
ಬೆಂಗಳೂರು: ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ನಂಬಿಸಿ ₹5 ಲಕ್ಷ ಪಡೆದು ವಂಚಿಸಿದ ಆರೋಪಿಯನ್ನು ಡಿ.ಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಾಂಪುರ ನಿವಾಸಿ ಅಬ್ದುಲ್ ಹಸನ್ (30) ಬಂಧಿತ ಆರೋಪಿ. ಹೆಗಡೆನಗರ ಸಮೀಪ ಬಾಲಾಜಿ ಲೇಔಟ್ ನಿವಾಸಿ ನೂರಿ ಎಂಬ ಮಹಿಳೆ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಅಬ್ದುಲ್ ಹಸನ್ ಜ.16 ರಂದು ಶಾಂಪುರ ಮುಖ್ಯರಸ್ತೆಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಇರುವ ತಮ್ಮ ಮನೆ ಖಾಲಿ ಆಗಲಿದ್ದು, ಅದನ್ನು ನಿಮಗೆ ಕೊಡುತ್ತೇನೆ ಎಂದು ದೂರುದಾರ ಮಹಿಳೆಯನ್ನು ನಂಬಿಸಿ ₹5 ಲಕ್ಷ ಹಣವನ್ನು ಪಡೆದು ವಂಚಿಸಿದ್ದ. ಹಣವನ್ನು ವಾಪಸ್ಸು ಕೊಡುವಂತೆ ಕೇಳಿದ್ದಾಗ ಮಹಿಳೆಗೆ ನಿಂದಿಸಿದ್ದ. ನೊಂದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ, ಡಿ.ಜೆ ಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪಿಸಿ ಕಮಿಷನರ್ ಕಚೇರಿಗೆ ದೂರು ನೀಡಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಇದೇ ರೀತಿ ಸಾಕಷ್ಟು ಜನರಿಗೆ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಕಾರ್ಯಾಲಯದ ಕಾರ್ಯದರ್ಶಿ ಹೆಸರಿನಲ್ಲಿ ರಾಜ್ಯ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯತ್ವ ಕೊಡಿಸುವುದಾಗಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣದ ಸಂಬಂಧ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಸಿ ಜಗದೀಶ್ ಬಂಧಿತ ಆರೋಪಿ. ಖಾಸಗಿ ಕಾಲೇಜಿನ ಪ್ರೊ. ವೆಂಕಟೇಶ್ ಮುತ್ತಣ್ಣ ಎಂಬುವರು ನೀಡಿದ ದೂರಿನನ್ವಯ ಕೆ.ಸಿ. ಜಗದೀಶ್ ಹಾಗೂ ಆತನ ಸ್ನೇಹಿತರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮುತ್ತಣ್ಣ ಅವರಿಗೆ ಜಗದೀಶ್ ಪರಿಚಯವಾಗಿದ್ದು ಆಗ ತನಗೆ ಮುಖ್ಯಮಂತ್ರಿ ಅವರ ಕಾರ್ಯಾಲಯದ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಂಪರ್ಕವಿದೆ. ಈ ಸ್ನೇಹ ಬಳಸಿಕೊಂಡು ತಮಗೆ ಕೆಪಿಎಸ್‌ಸಿ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ ಜಗದೀಶ್ ವಂಚಿಸಿದ್ದ. ಈ ಕೃತ್ಯಕ್ಕೆ ಆತನ ಸ್ನೇಹಿತರು ಸಹಕರಿಸಿದ್ದಾರೆ ಎಂಬ ಆರೋಪವಿದೆ. ಈ ವಂಚನೆ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಅವರ ಜಂಟಿ ಕಾರ್ಯದರ್ಶಿ ರಾಮಯ್ಯ ಅವರು, ಕೂಡಲೇ ಸಿಸಿಬಿ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಈ ಸಂಬಂಧ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.