* ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಕ್ಕೆ ತಾಪಮಾನ ಏರಿಕೆ ಕಾರಣ
* ಬೇಸಿಗೆಯಲ್ಲಿ ಸ್ಫೋಟ ಪ್ರಕರಣದಲ್ಲಿ ಹೆಚ್ಚಳ: ಸಚಿವ ಗಡ್ಕರಿ
* ಈ ಬಗ್ಗೆ ಕಂಪನಿಗಳು ಎಚ್ಚರ ವಹಿಸಬೇಕು
* ದೋಷಪೂರಿತ ವಾಹನ ಹಿಂಪಡೆಯಬೇಕು
ನವದೆಹಲಿ(ಏ.27): ದೇಶದ ಹಲವು ಭಾಗಗಳಲ್ಲಿ ಎಲೆಕ್ಟ್ರಿಕ್ ಬೈಕ್‌ಗಳ ಬ್ಯಾಟರಿ ಸ್ಫೋಟದ ಪ್ರಕರಣಗಳು ಆತಂಕ ಹುಟ್ಟುಹಾಕಿರುವಾಗಲೇ, ‘ಇಂಥ ಘಟನೆಗೆ ವಾತಾವರಣದಲ್ಲಿನ ಉಷ್ಣಾಂಶ ಏರಿಕೆ ಕಾರಣ. ಹೆಚ್ಚು ತಾಪಮಾನವಿದ್ದಾಗ ಬ್ಯಾಟರಿ ದೋಷ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇಂಥ ಘಟನೆಗಳನ್ನು ತಡೆಗಟ್ಟಲು ಸುರಕ್ಷಾ ಕ್ರಮಗಳನ್ನು ಕಂಪನಿಗಳು ಕೈಗೊಳ್ಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ ‘ಮಾಚ್‌ರ್, ಏಪ್ರಿಲ್, ಮೇ ತಿಂಗಳಲ್ಲಿ ವಾತಾವರಣದ ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ದೋಷ ಕಂಡುಬರುತ್ತಿದೆ. ಹೀಗಾಗಿ ಇಂಥ ದೋಷ ಪೂರಿತ ವಾಹನಗಳನ್ನು ತಯಾರಿಕಾ ಕಂಪನಿಗಳು ಹಿಂದಕ್ಕೆ ಪಡೆಯಬೇಕು’ ಎಂದು ಹೇಳಿದರು.
ಇದೇ ವೇಳೆ ‘ದೇಶದಲ್ಲಿ ಈಗಷ್ಟೇ ಎಲೆಕ್ಟ್ರಿಕ್ ವಾಹನ ಉದ್ಯಮ ಆರಂಭವಾಗುತ್ತಿದೆ. ಈ ಹಂತದಲ್ಲಿ ಅವುಗಳಿಗೆ ಯಾವುದೇ ಅಡ್ಡಗಾಲು ಆಗಲು ಸರ್ಕಾರ ಬಯಸುವುದಿಲ್ಲ. ಆದರೆ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆ. ಮಾನವರ ಜೀವದ ವಿಷಯದಲ್ಲಿ ಯಾವುದೇ ರಾಜಿಗೆ ನಾವು ಸಿದ್ಧವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸ್ಫೋಟದಂಥ ತೊಂದರೆಗೆ ಒಳಗಾದ ವಾಹನಗಳನ್ನು ಕಂಪನಿಗಳು ಬದಲಾಯಿಸದೇ ಕೊಡದೇ ಇದ್ದಲ್ಲಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಳೆದ ವಾರ ಗಡ್ಕರಿ ಎಚ್ಚರಿಕೆ ನೀಡಿದ್ದರು.
ಈವರೆಗೆ 26 ಇ-ವಾಹನಗಳಿಗೆ ಬೆಂಕಿ
ದೇಶದಲ್ಲಿ ಇತ್ತೀಚಿನ 2 ತಿಂಗಳಲ್ಲಿ 26 ಇ-ವಾಹನಗಳಿಗೆ ಬೆಂಕಿ ತಗುಲಿದ ಘಟನೆ ಸಂಭವಿಸಿವೆ. ಒಂದು ಓಲಾ, 3 ಪ್ಯೂರ್ ಇವಿ ಹಾಗೂ 29 ಜಿತೇಂದ್ರ ಇವಿ ಸ್ಕೂಟರ್‌ಗಳು ಬೆಂಕಿಗೆ ಆಹುತಿ ಆಗಿವೆ.