ಟ್ರಾಫಿಕ್ ಜಾಂ ಹೆಚ್ಚಿರುವ ರಸ್ತೆಗಳಲ್ಲಿ ತೆರಿಗೆ ಕಟ್ಟಬೇಕು?

By Kannadaprabha NewsFirst Published Oct 11, 2019, 9:09 AM IST
Highlights

ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಇರುವ ರಸ್ತೆಗಳಿಗೆ ತೆರಿಗೆ ಹಾಕುವ ಹೊಸ ಕ್ರಮ ಒಂದರ ಬಗ್ಗೆ ಚಿಂತನೆ ನಡೆದಿದೆ. 

ಬೆಂಗಳೂರು [ಅ.11]:  ನಗರದಲ್ಲಿ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ನಿಯಂತ್ರಿಸಲು ‘ದಟ್ಟಣೆ ತೆರಿಗೆ’ ವಿಧಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದು ಬಿಎಂಟಿಸಿ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕ ಅನುಪಮ್‌ ಅಗರ್ವಾಲ್‌ ತಿಳಿಸಿದರು.

ಬಿಎಂಟಿಸಿ ಬಸ್‌ಗಳಿಗೆ ಪ್ರತ್ಯೇಕ ಪಥ ನಿರ್ಮಾಣ ಸಂಬಂಧ ಶುಕ್ರವಾರ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯ ವೇಳೆ ಈ ವಿಚಾರ ಪ್ರಸ್ತಾಪಿಸಿದ ಅವರು, ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಲ್ಲಿ ಖಾಸಗಿ ವಾಹನ ಸಂಚರಿಸಲು ತೆರಿಗೆ ಪಾವತಿಸುವುದೇ ದಟ್ಟಣೆ ತೆರಿಗೆಯಾಗಿದೆ. ಈ ದಟ್ಟಣೆ ತೆರಿಗೆ ವಿದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ವಾಹನ ಸಂಚಾರ, ಮಾಲಿನ್ಯ ನಿಯಂತ್ರಣ ಹಾಗೂ ಸಾರ್ವಜನಿಕ ಸಾರಿಗೆ ಬಲಗೊಳಿಸಲು ಈ ಹಣ ಬಳಸಲಾಗುತ್ತದೆ. ಈ ಮಾದರಿಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ದಟ್ಟಣೆ ತೆರಿಗೆ ವಿಧಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ನಗರದಲ್ಲಿ ಹೊರವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಓಲ್ಡ್‌ ಏರ್‌ಪೋರ್ಟ್‌, ಓಲ್ಡ್‌ ಮದ್ರಾಸ್‌ ರಸ್ತೆ, ಬಳ್ಳಾರಿ ರಸ್ತೆ, ಬನ್ನೇರುಘಟ್ಟರಸ್ತೆ, ಕನಕಪುರ ರಸ್ತೆ, ಮಾಗಡಿ ರಸ್ತೆ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ, ತುಮಕೂರು ರಸ್ತೆ ಮೊದಲಾದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ತೆರಿಗೆ ವಿಧಿಸುವುದರಿಂದ ಖಾಸಗಿ ವಾಹನಗಳ ಸಂಚಾರ ಕೊಂಚ ನಿಯಂತ್ರಣಕ್ಕೆ ಬರಲಿದೆ. ಆದರೆ, ಈ ಬಗ್ಗೆ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ಅ.20ರಂದು ಪರೀಕ್ಷಾರ್ಥ ಸಂಚಾರ:

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮಾತನಾಡಿ, ಬಿಎಂಟಿಸಿ, ಬೆಂಗಳೂರು ಸಂಚಾರ ಪೊಲೀಸ್‌, ಬಿಬಿಎಂಪಿ ಸಹಯೋಗದಲ್ಲಿ ಪ್ರತ್ಯೇಕ ಪಥ ಯೋಜನೆ ರೂಪಿಸಲಾಗಿದೆ. ಈ ಪ್ರಾಯೋಗಿಕ ಯೋಜನೆಗಾಗಿ .15 ಕೋಟಿ ಮೀಸಲಿಡಲಾಗಿದೆ. ಪ್ರಾಯೋಗಿಕವಾಗಿ ಮೊದಲಿಗೆ ಕೆ.ಆರ್‌.ಪುರ ಟಿನ್‌ ಫ್ಯಾಕ್ಟರಿಯಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಜಂಕ್ಷನ್‌ ವರೆಗೆ ಪ್ರತ್ಯೇಕ ಪಥ ನಿರ್ಮಿಸಲಾಗುತ್ತಿದೆ. ನವೆಂಬರ್‌ 1ರಿಂದ ಸದರಿ ಮಾರ್ಗದಲ್ಲಿ ಪ್ರಾಯೋಗಿಕ ಬಸ್‌ ಸಂಚಾರ ಆರಂಭವಾಗಲಿದೆ. ಅದಕ್ಕೂ ಮುನ್ನ ಅ.20ರಂದು ಪರೀಕ್ಷಾರ್ಥ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಮಾರ್ಗದಲ್ಲಿ ಪ್ರತಿ ದಿನ 768 ಬಸ್‌ಗಳು 6596 ಟ್ರಿಪ್‌ ಮಾಡುತ್ತಿವೆ. ಸಂಚಾರ ದಟ್ಟಣೆಯ ಕಾರಣದಿಂದ ಗಂಟೆಗೆ 7ರಿಂದ 10 ಕಿ.ಮೀ. ಮಾತ್ರ ಬಸ್‌ಗಳು ಸಂಚರಿಸುತ್ತಿವೆ. ಪ್ರತ್ಯೇಕ ಪಥದಿಂದ ಗಂಟೆಗೆ 20 ಕಿ.ಮೀ. ಸಂಚರಿಸುವ ನಿರೀಕ್ಷೆಯಿದೆ. ಈ ಪಥವನ್ನು ಬಿಎಂಟಿಸಿ ಬಸ್‌ ಹಾಗೂ ತುರ್ತು ಸೇವಾ ವಾಹನಗಳ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಇತರೆ ವಾಹನಗಳ ಮೇಲೆ ನಿಗಾವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಬಿಎಂಟಿಸಿ ಬಸ್‌ಗಳು ಮಾತ್ರ ಈ ಪ್ರತ್ಯೇಕ ಪಥ ಬಳಕೆ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಲಿದೆ ಎಂದರು.

ಇದೇ ವೇಳೆ ಸಭೆಯಲ್ಲಿ ಭಾಗಿಯಾಗಿದ್ದ ಬಸ್‌ ಪ್ರಯಾಣಿಕರ ವೇದಿಕೆ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಪ್ರತ್ಯೇಕ ಬಸ್‌ ಪಥ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇದನ್ನು ಉತ್ತಮಪಡಿಸಲು ಸಲಹೆಗಳನ್ನು ನೀಡಿದರು.

click me!