
ಈ ಆಯವ್ಯಯ ಎದುರಿಸುತ್ತಿರುವ ಜಾಗತಿಕ ಸನ್ನಿವೇಶವು ಅಸಾಧಾರಣವಾದ ಸವಾಲಿನಿಂದ ಕೂಡಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇನ್ನೂ ಹೆಚ್ಚಾಗಿದ್ದು, ಹೊಸ ವ್ಯಾಪಾರ ಪೈಪೋಟಿಗಳು ಮತ್ತು ಅಮೆರಿಕದಲ್ಲಿ ಆಕ್ರಮಣಕಾರಿ ಸುಂಕ ರಾಜಕೀಯದ ಮರಳುವಿಕೆಯಿಂದಾಗಿ ಮತ್ತೊಂದು ಸುತ್ತಿನ ವ್ಯಾಪಾರ ಯುದ್ಧಗಳ ಭಯ ಮತ್ತೆ ಹುಟ್ಟಿಕೊಂಡಿದೆ.
-ಡಾ। ಎಸ್.ಆರ್.ಕೇಶವ.
ಅರ್ಥಶಾಸ್ತ್ರದ ಹಿರಿಯ ಪ್ರಾಧ್ಯಾಪಕರು
ಬೆಂಗಳೂರು ವಿಶ್ವವಿದ್ಯಾಲಯ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ನೇ ಸಾಲಿನ ತಮ್ಮ 9ನೇ ಬಜೆಟ್ ಮಂಡಿಸಲಿದ್ದು, ಹಲವು ಸಂಕೀರ್ಣ ಸವಾಲುಗಳನ್ನು ಈ ಬಾರಿ ವಿಶೇಷವಾಗಿ ಎದುರಿಸುತ್ತಿದ್ದಾರೆ. ಈ ಬಾರಿಯ ಬಜೆಟ್‌ಗೆ ಹಲವು ವಿಶೇಷತೆಗಳು ಇರಲಿವೆ. ಅದರಲ್ಲಿ ಮುಖ್ಯವಾಗಿ ಸಮತೋಲ ಕಾಯ್ದುಕೊಳ್ಳುವ ಸವಾಲು ದೊಡ್ಡ ಮಟ್ಟದಲ್ಲಿದೆ. ಆ ಸವಾಲು ಯಾವುದೆಂದರೆ ಜಾಗತಿಕ ಅಸ್ಥಿರತೆ ಮತ್ತು ದೇಶೀಯ ನಿರೀಕ್ಷೆಗಳ ನಡುವಿನ ಸಮತೋಲನ.
ವಿಭಜಿತ ಜಗತ್ತು ಮತ್ತು ಭಾರತಕ್ಕಿರುವ ಅಪಾಯಗಳು: ಆಯವ್ಯಯ 2026–27 ಕೇವಲ ಒಂದು ವಾರ್ಷಿಕ ಹಣಕಾಸು ದಸ್ತಾವೇಜು ಅಲ್ಲ; ಇದು ವಿಭಜನೆ ಆಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ಭಾರತ ತನ್ನ ಬೆಳವಣಿಗೆಯನ್ನು ನಿರಂತರವಾಗಿ ಉಳಿಸಿಕೊಳ್ಳಲು ಸಾಧ್ಯವಾಗುವ ಪೂರಕ ಕ್ರಮಗಳ ಘೋಷಣೆಯ ಪರೀಕ್ಷೆ ಆಗಿದೆ.
ವ್ಯಾಪಾರ ಯುದ್ಧಗಳ ಮಧ್ಯೆ ಹೊಸ ಅವಕಾಶಗಳು: ಈ ಆಯವ್ಯಯ ಎದುರಿಸುತ್ತಿರುವ ಜಾಗತಿಕ ಸನ್ನಿವೇಶವು ಅಸಾಧಾರಣವಾದ ಸವಾಲಿನಿಂದ ಕೂಡಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಇನ್ನೂ ಹೆಚ್ಚಾಗಿದ್ದು, ಹೊಸ ವ್ಯಾಪಾರ ಪೈಪೋಟಿಗಳು ಮತ್ತು ಅಮೆರಿಕದಲ್ಲಿ ಆಕ್ರಮಣಕಾರಿ ಸುಂಕ ರಾಜಕೀಯದ ಮರಳುವಿಕೆಯಿಂದಾಗಿ ಮತ್ತೊಂದು ಸುತ್ತಿನ ವ್ಯಾಪಾರ ಯುದ್ಧಗಳ ಭಯ ಮತ್ತೆ ಹುಟ್ಟಿಕೊಂಡಿದೆ. ಜಾಗತಿಕ ರಕ್ಷಣಾತ್ಮಕ ನೀತಿ ಈಗ ಅಪರೂಪದ ವಿಷಯವಲ್ಲ, ಅದು ಸ್ಥಾಯಿ ಸ್ವರೂಪ ಪಡೆದಿದೆ. ಕೈಗಾರಿಕಾ ನೀತಿ, ಸಬ್ಸಿಡಿಗಳು ಮತ್ತು ರಾಷ್ಟ್ರೀಯ ಭದ್ರತೆ ವ್ಯಾಪಾರವನ್ನು ಮರುರೂಪಿಸುತ್ತಿವೆ. ಇದರಿಂದ ಭಾರತಕ್ಕೆ ಎಂಜಿನಿಯರಿಂಗ್ ಸರಕುಗಳು, ರಾಸಾಯನಿಕಗಳು, ವಸ್ತ್ರೋದ್ಯಮ ಮತ್ತು ಎಲೆಕ್ಟ್ರಾನಿಕ್ಸ್ ರಫ್ತುಗಳಲ್ಲಿ ಅನಿಶ್ಚಿತತೆ ಎದುರಾಗುತ್ತಿದೆ. ಅದೇ ಸಮಯದಲ್ಲಿ, ‘ಚೈನಾ-ಪ್ಲಸ್-ವನ್’ ತಂತ್ರದ ಮೂಲಕ ಹೊಸ ಅವಕಾಶಗಳೂ ಮೂಡುತ್ತಿವೆ.
ಇಂಧನ, ತೈಲ ಮತ್ತು ಹಸಿರು ಪರಿವರ್ತನೆಯ ಸವಾಲು: ಇಂಧನ ಮಾರುಕಟ್ಟೆಗಳು ಮತ್ತೊಂದು ಅಪಾಯದ ಹಂತ ನಮ್ಮ ಮುಂದಿದೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು 85 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ, ಇದು ಹಣದುಬ್ಬರ ಮತ್ತು ಹಣಕಾಸಿನ ಸಮತೋಲನಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳಿಗೆ ಹೊಂದಿಸುವ, ನಿರ್ವಹಿಸುವ ಸವಾಲಿದೆ. ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 50–60 ಡಾಲರ್‌ಗೆ ತಲುಪಿದರೆ, ಅದು ತಾತ್ಕಾಲಿಕ ಪರಿಹಾರವನ್ನು ನೀಡಬಹುದು.
ಜಾಗತಿಕ ಹಣಕಾಸು ಮತ್ತು ಭಾರತದ ಸ್ಥಿರತೆ: ಜಾಗತಿಕ ಹಣಕಾಸು ಪರಿಸ್ಥಿತಿಯೂ ಕಠಿಣವಾಗಿದೆ. ಅಮೆರಿಕದ ಬಡ್ಡಿದರ ನೀತಿಗಳು ಬಂಡವಾಳ ಹರಿವು, ರೂಪಾಯಿ ಮೌಲ್ಯ ಮತ್ತು ಸಾಲದ ವೆಚ್ಚವನ್ನು ನಿರ್ಧರಿಸುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ನೇರ ವಿದೇಶಿ ಹೂಡಿಕೆ ನಿಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಣಕಾಸು ಶಿಸ್ತು ಮತ್ತು ನೀತಿ ಸ್ಥಿರತೆ ಅತ್ಯಂತ ಮಹತ್ವ ಪಡೆದುಕೊಂಡಿವೆ.
ಈ ಜಾಗತಿಕ ಅನಿಶ್ಚಿತತೆಯ ನಡುವೆ ಭಾರತದ ಬಜೆಟ್ 2026–27 ಸಾಲಿಗೆ ತನ್ನದೇ ಅಸ್ತಿತ್ವದ (ಸಾಪೇಕ್ಷ) ಆರ್ಥಿಕ ಬಲದೊಂದಿಗೆ ಪ್ರವೇಶಿಸುತ್ತಿದೆ. ಜನವರಿ 2026ರಲ್ಲಿ ಪ್ರಕಟವಾದ ರಾಷ್ಟ್ರೀಯ ಅಂಕಿಅಂಶ ಕಚೇರಿಯ ಪ್ರಥಮ ಮುಂಗಡ ಅಂದಾಜುಗಳ ಪ್ರಕಾರ, 2025–26ರಲ್ಲಿ ನೈಜ ಜಿಡಿಪಿ ಬೆಳವಣಿಗೆ ಶೇಕಡ 7.4 ಎಂದು ಅಂದಾಜಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.8 ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಇದು ಭಾರತವನ್ನು ಪ್ರಮುಖ ಆರ್ಥಿಕತೆಯೊಂದಿಗೆ ಅತಿ ವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿಸಿದೆ.
ಸೇವಾ ವಲಯವು ಆರ್ಥಿಕ ಬೆಳಗವಣಿಗೆಯ ಪ್ರಾಥಮಿಕ ಎಂಜಿನ್ ಆಗಿದೆ. ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಶೇಕಡ 10ರಷ್ಟು ಹತ್ತಿರ ಅಭಿವೃದ್ಧಿ ಹೊಂದುತ್ತಿವೆ. ಉತ್ಪಾದನೆ ಮತ್ತು ನಿರ್ಮಾಣವು ಸುಮಾರು ಶೇಕಡ 7ರಷ್ಟು ಬೆಳೆವಣಿಗೆ ಸಾಧಿಸುವ ನಿರೀಕ್ಷೆಯಿದೆ, ಆದರೆ ಕೃಷಿಯು ಶೇಕಡ 3.1ರ ದರದಲ್ಲಿ ಬೆಳಗವಣಿಗೆ ಸಾಧಿಸುವ ನಿರೀಕ್ಷೆಯಿದೆ. ಬೇಡಿಕೆಯ ಲೆಕ್ಕಾಚಾರದಲ್ಲಿ ಗಮನಿಸಿದರೆ, ಖಾಸಗಿ ಬಳಕೆ ಜಿಡಿಪಿಯ ಶೇಕಡ 56ಕ್ಕಿಂತ ಹೆಚ್ಚು ಮತ್ತು ಹೂಡಿಕೆಯು ಸುಮಾರು ಶೇಕಡ 34ರಷ್ಟಿದೆ, ಇದು ದೇಶೀಯ ಬೇಡಿಕೆ ಮತ್ತು ಸಾರ್ವಜನಿಕ ಬಂಡವಾಳ ವೆಚ್ಚವನ್ನು ಒತ್ತಿಹೇಳುತ್ತದೆ.
ಬೇಡಿಕೆ ಮತ್ತು ಹೂಡಿಕೆ- ದೇಶೀಯ ಶಕ್ತಿ: ಭಾರತದ ಸಾಮರ್ಥ್ಯಗಳು ಸ್ಪಷ್ಟವಾಗಿವೆ. ಬಲವಾದ ಬೆಳವಣಿಗೆ, ಬಲವಾದ ಸಾರ್ವಜನಿಕ ಹೂಡಿಕೆಯ ಚಕ್ರ, ಆರಾಮದಾಯಕ ವಿದೇಶಿ ವಿನಿಮಯ ಮೀಸಲು, ಸ್ಥಿರವಾದ ಹಣದುಬ್ಬರ ಪಥ ಮತ್ತು ವಿಶ್ವ ದರ್ಜೆಯ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಉತ್ತಮವಾಗಿದೆ. ಆದರೂ ಹಲವು ಸವಾಲುಗಳು ಅಷ್ಟೇ ನೈಜವಾಗಿವೆ. ಅನುಭೋಗ ಮಟ್ಟವು ಕಡಿಮೆಯಾಗಿದೆ, ಖಾಸಗಿ ಹೂಡಿಕೆ ಅಸಮತೋಲನದಲ್ಲಿದೆ. ಇಂಧನ ಮತ್ತು ಖಾದ್ಯ ತೈಲಗಳ ಮೇಲಿನ ಆಮದು ಅವಲಂಬನೆ ಇನ್ನೂ ಮುಂದುವರೆದಿದೆ ಮತ್ತು ಹವಾಮಾನ ಚಂಚಲತೆ ಕೃಷಿಯ ಮೇಲೆ ತನ್ನದೇ ಪರಿಣಾಮವನ್ನು ಬೀರುತ್ತಿದೆ.
ಮುಖ್ಯ ಸವಾಲು- ಶಿಸ್ತು ಮತ್ತು ಬೆಳವಣಿಗೆಯ ಸಮತೋಲನ: ಇದರಿಂದ ಬಜೆಟ್ ಎದುರಿಸುತ್ತಿರುವ ಸವಾಲು ಸ್ಪಷ್ಟ. ಹಣಕಾಸು ಶಿಸ್ತು ಕಾಪಾಡುತ್ತಲೇ ಬೆಳವಣಿಗೆಗೆ ಉತ್ತೇಜನ ನೀಡುವುದು ಮತ್ತು ಸ್ಥಿರತೆಯನ್ನು ಕಾಪಾಡುತ್ತಲೇ ಸುಧಾರಣೆಗಳನ್ನು ಮುಂದುವರಿಸಬೇಕಿದೆ.
ಸಾರ್ವಜನಿಕ ಹೂಡಿಕೆ- ಅಭಿವೃದ್ಧಿಯ ಎಂಜಿನ್: ಬಜೆಟ್‌ನ ಪ್ರಮುಖ ನಿರೀಕ್ಷೆ ಸಾರ್ವಜನಿಕ ಬಂಡವಾಳ ವೆಚ್ಚದ ಬಲವಾದ ಮುಂದುವರಿಕೆ. ಜಾಗತಿಕ ಬೇಡಿಕೆ ದುರ್ಬಲವಾಗಿರುವ ಸಂದರ್ಭದಲ್ಲಿ, ಸಾರ್ವಜನಿಕ ಹೂಡಿಕೆಯೇ ಬೆಳವಣಿಗೆಯ ಪ್ರಮುಖ ಎಂಜಿನ್. ₹12–13 ಲಕ್ಷ ಕೋಟಿ ಬಂಡವಾಳ ವೆಚ್ಚ ನಿರೀಕ್ಷಿಸಲಾಗಿದ್ದು, ಸಾರಿಗೆ, ರೈಲ್ವೆ, ರಕ್ಷಣಾ ತಯಾರಿಕೆ, ನಗರ ಮೂಲಸೌಕರ್ಯ ಮತ್ತು ಡಿಜಿಟಲ್ ಮೂಲಸೌಕರ್ಯಗಳಿಗೆ ಆದ್ಯತೆ ನೀಡಬೇಕಾಗಿದೆ. ವೆಚ್ಚದ ಪ್ರಮಾಣಕ್ಕಿಂತ ಹೆಚ್ಚು, ಅದರ ಕಾರ್ಯಗತ ಗುಣಮಟ್ಟವೇ ಮುಖ್ಯವಾಗಿದೆ.
ಮಧ್ಯಮ ವರ್ಗ ಮತ್ತು ತೆರಿಗೆ ನೀತಿಯ ನಿರೀಕ್ಷೆಗಳು: ತೆರಿಗೆ ನೀತಿಯಲ್ಲಿ ನಿರೀಕ್ಷೆಗಳು ಪ್ರತಿ ಬಜೆಟ್‌ನಲ್ಲಿಯೂ ಸಹಜ. ಮಧ್ಯಮ ವರ್ಗದ ಆದಾಯದವರಿಗೆ ತೆರಿಗೆ ಕಡಿತ ಹೆಚ್ಚಿಸುವುದು ಮತ್ತು ತೆರಿಗೆ ಸ್ಲ್ಯಾಬ್‌ಗಳ ಸಣ್ಣ ಪರಿಷ್ಕರಣೆ ಜನರ ವೆಚ್ಚವನ್ನು ಉತ್ತೇಜಿಸಬಹುದು. ಆರೋಗ್ಯ ವಿಮೆಗೆ ಹೆಚ್ಚಿನ ಅನುಕೂಲ ಮತ್ತು ಹಿರಿಯ ನಾಗರಿಕರಿಗೆ ಬಜೆಟ್‌ನಲ್ಲಿ ಹೆಚ್ಚಿನ ಸೌಲಭ್ಯ ನೀಡಿದರೆ ಸಾಮಾಜಿಕ ಭದ್ರತೆಗೆ ನೆರವಾಗಲಿದೆ.
ಮೇಕ್ ಇನ್ ಇಂಡಿಯಾ- ಉತ್ಪಾದನೆಯ ಹೊಸ ಹಂತ: ಉತ್ಪಾದನಾ ವಲಯದಲ್ಲಿ ಸುಂಕ ಸರಳೀಕರಣ, ಕಡಿಮೆ ಸ್ಲ್ಯಾಬ್‌ಗಳು ಮತ್ತು ಮರುಪಾವತಿಗಳಲ್ಲಿ ಮತ್ತಷ್ಟು ಸುಧಾರಣೆ ನಿರೀಕ್ಷೆ ಇದೆ. ಉತ್ಪಾದನಾ ಭಾರತವನ್ನು ಜಾಗತಿಕ ಸರಬರಾಜು ಸರಪಳಿಗಳಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ.
ಲಾಜಿಸ್ಟಿಕ್ಸ್- ಸ್ಪರ್ಧಾತ್ಮಕತೆಗೆ ಕೀಲಿ: ಲಾಜಿಸ್ಟಿಕ್ಸ್ ವಲಯದಲ್ಲಿ ವೆಚ್ಚ ಕಡಿತಗೊಳಿಸುವುದು ಪ್ರಮುಖ ಗುರಿ. ಜಿಡಿಪಿಯ ಶೇ.13–14 ರಷ್ಟಿರುವ ಲಾಜಿಸ್ಟಿಕ್ಸ್ ವೆಚ್ಚವನ್ನು ಜಾಗತಿಕ ಮಟ್ಟದ ಶೇ.8–9ಕ್ಕೆ ಇಳಿಸುವುದು ಅಗತ್ಯ. ಇವಿ ವಲಯದಲ್ಲಿ ಜಿಎಸ್‌ಟಿ ಸುಧಾರಣೆ, ಮತ್ತಷ್ಟು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಮತ್ತು ಬ್ಯಾಟರಿ ಉತ್ಪಾದನೆ ಪ್ರಮುಖ ನಿರೀಕ್ಷೆಗಳಾಗಿವೆ.
ಪರಿಸರ ಸ್ನೇಹಿ- ಇವಿ ಮತ್ತು ಭವಿಷ್ಯದ ಸಾರಿಗೆ: ವಿದ್ಯುತ್ ವಾಹನಗಳು ಮತ್ತೊಂದು ಆದ್ಯತೆಯಾಗಿದೆ. ವಿದ್ಯುತ್ ಚಾಲಿತ ವಾಹನ ಘಟಕಗಳ ಮೇಲಿನ ಜಿಎಸ್‌ಟಿ ರಚನೆಯನ್ನು ಸರಿಪಡಿಸಬೇಕಿದೆ, ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸುವುದು ಮತ್ತು ಬ್ಯಾಟರಿ ಉತ್ಪಾದನಾ ವ್ಯವಸ್ಥೆಗಳನ್ನು ಬಲಪಡಿಸುವುದು ಮುಖ್ಯವಾಗಿದೆ. ಇದರಿಂದ ಪರಿಸರ ಸ್ನೇಹಿ ಪರಿವರ್ತನೆಯನ್ನು ಹೊಸ ಕೈಗಾರಿಕಾ ಅವಕಾಶವಾಗಿ ಬೆಳೆಸಬಹುದಾಗಿದೆ.
ಆರೋಗ್ಯ ಮತ್ತು ವಿಜ್ಞಾನ- ಮುಂದಿನ ಗುರಿ: ಆರೋಗ್ಯ ವಲಯದಲ್ಲಿ ಹಲವು ನಿರೀಕ್ಷೆಗಳಿವೆ. ಜೀನೋಮಿಕ್ಸ್, ರೋಗನಿರ್ಣಯ ಮತ್ತು ನಾವೀನ್ಯತೆಗೂ ಹೆಚ್ಚು ಅವಕಾಶವಿದೆ. ಆರೋಗ್ಯ ಸಂಶೋಧನೆ ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆಯು ಭಾರತವನ್ನು ಔಷಧ ವಲಯದಲ್ಲಿ ನಾಯಕನನ್ನಾಗಿ ಮಾಡಬಹುದು.
ಕೃಷಿ ಪರಿವರ್ತನೆ- ಸಬ್ಸಿಡಿಯಿಂದ ಹೂಡಿಕೆಯತ್ತ: ಕೃಷಿಯು ಅಂತಿಮವಾಗಿ ಸಮಗ್ರ ಬೆಳವಣಿಗೆಗೆ ಕೇಂದ್ರಬಿಂದುವಾಗಿದೆ. ಈ ವಲಯವು ಜಿಡಿಪಿಯ ಶೇಕಡಾ 18ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ ಮತ್ತು ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಸಬ್ಸಿಡಿಗಳಿಂದ ನೀರಾವರಿ, ಕೊಯ್ಲಿನ ನಂತರದ ಮೂಲಸೌಕರ್ಯ, ಎಣ್ಣೆಬೀಜಗಳು, ದ್ವಿದಳ ಧಾನ್ಯಗಳು ಮತ್ತು ಹವಾಮಾನ-ಸ್ಮಾರ್ಟ್ ಕೃಷಿಯಲ್ಲಿ ದೀರ್ಘಾವಧಿಯ ಹೂಡಿಕೆಯತ್ತ ಬದಲಾಗಬೇಕಿದೆ.
ಪರಿವರ್ತನೆಯ ಬಜೆಟ್?- ಒಂದು ಸೇತುವೆ: 2026–27ರ ಆಯವ್ಯಯ ಮಹತ್ವದ ಬಜೆಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಹಾಗಾದರೆ ತಾತ್ಕಾಲಿಕ ಸ್ಥಿರತೆಯಿಂದ ದೀರ್ಘಾವಧಿ ಯೋಜನೆಯತ್ತ ಸಾಗುವ ಸೇತುವೆಯಾಗುತ್ತದೆ. ಈ ಆಯವ್ಯಯ ಮುಂದಿನ ಒಂದು ವರ್ಷದಷ್ಟೇ ಅಲ್ಲ, ಮುಂದಿನ ದಶಕದ ಭಾರತದ ಭವಿಷ್ಯವನ್ನು ರೂಪಿಸುವ ಬಜೆಟ್ ಆಗಲಿದೆ ಎಂಬ ನಿರೀಕ್ಷೆ ಇದೆ.