ಈಗ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಕೊಲೆ ಬೆದರಿಕೆ ಕೇಸ್‌, ಧನ್ವೀರ್‌ ಗೌಡ ತಂದೆಯಿಂದ ದೂರು ದಾಖಲು

Published : Oct 23, 2026, 08:54 PM IST
dhanveer father complaint vijayalakshmi

ಸಾರಾಂಶ

ನಟ ಧನ್ವೀರ್ ಗೌಡ ಅವರ ಮನೆಗೆ ನುಗ್ಗಿ ರೌಡಿಗಳಿಂದ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇತರ ಮೂವರ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ.

ಬೆಂಗಳೂರು (ಅ.23): ಸ್ಯಾಂಡಲ್‌ವುಡ್ ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ನಡುವಿನ ಜಟಾಪಟಿ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಧನ್ವೀರ್ ಅವರ ಮನೆಗೆ ಖುದ್ದಾಗಿ ತೆರಳಿ, ರೌಡಿಗಳನ್ನು ಕರೆಸಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪದಡಿಯಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ನಟ ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಭೋಜ ಹಾಗೂ 'ಬಾಟಲಿ ಪ್ರಮೋದ್' ಎಂಬ ನಾಲ್ವರ ವಿರುದ್ಧ ತಿಮ್ಮೇಗೌಡ ಅವರು ದೂರು ದಾಖಲಿಸಿದ್ದು, ದೂರಿನಲ್ಲಿ ಅಂದಿನ ಘಟನೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ರಾತ್ರಿ 8:30ಕ್ಕೆ ಮನೆಗೆ ಬಂದು ಗಲಾಟೆ - ದೂರಿನಲ್ಲೇನಿದೆ?

ಪೊಲೀಸ್ ಠಾಣೆಗೆ ಹಾಜರಾಗಿ ತಿಮ್ಮೇಗೌಡ ಅವರು ನೀಡಿರುವ ದೂರಿನ ಸಾರಾಂಶದ ಪ್ರಕಾರ, 'ಅಕ್ಟೋಬರ್ 21ರಂದು ನಟ ಧನ್ವೀರ್ ಮೈಸೂರಿಗೆ ಹೋಗಿದ್ದರು. ಅಂದು ರಾತ್ರಿ ಸುಮಾರು 8:30 ರ ವೇಳೆಯಲ್ಲಿ ತಿಮ್ಮೇಗೌಡ ಅವರು, ಅವರ ಪತ್ನಿ ಜಿ. ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಅವರು ಮನೆಯಲ್ಲಿದ್ದಾಗ ಯಾರೋ ಬಂದು ಬೆಲ್ ಮಾಡಿದ್ದಾರೆ. ಬಾಗಿಲು ತೆರೆದಾಗ ಒಳಗೆ ಬಂದ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಅವರು "ಧನ್ವೀರ್ ಎಲ್ಲಿದ್ದಾನೆ, ಧನ್ವೀರ್ ಅಪ್ಪ ಎಲ್ಲಿದ್ದಾನೆ?" ಎಂದು ಜೋರು ಧ್ವನಿಯಲ್ಲಿ ಕೇಳಿದ್ದಾರೆ.

ಧನ್ವೀರ್ ಊರಲ್ಲಿಲ್ಲ, ಮೈಸೂರಿಗೆ ಹೋಗಿದ್ದಾನೆ ಮತ್ತು ಆತನ ತಂದೆ ಊಟ ಮಾಡುತ್ತಿದ್ದಾರೆ ಎಂದು ಭಾರತಿ ಅವರು ಹೇಳಿದಾಗ, ಆ ಸಮಯದಲ್ಲಿ ಮನೆಗೆ ಬಂದ ಅವರ ಅಕ್ಕನ ಮಗ ಅಜಯ್ ಗೌಡ ಎಂಬಾತ "ಚಿಕ್ಕಮ್ಮ ಏನಾಯ್ತು, ಇವರ್ಯಾಕೆ ಬಂದಿದ್ದಾರೆ?" ಎಂದು ವಿಚಾರಿಸಿದ್ದಾನೆ. ಆಗ ಮ್ಯಾನೇಜರ್ ನಾಗರಾಜ್, ಅಜಯ್ ಗೌಡನನ್ನು ರೌಡಿ ಎಂದು ತಪ್ಪಾಗಿ ತಿಳಿದುಕೊಂಡು, "ನೀವು ರೌಡಿಯನ್ನು ಕರೆಸುತ್ತೀರಾ? ಈಗ ನೋಡಿ ನಾನು ರೌಡಿಗಳನ್ನು ಹೇಗೆ ಕರೆಸುತ್ತೇನೆ" ಎಂದು ಕೂಗಾಡಲು ಆರಂಭಿಸಿದ್ದಾನೆ.

ಗೌರವ್ ಶೆಟ್ಟಿ ಮೂಲಕ ರೌಡಿಗಳ ಎಂಟ್ರಿ - ಕೋಣೆಯೊಳಗೆ ಬಂದು ಬೆದರಿಕೆ

ಈ ವೇಳೆ ಊಟ ಮುಗಿಸಿ ಕೆಳಗೆ ಬಂದ ತಿಮ್ಮೇಗೌಡ ಅವರು "ನಮ್ಮ ಮನೆಗೆ ಬಂದು ಯಾವ ರೌಡಿ ಬಗ್ಗೆ ಮಾತನಾಡುತ್ತಿದ್ದೀಯಾ?" ಎಂದು ನಾಗರಾಜ್‌ನನ್ನು ಪ್ರಶ್ನಿಸಿದ್ದಾರೆ. ತಕ್ಷಣವೇ ವಿಜಯಲಕ್ಷ್ಮಿ ಅವರು ಗೌರವ್ ಶೆಟ್ಟಿ ಎಂಬಾತನಿಗೆ ಫೋನ್ ಮಾಡಿ "ಬೋಜಣ್ಣ ಹಾಗೂ ಬಾಟಲಿ ಪ್ರಮೋದ್‌ನನ್ನು ಕಳುಹಿಸು" ಎಂದು ನಾಗರಾಜ್‌ಗೆ ಹೇಳಿದ್ದಾರೆ. ನಾಗರಾಜ್ ಫೋನ್ ಮಾಡಿದ ಒಂದೆರಡು ನಿಮಿಷಗಳಲ್ಲೇ ಬೋಜ ಹಾಗೂ ಬಾಟಲಿ ಪ್ರಮೋದ್ ಎನ್ನುವವರು ಮನೆಗೆ ನುಗ್ಗಿ ಜೋರು ಧ್ವನಿಯಲ್ಲಿ ಬೆದರಿಕೆ ಹಾಕಿದ್ದಾರೆ.

ವಿಜಯಲಕ್ಷ್ಮಿಯ ತಮ್ಮ ಎಂದು ಹೇಳಿಕೊಂಡ ಬಾಟಲಿ ಪ್ರಮೋದ್ ಹಾಗೂ ಮ್ಯಾನೇಜರ್ ನಾಗರಾಜ್ ಅವರು, "ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ" ಎಂದು ಬಹಿರಂಗವಾಗಿ ಹೆದರಿಸಿದ್ದಾರೆ.

ಅಲ್ಲದೆ, ಈ ಹಿಂದೆ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಗೌರವ್ ಶೆಟ್ಟಿ ಎಂಬಾತನ ವಿರುದ್ಧ ಕೇಸ್ ದಾಖಲಾಗಿತ್ತು. ಅದೇ ಗೌರವ್ ಶೆಟ್ಟಿ ಮೂಲಕವೇ ಈಗ ಧನ್ವೀರ್ ಮನೆಗೆ ಇಬ್ಬರನ್ನು ಕರೆಸಿ ಅವಾಜ್ ಹಾಕಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪೊಲೀಸರಿಗೆ ಕರೆ ಮಾಡ್ತೀನಿ ಅಂದ ತಕ್ಷಣ ಓಡಿ ಹೋದರು

ಮನೆಗೆ ಬಂದು ಕೊಲೆ ಬೆದರಿಕೆ ಹಾಕುತ್ತಿದ್ದಾಗ ತಿಮ್ಮೇಗೌಡ ಅವರು, "ನೀವು ನಮ್ಮ ಮನೆಗೆ ಬಂದು ನಮಗೇ ಬೈದು ಕೊಲೆ ಬೆದರಿಕೆ ಹಾಕುತ್ತಿದ್ದೀರಾ, ನಾನು ಈಗಲೇ ಪೊಲೀಸರಿಗೆ ಫೋನ್ ಮಾಡಿ ಇಲ್ಲೇ ಕರೆಯಿಸುತ್ತೇನೆ" ಎಂದು ಎಚ್ಚರಿಸಿದ ತಕ್ಷಣ, ವಿಜಯಲಕ್ಷ್ಮಿ, ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ಎಲ್ಲರೂ ಒಂದೇ ಕಾರಿನಲ್ಲಿ ಕೂಗಾಡಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನಮ್ಮ ಮನೆಗೆ ಬಂದು ಬೈದು, ಕೊಲೆ ಬೆದರಿಕೆ ಹಾಕಿರುವ ವಿಜಯಲಕ್ಷ್ಮಿ, ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ಅವರನ್ನು ಠಾಣೆಗೆ ಕರೆಸಿ ಸೂಕ್ತ ವಿಚಾರಣೆ ನಡೆಸಿ, ಕಾನೂನು ಕ್ರಮ ಜರುಗಿಸಬೇಕು ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಬಂದೋಬಸ್ತ್ ನೀಡಬೇಕೆಂದು ತಿಮ್ಮೇಗೌಡ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಪ್ರಸ್ತುತ ರಾಜಾಜಿನಗರ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

₹5 ಲಕ್ಷ ಹಣ, ಕಾರು ವಾಪಸ್ ಕೊಡದೇ ಬೆದರಿಕೆ ಆರೋಪ; ನಟ ಧನ್ವೀರ್ ವಿರುದ್ಧ ಮತ್ತೊಂದು ಕೇಸ್ ದಾಖಲು
ದರ್ಶನ್‌ಗೆ ಅನ್ಯಾಯ ಮಾಡ್ತಿದ್ದಾರೆ, ಅದಕ್ಕಾಗಿಯೇ ವಿಜಯಲಕ್ಷ್ಮೀ ಮ್ಯಾನೇಜರ್‌ಗೆ ಬೈದಿದ್ದೇನೆ: ಕೇಸ್‌ ಬೆನ್ನಲ್ಲೇ ಕಿಡಿಕಿಡಿಯಾದ ಧನ್ವೀರ್‌