ಬೆಂಗಳೂರಿನಲ್ಲಿ ನಾಸಾ ಮಾಜಿ ಮುಖ್ಯಸ್ಥರು| ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಜರ್ ಜನರಲ್ ಚಾರ್ಲ್ಸ್ ಬೋಲ್ಡನ್| ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಧುಮುಕುವಂತೆ ವಿದ್ಯಾರ್ಥಿಗಳಿಗೆ ಕರೆ|
ಬೆಂಗಳೂರು(ಮಾ.07): ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದ್ದು, ಯುವ ವಿಜ್ಞಾನಿಗಳನ್ನು ಕೈ ಬೀಸಿ ಕರೆಯುತ್ತಿದೆ ಎಂದು ನಾಸಾದ 12 ನೇ ಮುಖ್ಯಸ್ಥರಾಗಿದ್ದ ಮೇಜರ್ ಜನರಲ್ ಚಾರ್ಲ್ಸ್ ಬೋಲ್ಡನ್ ಹೇಳಿದರು.
ಬೆಂಗಳೂರಿನ ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಚಾರ್ಲ್ಸ್ ಬೋಲ್ಡನ್, ನಾಸಾ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಖಗೋಳ ಸಂಸ್ಥೆಗಳೊಂದಿಗೆ ಒಪ್ಪಂದ ಹೊಂದಿದ್ದು, ಭಾರತದ ಯುವ ವಿಜ್ಞಾನಿಗಳು ಖಗೋಳ ಅನ್ವೇಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
undefined
ನಾಸಾದ ವಿವಿಧ ಖಗೋಳ ಅಧ್ಯಯನ ಯೋಜನೆಗಳ ಕುರಿತು ಮಾಹಿತಿ ನೀಡಿದ ಚಾರ್ಲ್ಸ್ ಬೋಲ್ಡನ್, ರೊಬೊಟಿಕ್ ತಂತ್ರಜ್ಞಾನದ ಸಹಾಯದಿಂದ ಖಗೋಳ ಸಂಶೋಧನೆಯ ಸಾಧ್ಯತೆಗಳ ಕುರಿತು ವಿಸ್ತಾರವಾಗಿ ಮಾತನಾಡಿದರು.
ತದನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಚಾರ್ಲ್ಸ್ ಬೋಲ್ಡನ್, ಭಾರತದಲ್ಲಿ ವಿಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಕ್ರಾಂತಿ ಈ ಮಕ್ಕಳ ಪ್ರಶ್ನೆಗಳಲ್ಲಿ ಕಾಣಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಯಾರು ಚಾರ್ಲ್ಸ್ ಬೋಲ್ಡನ್?:
ಮೇಜರ್ ಜನರಲ್ ಚಾರ್ಲ್ಸ್ ಫ್ರಾಂಕ ಬೋಲ್ಡನ್ ನಾಸಾದ 12ನೇ ಮುಖ್ಯಸ್ಥರಾಗಿ (ಜುಲೈ 17, 2009-ಜನೆವರಿ 20, 2017)ಸೇವೆ ಸಲ್ಲಿಸಿದ್ದು, ಈ ಹುದ್ದೆಗೇರಿದ ಪ್ರಥಮ ಆಫ್ರಿಕನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
STS-61-C (ಜನೆವರಿ12–18,1986), STS-31 (ಏಪ್ರಿಲ್ 24–29,1990) ಪೈಲೆಟ್ ಆಗಿ ಹಾಗೂ STS-45 (ಮಾರ್ಚ್ 24 –ಏಪ್ರಿಲ್ 2,1992), STS-60 (ಫೆಬ್ರವರಿ 3–11,1994) ರ ಮಿಶನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
1980ರಲ್ಲಿ ನಾಸಾ ಸೇರಿದ್ದ ಬೋಲ್ಡನ್ ಜಾನ್ಸನ್ ಸ್ಪೇಸ್ ಸೆಂಟರ್, ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ ಹಾಗೂ ಕೆನಡಿ ಸ್ಪೇಸ್ ಸೆಂಟರ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.