ಬೆಂಗಳೂರು(ಮಾ.29): ರಾಯಲ್ ಎನ್‌ಫೀಲ್ಡ್‌ನ ಹೊಸ ಬೈಕು ಸ್ಕ್ರಾಮ್ 411 ಬಿಡುಗಡೆಯಾಗಿದೆ. ದೂರದಿಂದ ನೋಡಿದರೆ ಹಿಮಾಲಯನ್ ಥರ ಕಾಣಿಸುತ್ತದಲ್ಲ ಅಂತನ್ನಿಸುವ ಈ ಬೈಕು ಹಿಮಾಲಯನ್‌ನ ಅಪ್‌ಡೇಟೆಡ್ ವರ್ಷನ್.
ಹಿಮಾಲಯನ್ ಬೈಕಿನ ಅದ್ದೂರಿತನ ಮತ್ತು ನಗರಕ್ಕೆ ಹೊಂದಿಕೊಳ್ಳುವ ಗುಣ ಇರುವ ಸಾಫ್ಟ್ ವರ್ಷನ್ ಬೇಕು ಎನ್ನುವವರಿಗೆಂದೇ ತಯಾರಾಗಿರುವ ಬೈಕು ಇದು. ಹಿಮಾಲಯನ್ ನೋಡಿದರೆ ಪಕ್ಕಾ ಆಫ್ ರೋಡ್ ಬೈಕು ಅಂತಲೇ ಅನ್ನಿಸುತ್ತದೆ. ಅದರ ಎತ್ತರ, ದೊಡ್ಡದಾದ ಟೈರುಗಳು, ಭರ್ಜರಿ ಲುಕ್ ಎಲ್ಲವೂ ಸೇರಿ ನಗರವಾಸಿಗಳಿಗೆ ಸ್ವಲ್ಪ ಹೆವಿ ಅನ್ನಿಸುವಂತಿತ್ತು. ಆ ಭಾವ ನಿವಾರಿಸುವುದಕ್ಕೆಂದೇ ಬಂದಿರುವ ಬೈಕು ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411.
undefined
ನಗರ, ಆಫ್‌ರೋಡ್ ಸವಾರಿಗೆ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ADV ಕ್ರಾಸ್ಓವರ್ ಬೈಕ್ ಬಿಡುಗಡೆ!
ಹಿಮಾಲಯನ್ ಬೈಕಿನ ಮೂಲ ಸ್ವರೂಪವನ್ನೇ ಹೊಂದಿರುವ ಸ್ಕ್ರಾಮ್‌ನಲ್ಲಿ ಎತ್ತರ ಕಡಿಮೆ ಇದೆ. ಸೀಟಿನ ಎತ್ತರ ಹಿಮಾಲಯನ್ ಗಿಂತ 5 ಎಂಎಂ ಕಡಿಮೆಯೇ ಇದೆ. ಟೈರುಗಳು ಸಣ್ಣದಾಗಿವೆ. ಹಿಮಾಲಯನ್‌ನಲ್ಲಿ ಎದುರಿನ ಟೈರು 21 ಇಂಚು ಇದ್ದರೆ ಇದರಲ್ಲಿ 19 ಇಂಚು. ಎತ್ತರ ಕಡಿಮೆಯಾಗಿರುವುದರಿಂದ ಗ್ರೌಂಡ್ ಕ್ಲಿಯರೆನ್ಸ್ ಕೂಡ ಕಡಿಮೆ ಇದೆ. ಅಲ್ಲಿಗಿಂತ ಇಲ್ಲಿ 20 ಎಂಎಂ ಕಡಿಮೆಯಾಗಿ ಒಟ್ಟು ಗ್ರೌಂಡ್ ಕ್ಲಿಯರೆನ್ಸ್ 200 ಎಂಎಂ ಆಗಿದೆ. ಸೀಟ್ ವಿನ್ಯಾಸದಲ್ಲಿ ಬದಲಾವಣೆ ತರಲಾಗಿದೆ. ಸೀಟಿನ ವಿನ್ಯಾಸ ಪೂರ್ತಿ ಬದಲಾಗಿರುವುದರಿಂದ ಪಿಲಿಯನ್ ರೈಡರ್ ಕೂಡ ಯಾವುದೇ ಒತ್ತಡವಿಲ್ಲದೆ ಲಾಂಗ್ ರೈಡ್ ನಲ್ಲಿ ಭಾಗಿಯಾಗಬಹುದು. ಮೀಟಿಯೋರ್ 350 ಡಿಸ್‌ಪ್ಲೇ ಸ್ಕ್ರಾಮ್‌ಗೂ ಬಂದಿದೆ. ಒಂದೈದು ಕೆಜಿ ಭಾರವೂ ಕಡಿಮೆಯಾಗಿದೆ. ಸ್ಕ್ರಾಮ್ ಬೈಕು ಒಟ್ಟಾರೆ 194 ಕೆಜಿ ತೂಗುತ್ತದೆ. ರೂಪದಲ್ಲಿ ಅಲ್ಲಿ ಇಲ್ಲಿ ಬದಲಾವಣೆಯಾಗಿ ನಗರಕ್ಕೂ ಆಫ್‌ರೋಡ್ ರೈಡ್‌ಗೂ ಸರಿ ಹೊಂದುವಂಥಾ ಬೈಕ್ ಆಗಿ ಸ್ಕ್ರಾಮ್ ರೂಪುಗೊಂಡಿದೆ. ಹಿಮಾಲಯನ್ ಬೈಕಿನ ಕ್ಯೂಟ್ ವರ್ಷನ್ ಆಗಿ ಸ್ಕ್ರಾಮ್ ರೆಡಿಯಾಗಿ ಬಂದಿದೆ.
ವಿವಿಧ ಕ್ಷೇತ್ರಗಳ ಗಣ್ಯರಿಗೆ 650 ಸಿಸಿ ರಾಯಲ್ ಎನ್‌ಫೀಲ್ಡ್ ವಿಶೇಷ ವಾಹನಗಳ ವಿತರಣೆ
ಇಲ್ಲಿ ಬದಲಾವಣೆ ಆಗದೇ ಇರುವುದೆಂದರೆ ಇಂಜಿನ್. 411 ಸಿಸಿಯ ಏರ್‌ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಜಿನ್ ಹಿಮಾಲಯನ್ ಬಿಎಸ್ 6 ಇಂಜಿನ್ ಅನ್ನೇ ಹೋಲುತ್ತದೆ. ಆದರೆ ಹೆಚ್ಚು ಸಾಫ್ಟ್ ಆಗಿದೆ. ರೈಡಿಂಗ್ ಅನ್ನು ಮತ್ತಷ್ಟು ಆರಾಮದಾಯಕವಾಗಿಸಿದೆ. ಭಾರ ನಿಯಂತ್ರಣ ಮಾಡುವ ಕೌಶಲ ಇರುವವರು ಸ್ಕ್ರಾಮ್ ಅನ್ನು ನಗರದ ರಸ್ತೆಗಳಲ್ಲಿ ಆರಾಮಾಗಿ ಹ್ಯಾಂಡಲ್ ಮಾಡಬಹುದು.
ಕಲ್ಲು ಮಣ್ಣು ರಸ್ತೆಗಳಲ್ಲಿ ಸ್ಕ್ರಾಮ್ ಅನ್ನು ದೂರುವಂತೆಯೇ ಇಲ್ಲ. ಹಾರುತ್ತದೆ, ಎಗರುತ್ತದೆ, ವೇಗವಾಗಿ ಚಲಿಸುತ್ತದೆ. ಸಸ್ಪೆನ್ಷನ್ ಕೂಡ ಚೆನ್ನಾಗಿದ್ದು, ಸಣ್ಣ ಸಣ್ಣ ಗುಂಡಿಗಳಲ್ಲಿ ಗುಂಡಿಗೆ ಬಿದ್ದಿದ್ದೂ ಗೊತ್ತಾಗುವುದಿಲ್ಲ.
ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್ ರೈಡರ್‌ಗಳು ವೇಗಕ್ಕೆ ಅಷ್ಟೊಂದು ಮಹತ್ವ ಕೊಡುವುದಿಲ್ಲ. ರಾಜರ ಗತ್ತಿನಲ್ಲಿ ಹೋಗುವುದೇ ಪರಮ ಸುಖ. ಈ ಬೈಕ್ ಕೂಡ ಗಂಟೆಗೆ 120 ಕಿಮೀವರೆಗಿನ ವೇಗದಲ್ಲಿ ಓಡಿಸಬಹುದು. ಅದಕ್ಕಿಂತ ಜಾಸ್ತಿ ವೇಗ ಸಮಾಧಾನಕರವಲ್ಲ. ನೂರರ ಆಸುಪಾಸಿನಲ್ಲಿ ಹೋಗುವುದಾದರೆ ಕಿರಿಕಿರಿಯೇ ಇಲ್ಲ. ಬ್ರೇಕಿಂಗ್ ಸಿಸ್ಟಮ್ ಹಿಮಾಲಯನ್‌ಗೆ ಹೋಲಿಸಿದರೆ ಸ್ವಲ್ಪ ಹಿಂದುಳಿದಿದೆ. ಸ್ವಲ್ಪ ಹೆಚ್ಚು ಪವರ್ ಬ್ರೇಕ್ ಕೊಟ್ಟಿದ್ದರೆ ಸ್ಕ್ರಾಮ್‌ನ ಗುಣಕ್ಕೆ ಮೆರುಗು ಬರುತ್ತಿತ್ತು.
ಎತ್ತರ, ಭಾರ ಕಡಿಮೆಯಾದಂತೆ ಹಿಮಾಲಯನ್‌ಗಿಂತ ಬೆಲೆಯೂ ಕಡಿಮೆಯೇ ಇದೆ. ಸ್ಕ್ರಾಮ್ 411ನ ಆರಂಭಿಕ ಬೆಲೆ ರು.2,03,085. ಏಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಟೆಸ್ಟ್ ರೈಡ್, ಬುಕಿಂಗ್‌ಗೆ ಬಾಗಿಲು ತೆರೆದಿದೆ. ವೆಬ್‌ಸೈಟ್ ನೋಡಿದರೆ ಅವಶ್ಯಕ ಮಾಹಿತಿ ಎಲ್ಲವೂ ದೊರೆಯುತ್ತದೆ.