ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು

Published : Aug 11, 2026, 11:23 PM IST
bidar accident

ಸಾರಾಂಶ

ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್‌ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.

ಸಂಗಾರೆಡ್ಡಿ (ತೆಲಂಗಾಣ): ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಆರು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ಯಾಂಕರ್ ಲಾರಿ ಮತ್ತು ಆಟೋ ನಡುವೆ ನಡೆದ ಈ ಭೀಕರ ಡಿಕ್ಕಿಯಿಂದ ದುರಂತ ಸಂಭವಿಸಿದೆ.

ಜಮೀನು ಕೆಲಸ ಮುಗಿಸಿ ಮರಳುವಾಗ ದುರ್ಘಟನೆ..

ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಕೂಲಿ ಕಾರ್ಮಿಕರು ಪ್ರತಿನಿತ್ಯ ಜಮೀನಿನ ಕೆಲಸಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದರು. ಎಂದಿನಂತೆ ಮೊಗುಡಂಪಳ್ಳಿ ಮಂಡಲದ ಸತ್ವೇರ್ ಗ್ರಾಮದ ಜಮೀನಿನಲ್ಲಿ ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಒಂದೇ ಆಟೋದಲ್ಲಿ ಚಾಲಕ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಸತ್ವೇರ್ ಗ್ರಾಮದ ಹೊರವಲಯದ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ಯಾಂಕರ್ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, 6 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಭೀಕರ ಅಪಘಾತದಲ್ಲಿ ರಾಜಗೀರಾ ಗ್ರಾಮದ ರೇಖಾ, ಶ್ರೀದೇವಿ, ಕವಿತಾ, ರೇಷ್ಮಾ ಮತ್ತು ಆಟೋ ಚಾಲಕ ದೇವದಾಸ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದ ಎಂಟು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ನಿರ್ಮಲಾ, ನಿಖಿತಾ, ತುಳಜಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಹಾಗೂ ಶೋಭಾ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಂಗಾರೆಡ್ಡಿ ಮತ್ತು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಡತನದ ನಡುವೆಯೂ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಗೀರಾ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರ ಕಣ್ಣಾಲಿಗಳು ತೇವಗೊಂಡಿವೆ.

ಸಚಿವ ಈಶ್ವರ್ ಖಂಡ್ರೆ ಸಾಂತ್ವನ

ಕೂಲಿ ಕಾರ್ಮಿಕರ ಈ ದಾರುಣ ಸಾವಿಗೆ ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಈ ಘಟನೆಯು ಅತಿಯಾದ ಪ್ರಯಾಣಿಕರನ್ನು ಹೊತ್ತೊಯ್ಯುವ ಆಟೋಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ತೆಲಂಗಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ