ಖ್ಯಾತಿ, ಚಪ್ಪಾಳೆಗೆ ಕಲಾವಿದ ಬದುಕಬಾರದು ಟಿ.ಎನ್.ಸೀತಾರಾಮ ಮಾತು

Kannadaprabha News   | Kannada Prabha
Published : Aug 23, 2026, 07:48 AM IST
TN Seetharam speech on art in Book Brahma Literature Festival bengaluru

ಸಾರಾಂಶ

ಬುಕ್‌ ಬ್ರಹ್ಮ ಲಿಟರೇಚರ್‌ ಫೆಸ್ಟಿವಲ್‌ನಲ್ಲಿ ಮಾತನಾಡಿದ ನಿರ್ದೇಶಕ ಟಿ.ಎನ್.ಸೀತಾರಾಮ, ಕಲಾವಿದರು ಕೇವಲ ಚಪ್ಪಾಳೆ, ಖ್ಯಾತಿ ಮತ್ತು ಹಣಕ್ಕಾಗಿ ಕಲೆಯನ್ನು ಸೃಷ್ಟಿಸಬಾರದು ಎಂದು ಅಭಿಪ್ರಾಯಪಟ್ಟರು. ಕಲಾವಿದನ ಆಂತರಿಕ ಸಂಘರ್ಷ ಮತ್ತು ಕಲೆಯೊಂದಿಗಿನ ಪ್ರಾಮಾಣಿಕತೆಯೇ ಮುಖ್ಯವೇ ಹೊರತು, ಕ್ಷಣಿಕ ಮೆಚ್ಚುಗೆಯಲ್ಲ.

ಬುಕ್‌ ಬ್ರಹ್ಮ ಲಿಟ್‌ ಫೆಸ್ಟ್‌ನಲ್ಲಿ ನಿರ್ದೇಶಕ ಅಭಿಮತ

ಬೆಂಗಳೂರು (ಆ.23): ‘ಕಲಾವಿದನಿಗೆ ಜನರ ಮೆಚ್ಚುಗೆ, ಚಪ್ಪಾಳೆ, ಖ್ಯಾತಿ ಹಾಗೂ ಹಣ ಸಿಗುವುದು ಸಂತೋಷದ ಸಂಗತಿಯೇ ಆದರೂ, ಅವುಗಳಿಗಾಗಿ ಮಾತ್ರ ಕಲೆಯನ್ನು ಮಾಡಬಾರದು’ ಎಂದು ನಿರ್ದೇಶಕ ಹಾಗೂ ರಂಗಕರ್ಮಿ ಟಿ.ಎನ್.ಸೀತಾರಾಮ ಅಭಿಪ್ರಾಯಪಟ್ಟರು.

ಬುಕ್‌ ಬ್ರಹ್ಮ ಸಂಸ್ಥೆ ಆಯೋಜಿಸಿರುವ ಬುಕ್‌ ಬ್ರಹ್ಮ ಲಿಟರೇಚರ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಲೈಮ್‌ಲೈಟ್‌ಗೆ ಬರುವುದು ಖುಷಿ ಕೊಡುತ್ತದೆ. ಸದಾ ಚಪ್ಪಾಳೆ ಬೀಳಬೇಕು ಎಂಬ ಆಸೆ ಸಹಜ. ಆದರೆ, ಕೆಲವೊಮ್ಮೆ ನಮ್ಮೊಳಗಿನ ಕೀಳರಿಮೆ ಅಥವಾ ‘ನಾನು ಏನನ್ನೂ ಸಾಧಿಸಿಲ್ಲ’ ಎಂಬ ಭಾವನೆಯಿಂದಲೂ ಖ್ಯಾತಿಯ ಬೆನ್ನತ್ತುವ ಮನೋಭಾವ ಬರುತ್ತದೆ. ಹಣ, ಹೆಸರು, ಚಪ್ಪಾಳೆ, ಸ್ಥಾನಮಾನಗಳು ಆ ಕೊರತೆಯನ್ನು ತುಂಬುವ ಪ್ರಯತ್ನವಾಗಬಹುದು’ ಎಂದು ಹೇಳಿದರು.

‘ಕಲಾವಿದನಾಗಿ ಮುಂದೆ ಬಂದ ನಂತರವೂ ‘ನಾನು ಇಲ್ಲಿಗೆ ಏಕೆ ಬಂದೆ?’ ಎಂಬ ಪ್ರಶ್ನೆ ಕಾಡುವ ಸಂದರ್ಭಗಳು ಇರುತ್ತವೆ. ಅಂತಹ ಒಳಗಿನ ಸಂಘರ್ಷವೇ ಕಲಾವಿದನನ್ನು ಮತ್ತಷ್ಟು ಆಳವಾಗಿ ಯೋಚಿಸುವಂತೆ ಮಾಡುತ್ತದೆ’ ಎಂದರು. ತಮ್ಮ ಪಾತ್ರಗಳು ಹಾಗೂ ಕಥೆಗಳಲ್ಲಿ ಸಾಮಾನ್ಯ ಬದುಕಿನ ಅನುಭವಗಳನ್ನು ತರುವ ಕುರಿತು ಮಾತನಾಡಿದ ಅವರು, ‘ನನ್ನ ಮನೆಯಲ್ಲಾಗಲಿ, ಬಾಲ್ಯದಲ್ಲಾಗಲಿ ಯಾರನ್ನೂ ಬೈಯುವ ಅಭ್ಯಾಸ ಇರಲಿಲ್ಲ. ಮದುವೆಯಾದ ನಂತರವೂ ಬೈಯುವ ಸ್ವಭಾವ ಇರಲಿಲ್ಲ. ಆದರೆ ಪಾತ್ರಕ್ಕೆ ಬೇಕಾದಾಗ ನನ್ನಂಥವನೂ ಬೈಯುವಂತೆ, ಸಾಮಾನ್ಯ ಮನುಷ್ಯನಂತೆ ಕಾಣಿಸಬೇಕು. ಅದನ್ನು ಕನ್ನಡದಲ್ಲಿ ಯಾವ ರೀತಿ ಹೇಳಿದರೆ ಸಹಜವಾಗಿ ಹಾಗೂ ಪರಿಣಾಮಕಾರಿಯಾಗಿ ತಲುಪುತ್ತದೆ ಎಂಬುದನ್ನು ಸಾಕಷ್ಟು ಅಭ್ಯಾಸ ಮಾಡಿದ್ದೇನೆ’ ಎಂದು ಹೇಳಿದರು.

‘ನನ್ನ ಬರವಣಿಗೆ ಮತ್ತು ಪಾತ್ರಗಳ ಮುಖ್ಯ ಬಲವೇ ಅವುಗಳ ಸಹಜತೆ. ಬದುಕಿನಲ್ಲಿ ಕಂಡುಬರುವ ಭಾಷೆ, ಭಾವನೆ ಮತ್ತು ಸಂಘರ್ಷಗಳನ್ನು ಕೃತಕವಾಗಿಸದೆ ಪರದೆಯ ಮೇಲೆ ತರುವುದೇ ನನ್ನ ಉದ್ದೇಶ’ ಎಂದು ವಿವರಿಸಿದರು. ರಂಗಭೂಮಿಯಿಂದ ದೂರದರ್ಶನ ಹಾಗೂ ಧಾರಾವಾಹಿಗಳತ್ತ ಬಂದ ತಮ್ಮ ಪಯಣವನ್ನು ನೆನಪಿಸಿಕೊಂಡ ಸೀತಾರಾಮ್‌, ರಂಗಭೂಮಿಯ ಅನುಭವವೇ ತಮ್ಮ ದೃಷ್ಟಿಕೋನ ಹಾಗೂ ಕಥೆ ಹೇಳುವ ಶೈಲಿಗೆ ದೊಡ್ಡ ಬಲವಾಗಿದೆ ಎಂದು ಹೇಳಿದರು. ಕಲಾವಿದನಿಗೆ ಸಿಗುವ ಖ್ಯಾತಿಗಿಂತಲೂ ಆತ ತನ್ನ ಕಲೆಯೊಂದಿಗೆ ಹೊಂದಿರುವ ಪ್ರಾಮಾಣಿಕತೆ ಮುಖ್ಯ. ಚಪ್ಪಾಳೆ ಕ್ಷಣಿಕವಾಗಿರಬಹುದು, ಆದರೆ ಕಲೆಯೊಂದಿಗಿನ ಪ್ರಾಮಾಣಿಕತೆ ದೀರ್ಘಕಾಲ ಉಳಿಯುತ್ತದೆ ಎಂಬುದು ಅವರ ಮಾತಿನ ಸಾರವಾಗಿತ್ತು.

\Bಫೋಟೊ ಸಿಟಿ ಫೋಲ್ಟರ್‌ ಟಿಎನ್‌ಎಸ್..))))) \B

PREV
Read more Articles on
click me!

Recommended Stories

Bengaluru fake medicine racket: ನಕಲಿ ಔಷಧ ದಂಧೆ ಕಿಂಗ್‌ಪಿನ್‌ ಪ್ರಶಾಂತ್‌ ಅಜರ್‌ಬೈಜಾನಲ್ಲಿ ವಶಕ್ಕೆ
KPSC ಮೇಲೆ ಇಡಿ ದಾಳಿ ಬೆನ್ನಲ್ಲೇ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ‘ನಾ’ ಪತ್ತೆ ಹೈಡ್ರಾಮ! ಗೃಹ ಸಚಿವ ಖರ್ಗೆ ಹೇಳಿದ್ದೇನು?