ಸೂಪರ್ ವುಮೆನ್ ಎಂಬ ಭ್ರಮೆ ಬೇಡ:ಇಶಾ ಪಂಥ್

By Web DeskFirst Published Mar 9, 2019, 2:49 PM IST
Highlights

ಮಹಿಳೆಗೆ ಉದ್ಯೋಗ ಮತ್ತು ಸಮಾಜದಲ್ಲಿ.ಸಮಾನ ಅವಕಾಶ ನೀಡದಿರುವುದರಿಂದ ದೇಶದ ಜಿಡಿಪಿ ಕಡಿಮೆಯಾಗಲು ಕಾರಣ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂಥ್ ಹೇಳಿದ್ದಾರೆ. 

ಬೆಂಗಳೂರು(ಮಾ.09): ಮಹಿಳೆಗೆ ಉದ್ಯೋಗ ಮತ್ತು ಸಮಾಜದಲ್ಲಿ.ಸಮಾನ ಅವಕಾಶ ನೀಡದಿರುವುದರಿಂದ ದೇಶದ ಜಿಡಿಪಿ ಕಡಿಮೆಯಾಗಲು ಕಾರಣ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾಪಂಥ್ ಹೇಳಿದ್ದಾರೆ. 

ವಿಶ್ವ ಮಹಿಳಾ ದಿನದ ಅಂಗವಾಗಿ ಈಸ್ಟರ್ನ್ ಭೂಮಿಕಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಮಹಿಳೆಯರು ಪುರುಷರಲ್ಲಿ ಯಾರೂ ಶ್ರೇಷ್ಠರಲ್ಲ ಯಾರೂ ಕೀಳಲ್ಲ. ಸಮಾಜದಲ್ಲಿ ಇಬ್ಬರಿಗೂ ಸಮಾನ ಅವಕಾಶ ಇರಬೇಕು ಎಂದು ಹೇಳಿದರು. 

ಮಹಿಳೆ ಉದ್ಯೋಗ ಮಾಡುತ್ತ ಮಕ್ಕಳನ್ನು ಬೆಳೆಸುವುದು ಸವಾಲಿನ ಕೆಲಸ. ಮನೆಯಲ್ಲಿ ಇರುವ ಮಹಿಳೆಯ ಬಗ್ಗೆ ಕೀಳರಿಮೆ ಬೇಡ ಎಂದು ಡಿಸಿಪಿ ಇಶಾಪಂಥ್ ಹೇಳಿದರು.

 ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವವರ ಬಗ್ಗೆ ಕಿವಿಗೊಡದಿರುವುದೇ ಒಳ್ಳೆಯದು. ಸಮಾಜದಲ್ಲಿ ಎಲ್ಲರನ್ನು ಸಮಾಧಾನ ಮಾಡುವುದು ಕಷ್ಟ. ಅಲ್ಲದೇ ನಾವು ಸೂಪರ್ ವುಮೆನ್ ಎಂಬ ಭ್ರಮೆ ಬೇಡ. ನಾವು ನಮ್ಮ ಜವಾಬ್ದಾರಿ ನಿಭಾಯಿಸುವುದಷ್ಟೆ ನಮ್ಮ ಕೆಲಸ ಎಂದು ಕಿವಿ ಮಾತು ಹೇಳಿದರು. 

ಗಂಡು ಮಗು ಅಳಬಾರದು ಎಂದು ಹೇಳುವುದೇ ತಾರತಮ್ಯ ಮಾಡಿದಂತೆ. ಗಂಡಸಿಗೂ ಭಾವನೆಗಳಿವೆ. ಅವರಿಗೂ ದುಖ ಕಷ್ಟ ಬಂದಾಗ ಕಣ್ಣೀರು ಬರುವುದು ಸಹಜ ಎಂದು ಹೇಳಿದರು.


 
ಖ್ಯಾತ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಮಾತನಾಡಿ, ಭಾರತದಲ್ಲಿ ಮಹಿಳೆಯರು ಕ್ರೀಡಾರಂಗದಲ್ಲಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಒಲಂಪಿಕ್ಸ್ ಸೇರಿದಂತೆ ಎಲ್ಲ ಕ್ರೀಡೆಗಳಲ್ಲಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಜೀವನದಲ್ಲಿ ಗುರಿ ಮುಟ್ಟುವವರೆಗೂ ಕನಸು ಕಾಣುತ್ತಿರಬೇಕು ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಮಕ್ಕಳ ಜಾಗೃತಿ ಸಂಸ್ಥೆಯ ಜಾಯ್ ಶ್ರೀನಿವಾಸನ್, ಮಕ್ಕಳ ಕಥೆಗಾರ್ತಿ ಅಪರ್ಣಾ ಆತ್ರೇಯಾ, ಆಸಿಡ್ ಸಂತ್ರಸ್ಥೆ ಪ್ರಗ್ಯಾ ಪ್ರಸುನ್, ರಿವೈವ್ ಸಂಸ್ಥೆಯ ಸಾವಿತ್ರಿ  ದೇವಿ, ಮಹಿಳಾ ಹೋರಾಟಗಾರ್ತಿ ಶೋಭಾ ಕಲ್ಕುರ್, ಹೂವಿನ ಹೋಳೆ ಫೌಂಡೇಷನ್‌ನ ನಾಗರತ್ನಮ್ಮ, ವಿಶೇಷ ಚೇತನ ಮಕ್ಕಳ ಶಿಕ್ಷಕಿ ದೀಪಾ.ಎನ್, ಚಿನ್ಮಯಿ ಪ್ರವಿಣ್ ಅವರಿಗೆ ಈಸ್ಟರ್ನ್ ಭೂಮಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಾರ್ಯಕ್ರಮದಲ್ಲಿ ಈಸ್ಟರ್ನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೃತಿಕಾ ಹಾಗೂ ಆರ್.ಜೆ ರೋಹಿತ್ ಉಪಸ್ಥಿತರಿದ್ದರು.

click me!