ಓಲಾಗೆ ₹362 ಕೋಟಿ ನಷ್ಟ, ಕಂಪನಿ ಉಳಿಸಲು ಮಾಸ್ಟರ್ ಪ್ಲಾನ್ ಮುಂದಿಟ್ಟ ಬಾಸ್!

Published : Nov 15, 2026, 07:21 PM IST
Ola bike

ಸಾರಾಂಶ

ಓಲಾ ಎಲೆಕ್ಟ್ರಿಕ್ ಆದಾಯ ಕುಸಿದು ನಷ್ಟ ಅನುಭವಿಸುತ್ತಿದೆ ಎಂಬ ಸುದ್ದಿಗಳ ನಡುವೆ, ಕಂಪನಿಯು ಸ್ವಂತ ಶೋರೂಮ್‌ಗಳನ್ನು ಮುಚ್ಚಿ ಡೀಲರ್‌ಶಿಪ್ ಮಾದರಿಗೆ ಬದಲಾಗುತ್ತಿದೆ. ಭವಿಶ್ ಅಗರ್ವಾಲ್ ಅವರ ಈ ಹೊಸ ಮಾಸ್ಟರ್ ಪ್ಲಾನ್ ಕಂಪನಿಯನ್ನು ಮತ್ತೆ ಲಾಭದತ್ತ ಕೊಂಡೊಯ್ಯುವ ಗುರಿ ಹೊಂದಿದೆ.

ಬೆಂಗಳೂರು: ಓಲಾ ಎಲೆಕ್ಟ್ರಿಕ್ ಒಂದು ಕಾಲದಲ್ಲಿ ಭಾರತದ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಬಿರುಗಾಳಿಯನ್ನ ಎಬ್ಬಿಸಿತ್ತು. ಕಂಪನಿಯ ಸಂಸ್ಥಾಪಕ ಭವಿಶ್ ಅಗರ್ವಾಲ್ EndICEAge ಎಂಬ ದೊಡ್ಡ ಅಭಿಯಾನ ಶುರು ಮಾಡಿದ್ದರು. ದೇಶದ ರಸ್ತೆಗಳನ್ನೆಲ್ಲಾ ಹಸಿರುಮಯ ಮಾಡುವ ಕನಸು ಕಂಡಿದ್ದರು.

ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಇತ್ತೀಚೆಗಿನ Q2 FY27 ಫಲಿತಾಂಶಗಳು ಓಲಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿವೆ. ಕಂಪನಿಯ ಆದಾಯ ಶೇ. 39ರಷ್ಟು ಕುಸಿದಿದ್ದು (₹421 ಕೋಟಿಗೆ ಇಳಿದಿದೆ), ಬರೋಬ್ಬರಿ ₹362 ಕೋಟಿ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಅಕ್ಟೋಬರ್ ತಿಂಗಳ ಮಾರಾಟ ಪಟ್ಟಿಯಲ್ಲಿ ಓಲಾ 5ನೇ ಸ್ಥಾನಕ್ಕೆ ಕುಸಿದಿದೆ. ಜೊತೆಗ ಓಲಾ ತನ್ನ ಸ್ವಂತ ಶೋರೂಮ್‌ಗಳನ್ನು ಮುಚ್ಚುತ್ತಿದೆ ಎಂಬ ಸುದ್ದಿ ಹರಡಿದ್ದೇ ತಡ, ಓಲಾ ಕಥೆ ಮುಗಿದೇ ಹೋಯ್ತಾ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ..

ಆದರೆ ಅಸಲಿ ಕಥೆ ಬೇರೆಯೇ ಇದೆ! ಅಂಗಡಿ ಮುಚ್ಚುತ್ತಿರುವುದು ಸೋಲಿನಿಂದಲ್ಲ, ಗೆಲ್ಲುವ ಮಾಸ್ಟರ್ ಪ್ಲಾನ್‌ಗಾಗಿ. ಓಲಾ ಕಂಪನಿ ಕುಸಿದು ಬಿದ್ದಿರುವುದು ನಿಜ. ಆದರೆ ಅದು ಕೈಚೆಲ್ಲಿ ಕೂತಿಲ್ಲ. ಈ ಕಷ್ಟದ ಸಮಯದಿಂದ ಪುಟಿದೇಳಲು ಭವಿಶ್ ಅಗರ್ವಾಲ್ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಸ್ವಂತ ಅಂಗಡಿಗಳಿಗೆ ಗುಡ್‌ಬೈ, ಡೀಲರ್‌ಗಳಿಗೆ ಜೈ

ಇಲ್ಲಿಯವರೆಗೆ ಓಲಾ ತನ್ನದೇ ಸ್ವಂತ ಶೋರೂಮ್‌ಗಳ (D2C) ಮೂಲಕ ನೇರವಾಗಿ ಸ್ಕೂಟರ್ ಮಾರುತ್ತಿತ್ತು. ಇದರಿಂದ ಕಂಪನಿಗೆ ಬಾಡಿಗೆ ಮತ್ತು ನಿರ್ವಹಣೆ ಖರ್ಚು ವಿಪರೀತವಾಗಿತ್ತು. ಈಗ ಕಂಪನಿ ಆ ಹಳೆಯ ದಾರಿಯನ್ನು ಬಿಟ್ಟು, 2026ರ ಅಂತ್ಯದ ವೇಳೆಗೆ ತನ್ನ ಬಹುತೇಕ ಸ್ವಂತ ಅಂಗಡಿಗಳನ್ನು ಮುಚ್ಚಿ, ಸ್ಥಳೀಯ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ.

ನವೆಂಬರ್ 8ರ ಹೊತ್ತಿಗೆ ದೇಶಾದ್ಯಂತ 255 ಡೀಲರ್‌ಗಳ ಮೂಲಕ 319 ಮಳಿಗೆಗಳು ಕೆಲಸ ಶುರು ಮಾಡಿವೆ. ಮಾರ್ಚ್ 2027ರೊಳಗೆ ಇದನ್ನು 700 ಮಳಿಗೆಗಳಿಗೆ ವಿಸ್ತರಿಸುವ ಗುರಿ ಇದೆ. ಇದರಿಂದ ಕಂಪನಿಯ ಖರ್ಚು ಕಡಿಮೆಯಾಗಿದ್ದು, ಸಾಲದ ಹೊರೆಯೂ ₹3,132 ಕೋಟಿಯಿಂದ ₹1,819 ಕೋಟಿಗೆ ಇಳಿದಿದೆ ಎಂದು ತಿಳಿದುಬಂದಿದೆ.

ಭವಿಶ್ ಅಗರ್ವಾಲ್ ಪ್ಲಾನ್ ಏನು?

ಈ ಬಗ್ಗೆ ಪ್ರತಿಕ್ರಿಯಿಸಿರುವ ಭವಿಶ್ ಅಗರ್ವಾಲ್, ಜನರಿಗೆ ಓಲಾ ಸ್ಕೂಟರ್ ಬೇಡವಾಗಿದೆ ಅಂತಲ್ಲ. ನಾವು ಎಷ್ಟು ಸ್ಕೂಟರ್ ತಯಾರಿಸುತ್ತಿದ್ದೇವೋ ಅಷ್ಟೂ ಮಾರಾಟವಾಗುತ್ತಿದೆ! ಬೇಡಿಕೆಗೆ ತಕ್ಕಷ್ಟು ಉತ್ಪಾದನೆ ಮಾಡುವುದು ದೊಡ್ಡ ಸವಾಲಾಗಿದೆ. ಉತ್ಪಾದನೆಯನ್ನು ವೇಗಗೊಳಿಸಲಾಗಿದೆ. ಆಗಸ್ಟ್‌ನಲ್ಲಿ 9,235 ಇದ್ದ ಸ್ಕೂಟರ್ ಉತ್ಪಾದನೆ ಅಕ್ಟೋಬರ್‌ನಲ್ಲಿ 14,092ಕ್ಕೆ ಏರಿದೆ. ಡಿಸೆಂಬರ್ ವೇಳೆಗೆ ತಿಂಗಳಿಗೆ 25,000 ಸ್ಕೂಟರ್ ತಯಾರಿಸುವ ಗುರಿ ಹೊಂದಿದೆ ಎಂದಿದ್ದಾರೆ.

ಯಾವುದೇ ಒಂದು ದೊಡ್ಡ ಕ್ರಾಂತಿ ಮಾಡುವಾಗ ಕಷ್ಟಗಳು ಬರುವುದು ಸಹಜ. ಓಲಾ ಕಂಪನಿಯ ಕನಸು ಕೇವಲ ಸ್ಕೂಟರ್ ಮಾರುವುದಷ್ಟೇ ಅಲ್ಲ. ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು. ಬೇರೆ ದೇಶಗಳಿಂದ ಬ್ಯಾಟರಿ ತರಿಸಿಕೊಳ್ಳುವುದನ್ನು ನಿಲ್ಲಿಸಿ, ಭಾರತದಲ್ಲೇ ಬ್ಯಾಟರಿ ಸೆಲ್‌ಗಳನ್ನು ತಯಾರಿಸಬೇಕು ಎಂಬ ದೊಡ್ಡ ಕನಸಿನೊಂದಿಗೆ ಓಲಾ ಹೆಜ್ಜೆ ಇಟ್ಟಿದೆ.

ಇಂದು ಓಲಾ ₹362 ಕೋಟಿ ನಷ್ಟದಲ್ಲಿದೆ. ಸ್ಪರ್ಧೆ ಹೆಚ್ಚಾಗಿದೆ. ಟೀಕೆಗಳು ಕೇಳಿಬರುತ್ತಿವೆ. ತಪ್ಪುಗಳನ್ನು ತಿದ್ದಿಕೊಂಡು, ಖರ್ಚು ಕಡಿಮೆ ಮಾಡಿ, ಹೊಸ ತಂತ್ರದೊಂದಿಗೆ ಮತ್ತೆ ಮಾರುಕಟ್ಟೆ ಗೆಲ್ಲುತ್ತೇವೆ ಎಂಬ ಕಂಪನಿಯ ಈ ಛಲ ನಿಜಕ್ಕೂ ಸ್ಫೂರ್ತಿದಾಯಕ!

PREV
Read more Articles on
click me!

Recommended Stories

ಹೆತ್ತವರನ್ನ ಬೈಕ್ ಹಿಂದೆ ಕೂರಿಸಿಕೊಂಡು ಪ್ರಯಾಣಿಸಲು ಕಂಫರ್ಟೆಬಲ್ ಸೀಟು ಇರುವ 5 ಅತ್ಯುತ್ತಮ ಬೈಕ್‌ಗಳಿವು!
ಜಾಗತಿಕ ವೇದಿಕೆಯಲ್ಲಿ ಜಾವಾ ಯೆಜ್ಡಿ ಮಿಂಚು: ಎರಡು ಹೊಸ 350 ಸಿಸಿ ಬೈಕ್‌ಗಳ ಅನಾವರಣ, ಮಾರಾಟದಲ್ಲೂ ಭರ್ಜರಿ ಏರಿಕೆ!