
ಬೆಂಗಳೂರು (ಆ.18): ಭಾರತದ ಸ್ವದೇಶಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಓಬೆನ್ ಎಲೆಕ್ಟ್ರಿಕ್, ಕರ್ನಾಟಕದಲ್ಲಿ ತನ್ನ ಜಾಲವನ್ನು ಬಲಪಡಿಸಲು ಮುಂದಾಗಿದ್ದು, ಈ ಆರ್ಥಿಕ ವರ್ಷದಲ್ಲಿ 10 ಹೊಸ ಶೋರೂಂಗಳನ್ನು ತೆರೆಯುವುದಾಗಿ ಘೋಷಿಸಿದೆ. ರಾಜ್ಯದ ದೈನಂದಿನ ಪ್ರಯಾಣಿಕರಿಂದ Rorr EZ Sigma ಎಲೆಕ್ಟ್ರಿಕ್ ಬೈಕ್‌ಗೆ ಹೆಚ್ಚುತ್ತಿರುವ ಬೇಡಿಕೆಯೇ ಈ ವಿಸ್ತರಣೆಗೆ ಮುಖ್ಯ ಕಾರಣವಾಗಿದೆ. ಸದ್ಯ ಬೆಂಗಳೂರಿನಲ್ಲಿ ನಾಲ್ಕು ಸೇರಿದಂತೆ ರಾಜ್ಯದಾದ್ಯಂತ ಆರು ಶೋರೂಂಗಳು ಕಾರ್ಯನಿರ್ವಹಿಸುತ್ತಿದ್ದು, ಈ ಹೊಸ ಸೇರ್ಪಡೆಗಳೊಂದಿಗೆ ಪ್ರಮುಖ ನಗರಗಳಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯು ಇನ್ನಷ್ಟು ಹೆಚ್ಚಲಿದೆ.
ಬೆಂಗಳೂರಿನಲ್ಲಿ HSR ಲೇಔಟ್, ರಾಜಾಜಿನಗರ, ಸಿಂಗಸಂದ್ರ ಮತ್ತು ಬನಶಂಕರಿಗಳಲ್ಲಿ ಓಬೆನ್ ಎಲೆಕ್ಟ್ರಿಕ್ ಶೋರೂಂಗಳು ಈಗಾಗಲೇ ಇವೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಇವಿ ಬಳಕೆಯನ್ನು ಗಮನದಲ್ಲಿಟ್ಟುಕೊಂಡು, ಈ ಬಲವಾದ ಉಪಸ್ಥಿತಿಯು ಇಡೀ ರಾಜ್ಯಕ್ಕೆ ಪ್ರೀಮಿಯಂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ತಲುಪಿಸುವ ಬ್ರ್ಯಾಂಡ್‌ನ ಮಹತ್ವಾಕಾಂಕ್ಷೆಯ ಯೋಜನೆಗೆ ಆಧಾರವಾಗಿದೆ. ಬೆಂಗಳೂರು ಹೊರತುಪಡಿಸಿ, ಹುಬ್ಬಳ್ಳಿಯಲ್ಲೂ ಎರಡು ಶೋರೂಂಗಳನ್ನು ತೆರೆಯುವ ಮೂಲಕ ಕಂಪನಿಯು ತನ್ನ ಹೆಜ್ಜೆಗುರುತನ್ನು ವಿಸ್ತರಿಸಿದೆ.
ಇತ್ತೀಚೆಗೆ ಬಿಡುಗಡೆಯಾದ Rorr EZ Sigma ಬೈಕ್‌ನ ಕುರಿತು ಬೆಂಗಳೂರಿನ HSR ಲೇಔಟ್‌ನ ಅನುಭವ ಕೇಂದ್ರದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಓಬೆನ್ ಎಲೆಕ್ಟ್ರಿಕ್‌ನ ಸಿಇಒ ಮತ್ತು ಸಂಸ್ಥಾಪಕಿ ಮಧುಮಿತಾ ಅಗರ್ವಾಲ್, "ಕರ್ನಾಟಕ ನಮಗೆ ಕೇವಲ ಒಂದು ಮಾರುಕಟ್ಟೆಯಲ್ಲ, ಇದು ನಮ್ಮ ಮನೆ. ನಮ್ಮ ಕಂಪನಿಯ ಪಯಣ ಇಲ್ಲಿಂದಲೇ ಆರಂಭವಾಗಿದೆ. ಇಲ್ಲಿನ ಗ್ರಾಹಕರಿಂದ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆ ನಮ್ಮ ವಿಸ್ತರಣೆ ಯೋಜನೆಗೆ ಮತ್ತಷ್ಟು ಸ್ಫೂರ್ತಿ ತುಂಬಿದೆ. ಶೀಘ್ರದಲ್ಲೇ ತೆರೆಯಲಿರುವ ಹತ್ತು ಹೊಸ ಶೋರೂಂಗಳಿಂದಾಗಿ, ಕರ್ನಾಟಕದ ಜನರಿಗೆ ನಮ್ಮ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಬೈಕ್‌ಗಳನ್ನು ಇನ್ನಷ್ಟು ಸುಲಭವಾಗಿ ಒದಗಿಸುವ ಗುರಿ ಹೊಂದಿದ್ದೇವೆ" ಎಂದು ಹೇಳಿದರು.
₹1.27 ಲಕ್ಷ ಪರಿಚಯಾತ್ಮಕ ಬೆಲೆಯಲ್ಲಿ ದೊರೆಯಲಿರುವ Rorr EZ Sigma ಬೈಕ್, ಸುಧಾರಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಗ್ರೇಡ್‌ಗಳನ್ನು ಹೊಂದಿದೆ. ಇದು 3.4 kWh ಮತ್ತು 4.4 kWh ಎಂಬ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದ್ದು, ಒಂದೇ ಚಾರ್ಜ್‌ನಲ್ಲಿ 175 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ ಇಕೋ, ಸಿಟಿ ಮತ್ತು ಹ್ಯಾವೋಕ್ ಎಂಬ ಮೂರು ರೈಡ್ ಮೋಡ್‌ಗಳಿದ್ದು, ಗರಿಷ್ಠ ವೇಗ ಗಂಟೆಗೆ 95 ಕಿ.ಮೀ.ಇದೆ. ಓಬೆನ್‌ನ ಪೇಟೆಂಟ್ ಪಡೆದ LFP ಬ್ಯಾಟರಿ ತಂತ್ರಜ್ಞಾನ ಭಾರತದ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾಗಿದ್ದು, ಇದು ಹೆಚ್ಚಿನ ಬಾಳಿಕೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಹೊಸ ವೈಶಿಷ್ಟ್ಯಗಳಲ್ಲಿ, ನ್ಯಾವಿಗೇಷನ್, ಟ್ರಿಪ್ ಮೀಟರ್, ಹಾಗೂ ಕರೆ ಮತ್ತು ಸಂದೇಶಗಳ ರಿಯಲ್ ಟೈಮ್ ಅಲರ್ಟ್‌ಗಳನ್ನು ತೋರಿಸುವ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್‌ಪ್ಲೇಯಿದೆ. ಇದರಲ್ಲಿ ರಿವರ್ಸ್ ಮೋಡ್ ಮತ್ತು ದಕ್ಷತಾಶಾಸ್ತ್ರೀಯವಾಗಿ ಮರು ವಿನ್ಯಾಸಗೊಳಿಸಲಾದ ಆಸನವೂ ಇದೆ. ಇದರ ಬುಕಿಂಗ್ ₹2,999 ರಿಂದ ಆರಂಭವಾಗಿದೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಬದ್ಧವಾಗಿರುವ ಓಬೆನ್ ಎಲೆಕ್ಟ್ರಿಕ್, ಇತ್ತೀಚೆಗೆ 24/7 ಗ್ರಾಹಕ ಬೆಂಬಲ ಮತ್ತು ವೇಗದ ಸೇವಾ ಪರಿಹಾರವನ್ನು ಪ್ರಾರಂಭಿಸಿದೆ. ಪ್ರತಿ ಶೋರೂಂನಲ್ಲಿ ಓಬೆನ್ ಕೇರ್ ಸೇವಾ ಕೇಂದ್ರವಿದ್ದು, ಇದು 72 ಗಂಟೆಗಳಲ್ಲಿ 90% ಸೇವಾ ಪ್ರಕರಣಗಳನ್ನು ಬಗೆಹರಿಸುವ ಗುರಿ ಹೊಂದಿದೆ. ಬೆಂಗಳೂರಿನಲ್ಲಿ ಕಂಪನಿಯು ತನ್ನದೇ ಆದ 3.5 ಎಕರೆ ವಿಸ್ತೀರ್ಣದ ಉತ್ಪಾದನಾ ಘಟಕವನ್ನು ಹೊಂದಿದ್ದು, ವಾರ್ಷಿಕವಾಗಿ 1 ಲಕ್ಷ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಕರ್ನಾಟಕದ ಹೊರತಾಗಿ, ಓಬೆನ್ ಎಲೆಕ್ಟ್ರಿಕ್ ದೆಹಲಿ, ಪುಣೆ, ಜೈಪುರ, ಅಮೃತಸರ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ದೇಶಾದ್ಯಂತ 45ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿದೆ. ಈ ಆರ್ಥಿಕ ವರ್ಷದ ಕೊನೆಯ ವೇಳೆಗೆ ಒಟ್ಟು 150 ಶೋರೂಂಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.