ಒಡೆದ ಕೆರೆ : ದ್ವೀಪವಾದ ಬಡಾವಣೆಗಳು!

By Kannadaprabha NewsFirst Published Oct 11, 2019, 8:17 AM IST
Highlights

ಧಾರಾಕಾರ ಮಳೆಯಿಂದ ಕೆರೆ ಕೋಡಿ ಒಡೆದು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಬಡಾವಣೆ ಸಂಪೂರ್ಣ ದ್ವೀಪವಾಗಿದೆ. 

ಬೆಂಗಳೂರು [ಅ.11]:  ನಗರದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ದೊಡ್ಡಬಿದರಕಲ್ಲು ಕೆರೆ ಕೋಡಿ ಒಡೆದು ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಮನೆ ಬಳಕೆಯ ವಸ್ತುಗಳು ಸೇರಿದಂತೆ 100ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿವೆ.

8ನೇ ಮೈಲಿ ಪೀಣ್ಯ ಬಳಿಯ ದೊಡ್ಡಬಿದರಕಲ್ಲು ಕೆರೆ ತುಂಬಿ ಕೋಡಿ ಒಡೆದು ಯಶವಂತಪುರ ವಿಧಾಸಭಾ ಕ್ಷೇತ್ರದ ಭವಾನಿ ನಗರ, ಅನ್ನಪೂರ್ಣೇಶ್ವರಿ ಲೇಔಟ್‌, ಮುನೇಶ್ವರ ಲೇಔಟ್‌ ಹಾಗೂ ಅಂದಾನಪ್ಪ ಲೇಔಟ್‌ನ ತಗ್ಗು ಪ್ರದೇಶಗಳು ಜಲಾವೃತಗೊಂಡು ಅಕ್ಷರಶಃ ದ್ವೀಪಗಳಾಗಿ ರೂಪಗೊಂಡಿದ್ದವು. ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದು, ನಡು ರಸ್ತೆಗಳಲ್ಲಿ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ.

ಸುಮಾರು 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಕಾರು, ಬೈಕು, ಆಟೋ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ವಾಹನಗಳು ನೀರಿನಲ್ಲಿ ಮುಳುಗಿವೆ. ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮನೆಯಲ್ಲಿ ಬಟ್ಟೆ, ಪಾತ್ರೆ, ದಿನಸಿ ವಸ್ತುಗಳು, ಟಿವಿ, ಫ್ರಿಡ್ಜ್‌, ವಾಷಿಂಗ್‌ ಮಿಷನ್‌ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್‌ ವಸ್ತುಗಳು ನೀರು ಪಾಲಾಗಿವೆ. ಬುಧವಾರ ರಾತ್ರಿ ಇಡೀ ನಿವಾಸಿಗಳು ಮನೆಯಿಂದ ನೀರು ಹೊರ ಹಾಕುವುದಕ್ಕೆ ಹರ ಸಾಹಸ ಪಡಬೇಕಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಮಾರು 41 ಎಕರೆ ಇರುವ ದೊಡ್ಡಬಿದರಕಲ್ಲು ಕೆರೆ ಕೋಡಿ ನೀರು ಬಡಾವಣೆಗಳಿಗೆ ನುಗ್ಗಿತು. 8 ಜೆಸಿಬಿಗಳಿಂದ ತಾತ್ಕಾಲಿಕ ತಡೆ ಗೋಡೆ ನಿರ್ಮಿಸಿ ಕೋಡಿ ನೀರು ಮಾದವಾರ ಕೆರೆ ಹೋಗುವಂತೆ ಮಾಡಲಾಗಿದೆ.

ನಿರಾಶ್ರಿತ ಕೇಂದ್ರ:

ಭಾರೀ ಪ್ರಮಾಣದಲ್ಲಿ ನೀರು ನುಗ್ಗಿ ತೀವ್ರ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ದೊಡ್ಡಬಿದರಕಲ್ಲು ಸರ್ಕಾರಿ ಶಾಲೆಯಲ್ಲಿ ಬಿಬಿಎಂಪಿ ನಿರಾಶ್ರಿತ ಕೇಂದ್ರ ಆರಂಭಿಸಿದ್ದು, ನಿರಾಶ್ರಿತ ಕೇಂದ್ರದಲ್ಲಿ ಹೊದಿಕೆ, ಕುಡಿಯುವ ನೀರಿನ ವ್ಯವಸ್ಥೆ, ಸೊಳ್ಳೆ ಔಷಧಿ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 500 ಮಂದಿಗೆ ಗುರುವಾರ ಇಸ್ಕಾನ್‌ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ಇಂದಿರಾ ಕ್ಯಾಂಟೀನ್‌ನಿಂದ ಉಪಹಾರದ (ತಿಂಡಿ) ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಪರಿಸ್ಥಿತಿ ಅವಲೋಕನ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜರಾಜೇಶ್ವರಿ ನಗರದ ವಿಶೇಷ ಆಯುಕ್ತ ಎಂ.ಲೋಕೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

500 ಕಿಟ್‌ ದಿನಸಿ ಕಿಟ್‌ ವಿತರಣೆ

ನಿರಾಶ್ರಿತರಿಗೆ ಬಿಬಿಎಂಪಿ ವತಿಯಿಂದ ಗುರುವಾರ ಮಧ್ಯಾಹ್ನ ಮತ್ತು ಸಂಜೆ ದಿನಸಿ ಪೊಟ್ಟಣಗಳನ್ನು ವಿತರಣೆ ಮಾಡಲಾಗಿದೆ. ಒಂದು ದಿನಸಿ ಪೊಟ್ಟಣದಲ್ಲಿ 2 ಕೆ.ಜಿ ಅಕ್ಕಿ, 1 ಕೆ.ಜಿ. ಸಕ್ಕರೆ, 1 ಬೆಳೆ, 1 ಕೆ.ಜಿ ರವೆ, 1 ಲೀಟರ್‌ ಎಣ್ಣೆ, 1 ಕೆ.ಜಿ ಉಪ್ಪು ಇರುತ್ತದೆ.

ಸ್ಥಳಕ್ಕೆ ಭೇಟಿ ನೀಡಲು ವಿಮಾ ಕಂಪನಿಗಳಿಗೆ ಸೂಚನೆ

ಪ್ರವಾಹ ಉಂಟಾದ ಭವಾನಿ ನಗರ, ಅನ್ನಪೂರ್ಣೇಶ್ವರಿ ಲೇಔಟ್‌, ಮುನೇಶ್ವರ ಲೇಔಟ್‌ ಹಾಗೂ ಅಂದಾನಪ್ಪ ಲೇಔಟ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ವಾಹನಗಳು ಹಾನಿಗೆ ಒಳಗಾಗಿವೆ. ಈ ಹಿನ್ನೆಲೆಯಲ್ಲಿ ವಿಮಾ ಕಂಪನಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲೇ ತಪಾಸಣೆ ಮಾಡುವುದಕ್ಕೆ ಸೂಚನೆ ನೀಡಲಾಗುವುದು. ಇನ್ನು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ಹಾನಿಗೊಳಗಾಗಿರುವ ಬಗ್ಗೆ ಪಾಲಿಕೆಯ ಕಂದಾಯ ಅಧಿಕಾರಿಗಳು ಅಂದಾಜು ಮಾಡಿ ವರದಿ ನೀಡಲಿದ್ದಾರೆ. ನಂತರ ನಿಯಮದ ಪ್ರಕಾರ ಪರಿಹಾರ ನೀಡಲಾಗುವುದು ಎಂದು ಆಯುಕ್ತರು ತಿಳಿಸಿದರು.

ಮೇಯರ್‌ ಪರಿಶೀಲನೆ

ದೊಡ್ಡಬಿದರಕಲ್ಲು ಪ್ರವಾಹ ಪ್ರದೇಶದಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಹಾಗೂ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದರು.

ರಾಜಕಾಲುವೆ ಮಾರ್ಗ ಬದಲಿಸಿದ್ದಕ್ಕೆ ಅನಾಹುತ!

ಅರ್ಪಾರ್ಟ್‌ಮೆಂಟ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜಕಾಲುವೆ ಮಾರ್ಗ ಬದಲಾಯಿಸಲಾಗಿದೆ. ಇದರಿಂದ ಬಡಾವಣೆಗಳಿಗೆ ನೀರು ನುಗ್ಗಿದೆ. ಕಳೆದ ಆರೇಳು ವರ್ಷಗಳಿಂದ ಮಳೆ ಬಂದರೆ ಮನೆಗೆ ನೀರು ನುಗ್ಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಮಲ್ಲೇಶ್‌ ಆರೋಪಿಸಿದ್ದಾರೆ.

ಏಕಾಏಕಿ ದಿನಸಿ ಅಂಗಡಿ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ 5 ಅಕ್ಕಿ ಚೀಲ, 3 ಸಕ್ಕರೆ ಚೀಲ ಹಾಗೂ 2500 ರು ನಗದು ನೀರು ಪಾಲಾಗಿದೆ.

-ರಶ್ಮಿ, ಅಂಗಡಿ ವ್ಯಾಪಾರಿ.

 ಪ್ರವಾಹದಿಂದ ಮನೆಯಲ್ಲಿರುವ ಬಟ್ಟೆ, ಆಹಾರ ಸಾಮಾಗ್ರಿ ಸಂಪೂರ್ಣವಾಗಿ ನೀರು ಪಾಲಾಗಿದೆ. ಹಾಗಾಗಿ, ಸಂತ್ರಸ್ತರಿಗೆ ತಕ್ಷಣದ ಅಗತ್ಯತೆಗಳನ್ನು ಪೂರೈಸಲು ಪಾಲಿಕೆಯಿಂದ ಪರಿಹಾರ ಒದಗಿಸುವುದಕ್ಕೆ ಬಿಬಿಎಂಪಿ ಚಿಂತನೆ ಮಾಡಿದೆ.

-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

click me!