ಓಲಾದಿಂದ ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಯಾಕ್ಟರಿ!

By Suvarna NewsFirst Published Feb 28, 2021, 3:21 PM IST
Highlights

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ, ಆಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಇದಕ್ಕಾಗಿ ಕಂಪನಿ ತಮಿಳುನಾಡಿನಲ್ಲಿ ಜಗತ್ತಿನ ಅತಿದೊಡ್ಡ ದ್ವಿಚಕ್ರವಾಹನ ಉತ್ಪದನಾ ಘಟಕವನ್ನು ನಿರ್ಮಿಸುತ್ತಿದೆ. 2000 ಸಾವಿರ ಕೋಟಿ ರೂ.ಗೂ ಅಧಿಕ  ಹೂಡಿಕೆ ಮಾಡುತ್ತಿರುವ ಕಂಪನಿ 10 ಸಾವಿರ ಉದ್ಯೋಗ ಸೃಷ್ಟಿಸಲಿದೆ.

ಆಪ್  ಆಧಾರಿತ ಸಾರಿಗೆ ಸೇವೆಯನ್ನು ಒದಗಿಸುವ ಓಲಾ ಭಾರತೀಯ ಸಾರಿಗೆ ವಲಯದಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವ ಗೊತ್ತಿರುವ ಸಂಗತಿ. ಅದೇ ಓಲಾ ಕಂಪನಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದು, ತಮಿಳುನಾಡಿನಲ್ಲಿ ಜಗತ್ತಿನ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಘಟಕವನ್ನು ಆರಂಭಿಸುತ್ತಿದೆ!

ಈ ಫ್ಯಾಕ್ಟರಿಯನ್ನು 500 ಎಕರೆಯಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ತಮಿಳುನಾಡು ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕಂಪನಿ ಒಟ್ಟು 2,400 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಮತ್ತು ಜನವರಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿದೆ. ಈ ಹಿನ್ನೆಯಲ್ಲಿ ಜಗತ್ತಿನ ಅತಿ ದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಘಟಕದ ಮೊದಲನೇ ಹಂತವು ಮುಂದಿನ ಕೆಲವೇ ತಿಂಗಳಲ್ಲಿ ಕಾರ್ಯಾಚರಣೆ ಮಾಡಲಿದೆ ಎಂಬ ಕಂಪನಿ ಹೇಳಿಕೆಯನ್ನು ಹಲವು ವೆಬ್‌ತಾಣಗಳು ವರದಿ ಮಾಡಿವೆ.

TVS ಸ್ಟಾರ್ ಸಿಟಿ ಪ್ಲಸ್ ಬೈಕ್ ಟೀಸರ್‌; ಗ್ರಾಹಕರಲ್ಲಿ ಹೆಚ್ಚಿದ ಕುತೂಹಲ

ದಾಖಲೆಯ 10 ಮಿಲಿಯನ್ ಮ್ಯಾನ್‌ ಅವರ್ಸ್‌ನಲ್ಲಿ ಘಟಕವನ್ನು ನಿರ್ಮಾಣ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದು ಓಲಾ ಕಂಪನಿ ಹೇಳಿಕೊಂಡಿದೆ. ಹಾಗೆಯೇ, ಘಟಕ ನಿರ್ಮಾಣದ ವೇಳೆ ಪರಿಸರ ಸಮತೋಲವನ್ನು ಕಾಯ್ದುಕೊಳ್ಳುವ ಬಗ್ಗೆ ಆಸಕ್ತಿ ವಹಿಸಿದೆ. ಪ್ಲಾಂಟ್ ನಿರ್ಮಾಣವಾಗಲಿರುವ ಜಾಗದಲ್ಲಿರುವ ಹಸಿರನ್ನು ಕಾಯ್ದುಕೊಂಡೇ ಘಟಕ ನಿರ್ಮಿಸಲಾಗುತ್ತಿದೆ ಎಂಬುದು ಕಂಪನಿಯ ಅಂಬೋಣ.

ಅತಿ ದೊಡ್ಡ ಘಟಕ ಎಂಬ ಅಭಿದಾನ ಹೊಂದಲಿರುವ ಈ ಘಟಕದ ಮೊದಲನೆ ಹಂತದ ಕಾರ್ಯಾಚರಣೆ ಶುರುವಾದ ಆರಂಭದಲ್ಲಿ ವರ್ಷಕ್ಕೆ 20 ಲಕ್ಷ ಯನಿಟ್ಸ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಲಿದೆ. ಈ ಘಟಕದಲ್ಲಿ ಓಲಾ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಉತ್ಪಾದಿಸಲಿದೆ. ಇಲ್ಲಿ ತಯಾರಾಗುವ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಭಾರತದಲ್ಲ ಮಾತ್ರ ಮಾರಾಟ ಮಾಡುವುದದಲ್ಲದೇ ಯುರೋಪ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕಾ, ಏಷ್ಯಾ ಪೆಸಿಫಿಕ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಾರುಕಟ್ಟೆಗಳಿಗೆ ಇಲ್ಲಿಂದಲೇ ರಫ್ತು ಮಾಡಲಿದೆ. ಹಾಗಾಗಿ, ಎಲೆಕ್ಟ್ರಿಕ್ ದ್ವಿಚಕ್ರವಾಹನ ಉತ್ಪಾದನೆಯಲ್ಲಿ ಈ ಘಟಕವು ಮಹತ್ವದ ಪಾತ್ರ ನಿರ್ವಹಿಸಲಿದೆ.

10,000 ಜನರಿಗೆ ಉದ್ಯೋಗ
ಜಗತ್ತಿನ ಬೃಹತ್ ದ್ವಿಚಕ್ರವಾಹನ ಉತ್ಪಾದನಾ ಘಟಕ ನಿರ್ಮಾಣ ಮಾಡುತ್ತಿರುವ ಓಲಾ ಅಂದಾಜು ಹತ್ತು ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಿದೆ. ಈ ಕೈಗಾರಿಕೆಯು 4.0 ಕೈಗಾರಿಕಾ ಗುಣಮಟ್ಟವನ್ನು ಕಾಪಾಡಿಕೊಳ್ಳಲಿದೆ. ಇಲ್ಲಿ ತಯಾರಾಗುವ ದ್ವಿಚಕ್ರವಾಹನಗಳಿಗೆ ಓಲಾದ್ದೇ ಎಐ ಎಂಜಿನ್ ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಹೊಸ ಅವತಾರದಲ್ಲಿ ಫೇಸ್‌ಲಿಫ್ಟ್ ಹೊಸ ಸ್ವಿಫ್ಟ್ ಕಾರು ಬಿಡುಗಡೆ

ನಿಮಗೆ ಗೊತ್ತಿಲ್ಲದಿರುವ ಸಂಗತಿ ಏನೆಂದರೆ, ಈ ಘಟಕದಲ್ಲಿ 5000ಕ್ಕೂ ಹೆಚ್ಚು ಆಟೋಮ್ಯಾಟೆಡ್ ರೊಬೋಟ್‌ಗಳು ಮತ್ತು ಆಟೋಮ್ಯಾಟೆಡ್ ಗೈಡೆಡ್ ವಾಹನಗಳು ಕಾರ್ಯ ನಿರ್ವಹಿಸಲಿವೆ. ಈ ರೀತಿಯ ಪೂರ್ತಿ ಪ್ರಕ್ರಿಯೆ ಆರಂಭವಾಗಲು ಈ ಘಟಕವು ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕು.

ಆಪ್‌ ಆಧರಿತ ಸಾರಿಗೆಯಲ್ಲಿ ಎಕ್ಸ್‌ಪರ್ಟ್ ಆಗಿರುವ ಒಲಾ ಹೇಗೆ ದ್ವಿಚಕ್ರವಾಹನಕ್ಕೆ ಮುಂದಾಯಿತು ಎಂಬ ಪ್ರಶ್ನೆ ಮೂಡಬಹುದು. ಓಲಾ ಕಂಪನಿ ಕಳೆದ ವರ್ಷವಷ್ಟೇ ಆಮಸ್ಟರ್‌ಡ್ಯಾಂ ಮೂಲದ ಎಟೆರ್ಗೋ ಸ್ಕೂಟರ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಎಟೆರ್ಗೊದಿಂದಲೇ ಅಭಿವೃದ್ಧಿಪಡಿಸಲಾದ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಓಲಾ ಉತ್ಪಾದನೆ ಮಾಡಲಿದೆ. ಓಲಾ ಉತ್ಪಾದಿಸಲಿರುವ ಎಲೆಕ್ಟ್ರಾನಿಕ್ ಸ್ಕೂಟರ್ ಚಮತ್ಕಾರಿ ವಿನ್ಯಾಸ, ರಿಮೋವೇಬಲ್ ಬ್ಯಾಟರಿ, ಉತ್ಯಮ ಪ್ರದರ್ಶನ ಮತ್ತು ವ್ಯಾಪ್ತಿ ಸೇರಿದಂತೆ ಇನ್ನಿತರ ವಿಶಿಷ್ಟ ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ಒಳಗೊಳ್ಳಲಿದೆ. ಆದರೆ, ಸ್ಕೂಟರ್ ಬಗ್ಗೆ ಇನ್ನೂ ಸಾಕಷ್ಟು ಇನ್ನಷ್ಟೇ ಗೊತ್ತಾಗಬೇಕಿದೆ.

ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!

ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಇಡೀ ಸಾರಿಗೆ ವಲಯವು ಸಾಂಪ್ರದಾಯಿಕ ಇಂಧನ ಆಧರಿತದಿಂದ ಎಲೆಕ್ಟ್ರಿಕ್‌ ಇಂಧನಕ್ಕೆ ಶಿಫ್ಟ್ ಆಗಲಿದೆ. ಈ ಹಿನ್ನೆಲೆಯಲ್ಲಿ ಬಹಳಷ್ಟು ಹೊಸ ಹೊಸ ಕಂಪನಿಗಳು ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗುತ್ತಿವೆ. ಜಗತ್ತಿನ ಬಹುದೊಡ್ಡ ಆಟೊಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ವಲಯದಲ್ಲಿ ವಿಫುಲ ಅವಕಾಶಗಳಿವೆ. ಓಲಾ ಕೂಡ ಇದೇ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದ್ದು, ಜಗತ್ತಿನ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಘಟಕವನ್ನು ತಮಿಳುನಾಡಿನಲ್ಲಿ ಆರಂಭಿಸುತ್ತಿದೆ ಎಂದು ಹೇಳಬಹುದು.

click me!