
ಪ್ರತಿದಿನ ಆಫೀಸ್, ಮಾರ್ಕೆಟ್ ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಳಸುವವರ ಸಂಖ್ಯೆ ಹೆಚ್ಚಾಗ್ತಿದೆ. ಇದಕ್ಕೆ ತಕ್ಕಂತೆ ಮಾರ್ಕೆಟ್ ಗೆ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಗ್ಗೆ ಇಡ್ತಿವೆ. ಈಗ ಹೋಂಡಾ ಮೋಟಾರ್ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ತನ್ನ ಮೂರನೇ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಹೋಂಡಾ QC3 (Honda QC3) ಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಫ್ಯಾಮಿಲಿ ಬಳಕೆ ಮತ್ತು ನಗರ ಪ್ರದೇಶಗಳಲ್ಲಿ ದಿನನಿತ್ಯದ ಓಡಾಟವನ್ನು ಗಮನದಲ್ಲಿಟ್ಟುಕೊಂಡು ಈ ಸ್ಕೂಟರ್ ತಯಾರಿಸಲಾಗಿದೆ.
ದೆಹಲಿಯ ಎಕ್ಸ್ ಶೋ ರೂಮ್ ಬೆಲೆ 1.35 ಲಕ್ಷ ರೂಪಾಯಿಯಾಗಿದೆ. ಆರಂಭದಲ್ಲಿ ದೆಹಲಿ, ಆಗ್ರಾ, ಕಟಕ್, ಸೂರತ್ ಮತ್ತು ಕೊಲ್ಲಂನಲ್ಲಿರುವ ಆಯ್ದ ಹೋಂಡಾ ರೆಡ್ವಿಂಗ್ ಡೀಲರ್ಶಿಪ್ಗಳಲ್ಲಿ ಮಾತ್ರ ಸ್ಕೂಟರ್ ಲಭ್ಯವಿರಲಿದೆ. ಲಾಂಚ್ ಆದ ದಿನದಿಂದಲೇ ಇದರ ಬುಕ್ಕಿಂಗ್ ಕೂಡ ಶುರುವಾಗಿದೆ. 5 ಸಾವಿರ ರೂಪಾಯಿ ಟೋಕನ್ ಅಮೌಂಟ್ ನೀಡಿ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.
ಹೋಂಡಾ QC3ನಲ್ಲಿ 3.0 kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಕಂಪನಿಯ ಪ್ರಕಾರ, ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 145 ಕಿಲೋಮೀಟರ್ ಐಡಿಸಿ ರೇಂಜ್ ಸಿಗುತ್ತದೆ. ಚಾರ್ಜಿಂಗ್ ವಿಚಾರಕ್ಕೆ ಬಂದರೆ, ಬ್ಯಾಟರಿಯನ್ನು ಶೇ.0 ದಿಂದ 80ರಷ್ಟು ಚಾರ್ಜ್ ಮಾಡಲು ಸುಮಾರು 2 ಗಂಟೆ 40 ನಿಮಿಷ ಬೇಕಾಗುತ್ತದೆ. ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 4 ಗಂಟೆ ಸಮಯ ಬೇಕಾಗುತ್ತದೆ ಎಂದು ಕಂಪನಿ ಹೇಳಿದೆ.
ಫೀಚರ್ಸ್
ಹೋಂಡಾ QC3 ಅನ್ನು ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಮಾತ್ರವಲ್ಲದೆ, ಸ್ಮಾರ್ಟ್ ಫ್ಯಾಮಿಲಿ ಇವಿ ಆಗಿ ಹೋಂಡಾ ಪರಿಚಯಿಸಿದೆ. ಸ್ಕೂಟರ್ನಲ್ಲಿ 32 ಲೀಟರ್ ಸ್ಟೋರೇಜ್ ಸ್ಪೇಸ್ ಇದೆ. ಇದರಲ್ಲಿ ದಿನನಿತ್ಯದ ಸಾಮಾನು, ಬ್ಯಾಗ್ ಸೇರಿದಂತೆ ಅಗತ್ಯ ವಸ್ತುಗಳನ್ನು ಇಡಬಹುದು. ಜೊತೆಗೆ ಸ್ಮಾರ್ಟ್ ಕೀ ಕೂಡ ಸಿಗುತ್ತದೆ. ಇನ್ನು ಟೆಕ್ನಾಲಜಿ ವಿಚಾರಕ್ಕೆ ಬಂದರೆ, 5 ಇಂಚಿನ ಟಿಎಫ್ ಟಿ ಡಿಸ್ಪ್ಲೇ ಇದೆ. ಇದು Honda RoadSyncಗೆ ಕನೆಕ್ಟ್ ಆಗುತ್ತದೆ. ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲಭ್ಯವೂ ಇದ್ರಲ್ಲಿದೆ.
ನಾಲ್ಕು ಬಣ್ಣಗಳಲ್ಲಿ ಲಭ್ಯ
ಹೋಂಡಾ QC3 ಅನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಮ್ಯಾಟ್ ಫ್ಯಾಟನ್ ಗ್ರೇ ಮೆಟಾಲಿಕ್, ಪರ್ಲ್ ಪ್ರೀಷಿಯಸ್ ವೈಟ್, ಪರ್ಲ್ ಶ್ಯಾಲೋ ಬ್ಲೂ ಮತ್ತು ಪರ್ಲ್ ಸೈರನ್ ಬ್ಲೂ ಬಣ್ಣಗಳಲ್ಲಿ ಸ್ಕೂಟರ್ ಸಿಗಲಿದೆ.