ಬಿಬಿಎಂಪಿಯಿಂದ ಮೂವರು ಅಮಾನತು

By Kannadaprabha NewsFirst Published Oct 11, 2019, 8:08 AM IST
Highlights

ಬಿಬಿಎಂಪಿಗೆ ನೂತನ ಮೇಯರ್ ಆಯ್ಕೆಯಾದ ಕೆಲವೇ ದಿನಗಳಲ್ಲಿ ಅಲ್ಲಿಂದ ಮೂವರನ್ನು ಅಮಾನತು ಮಾಡಲಾಗಿದೆ. 

ಬೆಂಗಳೂರು [ಅ.11]:  ಅಮಾನಿ ಬೆಳ್ಳಂದೂರು ಗ್ರಾಮದಲ್ಲಿ ಭೂಪರಿವರ್ತನೆಗೆ ಒಳಪಡದ 32.27 ಎಕರೆ ಆಸ್ತಿಯನ್ನು ಸ್ಟೆರ್ಲಿಂಗ್‌ ಹರ್ಬನ್‌ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆಗೆ ಕಾನೂನು ಬಾಹಿರವಾಗಿ ಖಾತಾ ಮಾಡಿಕೊಟ್ಟಆರೋಪದ ಮೇಲೆ ಪಾಲಿಕೆಯ ಮೂವರು ಕಂದಾಯ ಅಧಿಕಾರಿಗಳನ್ನು ಅಮಾನತ್ತು ಮಾಡಿ ಬಿಬಿಎಂಪಿ ಆಯುಕ್ತರು ಆದೇಶಿಸಿದ್ದಾರೆ.

ಹೂಡಿ ಉಪ ವಿಭಾಗದ ಕಂದಾಯ ಪರಿವೀಕ್ಷಕ ಲೋಕೇಶ್‌ ಬಾಬು, ಹೂಡಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೊಡ್ಡಶಾಮಚಾರಿ, ಯಲಹಂಕ ವಿಭಾಗದ ಕಂದಾಯ ಅಧಿಕಾರಿ ಕೆಂಪರಂಗಯ್ಯ ಅಮಾನತ್ತು ಗೊಂಡ ಅಧಿಕಾರಿಗಳಾಗಿದ್ದಾರೆ.

ಪ್ರಕರಣದ ಸಂಬಂಧ ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಆಯುಕ್ತರು ಸಲ್ಲಿಸಿರುವ ವರದಿ ಆಧರಿಸಿ ಈ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಈ ಅಧಿಕಾರಿಗಳು ನೀಡಿದ ದಾಖಲೆಗಳನ್ನು ಪರಿಶೀಲನೆ ಮಾಡದೇ ಅನುಮೋದನೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಎರವಲು ಸೇವೆ ಮೇಲೆ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌.ಆರ್‌.ನಗರ ವಲಯದ ಉಪ ಆಯುಕ್ತ ಶಿವೇಗೌಡ ಹಾಗೂ ಮಹದೇವಪುರದ ಜಂಟಿ ಆಯುಕ್ತ ಜಗದೀಶ್‌ ಅವರನ್ನು ಮಾತೃ ಇಲಾಖೆ ಹಿಂತಿರುಗಿಸಲು ಆಯುಕ್ತರು ಸೂಚನೆ ನೀಡಿದ್ದಾರೆ.

ಸ್ಟೆರ್ಲಿಂಗ್‌ ಹರ್ಬನ್‌ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆಯ ನಿರ್ದೇಶಕ ಶಂಕರ್‌ ಶಾಸ್ತ್ರಿ ಅಮಾನಿ ಬೆಳ್ಳಂದೂರು ಖಾನೆಯ ಗ್ರಾಮಕ್ಕೆ ಸೇರಿದ ವಿವಿಧ ಸರ್ವೆ ಸಂಖ್ಯೆಯಲ್ಲಿ ಬರುವ ಒಟ್ಟು 33.31 ಎಕರೆಯಲ್ಲಿ 1.4 ಎಕರೆ ಖರಾಬು ಹೊರತು ಪಡಿಸಿ ಉಳಿದ 32.27 ಎಕರೆ ಸ್ವತ್ತಿಗೆ ಬಿಡಿಎಯಿಂದ ಅಭಿವೃದ್ಧಿ ಯೋಜನಾ ನಕ್ಷೆ ಪಡೆದುಕೊಂಡು ಖಾತೆ ಮಾಡಿಕೊಡುವಂತೆ ಪಾಲಿಕೆಗೆ ಸಕಾಲದಡಿ 2018ರ ಡಿ.10ರಂದು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಿಲ್ಲದ್ದರೂ ಕಂದಾಯ ಪರಿವೀಕ್ಷಕರು ಮೇಲಾಧಿಕಾರಿಗಳಿಗೆ ಖಾತಾ ಮಾಡುವುದಕ್ಕೆ ಶಿಫಾರಸು ಮಾಡಿದ್ದರು. ಇನ್ನು ಉಪ ಆಯುಕ್ತ ಮತ್ತು ವಲಯ ಜಂಟಿ ಆಯುಕ್ತರು ಸ್ಟೆರ್ಲಿಂಗ್‌ ಹರ್ಬನ್‌ ಇನ್‌ಫ್ರಾ ಪ್ರಾಜೆಕ್ಟ್$್ಸ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿದ ದಿನವೇ ಅಂದರೆ 2018ರ ಡಿ.10ರಂದು ಅನುಮೋದನೆ ನೀಡಲಾಗಿತ್ತು.

ಜತೆಗೆ ಕೆಎಂಸಿ ಕಾಯ್ದೆ ಪ್ರಕಾರ ಹೊಸದಾಗಿ ಖಾತೆ ಮಾಡಿಕೊಡುವಾಗ ಪ್ರಸಕ್ತ ವರ್ಷ ಸೇರಿದಂತೆ ಹಿಂದಿನ ಆರು ವರ್ಷ ಒಟ್ಟು ಏಳು ವರ್ಷದ ಆಸ್ತಿ ತೆರಿಗೆ ಪಡೆದು ಖಾತೆ ನೀಡಬೇಕು. ಆದರೆ, ಕಂದಾಯ ಅಧಿಕಾರಿಗಳು ಸ್ಟೆರ್ಲಿಂಗ್‌ ಹರ್ಬನ್‌ ಇನ್‌ಫ್ರಾ ಪ್ರಾಜೆಕ್ಟ್$್ಸ ಸಂಸ್ಥೆಯಿಂದ ಕೇವಲ ಒಂದು ವರ್ಷದ ಆಸ್ತಿ ತೆರಿಗೆ ಪಡೆದು ಖಾತಾ ಮಾಡಿಕೊಟ್ಟಿದ್ದರು. ಈ ಕುರಿತು ಪಾಲಿಕೆಯ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ವರದಿ ನೀಡಿದ ಹಿನ್ನೆಲೆಯಲ್ಲಿ ಮೂವರು ಕಂದಾಯ ಅಧಿಕಾರಿಗಳು ಅಮಾನತ್ತು ಮಾಡಿ ಆಯುಕ್ತರು ಆದೇಶಿಸುವುದರ ಜತೆಗೆ ಇಬ್ಬರು ಅಧಿಕಾರಿಗಳನ್ನು ಮಾತೃ ಇಲಾಖೆ ವಾಪಾಸ್‌ ಕಳಿಸುವುದಕ್ಕೆ ಸೂಚಿಸಿದ್ದಾರೆ.

click me!