ಹೆಲ್ಮೆಟ್ ಕಿರಿಕಿರಿಗೆ ಸಿಕ್ತು ಮುಕ್ತಿ; ಟೆಕ್ಕಿ ಕಂಡು ಹಿಡಿದ್ರು ಕೂಲರ್ ಹೆಲ್ಮೆಟ್!

By Kannadaprabha NewsFirst Published Dec 17, 2019, 1:29 PM IST
Highlights

13 ನೌಕರಿಗೆ ರಾಜೀನಾಮೆ ನೀಡಿ 'ಬ್ಲೂ ಆರ್ಮರ್' ಎಂಬ ಕಂಪನಿಯನ್ನ  ಹುಟ್ಟು ಹಾಕಿದ ಸುಂದರ್ ರಾಜನ್‌, ಈ-20 ಹೆಸರಿನ ಹೊಸ ಕೂಲಿಂಗ್ ಸಾಧನವನ್ನು ತಯಾರಿಸಿದ್ದಾರೆ. ಹೆಲ್ಮೆಟ್‌ಗೆ ಆಳುವಡಿಸುವ ಈ ಸಾಧನ ಹೆಲ್ಮೆಟ್ ಒಳಗಿನ ತಾಪಮಾನವನ್ನು 15 ಡಿಗ್ರಿ ಸೆಲ್ಸಿಯಸ್‌ ವರೆಗೆ ಕಡಿಮೆ ಮಾಡುತ್ತದೆ. ಇದರುಂದ ಕಾರಿನಲ್ಲಿ ಪ್ರಯಾಣಿಸಿದ ಅದೇ ಅನುಭವ ಪಡೆಯಬಹುದು ಎನ್ನತ್ತಾರೆ ಸುಂದರ್. ಇವರ ಅಪರೂಪದ ಸಾಧನೆ ಕುರಿತು ಹಿಸ್ಟರಿ ಟಿವಿ ಕಾರ್ಯಕ್ರಮ ಪ್ರಸಾರ ಮಾಡಿತ್ತು.

ಸಿನಾನ್ ಪಂದಬೆಟ್ಟು

ಬೆಂಗಳೂರಿನ ಟ್ರಾಫಿಕ್ಕು, ಮುಖಕ್ಕೆ ರಾಚುವ ಧೂಳು, ನೆತ್ತಿಗೆ ಹೊಡೆಯವ ಸೂರ್ಯನ ಬಿಸಿಲು, ಕಚೇರಿ ತಲುಪುವ ಧಾವಂತ...ಇವೆಲ್ಲದರ ನಡುವೆ ದ್ವಿಚಕ್ರ ಸವಾರರ ಪಾಡು ದೇವರಿಗೇ ಪ್ರೀತಿ. ಭಾರಿ ವಾಹನಗಳ ನಡುವೆ ತೂರಿಕೊಂಡು ಗಮ್ಯ ತಲುಪುವುದು ಅಭ್ಯಾಸವಾದಂತೆ ಸಲೀಸಾದರೂ, ಹೆಲ್ಮೆಟ್ ಧರಿಸುವ ‘ಅನಿವಾರ್ಯ ಕರ್ಮ’ದ ಹಿಂಸೆ ಅಷ್ಟಿಷ್ಟಲ್ಲ. ತಲೆ ಮೇಲೆ ಹೆಲ್ಮೆಟ್ ಹೊತ್ತುಕೊಂಡು ಕಚೇರಿ ತಲುಪುವ ವೇಳೆ ಆಯಾಸದ ಜತೆಗೆ ನೆತ್ತಿಯಿಂದ ಮಳೆ ಹನಿಗಳಂತೆ ಬಿಳುವ ಬೆವರೂ ಜತೆಯಾಗಿರುತ್ತದೆ. ಸತತ ಹೆಲ್ಮೆಟ್ ಬಳಕೆಯಿಂದ ಬರುವ ಹಾಗೂ ಉದುರುವ ತಲೆಗೂದಲು ನೆಮ್ಮದಿಯನ್ನು ಮತ್ತಷ್ಟು ಕಸಿಯುತ್ತವೆ.

ಹೆಲ್ಮೆಟ್‌ ಧರಿಸಿ ದೆಹಲಿಗರ ಗಮನ ಸೆಳೆದ ಶ್ವಾನ!

ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಚೆನ್ನೈ ಮೂಲದ ಸುಂದರ್ ರಾಜನ್ ಕೃಷ್ಣನ್ ಬಳಿ ಹತ್ತಾರು ಸ್ನೇಹಿತರು ಪ್ರತಿದಿನ ಇದೇ ಸಮಸ್ಯೆಯನ್ನು ಹೇಳುತ್ತಿದ್ದರು. ಇದಕ್ಕೊಂದು ಪರಿಹಾರ ಕಲ್ಪಿಸಲೇ ಬೇಕೆಂದು ನಿರ್ಧರಿಸಿದ ಅವರು ಮೊದಲು ಮಾಡಿದ ಕೆಲಸ 13 ವರ್ಷಗಳ ನೌಕರಿಗೆ ರಾಜೀನಾಮೆ ನೀಡಿದ್ದು. ಬಳಿಕ ಕೆಲವು ಗೆಳೆಯರೊಂದಿಗೆ ಸೇರಿ ಹೊಸದೊಂದು ಸ್ಟಾರ್ಟಪ್ ಕಂಪನಿ ಕಟ್ಟಿ, ‘ಮಂಡೆ ಬಿಸಿ’ಯನ್ನು ಇಳಿಸುವ ಹೆಲ್ಮೆಟ್ ಕೂಲಿಂಗ್ ಸಾಧನವೊಂದನ್ನು ಆವಿಷ್ಕಾರ ಮಾಡಿದ್ದಾರೆ. ಇದು ಹೆಲ್ಮೆಟ್ ಒಳಗೂ ತಲೆ, ಮುಖವನ್ನು ತಂಪಾಗಿಡುತ್ತದೆ.

ನೌಕರಿಗೆ ರಾಜೀನಾಮೆ ನೀಡಿ ‘ಬ್ಲೂ ಆರ್ಮರ್’ ಎಂಬ ಕಂಪನಿಯನ್ನು ಹುಟ್ಟು ಹಾಕಿದ ಸುಂದರ್ ರಾಜನ್, ಈ-20 ಹೆಸರಿನ ಹೊಸ ಕೂಲಿಂಗ್ ಸಾಧನವನ್ನು ತಯಾರಿಸಿದ್ದಾರೆ. ಹೆಲ್ಮೆಟ್ಗೆ ಅಳವಡಿಸುವ ಸಾಧನ ಇದಾಗಿದ್ದು, ಇದು ಹೆಲ್ಮೆಟ್ ಒಳಗಿನ ತಾಪಮಾನವನ್ನು 15 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಮಾಡುತ್ತದೆ. ಇದರಿಂದ ಕಾರಿನಲ್ಲಿ ಪ್ರಯಾಣಿಸಿದ ಅದೇ ಅನುಭವ ಪಡೆಯಬಹುದು. ಬಿಸಿಲ ಧಗೆ ಹಾಗೂ ಧೂಳಿನಿಂದ ರಕ್ಷಣೆ ಪಡೆದುಕೊಳ್ಳಬಹುದು ಎನ್ನುತ್ತಾರೆ ಸುಂದರ್ ರಾಜನ್.

ಹೆಲ್ಮೆಟ್ ಕೂಲರ್ ಕಾರ್ಯ ನಿರ್ವಹಣೆ ಹೇಗೆ?

ಒಂದು ಮುಷ್ಠಿಯಲ್ಲಿ ಹಿಡಿದುಕೊಳ್ಳಬಹುದಾದಷ್ಟೇ ದೊಡ್ಡದಾಗಿರುವ ಸಾಧನ ಇದಾಗಿದ್ದು, ಹೆಲ್ಮೆಟ್‌ಗೆ ಇದನ್ನು ಅಳವಡಿಸಿಕೊಳ್ಳಬೇಕು. ಇದು ಸೂಸುವ ಗಾಳಿ ಹೆಲ್ಮೆಟ್ ಒಳಗೆ ಹರಡಿ ಮುಖ ಹಾಗೂ ತಲೆಯನ್ನು ತಂಪಾಗಿಡುತ್ತದೆ. ಇದು ಅಳವಡಿಸಿಕೊಳ್ಳುವುದರಿಂದ ಹೆಲ್ಮೆಟ್ ಒಳಗೆ ಗಾಳಿಯಾಡಲೆಂದು ವೈಸರ್ ತೆರೆಯ ಬೇಕಿಲ್ಲ. ಮಾತ್ರವಲ್ಲ ವೈಸರ್ ತೆರೆದು ಪ್ರಯಾಣಿಸುವಾಗ ರಾಚುವ ಧೂಳಿನಿಂದಲೂ ಈ ಕೂಲರ್ ರಕ್ಷಣೆ ನೀಡುತ್ತದೆ. ತಲೆ ತಂಪಾಗಿಸುವ ಜತೆಗೆ ಆರೋಗ್ಯಕ್ಕೂ ಪೂರಕ ಎನ್ನುವುದು ಸಂಶೋಧಕರ ವಾದ.

ಹಲವು ಮಂದಿಗೆ ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ ಎನ್ನುವ ಭ್ರಮೆ ಇದೆ. ಅದಕ್ಕೆ ತಲೆಗವಸು ಮತ್ತು ಮುಖಗವಸು ಹಾಕಿ ಅದರ ಮೇಲೆ ಹೆಲ್ಮೆಟ್ ಧರಿಸುತ್ತಾರೆ. ಇದು ಬಿಸಿಲಿಗೆ ಮತ್ತಷ್ಟು ಸುಡುವಂತೆ ಮಾಡುತ್ತದೆ. ಮಾತ್ರವಲ್ಲ ಮುಖದ ಬಣ್ಣವೂ ಮಾಸುತ್ತದೆ. ವಾಸ್ತವದಲ್ಲಿ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆ ಎನ್ನುವುದು ಭ್ರಮೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿಲ್ಲ. ಬೆವರಿನಿಂದ ಕೂದಲು ಉದುರುವುದು ಸಾಮಾನ್ಯ. ಹೆಲ್ಮೆಟ್ ಧರಿಸುವುದರಿಂದ ಬೆವರುವುದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ. ಆದರೆ ಹೆಲ್ಮೆಟ್‌ಗೆ ಈ ಕೂಲಿಂಗ್ ಸಾಧನವನ್ನು ಅಳವಡಿಸಿಕೊಳ್ಳುವುದರಿಂದ, ಬೆವರುವುದಿಲ್ಲ. ಹೀಗಿದ್ದಾಗ ಕೂದಲು ಉದುರುವ ಸಮಸ್ಯೆ ಬರುವುಲ್ಲ. ಮಾತ್ರವಲ್ಲ ತಲೆ ಮುಖವನ್ನು ಮುಚ್ಚಿಕೊಂಡು ಹೆಲ್ಮೆಟ್ ಧರಿಸುವ ಅಗತ್ಯವೂ ಇಲ್ಲ. ಕೆಲಸದೊತ್ತಡ ಹಾಗೂ ಟಾಫಿಕ್ ಕಿರಿಕಿರಿಯಿಂದಲೂ ಇದು ರಿಲೀಫ್ ನೀಡುತ್ತದೆ ಎಂದು ತಮ್ಮ ಸಂಶೋಧನೆ ಬಗೆಗೆ ವಿವರಿಸುತ್ತಾರೆ ರಾಜನ್.

ಈ ಹೆಲ್ಮೆಟ್ ಹೊಂಡಾ ಆಕ್ಟೀವಾ ಸ್ಕೂಟರ್‌ಗಿಂತ ದುಬಾರಿ!

ಕೂಲಿಂಗ್ ಜತೆ ಬ್ಲೂಟೂಥ್, ಸ್ಪೀಕರ್

ಸುಂದರ್ ರಾಜನ್‌ರ ಬ್ಲೂ ಆರ್ಮರ್ ತಯಾರಿಸಿರುವ ಹೆಲ್ಮೆಟ್ ಕೂಲರ್‌ನ ಮೂರನೇ ಆವೃತ್ತಿ ಮಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಎರಡು ಆವೃತ್ತಿಗಳಲ್ಲಿ ಬಿಡುಗಡೆಯಾಗಿರುವ ಈ ಕೂಲರ್‌ನಲ್ಲಿ ಮುಖ ತಂಪಾಗಿಸುವ ಹಾಗೂ ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಬಗ್ಗೆ ಮಾತ್ರ ಗಮನ ಕೊಡಲಾಗಿತ್ತು. ಇದಕ್ಕೆ ಗ್ರಾಹಕರಿಂದ ಭರಪೂರ ಸ್ಪಂದನೆ ಬಂದ ಬಳಿಕ ಮತ್ತಷ್ಟು ಅಭಿವೃದ್ಧಿ ಪಡಿಸಲಾಗಿದ್ದು, ಬ್ಲೂಟೂಥ್ ಸ್ಪೀಕರ್‌ಗಳನ್ನೂ ಅಳವಡಿಸಲಾಗಿದೆ. ಅಲ್ಲದೇ ಗೂಗಲ್ ಅಸಿಸ್ಟೆಂಟ್ ಮೂಲಕ ನಿಯಂತ್ರಿಸುವ ಸೌಲಭ್ಯ ಕೂಡ ಇರಲಿದ್ದು, ಫೋನ್ ಕಾಲ್, ಮ್ಯೂಸಿಕ್ ಹಾಗೂ ಗೂಗಲ್ ಮ್ಯಾಪ್ ವಾಯ್ಸ್‌ಗಳನ್ನೂ ಕೆಳಬಹುದು.

ಒಂದೇ ಕ್ಲಿಕ್‌ನಲ್ಲಿ ನಿಮ್ಮ ಲೊಕೇಶನ್ ಕಳುಹಿಸಿ!

ಬೈಕ್ ಚಲಾಯಿಸುತ್ತಿರುವಾಗ ಯಾರಾದರೂ ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದರೇ, ಆ ಸಂದೇಶವನ್ನು ಈ ಸಾಧನದಲ್ಲಿ ಅಳವಡಿಸಲಾಗಿರುವ ಸ್ಪೀಕರ್ ನಿಮಗೆ ಓದಿ ತಿಳಿಸುತ್ತದೆ. ಮಾತ್ರವಲ್ಲ ವಾಯ್ಸ್ ಮೆಸೇಜ್ ಆಗಿದ್ದಲ್ಲಿ ಅದನ್ನು ಸ್ವಯಂ ಚಾಲಿತವಾಗಿ ಪ್ಲೇ ಮಾಡುತ್ತದೆ. ಅಲ್ಲದೇ ಯಾರಾದರೂ ನಿಮ್ಮ ಲೊಕೇಶನ್ ಕಳುಹಿಸಿ ಎಂದು ವಾಟ್ಸಪ್ ಮಾಡಿದರೆ, ಸಾಧನದಲ್ಲಿರುವ ಬಟನ್ ಒತ್ತಿ ಅವರಿಗೆ ನಿಮ್ಮ ಲೈವ್ ಲೊಕೇಶನ್ ಕಳುಹಿಸಬಹುದು. ಇದಕ್ಕೆಲ್ಲಾ ಮೊದಲೇ ಬ್ಲೂ ಆರ್ಮರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಸೆಟ್ಟಿಂಗ್ ಮಾಡಿಟ್ಟುಕೊಳ್ಳಬೇಕು. ಸ್ಮಾರ್ಟ್ ವಾಚ್‌ನಂತೆಯೇ ಇದು ಕೆಲಸ ಮಾಡುತ್ತದೆ.

ನಿಮ್ಮ ಹೆಲ್ಮೆಟ್‌ನಲ್ಲಿ ಬ್ಲೂ ಸ್ನಾಪ್ ಅಳವಡಿಸಿಕೊಂಡಿದ್ದಿರಾ?

ಲೊಕೇಶನ್ ರಿಮೈಂಡರ್

ಲೊಕೇಶನ್ ರಿಮೈಂಡರ್ ಎಂಬ ವಿಶಿಷ್ಟ ತಂತ್ರಜ್ಞಾನ ಕೂಡ ಈ ಹೆಲ್ಮೆಟ್‌ನಲ್ಲಿ ಅಡಕವಾಗಿದ್ದು, ನೀವು ನಿರ್ದಿಷ್ಟ ಸ್ಥಳಕ್ಕೆ ಹೋದಾಗ ಅಲ್ಲಿ ಮಾಡಬೇಕಿರುವುದು ಎನು ಎನ್ನುವುದನ್ನು ಮೊದಲೇ ಸಂಯೋಜಿಸಿಕೊಂಡಿದ್ದರೆ, ಆ ಸ್ಥಳಕ್ಕೆ ತಲುಪಿದಾಗ ನೀವು ಮಾಡಬೇಕಿರುವುದೇನು ಎನ್ನುವುದನ್ನು ನೆನಪಿಸುತ್ತದೆ. ಉದಾಹರಣೆಗೆ ನಿರ್ದಿಷ್ಟ ಸ್ಥಳದಲ್ಲಿ ಹಾಲು ಖರೀದಿ ಮಾಡಬೇಕೆಂದು ಮೊದಲೇ ಸಂಯೋಜಿಸಿಟ್ಟುಕೊಂಡಿದ್ದರೆ, ಆ ಸ್ಥಳ ಬಂದಾಗ ನಿಮಗೆ ಅದನ್ನು ನೆನಪಿಸುತ್ತದೆ. ಕೆಲಸದ ಒತ್ತಡದ ಮರೆಗುಳಿತನಕ್ಕೂ ಇದೊಂದು ಕೂಲ್ ಸೆಲ್ಯೂಶನ್.

ಈ ಸಾಧನ ರಿಚಾರ್ಜೆಬಲ್ ಆಗಿದ್ದು, ನಾಲ್ಕು ಗಂಟೆ ಚಾಜ್ ಮಾಡಿದರೆ 8 ರಿಂದ 9 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಇದಕ್ಕೆ ಬೇಡಿಕೆ
ಇದ್ದು, ದಕ್ಷಿಣ ಅಮೆರಿಕ, ಮೆಕ್ಸಿಕೋ, ಪರಾಗ್ವೆ, ಪನಾಮ ಸೇರಿ 13ರಷ್ಟು ರಾಷ್ಟ್ರಗಳಲ್ಲಿ ಸಾವಿರಾರು ಯೂನಿಟ್‌ಗಳು ಮಾರಾಟವಾಗಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ https://thebluarmor.com ಭೇಟಿ ನೀಡಬಹುದು.

click me!