
ಬೆಂಗಳೂರು: ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ.. 'ವಿಶ್ವಗುರು ಸಂಭ್ರಮೋತ್ಸವ ಕಾರ್ಯಕ್ರಮ'ವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಡೆಯಿತು. 2025ರ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಇಸ್ಕಾನ್ ಸಂಸ್ಥಾಪಕಾಚಾರ್ಯರಾದ ಶ್ರೀಲ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ ಅಖಿಲ ಭಾರತೀಯ ಅಖಾಡ ಪರಿಷತ್ ನೀಡಿದ್ದ ‘ವಿಶ್ವಗುರು’ ಗೌರವದ ನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹರಿದ್ವಾರದ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರರಾದ ಪರಮಪೂಜ್ಯ ಕೈಲಾಶಾನಂದ ಗಿರಿ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಖ್ಯಾತ ವೈದಿಕ ವಿದ್ವಾಂಸ ಶ್ರೀ ದುಷ್ಯಂತ್ ಶ್ರೀಧರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಸ್ಕಾನ್ ಬೆಂಗಳೂರು ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ಹಾಗೂ ಹಿರಿಯ ಉಪಾಧ್ಯಕ್ಷ ಶ್ರೀ ಚಂಚಲಪತಿ ದಾಸ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಪೂಜ್ಯ ಕೈಲಾಶಾನಂದ ಗಿರಿ ಮಹಾರಾಜರು ಮಾತನ್ನಾಡಿ.. 2025ರ ಮಹಾ ಕುಂಭಮೇಳದಲ್ಲಿ ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಬಿರುದು ನೀಡುವ ಸೌಭಾಗ್ಯ ನಮಗೆ ಸಿಕ್ಕಿದೆ. ಇದು ಭಗವಾನ್ ಶ್ರೀಕೃಷ್ಣನ ಆಶೀರ್ವಾದ. ಸನಾತನ ಧರ್ಮದ ಹಿರಿಮೆಯನ್ನು ವಿಶ್ವದ ಮನೆಮನೆಗೆ ತಲುಪಿಸಿದ ಮಹಾನ್ ಚೇತನ ಅವರು. ಇಸ್ಕಾನ್ ಬೆಂಗಳೂರು ಹಾಗೂ ಅಕ್ಷಯ ಪಾತ್ರ ಸಂಸ್ಥೆಗಳು ಸಮಾಜ ಮತ್ತು ಮಾನವಕುಲಕ್ಕೆ ಮಾಡುತ್ತಿರುವ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
ವಿದ್ವಾಂಸ ಶ್ರೀ ದುಷ್ಯಂತ್ ಶ್ರೀಧರ್ ಮಾತನ್ನಾಡಿ.. ಶ್ರೀಲ ಪ್ರಭುಪಾದರು ಮಾಡಿದ ಆಧ್ಯಾತ್ಮಿಕ ಕ್ರಾಂತಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಭಕ್ತಿಭಾವವನ್ನು ಜಾಗೃತಗೊಳಿಸಿದ ಅವರಿಗೆ ‘ವಿಶ್ವಗುರು’ ಗೌರವ ನೀಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ಶ್ರೀ ಮಧು ಪಂಡಿತ ದಾಸ (ಇಸ್ಕಾನ್ ಅಧ್ಯಕ್ಷರು) ಮಾತನ್ನಾಡಿ.. ಶ್ರೀಲ ಪ್ರಭುಪಾದರ ಹೆಸರಿನಲ್ಲಿ ನಡೆದ ಈ ಐತಿಹಾಸಿಕ ಸಂಭ್ರಮವನ್ನು ಅವರದೇ ಮಂದಿರದಲ್ಲಿ ಆಚರಿಸಿರುವುದು ನಮಗೆ ಸಂತಸ ತಂದಿದೆ. ಜಗತ್ತಿನಾದ್ಯಂತ ಸನಾತನ ಧರ್ಮದ ಸಂದೇಶವನ್ನು ಕೊಂಡೊಯ್ಯಲು ನಮಗೆ ಭಗವಂತ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಶ್ರೀಲ ಪ್ರಭುಪಾದರು 1896ರಲ್ಲಿ ಕಲ್ಕತ್ತಾದ ಧಾರ್ಮಿಕ ಹಾಗೂ ಮಹಾನ್ ಭಕ್ತರ ಕುಟುಂಬದಲ್ಲಿ ಜನಿಸಿದರು. ಅವರು ಆದರ್ಶ ಗೃಹಸ್ಥ ಜೀವನವನ್ನು ನಡೆಸುತ್ತಾ ಅನೇಕ ಸ್ಥಳಗಳಲ್ಲಿ ಭಗವಾನ್ ಶ್ರೀಕೃಷ್ಣನ ಮಹಿಮೆಗಳನ್ನು ಪ್ರಚಾರ ಮಾಡುತ್ತಿದ್ದರು. ನಂತರ ಅವರು ಪವಿತ್ರ ಬ್ರಹ್ಮ-ಗೌಡೀಯ ವೈಷ್ಣವ ಪರಂಪರೆಯಲ್ಲಿ 32ನೇ ಆಚಾರ್ಯರಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು. ಬಳಿಕ ಭಗವಾನ್ ಶ್ರೀಕೃಷ್ಣನ ದಿವ್ಯ ಧಾಮವಾದ ವೃಂದಾವನದಲ್ಲಿ ನೆಲೆಸಿ ಭಕ್ತಿಸೇವೆಯಲ್ಲಿ ತೊಡಗಿದ್ದರು. ಇಂತಹ ಅನುಕೂಲಕರ ಪರಿಸ್ಥಿತಿಗಳಿದ್ದರೂ, ತಮ್ಮ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರ ಆಜ್ಞೆಯನ್ನು ನೆರವೇರಿಸುವ ಸಲುವಾಗಿ ತಮ್ಮ ವೈಯಕ್ತಿಕ ಅನುಕೂಲತೆಗಳನ್ನು ತ್ಯಜಿಸಿ, ಭಗವಾನ್ ಶ್ರೀಕೃಷ್ಣನ ಬೋಧನೆಗಳನ್ನು ಪಾಶ್ಚಾತ್ಯ ಜಗತ್ತಿನಲ್ಲಿ ಪ್ರಸಾರ ಮಾಡುವ ಮಹತ್ತರ ಜವಾಬ್ದಾರಿಯನ್ನು ಸ್ವೀಕರಿಸಿದರು.
ವೃಂದಾವನದ ಷಡ್ಗೋಸ್ವಾಮಿಗಳ ಪ್ರೇರಣೆ ಹಾಗೂ ಆಶೀರ್ವಾದವನ್ನು ಪಡೆದು, ಅವರ ಉಪದೇಶಗಳನ್ನು ಜಗತ್ತಿನಾದ್ಯಂತ ಹರಡುವ ಸಂಕಲ್ಪ ಮಾಡಿದರು. ಭಾರತದ ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ 69ನೇ ವಯಸ್ಸಿನಲ್ಲಿ ಕಠಿಣವಾದ ಪಾಶ್ಚಾತ್ಯ ಪ್ರಯಾಣವನ್ನು ಕೈಗೊಂಡರು. ಭಾರತ ಅಥವಾ ಆಧ್ಯಾತ್ಮಿಕತೆಯ ಕುರಿತು ಯಾವುದೇ ಅರಿವಿಲ್ಲದ ಪ್ರದೇಶಗಳ ಜನರನ್ನೂ ಸೇರಿದಂತೆ, ಎಲ್ಲ ವರ್ಗದ ಜನರನ್ನು ಶ್ರೀಲ ಪ್ರಭುಪಾದರು ಶ್ರೀಕೃಷ್ಣನತ್ತ ಆಕರ್ಷಿಸಿದರು. ಭಗವಾನ್ ಶ್ರೀಕೃಷ್ಣನ ಪವಿತ್ರ ನಾಮಗಳು ಜಗತ್ತಿನ ಪ್ರತಿಯೊಂದು ನಗರ ಮತ್ತು ಗ್ರಾಮದಲ್ಲಿಯೂ ಮೊಳಗುತ್ತವೆ ಎಂದು ಶ್ರೀ ಚೈತನ್ಯ ಮಹಾಪ್ರಭು ನೀಡಿದ ದಿವ್ಯ ಭವಿಷ್ಯವಾಣಿಯನ್ನು ಅವರು ಸಾಕಾರಗೊಳಿಸಿದರು.
ಶ್ರೀಲ ಪ್ರಭುಪಾದರು ಭಕ್ತಿ ಮತ್ತು ವೇದಾಂತ ಜ್ಞಾನ ಎರಡರ ಜೀವಂತ ಮೂರ್ತಿಯಾಗಿದ್ದರಿಂದಲೇ ಅವರಿಗೆ ‘ಭಕ್ತಿವೇದಾಂತ’ ಎಂಬ ಗೌರವನಾಮ ದೊರೆಯಿತು. ಬ್ರಹ್ಮ-ಮಧ್ವ-ಗೌಡೀಯ ಸಂಪ್ರದಾಯದ ಪ್ರಾಮಾಣಿಕ ಆಚಾರ್ಯರು ಹಾಗೂ ಶ್ರೇಷ್ಠ ವಿದ್ವಾಂಸರಾಗಿ ಅವರು ಭಗವದ್ಗೀತೆ ಮತ್ತು ಶ್ರೀಮದ್ಭಾಗವತದ ಮೇಲೆ ವಿಶದವಾದ ಭಕ್ತಿಪೂರ್ವಕ ವ್ಯಾಖ್ಯಾನಗಳನ್ನು ರಚಿಸಿ, ಭಗವಾನ್ ಶ್ರೀಕೃಷ್ಣನ ವಚನಗಳನ್ನು ಅತ್ಯಂತ ಪ್ರಾಮಾಣಿಕ ಮತ್ತು ಶುದ್ಧ ರೂಪದಲ್ಲಿ ಜಗತ್ತಿಗೆ ನೀಡಿದರು. ಅವರ ಗ್ರಂಥಗಳನ್ನು ಇಂದಿಗೂ ಜಗತ್ತಿನಾದ್ಯಂತ ಜನರು ಓದುತ್ತಿದ್ದಾರೆ ಹಾಗೂ ಮೆಚ್ಚುತ್ತಿದ್ದಾರೆ. ಅವರು ನೂರಕ್ಕೂ ಹೆಚ್ಚು ಇಸ್ಕಾನ್ ಮಂದಿರಗಳನ್ನು ಸ್ಥಾಪಿಸಿ, ಶ್ರೀ ಶ್ರೀ ರಾಧಾ-ಕೃಷ್ಣರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ವೈಭವಪೂರ್ಣ ದೇವರ ಪೂಜೆಯ ಸಂಸ್ಕೃತಿಯನ್ನು ಪರಿಚಯಿಸಿದರು.
ಎಲ್ಲರನ್ನೂ ಯುಗಧರ್ಮವಾದ ಹರಿನಾಮ ಸಂಕೀರ್ತನ ಯಜ್ಞದಲ್ಲಿ ಭಾಗವಹಿಸುವಂತೆ ಮಾಡಿ, ಶಾಶ್ವತ ಜ್ಞಾನ ಮತ್ತು ಆನಂದದ ಮಾರ್ಗವನ್ನು ತೋರಿಸಿದರು. ತಮ್ಮ ಮಂದಿರಗಳಿಂದ ಪ್ರತಿದಿನ ಸಮೃದ್ಧ ಕೃಷ್ಣ ಪ್ರಸಾದವನ್ನು ವಿತರಿಸುವ ಮೂಲಕ ಅನ್ನದಾನ ಸಂಸ್ಕೃತಿಗೆ ವಿಶೇಷ ಪ್ರೋತ್ಸಾಹ ನೀಡಿದರು ಮತ್ತು ಯಾರೂ ಹಸಿವಿನಿಂದ ಇರಬಾರದು ಎಂಬ ಆಶಯವನ್ನು ಪಾಲಿಸಿದರು. ಈ ರೀತಿ ಶ್ರೀಲ ಪ್ರಭುಪಾದರು 1977ರಲ್ಲಿ ತಮ್ಮ ಮಹಿಮಾಮಯ ಅಂತರ್ಧಾನದವರೆಗೂ ಪ್ರತಿಯೊಂದು ಜೀವಾತ್ಮನ ಮೇಲೂ ಭಗವಾನ್ ಶ್ರೀಕೃಷ್ಣನ ಕೃಪೆಯನ್ನು ಉದಾರವಾಗಿ ಹರಿಸಿದರು.