
ಪ್ರತಿ ದಿನ ವಾಹನ ಚಲಾಯಿಸುವವರಿಗೂ ಟ್ರಾಫಿಕ್ ರೂಲ್ಸ್ (Traffic Rules) ಸರಿಯಾಗಿ ತಿಳಿದಿರೋದಿಲ್ಲ. 18 ವರ್ಷ ತುಂಬಿದವರು ಮಾತ್ರ ಸ್ಕೂಟರ್ ಓಡಿಸ್ಬಹುದು. ಅವರಿಗೆ ಲೈಸೆನ್ಸ್ (License) ಸಿಗುತ್ತೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ವಿಷ್ಯ. ಆದ್ರೆ ಈಗಿನ ದಿನಗಳಲ್ಲಿ ಹೈಸ್ಕೂಲಿಗೆ ಹೋಗೋ ಮಕ್ಕಳು ಕೂಡ ಸ್ಕೂಟರ್, ಬೈಕ್, ಕಾರ್ ಓಡಿಸ್ತಾರೆ. 16 ವರ್ಷದ ಹುಡುಗನೊಬ್ಬ ಸ್ಕೂಟರ್ ಓಡಿಸ್ತಿರುವಾಗ ಟ್ರಾಫಿಕ್ ಪೊಲೀಸ್ (Traffic Police) ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆದ್ರೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸದೆ ಅವನನ್ನು ಬಿಟ್ಟು ಕಳುಹಿಸಿದ್ದಾರೆ. ಅರೇ, ಟ್ರಾಫಿಕ್ ಪೊಲೀಸ್ ದಂಡ ವಿಧಿಸದೆ ಕಳಿಸೋಕೆ ಕಾರಣ ಏನು ? ಅದಕ್ಕೆ ಉತ್ತರ ಇಲ್ಲಿದೆ.
ಟ್ರಾಫಿಕ್ ರೂಲ್ಸ್ ಬಗ್ಗೆ ಸಣ್ಣ ಸಣ್ಣ ರೀಲ್ಸ್ ಮಾಡಿ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಟ್ರಾಫಿಕ್ ಪೊಲೀಸ್ ವಿವೇಕಾನಂದ್ ತಿವಾರಿ ಮಾಡ್ತಿದ್ದಾರೆ. ಒಂದು ರೀಲ್ಸ್ ನಲ್ಲಿ 16 ವರ್ಷದ ಹುಡುಗ ಸ್ಕೂಟರ್ ಓಡಿಸೋದನ್ನು ನೀವು ನೋಡ್ಬಹುದು. ಇದು ಎಲೆಕ್ಟ್ರಿ,ಕ್ ಸ್ಕೂಟರ್. ವಿವೇಕಾನಂದ್ ತಮ್ಮ ರೀಲ್ಸ್ ನಲ್ಲಿ ಸ್ಪೀಡ್ ಲಿಮಿಟ್ ಇರುವ ಎಲೆಕ್ಟ್ರಿಕ್ ಸ್ಕೂಟಿಯನ್ನು 16 ವರ್ಷದ ಮಕ್ಕಳು ಓಡಿಸ್ಬಹುದು ಎಂದಿದ್ದಾರೆ. ಆದ್ರೆ ಬೇರೆ ಯಾವುದೇ ಪೆಟ್ರೋಲ್ ವಾಹನ ಹಾಗೂ ಸ್ಪೀಡ್ ಹೆಚ್ಚಿರುವ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಓಡಿಸಬೇಡಿ ಎಂದು ವಿವೇಕಾನಂದ್ ಹೇಳಿದ್ದಾರೆ.
ಯಾವ ಸ್ಪೀಟ್ ಲಿಮಿಟ್ ಸ್ಕೂಟರನ್ನು ಮಕ್ಕಳು ಓಡಿಸ್ಬಹುದು? : ಟ್ರಾಫಿಕ್ ರೂಲ್ಸ್ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಬಹುದು. ಅದ್ರ ಸ್ಪೀಡ್ ಲಿಮಿಟ್ 25 ಕಿಲೋಮೀಟರ್ ಪ್ರತಿ ಗಂಟೆಗಿಂತ ಕಡಿಮೆ ಇರ್ಬೇಕು. ಈ ಸ್ಕೂಟರ್ ಗೆ ಯಾವುದೇ ರಿಜಿಸ್ಟ್ರೇಷನ್ ಇರೋದಿಲ್ಲ. ಈ ಸ್ಕೂಟರ್ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯ ಇರೋದಿಲ್ಲ. ಹಾಗಾಗಿ ಈ ಸ್ಕೂಟರನ್ನು 18 ವರ್ಷದೊಳಗಿನ ಮಕ್ಕಳು ಓಡಿಸ್ಬಹುದು.
ಮೋಟಾರು ವಾಹನ 1988ರ ನಿಯಮದ ಪ್ರಕಾರ, 250 ವ್ಯಾಟ್ ಗಿಂತ ಕಡಿಮೆ ಶಕ್ತಿಯುಳ್ಳ 25 ಕಿಲೋಮೀಟರ್ ಪ್ರತಿ ಗಂಟೆ ಸ್ಪೀಡ್ ಹೊಂದಿರುವ ಯಾವುದೇ ವಾಹನ ಚಲಾಯಿಸಲು ಯಾವುದೇ ಡ್ರೈವಿಂಗ್ ಲೈಸೆನ್ಸ್ ಅಗತ್ಯವಿರೋದಿಲ್ಲ. 18 ವರ್ಷ ಮೇಲ್ಪಟ್ಟ, ಡ್ರೈವಿಂಗ್ ಲೈಸೆನ್ಸ್ ಇಲ್ಲದ ವ್ಯಕ್ತಿಗಳು ಕೂಡ ಇದನ್ನು ಓಡಿಸಬಹುದು. ವಾಹನದ ಸ್ಪೀಡ್ ಕಡಿಮೆ ಇರುವ ಕಾರಣ ಅತಿ ವೇಗವೇ ಅಪಘಾತಕ್ಕೆ ಕಾರಣವಾಗೋದಿಲ್ಲ. ಅಪ್ಪ ಅಮ್ಮ ಕೂಡ ನಿಶ್ಚಿಂತೆಯಿಂದ ಇರ್ಬಹುದು. ಸ್ಪೀಡ್ ಲಿಮಿಟ್ ಕಡಿಮೆ ಇರುವ ಎಲೆಕ್ಟ್ರಿಕ್ ಸ್ಕೂಟರ್ ಓಡಿಸುವಾಗ ಹೆಲ್ಮೆಟ್ ಅಗತ್ಯವಿಲ್ಲ ಎನ್ನಲಾಗುತ್ತದೆ. ಆದ್ರೆ ಚಾಲಕರ ಸುರಕ್ಷತೆ ಅಗತ್ಯ. ನಾವು ಸುರಕ್ಷಿತವಾಗಿ, ಮೈ ಎಲ್ಲ ಕಣ್ಣಾಗಿ ವಾಹನ ಓಡಿಸಿದ್ರೂ ಹಿಂದೆ, ಮುಂದೆ ಬರುವವರನ್ನು, ಹೊಂಡವಿರುವ ರಸ್ತೆಯನ್ನು ನಂಬೋದು ಕಷ್ಟ. ವಾಹನ ಚಾಲಕರ ಸುರಕ್ಷತೆ ಬಹಳ ಮುಖ್ಯ. ಸ್ಕೂಟರ್ ಸ್ಪೀಡ್ ಎಷ್ಟೇ ಇರಲಿ, ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಟ್ರಾಫಿಕ್ ಪೊಲೀಸ್ ವಿವೇಕಾನಂದ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಹೆಚ್ಚಾಗಿದೆ. ಪೆಟ್ರೋಲ್ ದರ ಏರಿಕೆ ಹಾಗೂ ಕಡಿಮೆ ಬೆಲೆಗೆ ಉತ್ತಮ ಸ್ಕೂಟರ್ ಲಭ್ಯವಿರುವ ಕಾರಣ ಜನರು ಎಲೆಕ್ಟ್ರಿಕ್ ಸ್ಕೂಟರ್ ಮೊರೆ ಹೋಗ್ತಿದ್ದಾರೆ. ಸೈಕಲ್ ಬದಲು ಮಕ್ಕಳ ಕೈನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಕಾಣ ಸಿಗ್ತಿದೆ.