹೆಚ್ಚಿನ ಹಣ ಗಳಿಸಬಹುದು ಎಂಬುದು ಅನೇಕರ ಆಲೋಚನೆ. ನಾವು ಕಷ್ಟಪಟ್ಟು ಯಾರನ್ನೋ ಬೆಳೆಸುವ ಬದಲಿಗೆ ನಮ್ಮನ್ನೇ ಬೆಳೆಸುವ ಎಂಬುದು ಇನ್ನೂ ಕೆಲವರ ವಾದ. ಸ್ವಂತ ಉದ್ಯಮ ಪ್ರಾರಂಭಿಸಿದ್ರೆ ನೀವೇ ಬಾಸ್ ಆಗೋದೇನೋ ನಿಜ. ಆದರೆ, ಅದು ಅದ್ಕೊಂಡಷ್ಟು ಸುಲಭದ ಕೆಲಸ ಕೂಡ ಅಲ್ಲ. ಸ್ವಂತ ಉದ್ಯಮ ಪ್ರಾರಂಭಿಸಲು ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಕಠಿಣ ಪರಿಶ್ರಮ, ತ್ಯಾಗ ಹಾಗೂ ದೃಢಸಂಕಲ್ಪವಿದ್ರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು. ಹಾಗೆಯೇ ಉದ್ಯಮ ಪ್ರಾರಂಭಿಸಿದ ತಕ್ಷಣ ಯಶಸ್ಸು ಸಿಗೋದಿಲ್ಲ. ಅದಕ್ಕೆ ಸಾಕಷ್ಟು ಸಿದ್ಧತೆ ಹಾಗೂ ತಾಳ್ಮೆ ಕೂಡ ಅಗತ್ಯ. ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಇಲ್ಲಿದೆ ಕೆಲವು ಟಿಪ್ಸ್.

1.ಉದ್ಯಮದ ಆಯ್ಕೆಯಲ್ಲಿ ಎಚ್ಚರ ಇರಲಿ: ಯಾವುದೇ ಉದ್ಯಮ ಪ್ರಾರಂಭಿಸುವ ಮುನ್ನ ಅದರ ಬಗ್ಗೆ ನಿಮಗೆ ಜ್ಞಾನ, ತಿಳಿವಳಿಕೆ ಇರಬೇಕು. ನಿಮಗೆ ಹೆಚ್ಚಿನ ಮಾಹಿತಿ ಅಥವಾ ಜ್ಞಾನವಿಲ್ಲದ ಕ್ಷೇತ್ರದಲ್ಲಿ ಉದ್ಯಮ ಪ್ರಾರಂಭಿಸಲು ಹೋಗಬೇಡಿ. ಏಕೆಂದರೆ ಈ ರೀತಿ ಯಾವುದೇ ಪರಿಜ್ಞಾನವಿಲ್ಲದೆ ಉದ್ಯಮ ಪ್ರಾರಂಭಿಸೋದ್ರಿಂದ ನಷ್ಟ ಅಥವಾ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಉದ್ಯಮ ಪ್ರಾರಂಭಿಸಬೇಕು ಎಂಬ ಯೋಚನೆ ಮೂಡಿದ ತಕ್ಷಣ ಕಾರ್ಯಪ್ರವೃತ್ತರಾಗಬೇಡಿ. ಬದಲಿಗೆ ಆ ವಿಚಾರದಲ್ಲಿ ನಿಮಗೆಷ್ಟು ಮಾಹಿತಿಯಿದೆ, ಹೇಗೆ ಮುಂದುವರಿಯಬಹುದು ಎಂಬುದನ್ನು ಯೋಚಿಸಿ.

Tap to resize

Latest Videos

ದಿವಾಳಿಯಾಗಿರೋ ಅನಿಲ್ ಅಂಬಾನಿ ಮಕ್ಕಳು ಉದ್ಯಮದಲ್ಲಿ ಸಕ್ಸಸ್ ಆಗಲು ಏನ್ ಮಾಡ್ತಿದ್ದಾರೆ?

2.ಮಾರುಕಟ್ಟೆ ಅಧ್ಯಯನ ಮಾಡಿ: ಯಾವುದೇ ಉತ್ಪನ್ನ ಅಥವಾ ಸೇವೆಗೆ ಸಂಬಂಧಿಸಿ ಉದ್ಯಮ ಪ್ರಾರಂಭಿಸುವ ಮುನ್ನ ಅದರ ಮಾರುಕಟ್ಟೆ ಸ್ಥಿತಿಗತಿಗಳನ್ನು ಅರಿಯೋದು ಅಗತ್ಯ. ಹಾಗೆಯೇ ಆ ಉತ್ಪನ್ನ ಅಥವಾ ಸೇವೆಗೆ ಮಾರುಕಟ್ಟೆಯಲ್ಲಿ ಯಾರೆಲ್ಲ ಪ್ರತಿಸ್ಪರ್ಧಿಗಳಿದ್ದಾರೆ, ಅವರ ಗುಣಮಟ್ಟ, ಬೆಲೆ ಹೇಗಿದೆ ಎಂಬುದನ್ನು ಕೂಡ ಅರಿಯೋದು ಅಗತ್ಯ. ಅನೇಕ ಯುವ ಉದ್ಯಮಿಗಳು ತಮ್ಮ ಉತ್ಪನ್ನ ಅಥವಾ ಸೇವೆ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಆದರೆ, ಪ್ರತಿಸ್ಪರ್ಧಿ ಸಂಸ್ಥೆ ಬಗ್ಗೆ ಅರಿಯುವ ಪ್ರಯತ್ನ ಮಾಡೋದಿಲ್ಲ. ಹೀಗಾಗಿ ಮಾರುಕಟ್ಟೆ ಬಗ್ಗೆ ಸರಿಯಾದ ಅಧ್ಯಯನ ನಡೆಸೋದು ಅಗತ್ಯ. ಇದರಿಂದ ಸೋಲು ಅಥವಾ ನಷ್ಟದ ಅಪಾಯ ತಗ್ಗಿಸಬಹುದು.

3.ಉದ್ಯಮ ಪ್ಲ್ಯಾನ್: ಯಾವುದೇ ಉದ್ಯಮ ಪ್ರಾರಂಭಿಸುವ ಮುನ್ನ ಯೋಜನೆ ರೂಪಿಸೋದು ಅಗತ್ಯ. ಉದ್ಯಮದ ಬಗ್ಗೆ ಒಂದು ನೀಲಿ ನಕಾಶೆ ಸೃಷ್ಟಿಸಿ, ಅದರ ಪ್ರಕಾರ ಮುನ್ನಡೆಯಿರಿ. ಈ ನೀಲಿ ನಕಾಶೆ ನಿಮ್ಮ ಉದ್ಯಮದ ಗುರಿ ಗುರುತಿಸಲು ಹಾಗೂ ಸೂಕ್ತ ಹಣಕಾಸಿನ ನೆರವು ಹಾಗೂ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ.

ಸುಮ್ಮನೆ ಕೂರದೇ ಉಪ್ಪಿನ ಕಾಯಿ ಬ್ಯುಸಿನೆಸ್ ಆರಂಭಿಸಿ, ಯಶಸ್ವಿಯಾದ ಮಹಿಳೆ!

4.ನಂಬಿಕಾರ್ಹ ಉದ್ಯಮ ಮಾದರಿ: ನಂಬಿಕಾರ್ಹ ಉದ್ಯಮ ಮಾದರಿಯನ್ನು ನೀವು ಆಯ್ಕೆ ಮಾಡೋದು ಅಗತ್ಯ. ಇದು ನಿಮ್ಮ ಉದ್ಯಮದ ಬೆಳವಣಿಗೆಗೆ ನೆರವು ನೀಡುತ್ತದೆ. ಹಾಗೆಯೇ ಹೆಚ್ಚಿನ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಕೂಡ ನೆರವು ನೀಡುತ್ತದೆ. ಹಾಗೆಯೇ ಉತ್ತಮ ಉದ್ಯಮ ಮಾದರಿ ಒಳ್ಳೆಯ ಆದಾಯ ಗಳಿಸಲು ಕೂಡ ಸಹಾಯ ಮಾಡುತ್ತದೆ.

5.ಉದ್ಯಮದ ವಿನ್ಯಾಸ: ನಿಮ್ಮ ಉದ್ಯಮಕ್ಕೆ ಸೂಕ್ತ ವಿನ್ಯಾಸ ಆಯ್ಕೆ ಮಾಡೋದು ಕೂಡ ಅಗತ್ಯ. ಲಿಮಿಟೆಡ್ ಲಿಯೇಬಿಲಿಟಿ ಕಂಪನಿ (ಎಮ್ ಐಸಿ), ಲಿಮಿಟೆಡ್ ಲಿಯೇಬಲಿಟಿ ಪಾರ್ಟನರ್ ಶಿಪ್ (ಎಲ್ ಎಲ್ ಪಿ) , ಸೋಲೋ ಪ್ರೊಪ್ರಿಟರ್ಶಿಪ್ ಅಥವಾ ಕಾಪೋರೇಟ್ ಮಾದರಿಗಳ ನಡುವೆ ನೀವು ಆಯ್ಕೆ ಮಾಡಬಹುದು. ಇದು ಉದ್ಯಮದ ಕಾನೂನು, ಆರ್ಥಿಕ ಹಾಗೂ ಕಾರ್ಯನಿರ್ವಹಣೆ ವಿಧಾನದ ಮೇಲೆ ಪ್ರಭಾವ ಬೀರುತ್ತದೆ. 


 

click me!