ಇಂದಿನಿಂದ ಬಜೆಟ್ ಅಧಿವೇಶನ

Kannadaprabha News   | Kannada Prabha
Published : Jan 28, 2026, 04:38 AM IST
Nirmala Sitharaman budget 2026

ಸಾರಾಂಶ

ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್‌ ಮಂಡನೆಯ ಕುತೂಹಲ ಒಂದೆಡೆಯಾದರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಕಾಯ್ದೆ ರದ್ದು ಮಾಡಿ ಜಾರಿಗೆ ತಂದಿರುವ ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ನಿಶ್ಚಿತ

ನವದೆಹಲಿ : ಸಂಸತ್ತಿನ ಬಜೆಟ್‌ ಅಧಿವೇಶನ ಬುಧವಾರದಿಂದ ಆರಂಭವಾಗಲಿದೆ. 2 ಹಂತಗಳಲ್ಲಿ ಅಧಿವೇಶನ ನಡೆಯಲಿದ್ದು, ಏಪ್ರಿಲ್ 2ಕ್ಕೆ ಅಂತ್ಯಗೊಳ್ಳಲಿದೆ. ಬಜೆಟ್‌ ಮಂಡನೆಯ ಕುತೂಹಲ ಒಂದೆಡೆಯಾದರೆ. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ (ಮನರೇಗಾ) ಕಾಯ್ದೆ ರದ್ದು ಮಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ವಿಬಿ ಜಿ ರಾಮ್‌ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸುವುದು ನಿಶ್ಚಿತವಾಗಿದೆ.

ಸಂಸತ್ತಿನ ಬಜೆಟ್ ಅಧಿವೇಶನವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಮಾಡುವ ಭಾಷಣದೊಂದಿಗೆ ಪ್ರಾರಂಭವಾಗಲಿದೆ. ಆರ್ಥಿಕ ಸಮೀಕ್ಷೆಯನ್ನು ಜ.29ರಂದು ಮಂಡಿಸಲಾಗುವುದು. 2026-27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಭಾನುವಾರವಾದರೂ ಫೆ.1ರಂದು ಮಂಡಿಸಲಾಗುವುದು.

ಅಧಿವೇಶನದ ಮೊದಲ ಹಂತವು ಜ.28 ರಿಂದ ಫೆ.13 ರವರೆಗೆ ನಡೆಯಲಿದೆ ಮತ್ತು 2ನೇ ಹಂತವು ಮಾರ್ಚ್ 9 ರಿಂದ ಏ.2 ರವರೆಗೆ ನಡೆಯಲಿದೆ. ಅಧಿವೇಶನದಲ್ಲಿ 30 ದಿನಗಳ ಕಲಾಪ ನಡೆಯಲಿದೆ.

ರಾಮ್‌ಜಿ ಕೋಲಾಹಲ ಸಂಭವ:

ಈ ನಡುವೆ, ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ, ‘ಬಜೆಟ್ ಅಧಿವೇಶನದಲ್ಲಿ ವಿಬಿ-ಜಿ ರಾಮ್ ಜಿ ಕಾಯ್ದೆ ಮತ್ತು ಎಸ್‌ಐಆರ್ ಕುರಿತು ಚರ್ಚೆ ನಡೆಸಬೇಕು’ ಎಂಬ ವಿರೋಧ ಪಕ್ಷದ ಬೇಡಿಕೆಗಳನ್ನು ಸರ್ಕಾರ ತಿರಸ್ಕರಿಸಿದೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ‘ಈ ಎರಡೂ ವಿಷಯಗಳ ಬಗ್ಗೆ ಈಗಾಗಲೇ ಎರಡೂ ಸದನಗಳು ಚರ್ಚಿಸಿವೆ. ಮತ್ತೆ ನಾವು ರಿವರ್ಸ್‌ ಗೇರ್‌ ಹಾಕಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಆದರೆ ಸರ್ಕಾರದ ನಡೆಯನ್ನು ಪ್ರತಿಪಕ್ಷ ಒಪ್ಪುವ ಸಾಧ್ಯತೆ ಇಲ್ಲ. ಹೀಗಾಗಿ ಕೋಲಾಹಲ ನಿಶ್ಚಿತವಾಗಿದೆ.

ಬಜೆಟ್‌ ಸಿದ್ಧತೆ ಪೂರ್ಣ: ಹಲ್ವಾ ಸಮಾರಂಭದಲ್ಲಿ ಸಚಿವೆ ನಿರ್ಮಲಾ ಭಾಗಿ

ನವದೆಹಲಿ: 2026-27ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಗೆ ಸಿದ್ಧತೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಾಂಪ್ರದಾಯಿಕ ಹಲ್ವಾ ಸಮಾರಂಭದಲ್ಲಿ ಭಾಗವಹಿಸಿದರು.ರೈಸಿನಾ ಹಿಲ್‌ನ ಉತ್ತರ ಬ್ಲಾಕ್‌ನಲ್ಲಿರುವ ವಿತ್ತ ಸಚಿವಾಲಯದ ಹಳೆಯ ಕಟ್ಟಡದಲ್ಲಿ ಕಾರ್ಯಕ್ರಮ ನಡೆಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು, ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡರು.

ಬಜೆಟ್‌ ಮಂಡನೆಗೂ ಪೂರ್ವದಲ್ಲಿ ಅದರ ಸಿದ್ಧತೆಗಾಗಿ ವಿತ್ತ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಚಿವಾಲಯದ ಕಟ್ಟಡದಲ್ಲಿ ಇರಿಸಲಾಗುತ್ತದೆ. ಬಜೆಟ್‌ ಮಾಹಿತಿ ಸೋರಿಕೆಯಾಗಬಾರದು ಎಂಬ ಉದ್ದೇಶದಿಂದ ಅವರಿಗೆ ಹೊರಪ್ರಪಂಚದ ಎಲ್ಲ ಸಂಪರ್ಕಗಳನ್ನು ನಿಷೇಧಿಸಲಾಗಿರುತ್ತದೆ. ಸಚಿವರು ಲೋಕಸಭೆಯಲ್ಲಿ ಬಜೆಟ್ ಭಾಷಣ ಮಾಡಿದ ಬಳಿಕವಷ್ಟೇ ಅವರನ್ನು ಹೊರಬಿಡಲಾಗುತ್ತದೆ. ಹೀಗಾಗಿ ಸಿದ್ಧತೆ ಪೂರ್ಣಗೊಂಡ ಬಳಿಕ ಅಧಿಕಾರಿಗಳನ್ನು ಖುಷಿಪಡಿಸಲು ಹಲ್ವಾ ಸಮಾರಂಭ ಆಯೋಜಿಸಲಾಗುತ್ತದೆ.

PREV
Read more Articles on
click me!

Recommended Stories

ಜಾಗತಿಕ ಅವ್ಯವಸ್ಥೆ ನಡುವೆ ಭಾರತದ ಬಜೆಟ್‌ ನಿರೀಕ್ಷೆ-ಹೇಗೆ ನಿಭಾಯಿಸುತ್ತಾರೆ ಹಣಕಾಸು ಸಚಿವೆ
Budget 2026: ಇತಿಹಾಸದಲ್ಲೇ ಮೊದಲು! ಫೆ.1ರ ಭಾನುವಾರದಂದೇ ಬಜೆಟ್ ಮಂಡನೆ, ಕಾರಣವೇನು ಗೊತ್ತಾ?