*ಕೇಂದ್ರ ಬಜೆಟ್ ಪೂರ್ವಭಾವಿಯಾಗಿ ಸಮೀಕ್ಷೆ ನಡೆಸಿದ ಯೂಗವ್ (YouGov)
*ಶೇ.38 ಮಂದಿಗೆ ಆದಾಯ ತೆರಿಗೆ ವಿನಾಯ್ತಿ ಮಿತಿ 5ಲಕ್ಷ ರೂ.ಗೆ ಏರಿಕೆಯಾಗಬಹುದೆಂಬ ನಿರೀಕ್ಷೆ
*ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ಕಡಿತ ಹೆಚ್ಚಿಸಬೇಕೆಂಬುದು ವೇತನ ಪಡೆಯುತ್ತಿರೋ ವರ್ಗದ ಮುಖ್ಯ ಬೇಡಿಕೆ
ನವದೆಹಲಿ (ಜ.28): ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರೋ ತೆರಿಗೆ (Tax) ಸ್ವರೂಪದ (Structure) ಬಗ್ಗೆ ಬಹುತೇಕ ಜನರು ಅಸಂತೃಪ್ತಿ (Unhappy) ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸಮೀಕ್ಷೆಯೊಂದು (Survey) ಬಹಿರಂಗಪಡಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 2/3 ಅಥವಾ ಶೇ. 65 ಜನರು ಪ್ರಸ್ತುತ ತೆರಿಗೆ ಸ್ವರೂಪದ ಬಗ್ಗೆ ಅಸಂತೋಷ ಹೊರಹಾಕಿದ್ದಾರೆ.
ಯೂಗವ್ (YouGov) ನಡೆಸಿದ ಇತ್ತೀಚಿನ ಸಮೀಕ್ಷೆಯು ಆದಾಯ ತೆರಿಗೆ (Income Tax)ಕುರಿತ ಸಾರ್ವಜನಿಕರ ಭಾವನೆಗಳು ಹಾಗೂ ಮುಂಬರೋ ಬಜೆಟ್ ಕುರಿತ ಅವರ ನಿರೀಕ್ಷೆಗಳನ್ನು ಅನಾವರಣಗೊಳಿಸಿದೆ. ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು ಕೇಂದ್ರ ಬಜೆಟ್ (Union Budget) ಮಂಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್ ಗೆ ಸಂಬಂಧಿಸಿ ಯೂಗವ್ (YouGov) ಸಮೀಕ್ಷೆ ನಡೆಸಿದೆ.
undefined
Budget 2022: 'ಹಲ್ವಾ' ಸ್ಥಾನ ಆಕ್ರಮಿಸಿದ 'ಸ್ವೀಟ್ಸ್': ಒಮಿಕ್ರಾನ್‌ನಿಂದ ಸಂಪ್ರದಾಯಕ್ಕೆ ಬ್ರೇಕ್!
ಸಮೀಕ್ಷೆ ವರದಿಯ ಪ್ರಮುಖಾಂಶಗಳು
-ನಗರ ಪ್ರದೇಶದ 3/4 (ಶೇ.74) ಜನರು ದೇಶದ ಆರ್ಥಿಕಾಭಿವೃದ್ಧಿಗೆ ಆದಾಯ ತೆರಿಗೆ (Income Tax) ಮುಖ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
- ಮುಂಬರೋ ಬಜೆಟ್ (Budget) ಕುರಿತು ಅವರ ನಿರೀಕ್ಷೆಗಳೇನು ಎಂಬ ಪ್ರಶ್ನೆಗೆ ನಗರ ಪ್ರದೇಶದ ಐದು ಜನರಲ್ಲಿ ಇಬ್ಬರು (ಶೇ.38) ಸರ್ಕಾರ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು 5ಲಕ್ಷ ರೂ.ಗೆ ಏರಿಕೆ ಮಾಡಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರ ಬಹುಮುಖ್ಯ ನಿರೀಕ್ಷೆಯೂ ಆಗಿದೆ ಎಂದು ಸಮೀಕ್ಷೆ ಹೇಳಿದೆ.
-10ರಲ್ಲಿ 3 (ಶೇ.31) ಜನರು ಸಮಗ್ರ ತೆರಿಗೆ ವಿನಾಯ್ತಿ ಮಿತಿಯನ್ನು ಪ್ರಸಕ್ತವಿರೋ 1.5ಲಕ್ಷ ರೂ.ನಿಂದ ಏರಿಕೆ ಮಾಡಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಸ್ಟ್ಯಾಂಡರ್ಡ್ ಡಿಡಕ್ಷನ್ ( standard deduction) ಮಿತಿಯನ್ನು ಪ್ರಸ್ತುತವಿರೋ 50,000ರೂ.ನಿಂದ ಏರಿಕೆ ಮಾಡೋ ಮೂಲಕ ವೇತನ (Salarized) ಪಡೆಯುತ್ತಿರೋ ವರ್ಗದ ಮೇಲಿನ ತೆರಿಗೆ ಹೊರೆಯನ್ನು ಸರ್ಕಾರ ತಗ್ಗಿಸಬೇಕೆಂಬ ಅಭಿಪ್ರಾಯವನ್ನು ಹೆಚ್ಚಿನ ಪ್ರಮಾಣದ ಜನರು (ಶೇ.32) ಹೊಂದಿದ್ದಾರೆ. ಅದ್ರಲ್ಲೂ 40 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದ ಜನರು ಯುವ ಜನರಿಗೆ ಹೋಲಿಸಿದ್ರೆ ಈ ನಿರೀಕ್ಷೆಯನ್ನು ಹೆಚ್ಚು ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
-ಕೋವಿಡ್ -19 ಪೆಂಡಾಮಿಕ್ ಹಾಗೂ ಹೆಚ್ಚುತ್ತಿರೋ ವೈದ್ಯಕೀಯ ವೆಚ್ಚಗಳನ್ನು (Medical Expenses) ಗಮನದಲ್ಲಿಟ್ಟುಕೊಂಡು ತೆರಿಗೆ ಕಡಿತದ ಅಡಿಯಲ್ಲಿ ಕೋವಿಡ್ ಚಿಕಿತ್ಸೆ ಸಂಬಂಧಿ ವೆಚ್ಚಗಳನ್ನು ಪ್ರತ್ಯೇಕ ವಿಷಯವನ್ನಾಗಿ ಪರಿಗಣಿಸುವಂತೆ ಶೇ.35ಕ್ಕಿಂತಲೂ ಹೆಚ್ಚು ಜನರು ನಿರೀಕ್ಷೆ ಹೊಂದಿದ್ದಾರೆ. ಇನ್ನು ಶೇ.30ರಷ್ಟು ಜನರು ವಿತ್ತ ಸಚಿವರು 80ಡಿ ಅಡಿಯಲ್ಲಿ ವೈದ್ಯಕೀಯ ವೆಚ್ಚ ಕಡಿತ ಹೆಚ್ಚಿಸಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
-ಭಾರತದಲ್ಲಿ ವೇತನ ಪಡೆಯುತ್ತಿರೋ ವರ್ಗದ ನಿರೀಕ್ಷೆಗಳಲ್ಲಿ ಗೃಹಸಾಲದ ಬಡ್ಡಿ ಮೇಲಿನ ತೆರಿಗೆ ಕಡಿತ ಹೆಚ್ಚಿಸಬೇಕೆಂಬುದು ಕೂಡ ಸೇರಿದೆ.
Budget 2022 Expectations: ಈ ಬಾರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳವಾಗುತ್ತಾ? ಸಮೀಕ್ಷೆ ಏನ್ ಹೇಳುತ್ತೆ?
-ಶೇ.80ರಷ್ಟು ಸ್ವಘೋಷಿತ ಬಡ ಜನರು ಶೇ.5ರಷ್ಟು ತೆರಿಗೆ ನ್ಯಾಯಸಮ್ಮತವಾಗಿದ್ದು, ಅದನ್ನು ಪಾವತಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಉಳಿದ ಶೇ.20ರಷ್ಟು ಜನರು ಶೇ.10ರಷ್ಟು ತೆರಿಗೆ ವಿಧಿಸೋದು ನ್ಯಾಯಸಮ್ಮತವಾಗಿದ್ದು, ಅದನ್ನು ಪಾವತಿಸಲು ಸಾಧ್ಯವಿದೆ ಎಂದು ಹೇಳಿದ್ದಾರೆ.
-ಕೆಲವು ವೃತ್ತಿಯವರಿಗೆ (ಉದಾ: ರೈತರು) ಆದಾಯ ತೆರಿಗೆ ಪಾವತಿಯಿಂದ ವಿನಾಯ್ತಿ ನೀಡಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ನಗರ ಪ್ರದೇಶದ ಶೇ.60ರಷ್ಟು ಜನರು ರೈತರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಶೇ.35ರಷ್ಟು ಮಂದಿ ರೈತರಿಗೆ ಕೂಡ ಇತರ ನಾಗರಿಕರಂತೆ ತೆರಿಗೆ ವಿಧಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
-ಭಾರತದಲ್ಲಿ ಉದ್ಯಮಿಗಳನ್ನು ಶ್ರೀಮಂತರೆಂದು ಪರಿಗಣಿಸಲಾಗಿದ್ದು, ಶೇ.51ರಷ್ಟು ಜನರು ಶ್ರೀಮಂತರು ಅಧಿಕ ಪ್ರಮಾಣದ ಆದಾಯ ತೆರಿಗೆ ಪಾವತಿಸುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಶೇ.37ರಷ್ಟು ಜನರು ಇತರ ನಾಗರಿಕರಷ್ಟೇ ತೆರಿಗೆಯನ್ನು ಅವರು ಕೂಡ ಪಾವತಿಸುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಶೇ. 12ರಷ್ಟು ಜನರು ಅವರು ತೆರಿಗೆ ಪಾವತಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯೂ ಗವ್ ಭಾರತದಲ್ಲಿ ಸುಮಾರು 1022 ಪ್ರತಿನಿಧಿಗಳಿಂದ ಆನ್ ಲೈನ್ ಮೂಲಕ ಮಾಹಿತಿ ಸಂಗ್ರಹಿಸಿದೆ. ಜನವರಿ 18-21 ನಡುವೆ ಈ ಮಾಹಿತಿ ಕಲೆ ಹಾಕಲಾಗಿದೆ.