
ನವದೆಹಲಿ (ಆ.29): ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಏಥರ್ ಎನರ್ಜಿ (Ather Energy) ಶನಿವಾರ ನಡೆದ ‘ಏಥರ್ ಕಮ್ಯುನಿಟಿ ಡೇ’ (Ather Community Day) ಕಾರ್ಯಕ್ರಮದಲ್ಲಿ ತನ್ನ ಹೊಚ್ಚ ಹೊಸ 'ಕೊನಾರ್ಕ್' (Konarc) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. 99,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಆರಂಭಿಕ ಬೆಲೆ 99,999 ರೂಪಾಯಿ ಹೊಂದಿರುವುದು 'ಕೊನಾರ್ಕ್' ಸ್ಕೂಟರ್ ಅನ್ನು ಏಥರ್ ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನಾಗಿ ಮಾಡಿದೆ. ಸಂಸ್ಥೆಯ ಇತಿಹಾಸದಲ್ಲೇ 1 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಮೊದಲ ಸ್ಕೂಟರ್ ಇದಾಗಿದೆ. ಹೊಸ ಏಥರ್ ಕೊನಾರ್ಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ ಗರಿಷ್ಠ 200 ಕಿಲೋಮೀಟರ್‌ವರೆಗಿನ ಮೈಲೇಜ್ (ರೈಡಿಂಗ್ ರೇಂಜ್) ಆಯ್ಕೆಗಳಲ್ಲಿ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.
ಸ್ಕೂಟರ್ ಬಿಡುಗಡೆಯ ಜೊತೆಗೆ ಏಥರ್ ಎನರ್ಜಿ ತನ್ನ ಹೊಸ ಬ್ಯಾಟರಿ ವ್ಯವಸ್ಥೆಯನ್ನು ಅನಾವರಣಗೊಳಿಸಿದ್ದು, ಇದಕ್ಕೆ ಬರೋಬ್ಬರಿ 10 ವರ್ಷಗಳ ವಾರಂಟಿಯನ್ನು ಘೋಷಿಸಿದೆ.
ಬಹುಮಹಡಿ ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ 'ಏಥರ್ ನೋಡ್' (AtherNode) ಎಂಬ ನೂತನ ಚಾರ್ಜಿಂಗ್ ಪರಿಹಾರವನ್ನು ಕಂಪನಿ ಪರಿಚಯಿಸಿದೆ. ಈ 'ಏಥರ್ ನೋಡ್' ಸೌಲಭ್ಯವು ಆರಂಭಿಕ ಹಂತದಲ್ಲಿ ದೇಶದ ಆರು ಪ್ರಮುಖ ನಗರಗಳಲ್ಲಿ ಜಾರಿಗೆ ಬರಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಗ್ರಾಹಕರಿಗೆ ತಮ್ಮ ಸ್ಕೂಟರ್‌ನ ಪ್ರಸ್ತುತ ಸ್ಥಿತಿಗತಿಯ ಕುರಿತು ನೈಜ ಸಮಯದ (Real-time) ಮಾಹಿತಿಯನ್ನು ನೀಡುವ ಹೊಸ ತಂತ್ರಜ್ಞಾನವನ್ನು ಏಥರ್ ಪರಿಚಯಿಸುತ್ತಿದೆ. ಇದರಲ್ಲಿ ಬ್ಯಾಟರಿ ಹೆಲ್ತ್ (Battery Health), ಬ್ರೇಕ್ ಸ್ಥಿತಿಗತಿ ಹಾಗೂ ವಾಹನದ ಒಟ್ಟಾರೆ ಆರೋಗ್ಯದ ಸ್ಕೋರ್ (Overall Vehicle Health Score) ಒಳಗೊಂಡಿರಲಿದೆ.
ಈ ಡಾಟಾ ಮಾಹಿತಿಯು ವಾಹನ ಸವಾರರಿಗೆ ತಮ್ಮ ಸ್ಕೂಟರ್‌ನ ಸ್ಥಿತಿಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ನೆರವಾಗಲಿದ್ದು, ಮುಂದೆ ವಾಹನವನ್ನು ಮರುಮಾರಾಟ (Resell) ಮಾಡುವ ಸಂದರ್ಭದಲ್ಲಿ ಕರಾರುವಾಕ್ ಮಾಹಿತಿ ನೀಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ, ಲಭ್ಯವಿರುವ ವಾಹನದ ಡಾಟಾ ಆಧಾರದ ಮೇಲೆ ಸ್ಕೂಟರ್‌ಗೆ ಸಿಗಬಹುದಾದ ಅಂದಾಜು ಮರುಮಾರಾಟ ಬೆಲೆಯನ್ನು (Estimated Resale Price) ಸಹ ಈ ಸಿಸ್ಟಮ್ ಸೂಚಿಸಲಿದೆ. ಗ್ರಾಹಕರಿಗೆ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ನ ಸ್ಥಿತಿ ಹಾಗೂ ಅದರ ಸಂಭಾವ್ಯ ಮರುಮಾರಾಟ ಮೌಲ್ಯದ ಸ್ಪಷ್ಟ ಮಾಹಿತಿ ಸಿಗಲಿ ಎಂಬ ಉದ್ದೇಶದಿಂದ ಈ ವೈಶಿಷ್ಟ್ಯಗಳನ್ನು ನೀಡಲಾಗಿದೆ ಎಂದು ಏಥರ್ ತಿಳಿಸಿದೆ.