
ಟೀ ಕುಡಿಯಲು ಕೆಫೆಗೆ ಹೋದ ಸಮಯವನ್ನು ನೋಡಿ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಕದ್ದ ಘಟನೆಯು ನಡೆದಿದೆ. ಹೌದು, ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ (HRBR Layout) ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗಳು ವಾಸವದ್ದರು. ಅವರು ಸಂಜೆ ಟೀ ಕುಡಿಯಲು ಕೆಫೆಗೆ ಹೋದಾಗ, ಅವರ ಮನೆಯ ಬೀಗ ಮುರಿದು ಸುಮಾರು 30 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ.
ಎಚ್‌ಆರ್‌ಬಿಆರ್ ಲೇಔಟ್ 2ನೇ ಬ್ಲಾಕ್‌ನಲ್ಲಿರುವ ಬಾಲಾಜಿ ಜಿ (34) ಎಂಬುವವರ ಮೂರನೇ ಮಹಡಿಯ ಫ್ಲಾಟ್‌ನಲ್ಲಿ ಈ ಕಳ್ಳತನ ನಡೆದಿದೆ. ಶನಿವಾರ ಸಂಜೆ 4:30 ರಿಂದ 6:30 ರ ನಡುವೆ ಈ ಕೃತ್ಯ ನಡೆದಿದೆ.
ಸಾಫ್ಟ್‌ವೇರ್ ದಂಪತಿಗಳು ಮನೆಗೆ ಬೀಗ ಹಾಕಿ, ಟೀ ಕುಡಿಯೋಣ ಎಂದು ಹತ್ತಿರದ ಕೆಫೆಗೆ ಹೋಗಿದ್ದರು. ಸಂಜೆ 6.30ಕ್ಕೆ ಮನೆಗೆ ಮರಳಿದಾಗ, ಮುಖ್ಯ ಬಾಗಿಲಿನ ಬೀಗ ಮುರಿದಿರೋದು ಗೊತ್ತಾಗಿದೆ. ಒಳಗೆ ಹೋಗಿ ನೋಡಿದಾಗ ಬೆಡ್‌ರೂಮ್‌ನ ಕಪಾಟುಗಳು ಒಪನ್ ಆಗಿತ್ತು, ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು.
ಸುಮಾರು 250 ಗ್ರಾಂ ಚಿನ್ನದ ಆಭರಣಗಳು, ಪೂಜಾ ಕೋಣೆಯಲ್ಲಿದ್ದ 300 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳು ಕಳ್ಳತನ ಆಗಿವೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು, ಬೆರಳಚ್ಚು ತಜ್ಞರು, ವಿಧಿವಿಜ್ಞಾನದ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಅಪಾರ್ಟ್‌ಮೆಂಟ್, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಂದಹಾಗೆ ಬಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 305 ಮತ್ತು 331 ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.