
ಬೆಂಗಳೂರು: ತಮ್ಮ ಮೊಬೈಲ್ ಕರೆಗೆ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಸಿದ್ದಾರೆಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವ್ಯವಸ್ಥಾಪಕರು ದೂರು ನೀಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ, ಅವರ ಕುಟುಂಬದ ಆಪ್ತ ಧನ್ವೀರ್ ನಡುವಿನ ವೈಯಕ್ತಿಕ ಕಾರಣದ ಭಿನ್ನಾಭಿಪ್ರಾಯ ಈಗ ಬೀದಿಗೆ ಬಿದ್ದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇದೀಗ ಧನ್ವೀರ್ ವಿರುದ್ಧ ಬ್ಯಾಟರಾಯನಪುರದಲ್ಲಿ ಎನ್ ಸಿ ಆರ್ ದಾಖಲು ಹಿನ್ನೆಲೆ ಪೊಲೀಸರು ವಿಚಾರಣೆಗೆ ಕರೆಯಲು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಮೌಖಿಕವಾಗಿ ಪೊಲೀಸರು ಸೂಚಿಸಲಿದ್ದಾರೆ. ಎನ್ ಸಿ ಆರ್ ದಾಖಲು ಹಿನ್ನೆಲೆ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಯಲು ಅವಕಾಶವಿಲ್ಲ. ಹೀಗಾಗಿ ಫೋನ್ ಮೂಲಕ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಿದ್ದಾರೆ. ಗೌರವ್ ಎಂಬವರು ನೀಡಿದ ದೂರು.
ಜೀವ ಬೆದರಿಕೆ ಹಾಕಿದ್ದಾರೆಂದು ಆಪಾದಿಸಿ ಪೊಲೀಸರಿಗೆ ವಿಜಯಲಕ್ಷ್ಮೀ ಅವರ ವ್ಯವಸ್ಥಾಪಕ ನಾಗರಾಜ್ ದೂರು ನೀಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಕಾನೂನು ಹೋರಾಟದಲ್ಲಿ ದರ್ಶನ್‌ಗೆ ಹಿನ್ನಡೆ ಉಂಟಾದ ನಂತರ ಧನ್ವೀರ್ ಹಾಗೂ ದರ್ಶನ್ ಪರಿವಾರ ಮಧ್ಯೆ ಮನಸ್ತಾಪ ಶುರುವಾಗಿದೆ. ವೈಯಕ್ತಿಕ ಕಾರಣಕ್ಕೆ ವಿಜಯಲಕ್ಷ್ಮೀ ಅವರ ವ್ಯವಸ್ಥಾಪಕ ನಾಗರಾಜ್‌ಗೆ ಧನ್ವೀರ್ ಕರೆ ಮಾಡಿ ಬೈದಿದ್ದಾರೆ ಎಂದು ತಿಳಿದು ಬಂದಿದೆ.
ವಿಮಾನ ಟಿಕೆಟ್‌ಗೆ ಬುಕ್ ಮಾಡಿಸಿ 5 ಲಕ್ಷ ರು. ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ಬ್ಯಾಟರಾಟನಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಧನ್ವೀರ್ ಸ್ನೇಹಿತ ಗೌತಮ್ ವಂಚನೆಗೊಳಗಾಗಿದ್ದು, ಈ ಸಂಬಂಧ ನಟ ಧನ್ವೀರ್ ಹಾಗೂ ಆತನ ಸ್ನೇಹಿತ ಶಶಿ ಮೇಲೆ ಪೊಲೀಸರಿಗೆ ಅವರು ಕೊಟ್ಟಿದ್ದಾರೆ. ಈ ದೂರಿನ ಆಧರಿಸಿ ಕೂಡ ಗಂಭೀರ ಸ್ವರೂಪವಲ್ಲ (ಎನ್‌ಸಿ) ಕೃತ್ಯ ಎಂದು ಪೊಲೀಸರು ಪರಿಗಣಿಸಿದ್ದಾರೆ. ಹಲವು ವರ್ಷಗಳಿಂದ ನನಗೆ ಧನ್ವೀರ್ ಹಾಗೂ ಶಶಿ ಪರಿಚಿತರು. ಈ ಸ್ನೇಹದಲ್ಲಿ 5 ಲಕ್ಷ ರು.ವರೆಗೆ ವಿಮಾನ ಟಿಕೆಟ್‌ಗಳನ್ನು ಅವರು ಬುಕ್ ಮಾಡಿಸಿದ್ದರು. ಅಲ್ಲದೆ ನನ್ನ ಕಾರನ್ನು ಸಹ ಧನ್ವೀರ್ ಪಡೆದಿದ್ದಾರೆ. ಆದರೆ ವಿಮಾನ ಟಿಕೆಟ್‌ಗಳಿಗೆ ವ್ಯಯಿಸಿದ 5 ಲಕ್ಷ ರು. ಹಣ ಹಾಗೂ ಕಾರನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಗೌತಮ್ ಆರೋಪಿಸಿದ್ದಾರೆ.
ಇನ್ನೊಂದೆಡೆ ಧನ್ವೀರ್ ವಿರುದ್ಧ ದೂರುಗಳು ದಾಖಲಾದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ದರ್ಶನ್ ಪತ್ನಿ ಹಾಗೂ ಅವರ ವ್ಯವಸ್ಥಾಪಕನ ಮೇಲೆ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತಮ್ಮ ಮನೆಗೆ ನುಗ್ಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಅವರ ವ್ಯವಸ್ಥಾಪಕ ನಾಗರಾಜ್, ಭೋಜ ಹಾಗೂ ಬಟಾಲಿ ಪ್ರಮೋದ್ ಬೆದರಿಸಿದ್ದಾರೆ ಎಂದು ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿದ ಪೊಲೀಸರು, ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಧನ್ವೀರ್ ಮನೆಯಲ್ಲಿ ಇಲ್ಲದ ವೇಳೆ ಅವರ ಮನೆಗೆ ತೆರಳಿ ವಿಜಯಲಕ್ಷ್ಮೀ ಹಾಗೂ ಅವರ ಸ್ನೇಹಿತರು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.