
ಕೃಷ್ಣಗಿರಿ (ಆ.16): ಕಳೆದ ಕೆಲವೊಂದಷ್ಟು ವರ್ಷಗಳಿಂದ ಸ್ವಾತಂತ್ರ್ಯೋತ್ಸವ ದಿನದಂದುಜನರ ಮುಂದೆ ತನ್ನ ಕನಸನ್ನು ಬಿಚ್ಚಿಡುವ 'ಸಂಕಲ್ಪ್' ಕಾರ್ಯಕ್ರಮವನ್ನು ಓಲಾ ಕಂಪನಿಯ ಸಂಸ್ಥಾಪಕ ಭವೀಶ್ ಅಗರ್ವಾಲ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಕಾರ್ಯಕ್ರಮವನ್ನು ಪೋಚಂಪಲ್ಲಿಯಲ್ಲಿರುವ 107 ಎಕರೆಯಲ್ಲಿ ವಿಸ್ತಾರವಾಗಿರುವ ಓಲಾ ಗಿಗಾಫ್ಯಾಕ್ಟರಿಯ ಆವರಣದಲ್ಲಿ ನಡೆಸಲಾಯಿತು. ಓಲಾ ಎಲೆಕ್ಟ್ರಿಕ್ ತನ್ನ ವಾರ್ಷಿಕ 'ಸಂಕಲ್ಪ 2025 ಈವೆಂಟ್' ನಲ್ಲಿ ಭಾರತದ ಇವಿ ಉದ್ಯಮವನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಸಾಲು ಸಾಲು ಘೋಷಣೆಗಳನ್ನು ಮಾಡಿದೆ.
ಕಂಪನಿಯ ಭಾರತದ ಮೊದಲ 4680 'ಭಾರತ್ ಸೆಲ್' ಬ್ಯಾಟರಿ, ರೇರ್ ಅರ್ತ್ ಇಲ್ಲದ ಮೋಟಾರ್ ತಂತ್ರಜ್ಞಾನ, ಹೊಸದಾಗಿ ಅಪ್‌ಡೇಟ್ ಮಾಡಲಾದ ಸ್ಕೂಟರ್‌ಗಳು, ಭವಿಷ್ಯದ ಜನರ MoveOS 6 ಅನಾವರಣ ಮಾತ್ರವಲ್ಲದೆ ಈಗಾಗಲೇ ಇರುವ ಓಲಾದ ಕೆಲವು ಮಾದರಿಗಳಲ್ಲಿ ಭಾರೀ ಪ್ರಮಾಣದ ಬೆಲೆ ಕಡಿತವನ್ನು ಘೋಷಣೆ ಮಾಡಲಾಗಿದೆ. ಇಡೀ ಸಂಕಲ್ಪ ಕಾರ್ಯಕ್ರಮದ ಥೀಮ್, ಇಂಡಿಯಾ ಇನ್ಸೈಡ್, ಟೆಕ್ನಾಲಜಿ ಇನ್-ಹೌಸ್ ಎನ್ನುವುದಾಗಿತ್ತು.
ಕಂಪನಿಯ ಪ್ರಕಾರ, ಓಲಾದ ಹೊಸ 4680 ಫಾರ್ಮ್-ಫ್ಯಾಕ್ಟರ್ "ಭಾರತ್ ಸೆಲ್" ಬ್ಯಾಟರಿಯು ಸರಿಸುಮಾರು 10% ಹೆಚ್ಚಿನ ಶಕ್ತಿಯನ್ನು ಸಂಗ್ರಹಿಸಬಲ್ಲದು ಮತ್ತು ಸುಮಾರು 15 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಇದರರ್ಥ ಒಂದೇ ಪ್ಯಾಕೇಜ್‌ನಲ್ಲಿ ಹೆಚ್ಚಿನ ಶ್ರೇಣಿ, ಉತ್ತಮ ಕಾರ್ಯಕ್ಷಮತೆ ಮತ್ತು ದೀರ್ಘ ಬಾಳಿಕೆ ಸಿಗಲಿದೆ. ಇನ್ನೂ ಒಂದು ವಿಚಾರವೆಂದರೆ, ಓಲಾ ಈ ಬ್ಯಾಟರಿಗಳನ್ನು ತನ್ನ ಸ್ಕೂಟರ್‌ಗಳಿಗೆ ಮಾತ್ರವೇ ಸೀಮಿತ ಮಾಡಿಲ್ಲ. ಸೋಲಾರ್ ಸ್ಟೋರೇಜ್, ಡ್ರೋನ್ ಹಾಗೂ ಇತರ ಹಲವಾರು ಅಪ್ಲಿಕೇಶನ್‌ಗಳಿಗೆ ಇದನ್ನು ಬಳಸಬಹುದಾಗಿದೆ. ಓಲಾ ಈಗಾಗಲೇ ಈ ಬ್ಯಾಟರಿಗಳನ್ನು ತನ್ನ S1 Pro+ ಮತ್ತು ರೋಡ್‌ಸ್ಟರ್ X+ ನಂತಹ ಮಾದರಿಗಳನ್ನು ಒಳಗೊಂಡಂತೆ ತನ್ನ ಸ್ಕೂಟರ್‌ಗಳಲ್ಲಿ ಸಂಯೋಜಿಸಲು ಪ್ರಾರಂಭಿಸಿದೆ.
ಜಾಗತಿಕ ಪೂರೈಕೆ ಸರಪಳಿ ಒತ್ತಡಗಳು ಮತ್ತು ರೇರ್ ಅರ್ತ್ ಮ್ಯಾಗ್ನೆಟ್‌ನಲ್ಲಿ ಚೀನಾದ ಪ್ರಾಬಲ್ಯದ ನಡುವೆ, ಓಲಾ ಸಂಪೂರ್ಣವಾಗಿ ಫೆರೈಟ್ ಮ್ಯಾಗ್ನೆಟ್ ಆಧರಿಸಿದ ಮೋಟಾರ್ ಅನ್ನು ಪರಿಚಯಿಸಿತು, ಇದು ಅಪರೂಪದ ಖನಿಜವಲ್ಲ. ವಿಶ್ವದೆಲ್ಲೆಡೆ ವ್ಯಾಪಕವಾಗಿ ಬಳಕೆಯ್ಲಿರುವ ಖನಿಜವಾಗಿದೆ. ಇದು ವೆಚ್ಚ ಉಳಿತಾಯ ಮತ್ತು ಪೂರೈಕೆ ವಿಶ್ವಾಸಾರ್ಹತೆಗೆ ಕಾರಣವಾಗುತ್ತದೆ. ಕಂಪನಿಯು ತನ್ನ ಮುಂದಿನ ಪೀಳಿಗೆಯ ಮೋಟಾರ್ ತಂತ್ರಜ್ಞಾನಕ್ಕೆ ಯಾವುದೇ ಅಪರೂಪದ ಭೂಮಿಯ ವಸ್ತುಗಳ ಅಗತ್ಯವಿಲ್ಲ ಎಂದು ಹೇಳಿಕೊಂಡಿದೆ ಮತ್ತು ರೋಡ್‌ಸ್ಟರ್ ಎಕ್ಸ್ ಬೈಕ್ ಮೋಟಾರ್‌ನ ಕಾರ್ಯಕ್ಷಮತೆಯನ್ನೂ ಪ್ರದರ್ಶನ ಮಾಡಿದೆ.
S1 Pro+: 5.2kWh ಭಾರತ್ ಸೆಲ್‌ನೊಂದಿಗೆ ಬರುವ ಈ ಸ್ಕೂಟರ್ ಗಂಟೆಗೆ 141 ಕಿಮೀ ಗರಿಷ್ಠ ವೇಗ ಮತ್ತು 320 ಕಿಮೀ IDC ವ್ಯಾಪ್ತಿಯನ್ನು ಹೊಂದಿದೆ. ಬೆಲೆಯನ್ನು ₹1,99,999 ರಿಂದ ₹1,69,999 ಕ್ಕೆ ಇಳಿಸಲಾಗಿದೆ, ಸೆಪ್ಟೆಂಬರ್ 22ರ ನವರಾತ್ರಿಯ ಸುಮಾರಿಗೆ ಬುಕಿಂಗ್‌ಗಳ ಮೇಲೆ ಕೇಂದ್ರೀಕರಿಸಿ ವಿತರಣೆಯನ್ನು ನಿರೀಕ್ಷಿಸಲಾಗಿದೆ.
ರೋಡ್‌ಸ್ಟರ್ X+: 9.1kWh ಪ್ಯಾಕ್, 501 ಕಿಮೀ IDC ರೇಂಜ್, 125 ಕಿಮೀ. ಗಂಟೆಯ ಗರಿಷ್ಠ ವೇಗ ಮತ್ತು ಕೇವಲ 2.7 ಸೆಕೆಂಡುಗಳಲ್ಲಿ 0-40 ಕಿಮೀ/ಗಂಟೆಯ ಸ್ಪೀಡ್ ಎಕ್ಸಲರೇಷನ್ ಒಳಗೊಂಡಿದೆ - ಹೊಸ "ಟ್ವಿಸ್ಟ್-ಅಂಡ್-ಗೋ" ಅನುಭವವನ್ನು ನೀಡುತ್ತದೆ. ಬೆಲೆ ₹2,24,999 ರಿಂದ ₹1,89,999 ಕ್ಕೆ ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ.
S1 ಪ್ರೊ ಸ್ಪೋರ್ಟ್: ಹೆಚ್ಚಿನ ಕಾರ್ಯಕ್ಷಮತೆಯ ಸವಾರರಿಗಾಗಿ ವಿನ್ಯಾಸಗೊಳಿಸಲಾದ ಈ ಸ್ಪೋರ್ಟಿ ಸ್ಕೂಟರ್ ಗಂಟೆಗೆ 152 ಕಿಮೀ ಗರಿಷ್ಠ ವೇಗವನ್ನು ಹೊಂದಿದೆ. ಪರಿಚಯಾತ್ಮಕ ಬೆಲೆ ₹1,49,999 ಆಗಿದ್ದು, ಜನವರಿ 2026 ಕ್ಕೆ ವಿತರಣೆಗಳನ್ನು ನಿಗದಿಪಡಿಸಲಾಗಿದೆ, ಇದು ಸ್ಪೋರ್ಟಿ ಸ್ಕೂಟರ್ ವಿಭಾಗದಲ್ಲಿ ಚಟುವಟಿಕೆಯನ್ನು ಸಂಕೇತಿಸುತ್ತದೆ.
ಓಲಾ ತನ್ನ ಎಲ್ಲಾ ಸ್ಕೂಟರ್‌ಗಳಿಗೆ ಮೂವ್‌ಓಎಸ್ 6 ಅನ್ನು ಪರಿಚಯ ಮಾಡುವುದಾಗಿ ತಿಳಿಸಿದೆ. ಬರೀ ಬರೀ ಸಾಫ್ಟ್‌ವೇರ್ ಅಪ್‌ಡೇಟ್‌ಅನ್ನು ರೈಡಿಂಗ್‌ನ ಅನುಭವವನ್ನೇ ಅಪ್‌ಡೇಟ್ ಮಾಡಲಿದೆ ಎಂದಿದೆ. ಬಿಲ್ಟ್ ಇನ್ ವಾಯ್ಸ್ ಅಸಿಸ್ಟೆಂಟ್, ಕ್ಯಾಮೆರಾ ಸಪೋರ್ಟ್, ಕಸ್ಟಮೈಸ್ ಮಾಡಬಹುದಾದ ಮೋಟಾರ್ ಸೌಂಡ್, ರೈಡ್‌ನ ಬಗ್ಗೆ ವಿವರ ನೀಡುವ ಮಾಹಿತಿಗಳು, ಸ್ಪೀಡ್ ಬೂಸ್ಟ್ ನೀಡುವ ವೈಶಿಷ್ಠಗಳು ಖಂಡಿತವಾಗಿ ರೈಡಿಂಗ್‌ನ ಅನುಭವವನ್ನು ಬದಲಾಯಿಸಲಿದೆ.
ಅದರೊಂದಿಗೆ ಕಂಪನಿಯು ಕಡಿಮೆ ತೂಕ, ಹೆಚ್ಚಿನ ದಕ್ಷತೆ ಮತ್ತು ಹೆಚ್ಚಿನ ಶಕ್ತಿಯೊಂದಿಗೆ ವಿನ್ಯಾಸಗೊಳಿಸಲಾದ ತನ್ನ ಹೊಸ Gen-4 ಫ್ಲಾಟ್‌ಫಾರ್ಮ್‌ಅನ್ನು ಸಹ ಪ್ರದರ್ಶಿಸಿತು. ಆದರೆ, ಜನರೇಷನ್-4ನಲ್ಲಿ ಕೇವಲ ಸ್ಕೂಟರ್‌ಗಳು ಮಾತ್ರವೇ ಇರೋದಿಲ್ಲ, ಇ-ರಿಕ್ಷಾ, ಕಾರ್‌ಗಳು, ಡ್ರೋನ್‌ಗಳು ಮತ್ತು ಕೈಗಾರಿಕಾ ರೋಬೋಟ್ಸ್‌ಗಳು ಕೂಡ ಇರಲಿದೆ.
ಬ್ಯಾಟರಿ ಮಾತ್ರವಲ್ಲ, ಮೋಟಾರ್‌ನಿಂದ ಸಾಫ್ಟ್‌ವೇರ್‌ವರೆಗೂ ಎಲ್ಲವನ್ನೂ ಓಲಾದ ಇನ್‌ಹೌಸ್ ಟೆಕ್ನಾಲಜಿಯಿಂದಲೇ ಬೆಂಬಲಿತವಾಗಿದೆ. ಇದು ಸ್ಕೂಟರ್‌ಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಭವೀಶ್ ಅಗರ್ವಾಲ್ ಹೇಳಿದ್ದಾರೆ. ಪೂರೈಕೆಯ ಅಪಾಯ ಬಹಳ ಕಡಿಮೆ ಇದೆ. ಅದಲ್ಲದೇ ಸಂಶೋಧನೆಯ ನಿಯಂತ್ರಣ ಕೂಡ ಕಂಪನಿ ಬಳಿಯಲ್ಲೇ ಇರುತ್ತದೆ. 107 ಎಕರೆ ವಿಸ್ತೀರ್ಣದ ಗಿಗಾಫ್ಯಾಕ್ಟರಿ ಕ್ಯಾಂಪಸ್ 'ಮೇಡ್-ಇನ್-ಇಂಡಿಯಾ' ದೃಷ್ಟಿಕೋನದ ಸಂಕೇತವಾಗಿ ನಿಂತಿದೆ, ಸೆಲ್‌ಗಳಿಂದ ಹಿಡಿದು ಸ್ಕೂಟರ್‌ಗಳವರೆಗೆ ಎಲ್ಲವನ್ನೂ ಒಂದೇ ಪರಿಸರ ವ್ಯವಸ್ಥೆಯೊಳಗೆ ಸಂಯೋಜಿಸಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ, ಓಲಾ ಕಂಪನಿಯು EV ಸ್ಕೂಟರ್ ಮಾರುಕಟ್ಟೆಯಲ್ಲಿ TVS ಮತ್ತು ಬಜಾಜ್ ಕಂಪನಿಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಇತ್ತೀಚಿನ ತ್ರೈಮಾಸಿಕದಲ್ಲಿ ಗಮನಾರ್ಹ ನಷ್ಟಗಳ ಹೊರತಾಗಿಯೂ, ಕಂಪನಿಯು ತನ್ನ ಸ್ಥಾನವನ್ನು ಮರಳಿ ಪಡೆಯಲು ವೆಚ್ಚ ಕಡಿತ ಮತ್ತು ತಂತ್ರಜ್ಞಾನ ಅಪ್‌ಡೇಟ್‌ಗಳತ್ತ ಗಮನಹರಿಸುತ್ತಿದೆ. ಬೆಲೆ ಕಡಿತ, 4680 ಭಾರತ್ ಸೆಲ್ ಮತ್ತು ರೇರ್ ಅರ್ಥ್ ಫ್ರೀ ಮೋಟಾರ್‌ಗಳು ಈ ಕಾರ್ಯತಂತ್ರದ ಪ್ರಗತಿಯ ಭಾಗವಾಗಿದೆ.
ಓಲಾ ಎಸ್1 ಪ್ರೋ ಸ್ಪೋರ್ಟ್ಸ್ 2026ರ ಆರಂಭದಲ್ಲಿ ರಸ್ತೆಗೆ ಬರಲು ಸಜ್ಜಾಗಿದೆ. ಅದರೊಂದಿಗೆ ತನ್ನ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಮೋಟಾರ್‌ಸೈಕರ್ 'ಡೈಮಂಡ್‌ಹೆಡ್'ಅನ್ನು ಪರಿಚಯ ಮಾಡಿದೆ. 2027ರ ಮಧ್ಯದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದ್ದು, ಸದ್ಯಕ್ಕೆ ಇದರ ಟಾರ್ಗೆಟ್ ಪ್ರೈಸ್‌ಅನ್ನು 5 ಲಕ್ಷ ಎಂದು ಇರಿಸಲಾಗಿದೆ.
'ಸಂಕಲ್ಪ್ 2025 ಈವೆಂಟ್' ನಲ್ಲಿ, ಓಲಾ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದ್ದಲ್ಲದೆ, ಹೊಸ ದಿಕ್ಕನ್ನು ಸಹ ನಿಗದಿಪಡಿಸಿತು. ಕಂಪನಿಯು ಈ ನಾವೀನ್ಯತೆಗಳನ್ನು ವಿಶ್ವಾಸಾರ್ಹ ಗುಣಮಟ್ಟದೊಂದಿಗೆ ಯಶಸ್ವಿಯಾಗಿ ಬಿಡುಗಡೆ ಮಾಡಿದರೆ, ಅದು ಭಾರತದ EV ಸ್ಕೂಟರ್ ಮಾರುಕಟ್ಟೆಯಲ್ಲಿ ಬಲವಾದ ಸ್ಥಾನವನ್ನು ಮರಳಿ ಪಡೆಯಬಹುದು. ಈಗ ಆಕರ್ಷಕ ಬೆಲೆಗಳು, ಅತ್ಯುತ್ತಮ ತಂತ್ರಜ್ಞಾನದೊಂದಿಗೆ ತನ್ನ ಪ್ರಾಡಕ್ಟ್‌ಗಳನ್ನು ಅಪ್‌ಡೇಟ್ ಮಾಡಿದೆ.