ಕೆಂಪೇಗೌಡ ಬಡಾವಣೆಯಲ್ಲೀಗ ಕಳ್ಳರ ಕಾಟ, 150+ ಮನೆಗಳಲ್ಲಿ ಕಟ್ಟಡ ಸಾಮಗ್ರಿಗಳು, ಯಂತ್ರೋಪಕರಣ, ತಾಮ್ರದ ವೈರ್‌ ಕಳ್ಳತನ

Published : Nov 24, 2026, 07:26 AM IST
BDA Layout

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣ ಹಂತದ ಮನೆಗಳಿಂದ ವಸ್ತುಗಳ ಕಳ್ಳತನ ಹೆಚ್ಚಾಗಿದ್ದು, ನಿವೇಶನದಾರರು ಆತಂಕಗೊಂಡಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಬಡಾವಣೆಗೆ ಹೆಚ್ಚಿನ ಭದ್ರತೆ ಮತ್ತು ಪ್ರತ್ಯೇಕ ಪೊಲೀಸ್ ಹೊರಠಾಣೆ ಸ್ಥಾಪಿಸಲು ಒತ್ತಾಯಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ನ.24): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಹತ್ವಾಕಾಂಕ್ಷೆಯ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕಾಮಗಾರಿ ವಿಳಂಬದಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ನಿವೇಶನದಾರರು ಮತ್ತು ಗುತ್ತಿಗೆದಾರರಿಗೆ ಇತ್ತೀಚಿಗೆ ಹೊಸ ತಲೆನೊವು ಶುರುವಾಗಿದೆ. ನಿರ್ಮಾಣ ಹಂತದ ಕಟ್ಟಡಗಳಿಂದ ಮತ್ತು ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಿಂದ ನಿರಂತರವಾಗಿ ನಿರ್ಮಾಣ ಸಾಮಗ್ರಿಗಳು, ಯಂತ್ರೋಪಕರಣಗಳು ಮತ್ತು ಬೀದಿ ದೀಪಗಳು, ತಾಮ್ರದ ವೈರ್‌ಗಳು ಹಾಗೂ ವಿದ್ಯುತ್‌ ಮೋಟಾರ್‌ಗಳನ್ನು ಕದಿಯುತ್ತಿರುವ ಸರಣಿ ಕೃತ್ಯಗಳು ನಡೆಯುತ್ತಿದ್ದು ನಿವೇಶನದಾರರ ನಿದ್ದೆಗೆಡಿಸಿದೆ.

ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಎಸ್‌.ಎಂ.ಕೃಷ್ಣ ರಸ್ತೆ (ಮೇಜರ್‌ ಆರ್ಟಿರಿಯಲ್‌ ರಸ್ತೆ - ಎಂಎಆರ್‌) ಸಂಚಾರಕ್ಕೆ ಮುಕ್ತವಾದ ಬಳಿಕ ಬಡಾವಣೆಯಲ್ಲಿ ನಿರ್ಮಾಣ ಚಟುವಟಿಕೆಗಳು ಗಣನೀಯವಾಗಿ ಚುರುಕುಗೊಂಡಿವೆ. 9 ಬ್ಲಾಕ್‌ಗಳನ್ನು ಒಳಗೊಂಡಿರುವ ಈ ಬೃಹತ್ ಬಡಾವಣೆಯು ತಾವರೆಕೆರೆ, ಬ್ಯಾಡರಹಳ್ಳಿ ಹಾಗೂ ಕುಂಬಳಗೋಡು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಹಂಚಿಹೋಗಿವೆ. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಸುಮಾರು 150ಕ್ಕೂ ಹೆಚ್ಚು ಮನೆಗಳಲ್ಲಿ ಕಟ್ಟಡ ಸಾಮಗ್ರಿಗಳು, ಯಂತ್ರೋಪಕರಣಗಳು, ತಾಮ್ರದ ವೈರ್‌ಗಳು ಕಳ್ಳತನ ಹೆಚ್ಚಾಗುತ್ತಿವೆ ಎಂದು ನಿವೇಶನದಾರರು ಮತ್ತು ಗುತ್ತಿಗೆದಾರರು ದೂರಿದ್ದಾರೆ.

ಜೀವನಪೂರ್ತಿ ದುಡಿದು ಕೂಡಿಟ್ಟ ಹಣದಿಂದ ಸ್ವಂತ ಸೂರಿನ ಕನಸು ಹೊತ್ತು ಮನೆ ಕಟ್ಟುತ್ತಿದ್ದೇವೆ. ಆದರೆ ದಿನೇದಿನೆ ಹೆಚ್ಚುತ್ತಿರುವ ಕಳ್ಳತನಗಳಿಂದಾಗಿ ಕುಟುಂಬಗಳು ಇಲ್ಲಿ ವಾಸಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರ ಹಾಗೂ ಬಿಡಿಎ ನಮಗೆ ಸೂಕ್ತ ಸುರಕ್ಷತೆಯ ಭರವಸೆ ನೀಡಬೇಕು ಎಂದು ನಿವೇಶನದಾರ ಎ.ಎಸ್‌.ಸೂರ್ಯಕಿರಣ್ ಆಗ್ರಹಿಸಿದ್ದಾರೆ.

ಹಗಲಿನಲ್ಲೇ ದರೋಡೆ ಯತ್ನ

ಸಿಸಿಟಿವಿ ಕ್ಯಾಮೆರಾಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಸೆರೆಯಾಗಿದ್ದರೂ ದುಷ್ಕರ್ಮಿಗಳಿಗೆ ಯಾವುದೇ ಭಯವಿಲ್ಲದಂತಾಗಿದೆ. ರಾತ್ರಿ ವೇಳೆ ಮಾತ್ರವಲ್ಲದೆ ಮುಂಜಾನೆಯೂ ಇಂತಹ ಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಆಟೋರಿಕ್ಷಾದಲ್ಲಿ ಬಂದ 3 ದುಷ್ಕರ್ಮಿಗಳು ನಿರ್ಮಾಣ ಸ್ಥಳವೊಂದರಲ್ಲಿ ದರೋಡೆಗೆ ಯತ್ನಿಸಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ನಿರ್ಜನ ರಸ್ತೆಗಳಲ್ಲಿ ಓಡಾಡುವ ನಿವಾಸಿಗಳು ಹಾಗೂ ಕಾರ್ಮಿಕರಿಗೂ ಜೀವಭಯ ಎದುರಾಗಿದೆ.

ಬಡಾವಣೆಯ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಕೆಲವರೇ ಈ ಕೃತ್ಯಗಳನ್ನು ಎಸಗುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಎನ್ನದೆ ನಿರ್ಮಾಣ ಹಂತದ ಕಟ್ಟಡಗಳಿಗೆ ಅಳವಡಿಸಿರುವ ಸಿಸಿ ಕ್ಯಾಮೆರಾ, ಮೋಟಾರ್‌ಗಳು, ವಿದ್ಯುತ್‌ ಕಂಬಗಳ, ಟ್ರಾನ್ಸ್‌ಫಾರ್ಮರ್‌ಗಳಲ್ಲಿರುವ ಉಪಕರಣಗಳನ್ನು ಕೂಡ ಕಳ್ಳತನ ಮಾಡುತ್ತಿದ್ದಾರೆ ಈ ಕುರಿತು ಕುಂಬಳಗೋಡು ಪೊಲೀಸ್‌ ಠಾಣೆಗೆ ದೂರು ನೀಡುತ್ತಿದ್ದರೂ ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

ಭದ್ರತೆ ಒದಗಿಸಲು ಆಗ್ರಹ

ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗುವ ಗುತ್ತಿಗೆದಾರರಿಗೆ ಕಳ್ಳರು ಬೆದರಿಕೆ ಹಾಕುತ್ತಿದ್ದು, ಇದರಿಂದಾಗಿ ಅನೇಕರು ಮುಕ್ತವಾಗಿ ದೂರು ದಾಖಲಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡಾವಣೆಯಲ್ಲಿ ರಾತ್ರಿ ಗಸ್ತು ಮತ್ತು ಪೊಲೀಸ್ ಕಣ್ಗಾವಲು ಸಮರ್ಪಕವಾಗಿ ಇಲ್ಲ. ಇದರಿಂದ ಕಳ್ಳತನ, ದರೋಡೆಯಂತಕ ಕೃತ್ಯಗಳು ನಡೆಯುತ್ತಿವೆ. ಬಿಡಿಎ ಮತ್ತು ಪೊಲೀಸರು ನಿವಾಸಿಗಳಿಗೆ ಮತ್ತು ಬಡಾವಣೆಗೆ ಭದ್ರತೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಎನ್‌ಪಿಕೆಎಲ್ ಓಪನ್ ಫೋರಂ ಆಗ್ರಹಿಸಿದೆ.

ಈ ಕುರಿತು ಮಾತನಾಡಿದ ಫೋರಂ ಕಾರ್ಯದರ್ಶಿ ಎಂ.ಅಶೋಕ್, ತಾವರೆಕೆರೆ, ಬ್ಯಾಡರಹಳ್ಳಿ ಹಾಗೂ ಕುಂಬಳಗೋಡು ಮೂರು ಠಾಣೆಗಳ ಗಡಿ ವ್ಯಾಪ್ತಿಯ ಗೊಂದಲದಿಂದಾಗಿ ನಿರಂತರ ಕಣ್ಗಾವಲು ಇಲ್ಲದಂತಾಗಿದೆ. ಕೂಡಲೇ ಗೃಹ ಸಚಿವರು ಮಧ್ಯಪ್ರವೇಶಿಸಿ ಬಡಾವಣೆಯೊಳಗೆ ಪ್ರತ್ಯೇಕ ಪೊಲೀಸ್ ಹೊರಠಾಣೆ ತೆರೆಯಬೇಕು, ಮುಖ್ಯ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಮತ್ತು ನಿರಂತರ ಗಸ್ತು ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ

ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರೂ, ಪೊಲೀಸರು ಕಳ್ಳರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು, ಅವರು ಬಳಸಿದ್ದ ಆಟೋ ರಿಕ್ಷಾ ಹಾಗೂ ವ್ಯಾನ್‌ಗಳ ನೋಂದಣಿ ಸಂಖ್ಯೆ ಮತ್ತು ಖಚಿತ ಭಾವಚಿತ್ರಗಳ ಸಮೇತ ಹಿಡಿದು ಒಪ್ಪಿಸಿದರೂ ಪೊಲೀಸರು ಯಾವುದೇ ಕಾನೂನು ಕ್ರಮ ಜರುಗಿಸುತ್ತಿಲ್ಲ. ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸದೆ ಠಾಣೆಯಿಂದಲೇ ಬಿಟ್ಟು ಕಳುಹಿಸಲಾಗುತ್ತಿದೆ. ಕಳ್ಳತನಕ್ಕೆ ಕೇವಲ 1-2 ಕಿ.ಮೀ. ಸುತ್ತಮುತ್ತಲಿನ ಸ್ಥಳೀಯರನ್ನೇ ಬಳಸಿಕೊಳ್ಳಲಾಗುತ್ತಿದ್ದು, ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತ ಮಕ್ಕಳನ್ನು ಕಳ್ಳತನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲ ಗುತ್ತಿಗೆದಾರರು, ನಿವೇಶನದಾರರು ಗಂಭೀರವಾಗಿ ಆರೋಪಿಸಿದ್ದಾರೆ.

PREV
Read more Articles on
click me!

Recommended Stories

ಹೈಕೋರ್ಟ್‌ನಲ್ಲಿ ವಕೀಲರ ಗದ್ದಲ: ಬೇಷರತ್ ಕ್ಷಮಾಪಣೆ ಹಿನ್ನೆಲೆ ಹೈಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ಕೇಸ್ ಕ್ಲೋಸ್, ಏನಿದು ಪ್ರಕರಣ?
ಮೇಕೆದಾಟು ಯೋಜನೆಯಲ್ಲಿ ಮಹತ್ವದ ಬೆಳವಣಿಗೆ: ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ