1 ಬಿಟ್‌ ಕಾಯಿನ್‌ ಬೆಲೆ ₹1 ಕೋಟಿ : ದಾಖಲೆ

Kannadaprabha News   | Kannada Prabha
Published : Jul 12, 2025, 04:32 AM IST
Bit Coin

ಸಾರಾಂಶ

ಕ್ರಿಪ್ಟೋಕರೆನ್ಸಿಯು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ 1 ಬಿಟ್‌ಕಾಯಿನ್‌ ಬೆಲೆ 1 ಕೋಟಿ ರು. ದಾಟಿದೆ. 2010ರಲ್ಲಿ ಕೇವಲ 34 ರು. ಇದ್ದ 1 ಬಿಟ್‌ಕಾಯಿನ್‌ ಬೆಲೆಯು 2025ರಲ್ಲಿ 1 ಕೋಟಿ ರು. ದಾಟಿದೆ.

ವಾಷಿಂಗ್ಟನ್‌: ಕ್ರಿಪ್ಟೋಕರೆನ್ಸಿಯು ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ 1 ಬಿಟ್‌ಕಾಯಿನ್‌ ಬೆಲೆ 1 ಕೋಟಿ ರು. ದಾಟಿದೆ. 2010ರಲ್ಲಿ ಕೇವಲ 34 ರು. ಇದ್ದ 1 ಬಿಟ್‌ಕಾಯಿನ್‌ ಬೆಲೆಯು 2025ರಲ್ಲಿ 1 ಕೋಟಿ ರು. ದಾಟಿದೆ.

ಅಮೆರಿಕದಲ್ಲಿ ಪೂರಕ ರಾಜಕೀಯ ವಿದ್ಯಮಾನ ಮತ್ತು ಅಮೆರಿಕದಲ್ಲಿ ಶೀಘ್ರದಲ್ಲಿ ಬರುವ ಜೀನಿಯಸ್‌ ಕಾನೂನು ಕ್ರಿಪ್ಟೋ ಮಾರುಕಟ್ಟೆಯ ನಾಗಾಲೋಟಕ್ಕೆ ಕಾರಣವಾಗಿದೆ. ಇದರಿಂದಾಗಿ ಬಿಟ್‌ಕಾಯಿನ್‌ ಜತೆ ಡಾಗೆಕಾಯಿನ್‌, ಎಥೇರಿಯಂ, ಕಾರ್ಡನೋಗಳು ಸಹ ಏರುಗತಿ ಕಂಡಿವೆ. ಅಮೆರಿಕದ ಜೀನಿಯಸ್‌ ಕಾಯ್ದೆಯು ಹೂಡಿಕೆದಾರರಿಗೆ ರಕ್ಷಣೆ ನೀಡಲಿದ್ದು, ಹೀಗಾಗಿ ಪಾಸ್‌ ಆಗುವ ಮುನ್ನವೇ ಕ್ರಿಪ್ಟೋ ಮಾರುಕಟ್ಟೆ ಭಾರಿ ನೆಗೆತ ಕಂಡಿದೆ.

ಗಾಯಕಿ ಆಶಾ ಭೋಂಸ್ಲೆ ಸಾವಿನ ಸುದ್ದಿ ಸುಳ್ಳು: ಪುತ್ರ ಆನಂದ್‌ ಸ್ಪಷ್ಟನೆ

ಮುಂಬೈ: ಖ್ಯಾತ ಗಾಯಕಿ ಆಶಾ ಭೋಂಸ್ಲೆ (91) ಅವರು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಿದಾಡುತ್ತಿದ್ದು, ಅದನ್ನು ಅವರ ಪುತ್ರ ಆನಂದ್ ಭೋಂಸ್ಲೆ ಅಲ್ಲಗಳೆದು, ‘ಇದು ಸುಳ್ಳು ಸುದ್ದಿ’ ಎಂದು ಸ್ಪಷ್ಟಪಡಿಸಿದ್ದಾರೆ.ಶಬಾನಾ ಶೇಖ್ ಎಂಬ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ, ಆಶಾ ಅವರಿಗೆ ಹಾರ ಹಾಕಲಾದ ಫೋಟೋ ಹಂಚಿಕೊಂಡು ‘ಒಂದು ಸಂಗೀತ ಯುಗ ಕೊನೆಗೊಂಡಿದೆ’ ಎಂದು ಬರೆದಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಮಾಧ್ಯಮದ ಜತೆ ಮಾತನಾಡಿದ ಆನಂದ್‌, ‘ಇದು ನಿಜವಲ್ಲ. ಯಾರೂ ನಂಬಬೇಡಿ’ ಎಂದು ಹೇಳಿದ್ದಾರೆ.

ಇಂದು ಮೋದಿಯಿಂದ 51 ಸಾವಿರ ನೇಮಕ ಪತ್ರ ವಿತರಣೆ

ನವದೆಹಲಿ: ದೇಶಾದ್ಯಂತ ಯುವಕರಿಗೆ ಉದ್ಯೋಗ ಕಲ್ಪಿಸುವ ಗುರಿಯೊಂದಿಗೆ ಪ್ರಧಾನಿ ಮೋದಿಯವರು ಪ್ರಾರಂಭಿಸಿರುವ ರೋಜ್‌ಗಾರ್ ಮೇಳದ 16ನೇ ಆವೃತ್ತಿ ಶನಿವಾರ ದೇಶದ 47 ಕಡೆಗಳಲ್ಲಿ ನಡೆಯಲಿದೆ. ಈ ವೇಳೆ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ 51,000ಕ್ಕೂ ಅಧಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ತಿಳಿಸಿದೆ.

‘ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ನೇಮಕಾತಿ ನಡೆಯಲಿದೆ. ದೇಶದ ವಿವಿಧ ಭಾಗಗಳ ಅಭ್ಯರ್ಥಿಗಳು ರೈಲ್ವೆ, ಅಂಚೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಣಕಾಸು ಸಚಿವಾಲಯ ಸೇರಿ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಇದುವರೆಗೆ ರೋಜ್‌ಗಾರ್ ಮೇಳದ ಮೂಲಕ ದೇಶಾದ್ಯಂತ 10 ಲಕ್ಷಕ್ಕೂ ಅಧಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ’ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಮತ್ತೆ ಹೊಸ ಬ್ಯಾಂಕ್‌ಗೆ ಲೈಸೆನ್ಸ್‌?

ನವದೆಹಲಿ: ಭಾರತದಲ್ಲಿ ಸದ್ಯದಲ್ಲೇ ಮತ್ತೆ ಹೊಸ ಬ್ಯಾಂಕ್‌ಗಳ ಶೆಕೆ ಆರಂಭವಾಗುವ ಸಾಧ್ಯತೆ ಇದೆ. 2047ರ ದೇಶದ ಆರ್ಥಿಕ ಬೆಳವಣಿಗೆಯನ್ನು ಗುರಿಯಾಗಿರಿಸಿಕೊಂಡು ಹೊಸದಾಗಿ ಮತ್ತೊಂದಿಷ್ಟು ಬ್ಯಾಂಕ್‌ಗಳಿಗೆ ಲೈಸೆನ್ಸ್‌ ನೀಡುವ ಕುರಿತು ಕೇಂದ್ರ ಹಣಕಾಸು ಸಚಿವಾಲಯ, ಆರ್‌ಬಿಐ ಚಿಂತನೆ ನಡೆಸುತ್ತಿದೆ.

ಭಾರತದಲ್ಲಿ ಕೊನೆಯದಾಗಿ 2014ರಲ್ಲಿ ಹೊಸ ಬ್ಯಾಂಕಿಂಗ್‌ ಪರವಾನಗಿ ನೀಡಲಾಗಿತ್ತು. 2016ರಲ್ಲಿ ಬ್ಯಾಂಕಿಂಗ್‌ ಪರವಾನಗಿಗೆ ಅರ್ಜಿ ಸಲ್ಲಿಸುವುದರಿಂದ ದೊಡ್ಡ ಉದ್ದಿಮೆಗಳು ಅಥವಾ ಕೈಗಾರಿಕಾ ಸಂಸ್ಥೆಗಳನ್ನು ಹೊರಗಿಡಲಾಗಿತ್ತು. ಈ ನೀತಿಯನ್ನು ಇದೀಗ ಪುನರ್‌ ಪರಿಶೀಲಿಸುವ ಸಾಧ್ಯತೆ ಇದೆ ಎಂದು ಬ್ಲೂಂಬರ್ಗ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.ದೇಶದ ದೀರ್ಘಾವಧಿಯ ಆರ್ಥಿಕ ಮಹತ್ವಾಕಾಂಕ್ಷೆಗೆ ಸಾಥ್‌ ನೀಡುವಂಥ ದೊಡ್ಡ ಮತ್ತು ಬಲಿಷ್ಠ ಬ್ಯಾಂಕುಗಳ ಸ್ಥಾಪನೆ ಮೂಲಕ ಬ್ಯಾಂಕಿಂಗ್‌ ಕ್ಷೇತ್ರದ ವಿಸ್ತರಣೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದು ಸದ್ಯ ಆರಂಭಿಕ ಹಂತದಲ್ಲಿದ್ದು, ಈವರೆಗೆ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ಅದು ಹೇಳಿದೆ.

ದೊಡ್ಡ ಕಂಪನಿಗಳಿಗೂ ಬ್ಯಾಂಕಿಂಗ್‌ ಲೈಸೆನ್ಸ್‌ಗೆ ಷರತ್ತುಬದ್ಧ ಅನುಮತಿ ನೀಡುವ ಕುರಿತೂ ಆರ್‌ಬಿಐ ಚಿಂತನೆ ನಡೆಸುತ್ತಿದೆ. ಈ ಮೂಲಕ ಬೃಹತ್‌ ಬ್ಯಾಂಕಿಂಗೇತರ ಕಂಪನಿಗಳು (ಎನ್‌ಬಿಎಫ್‌ಸಿ) ಪೂರ್ಣ ಪ್ರಮಾಣದ ಬ್ಯಾಂಕ್‌ಗಳಾಗಿ ಪರಿವರ್ತನೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇದರ ಜತೆ ಸರ್ಕಾರಿ ಬ್ಯಾಂಕ್‌ಗಳಲ್ಲಿ ವಿದೇಶಿ ಹೂಡಿಕೆ ಹೆಚ್ಚಿಸಲೂ ಅ‍ವಕಾಶ ಮಾಡಿಕೊಡುವ ಕುರಿತೂ ಚರ್ಚೆಯಾಗುತ್ತಿದೆ.

ಅಮೆರಿಕ ವೀಸಾ ಶುಲ್ಕ 2.5 ಪಟ್ಟು ಹೆಚ್ಚಳ

ನವದೆಹಲಿ: ಮುಂದಿನ ವರ್ಷದಿಂದ ಅಮೆರಿಕದ ವೀಸಾ ಶುಲ್ಕ ಭಾರತೀಯರ ಕಿಸೆ ಸುಡಲಿದೆ. ಡೊನಾಲ್ಡ್‌ ಟ್ರಂಪ್‌ ಅವರ ‘ಬಿಗ್‌ ಬ್ಯೂಟಿಫುಲ್‌ ಬಿಲ್‌’ನ ಪರಿಣಾಮವಾಗಿ ಜ.1, 2026ರಿಂದ ಅಮೆರಿಕ ಪ್ರವಾಸ, ಅಧ್ಯಯನ ಅಥವಾ ಕೆಲಸದ ಉದ್ದೇಶದ ವೀಸಾ ಶುಲ್ಕ 2.5 ಪಟ್ಟು ಹೆಚ್ಚಾಗಲಿದೆ.ವಲಸೇತರ ಉದ್ದೇಶದ ವೀಸಾಗೆ ಹೊಸದಾಗಿ ‘ವೀಸಾ ಇಂಟಿಗ್ರಿಟಿ ಶುಲ್ಕ’ ಪರಿಚಯಿಸಿರುವ ಹಿನ್ನೆಲೆಯಲ್ಲಿ ಈ ಹಿಂದೆ 16 ಸಾವಿರ ರು. ಇದ್ದ ಸಾಮಾನ್ಯ ಪ್ರವಾಸಿ ವೀಸಾ ಶುಲ್ಕ ಇನ್ನು 40 ಸಾವಿರ ಆಗಲಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಹೊರೆ ಬೀಳಲಿದೆ.

ಈ ವೀಸಾ ಇಂಟಿಗ್ರಿಟಿ ಶುಲ್ಕವು ಹಾಲಿ ವೀಸಾ ವೆಚ್ಚದ ಜತೆಗೆ ವಿಧಿಸುವ ಹೆಚ್ಚುವರಿ ಮೇಲ್‌ಶುಲ್ಕವಾಗಿದೆ. ಸುಮಾರು 21,400 ರು. ಅನ್ನು ಮೇಲ್‌ ಶುಲ್ಕವಾಗಿ ನೀಡುವುದು ಕಡ್ಡಾಯ. ಯಾವುದೇ ಕಾರಣಕ್ಕೂ ಈ ಶುಲ್ಕ ಹಿಂತಿರುಗಿಸುವುದಿಲ್ಲ.

ಯಾರಿಗೆ ಈ ಶುಲ್ಕದ ಹೊರೆ?:

ವಲಸೇತರ ವೀಸಾಗಳಾದ ಬಿ-1,ಬಿ-2(ಪ್ರವಾಸಿ ಮತ್ತು ಬ್ಯುಸಿನೆಸ್‌ ವೀಸಾಗಳು), ಎಫ್‌ ಮತ್ತು ಎಂ(ವಿದ್ಯಾರ್ಥಿ ವೀಸಾ), ಎಚ್‌-1ಬಿ(ಕೆಲಸದ ವೀಸಾ) ಮತ್ತು ಜೆ(ವಿನಿಮಯ ಭೇಟಿ ವೀಸಾ) ವೀಸಾಗಳಿಗೆ ಇದು ಅನ್ವಯವಾಗಲಿದೆ. ರಾಜತಾಂತ್ರಿಕ ವೀಸಾ ಕೆಟಗರಿಗಳಾದ ಎ ಮತ್ತು ಜಿ ಗೆ ಈ ಈ ಶುಲ್ಕ ಅನ್ವಯಿಸುವುದಿಲ್ಲ. ಭಾರತೀಯ ಪ್ರವಾಸಿಗರು, ವಿದ್ಯಾರ್ಥಿಗಳು, ವೃತ್ತಿಪರರು, ತಾಂತ್ರಿಕ ಪರಿಣತರು ಮತ್ತು ಬ್ಯುಸಿನೆಸ್‌ ಟ್ರಾವೆಲ್ಲರ್‌ಗಳಿಗೆ ಈ ಶುಲ್ಕದ ಹೊರೆ ಬೀಳಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?
ನಿಖಿಲ್‌ ಕಾಮತ್‌ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಕಂಪನಿ ನಿರ್ದೇಶಕಿ!