
ದೀಪಾವಳಿ ಹಾಗೂ ಹಬ್ಬದ ಸೀಸನ್ ಶುರುವಾಗುತ್ತಲೇ ಬೈಕ್ ಪ್ರಿಯರಿಗೆ 'ಜಾವಾ ಯೆಜ್ಡಿ ಮೋಟಾರ್ಸೈಕಲ್ಸ್' ಭರ್ಜರಿ ಸಿಹಿಸುದ್ದಿ ನೀಡಿದೆ. ಗ್ರಾಹಕರು ತಮ್ಮ ನೆಚ್ಚಿನ ಬೈಕ್ ಅನ್ನು ಸುಲಭವಾಗಿ ಖರೀದಿಸಲು ನೆರವಾಗುವಂತೆ ಅತ್ಯಾಕರ್ಷಕ ಸಾಲದ ಯೋಜನೆಗಳನ್ನು ಕಂಪನಿ ಪ್ರಕಟಿಸಿದೆ.
ಹೊಸ ಬೈಕ್ ಖರೀದಿಸುವ ಕನಸು ಕಂಡಿದ್ದರೂ, ಹಣಕಾಸಿನ ತೊಂದರೆಯಿಂದ ಹಿಂದೇಟು ಹಾಕುವ ಯುವಕರಿಗೆ ಈ ಆಫರ್ಗಳು ಬಹುದೊಡ್ಡ ರಿಲೀಫ್ ನೀಡಿವೆ.
ಮುಂಗಡವಾಗಿ ಯಾವುದೇ ಹಣ ಕಟ್ಟುವ ಅಗತ್ಯವಿಲ್ಲದೆ ಬೈಕ್ ಖರೀದಿಸಬಹುದು. ಇದು ಈ ಆಫರ್ನ ಅತ್ಯಂತ ಆಕರ್ಷಕ ಅಂಶವಾಗಿದ್ದು, ಆಯ್ದ ಮಾಡೆಲ್ಗಳ ಮೇಲೆ ವಾಹನದ ಸಂಪೂರ್ಣ ಮೊತ್ತಕ್ಕೆ ಸಾಲ ಸೌಲಭ್ಯ ಸಿಗಲಿದೆ.
ಕೇವಲ ಶೇ. 5.99ರಿಂದ ಆರಂಭವಾಗುವ ಆಕರ್ಷಕ ಬಡ್ಡಿ ದರದಲ್ಲಿ ಸಾಲ ಸಿಗಲಿದ್ದು, ಸಾಲ ಮರುಪಾವತಿಗೆ ಬರೋಬ್ಬರಿ 72 ತಿಂಗಳವರೆಗೆ (6 ವರ್ಷ) ದೀರ್ಘಾವಧಿಯ ಅವಕಾಶವಿದೆ. ಇದರಿಂದ ಮಾಸಿಕ ಕಂತು (ಇಎಂಐ) ಹೊರೆ ಕಡಿಮೆಯಾಗಲಿದೆ.
ಇದಲ್ಲದೆ, ಹಬ್ಬದ ಖರ್ಚಿನ ನಡುವೆ 'ಈಗ ಖರೀದಿಸಿ, ಆಮೇಲೆ ಕಂತು ಪಾವತಿಸಿ' ಎಂಬ ವಿಶೇಷ ಸೌಲಭ್ಯವನ್ನೂ ಅರ್ಹ ಗ್ರಾಹಕರಿಗೆ ನೀಡಲಾಗುತ್ತಿದೆ.
ಈ ಫೈನಾನ್ಸ್ ಯೋಜನೆಯಡಿ ಸಾಲಕ್ಕೆ 'ತ್ವರಿತ ಅನುಮೋದನೆ' ಸಿಗಲಿದ್ದು, ಕಾಗದಪತ್ರಗಳ ಪ್ರಕ್ರಿಯೆ ಸುಗಮವಾಗಿರಲಿದೆ. ಜೊತೆಗೆ ಆಯ್ದ ಸ್ಕೀಮ್ಗಳ ಅಡಿಯಲ್ಲಿ ಅರ್ಹ ಗ್ರಾಹಕರಿಗೆ 'ಹೈಪೋಥೆಕೇಶನ್ ಇಲ್ಲದ' ಸೌಲಭ್ಯವೂ ಸಿಗಲಿದೆ. ಇದರ ಜೊತೆಗೆ, 'ಮಹೀಂದ್ರ ಗ್ರೂಪ್' ಉದ್ಯೋಗಿಗಳಿಗೆ ಬೈಕ್ ಖರೀದಿಯ ಮೇಲೆ ಎಕ್ಸ್ಕ್ಲೂಸಿವ್ ಆಫರ್ಗಳನ್ನು ಸಹ ನೀಡಲಾಗುತ್ತಿದೆ.
ಈ ವಿಶೇಷ ಆಫರ್ಗಳ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಕ್ಲಾಸಿಕ್ ಲೆಜೆಂಡ್ಸ್ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, "ಗ್ರಾಹಕರಿಗೆ ಜಾವಾ, ಯೆಜ್ಡಿ ಅಥವಾ ಬಿಎಸ್ಎ ಬೈಕ್ ಹೊಂದುವುದು ಕೇವಲ ವಾಹನ ಖರೀದಿಯಲ್ಲ; ಬದಲಾಗಿ ಅದೊಂದು ವಿಶಿಷ್ಟ ಬೈಕಿಂಗ್ ಸಂಸ್ಕೃತಿಯ ಭಾಗವಾಗುವುದಾಗಿದೆ. ಈ ಹಬ್ಬದ ಋತುವಿನಲ್ಲಿ ಗ್ರಾಹಕರ ಆ ಕನಸನ್ನು ಸುಲಭವಾಗಿ ನನಸು ಮಾಡಲು ನಾವು ಈ ಆಕರ್ಷಕ ಫೈನಾನ್ಸ್ ಯೋಜನೆಗಳನ್ನು ತಂದಿದ್ದೇವೆ. ಇದು ಬೈಕ್ ಪ್ರಿಯರಿಗೆ ಹಣಕಾಸಿನ ಹೊರೆ ಇಳಿಸಿ, ಬೈಕಿಂಗ್ ಖುಷಿಯನ್ನು ಹೆಚ್ಚಿಸಲಿದೆ,” ಎಂದು ವಿವರಿಸಿದ್ದಾರೆ.
ಐಕಾನಿಕ್ ಬ್ರ್ಯಾಂಡ್ಗಳಾದ ಜಾವಾ, ಯೆಜ್ಡಿ ಮತ್ತು ಬಿಎಸ್ಎ ಬೈಕ್ಗಳ ಮೇಲೆ ಕಣ್ಣಿಟ್ಟಿರುವ ಯುವಕರಿಗೆ ಈ ಹಬ್ಬದ ಋತುವಿನಲ್ಲಿ ಸುಲಭ ಕಂತುಗಳಲ್ಲಿ ಬೈಕ್ ಖರೀದಿಸಲು ಇದೊಂದು ಸುವರ್ಣಾವಕಾಶವಾಗಿದೆ.