
ಟೋಕಿಯೊ : ರಾಜ್ಯಕ್ಕೆ ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಹಾಗೂ ಕೈಗಾರಿಕಾ ವಲಯವನ್ನು ಬಲಪಡಿಸುವ ನಿಟ್ಟಿನಲ್ಲಿ ಜಪಾನ್ ಪ್ರವಾಸ ಕೈಗೊಂಡಿರುವ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗವು, ನವೆಂಬರ್ 23ರ ಸೋಮವಾರ ಜಪಾನ್ನ ಟೊಯೋಟಾ ಸಿಟಿಯಲ್ಲಿರುವ ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಮೊಟೊಮಾಚಿ ಸ್ಥಾವರಕ್ಕೆ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದೆ.
ಟೊಯೋಟಾ ಸಂಸ್ಥೆಯ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಒ ಮಸಕಾಜು ಯೋಶಿಮುರಾ (Masakazu Yoshimura) ಮತ್ತು ಹಿರಿಯ ನಾಯಕತ್ವದೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿಗಳು, ಕರ್ನಾಟಕದಲ್ಲಿ ಟೊಯೋಟಾ ಸಂಸ್ಥೆಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಎಲ್ಲಾ ರೀತಿಯ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು 10 ಲಕ್ಷ ವಾಹನಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಟೊಯೋಟಾ ಹೊಂದಿದೆ. ಈ ವಿಸ್ತರಣಾ ಯೋಜನೆಗಳನ್ನು ಕರ್ನಾಟಕದಲ್ಲಿ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕವನ್ನು ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವುದು ಮತ್ತು ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ನಮ್ಮ 'ಬಿಯಾಂಡ್ ಬೆಂಗಳೂರು' ಅಂದರೆ ಬೆಂಗಳೂರಿನಾಚೆಗೂ ಕೈಗಾರಿಕಾ ಅಭಿವೃದ್ಧಿ ನೀತಿಯ ಮೂಲಕ ರಾಜ್ಯದ ಎಲ್ಲಾ ಭಾಗಗಳಲ್ಲೂ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ನಾವು ಶ್ರಮಿಸುತ್ತಿದ್ದೇವೆ" ಎಂದು ವಿವರಿಸಿದರು.
ಸಭೆಯಲ್ಲಿ ಕೇವಲ ಉತ್ಪಾದನಾ ವಿಸ್ತರಣೆಯಷ್ಟೇ ಅಲ್ಲದೆ, ಭವಿಷ್ಯದ ಸುಸ್ಥಿರ ಸಾರಿಗೆ ವ್ಯವಸ್ಥೆ ಕುರಿತಂತೆಯೂ ಗಂಭೀರ ಚರ್ಚೆ ನಡೆಯಿತು.
ಹೈಬ್ರಿಡ್ ಟ್ಯಾಕ್ಸಿ ಸೇವೆ: ಜಪಾನ್ನಲ್ಲಿ ಯಶಸ್ವಿಯಾಗಿ ಬಳಕೆಯಲ್ಲಿರುವ ಟ್ಯಾಕ್ಸಿ ಮಾದರಿಯ ಹೈಬ್ರಿಡ್ ವಾಹನಗಳನ್ನು ಕರ್ನಾಟಕದಲ್ಲೂ ಪರಿಚಯಿಸುವಂತೆ ಮುಖ್ಯಮಂತ್ರಿಗಳು ಟೊಯೋಟಾ ಮುಖ್ಯಸ್ಥರಿಗೆ ಸಲಹೆ ನೀಡಿದರು. ಇದರಿಂದ ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಟ್ಯಾಕ್ಸಿ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಫ್ಲೆಕ್ಸ್ ಫ್ಯೂಯಲ್ : ಪರ್ಯಾಯ ಇಂಧನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಫ್ಲೆಕ್ಸ್ ಫ್ಯೂಯಲ್ ವಾಹನಗಳ ಉತ್ಪಾದನೆ ಮತ್ತು ಬಳಕೆಯ ಸಾಧ್ಯತೆಗಳ ಬಗ್ಗೆಯೂ ನಿಯೋಗವು ಸಂಸ್ಥೆಯೊಂದಿಗೆ ಚರ್ಚಿಸಿತು.
2027ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರು ಮಸಕಾಜು ಯೋಶಿಮುರಾ ಹಾಗೂ ಟೊಯೋಟಾ ತಂಡಕ್ಕೆ ಅಧಿಕೃತ ಆಹ್ವಾನ ನೀಡಿದರು.
ಮೊಟೊಮಾಚಿ ಕಾರು ಉತ್ಪಾದನಾ ಘಟಕದ ಜೊತೆಗೆ ನಿಯೋಗವು ಟೊಯೋಟಾ ಕೈಕಾನ್ ವಸ್ತುಸಂಗ್ರಹಾಲಯಕ್ಕೂ ಭೇಟಿ ನೀಡಿ, ಆಟೋಮೋಟಿವ್ ತಂತ್ರಜ್ಞಾನ ಮತ್ತು ಭವಿಷ್ಯದ ಚಲನಶೀಲತೆಯಲ್ಲಿ ಟೊಯೋಟಾದ ನಾವೀನ್ಯತೆಗಳನ್ನು ವೀಕ್ಷಿಸಿತು.
ಇದೇ ಸಂದರ್ಭದಲ್ಲಿ, ಬಿಡದಿಯ ಟೊಯೋಟಾ ಘಟಕದಿಂದ ಆಯ್ಕೆಯಾಗಿ 'ಟೊಯೋಟಾ ಗ್ಲೋಬಲ್ ಸ್ಕಿಲ್-ಅಪ್' ಕಾರ್ಯಕ್ರಮದಡಿ ಜಪಾನ್ನಲ್ಲಿ ವಿಶೇಷ ತಾಂತ್ರಿಕ ತರಬೇತಿ ಹಾಗೂ ಇಂಟರ್ನ್ಶಿಪ್ ಪಡೆಯುತ್ತಿರುವ ಕರ್ನಾಟಕದ 20ಕ್ಕೂ ಹೆಚ್ಚು ಐಟಿಐ ಪದವೀಧರ ವಿದ್ಯಾರ್ಥಿಗಳೊಂದಿಗೆ ಸಿಎಂ ಮತ್ತು ಸಚಿವರು ಸಂವಾದ ನಡೆಸಿದರು. ಅಂತರರಾಷ್ಟ್ರೀಯ ಮಟ್ಟದ ಈ ತಾಂತ್ರಿಕ ಅನುಭವವನ್ನು ಸದುಪಯೋಗಪಡಿಸಿಕೊಂಡು, ತಾಯ್ನಾಡಿಗೆ ಮರಳಿದ ಬಳಿಕ ರಾಜ್ಯದ ಕೈಗಾರಿಕಾ ಪ್ರಗತಿಗೆ ಕೊಡುಗೆ ನೀಡುವಂತೆ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.