Bengaluru ಖಾಲಿ ನಿವೇಶನ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಡಿಕೆ ಶಿವಕುಮಾರ್

Published : Aug 02, 2026, 07:31 AM IST
DK Shivakumar

ಸಾರಾಂಶ

ಸರ್ಕಾರ ಅಥವಾ ಸೊಸೈಟಿಯಿಂದ ಪಡೆದ ಖಾಲಿ ನಿವೇಶನಗಳಲ್ಲಿ 5 ವರ್ಷದೊಳಗೆ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಯಮ ಉಲ್ಲಂಘಿಸುವ ಮಾಲೀಕರಿಗೆ ದುಪ್ಪಟ್ಟು ತೆರಿಗೆ ವಿಧಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದಾರೆ.

ಬೆಂಗಳೂರು: ಸರ್ಕಾರ ಅಥವಾ ಸೊಸೈಟಿಯಿಂದ ಪಡೆದ ಯಾವುದೇ ರೀತಿಯ ಖಾಲಿ ನಿವೇಶನಗಳಲ್ಲಿ 5 ವರ್ಷದೊಳಗೆ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಹೆಬ್ಬಾಳದ ಬಳ್ಳಾರಿ ರಸ್ತೆಯ ಫ್ಲೈಓವರ್ ಬಳಿ ಜಿಬಿಎ ಏರ್ಪಡಿಸಿದ್ದ ‘ತ್ಯಾಜ್ಯದಿಂದ ಸ್ವಾತಂತ್ರ್ಯಅಭಿಯಾನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಡಿಎ, ಸಿಐಟಿಬಿ, ಯಾವುದೇ ಸೊಸೈಟಿಯಿಂದ ಪಡೆದ ನಿವೇಶನಗಳನ್ನು ಇನ್ವೆಸ್ಟ್ ಮೆಂಟ್ ಎಂದು ದೀರ್ಘ ಕಾಲ ಖಾಲಿ ಬಿಟ್ಟರೆ, ಅಂತಹ ನಿವೇಶನಗಳನ್ನು ಹಿಂಪಡೆಯಲಾಗುವುದು. ಖಾಲಿ ನಿವೇಶನಗಳಿಗೆ ಕಾಂಪೌಂಡ್ ನಿರ್ಮಿಸಬೇಕು. ಇಲ್ಲವೆ, ಚಿಕ್ಕದಾಗಿ ಮನೆ ನಿರ್ಮಿಸಬೇಕು. ಆದರೆ, ಖಾಲಿ ನಿವೇಶನ ಬಿಡಬಾರದು. ನಿವೇಶನದಲ್ಲಿ ಕಸ ಸುರಿಯಲು ಅವಕಾಶ ಮಾಡಬಾರದು. ಇವುಗಳನ್ನು ಉಲ್ಲಂಘಿಸಿದರೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಅಂತಹ ನಿವೇಶನಗಳಿಗೆ ಎರಡರಷ್ಟುತೆರಿಗೆ ವಿಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಲಿಕರಿಗೆ ಎಚ್ಚರಿಕೆ ನೀಡಿದರು.

ಸ್ವಚ್ಛವಾಗಿ ಇರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.

ಸರ್ಕಾರ ನಿವೇಶನ ಕೊಟ್ಟಿರೋದು ಮನೆ ಕಟ್ಟಿಕೊಳ್ಳಲಿ ಅಂತ, 20, 30 ವರ್ಷವಾದರೂ ಇನ್ನೂ ಮನೆ ಕಟ್ಟಲು ಆಗದಿದ್ದರೆ, ಅವರು ಕೊಟ್ಟಿರುವ ಹಣಕ್ಕೆ ಬಡ್ಡಿ ಸೇರಿ ಎರಡರಷ್ಟು ಹಣ ನೀಡಿ ನಿವೇಶನ ಹಿಂಪಡೆಯುತ್ತೇವೆ. ಬೆಂಗಳೂರಿನ ಆಸ್ತಿ ಸರ್ಕಾರದ್ದಲ್ಲ, ಬೆಂಗಳೂರು ನಿಮ್ಮ ಆಸ್ತಿ. ಅದನ್ನು ಸ್ವಚ್ಛವಾಗಿ ಇರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಖಾಲಿ ನಿವೇಶದನಲ್ಲಿ ಆಗುವ ಅನಾಹುತಗಳಿಗೆ ಸ್ವಚ್ಛತೆಗೆ ಸರ್ಕಾರ ಜವಾಬ್ದಾರಿ ಆಗಲು ಸಾಧ್ಯವಿಲ್ಲ. ನಿಮ್ಮ ಆಸ್ತಿ ನೀವು ರಕ್ಷಣೆ ಮಾಡಿಕೊಳ್ಳಿ, ರಾಜ್ಯದ ಆಸ್ತಿ ನಾವು ಕಾಪಾಡಬೇಕು ಎಂದರು.

ತಮ್ಮಲ್ಲಿ ಹಸಿರಿನ ಬಗ್ಗೆ ಒಂದು ದೊಡ್ಡ ಆಲೋಚನೆ ಇದೆ, ತಾವುಅಧಿಕಾರ ವಹಿಸಿಕೊಂಡ ನೂರು ದಿನಗಳ ಆಚರಣೆ ಸಂದರ್ಭದಲ್ಲಿ ಅದನ್ನು ಪ್ರಕಟಿಸುತ್ತೇನೆ. ಬೆಂಗಳೂರು ಸ್ವಚ್ಛತೆ ಬಗ್ಗೆ ಪರ,ವಿರೋಧ ಟೀಕೆಗಳು ಬಂದಿವೆ. ಬರಲಿ ಟೀಕೆಗಳು ಬರುತ್ತವೆ. ಆದರೆ, ನಮ್ಮ ಕೆಲಸಗಳು ಉಳಿಯುತ್ತವೆ. ಕೆಲಸ ಮಾಡಿದಾಗ ಟೀಕೆಗಳು ಸಾಯುತ್ತವೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ನಗರದ ಜನರಿಗೆ ಕಟ್ಟಡ ತ್ಯಾಜ್ಯ ಎಲ್ಲಿ ಹಾಕಬೇಕು ಎನ್ನುವುದು ಗೊತ್ತಿಲ್ಲ ಎನ್ನುತ್ತಾರೆ. ರಸ್ತೆಯಲ್ಲಿ ಕಸ ಹಾಕುವವರನ್ನು ಕೇಳಿದಾಗ ಕಸದ ವಾಹನ ಬರುತ್ತಿಲ್ಲಾ ಎಂದು ಹೇಳುತ್ತಾರೆ. ಆಯಾ ದಿನದ ಕಸವನ್ನು ಆಯಾ ದಿನವೇ ಕಸ ಹಾಕಬೇಕು. ಫುಟ್ ಪಾತ್ ಒತ್ತುವರಿ ತೆರವು ಮಾಡಿ ಆದರೆ, ಅಲ್ಲಿನ ವ್ಯಾಪಾರಿಗಳಿಗೆ ಒಂದು ಜಾಗವನ್ನು ಗುರುತು ಮಾಡಿ, ಅವರಿಗೂ ಒಂದು ಜೀವನ ಇದೆ. ಅವರಿಗೂ ಒಂದು ಸ್ಥಳವನ್ನು ಗುರುತು ಮಾಡಿ ಎಂದರು.

ಸಚಿವರಾದ ಕೃಷ್ಣ ಬೈರೇಗೌಡ. ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಶಾಸಕ ಶ್ರೀನಿವಾಸ್ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಉತ್ತರಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಗೂಂಡಾಗಿರಿಗೆ ಹೆದರಲ್ಲ: ಡಿಕೆಶಿ

ಶಿವಾಜಿನಗರದಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಕೇವಲ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಎಂದು ತಿಳಿದುಕೊಂಡರೆ, ಅದು ನಿಮ್ಮ ಭ್ರಮೆ, ಅದು ಅಧಿಕಾರಿಗಳ ಮೇಲಲ್ಲ, ಸರ್ಕಾರ, ಮಂತ್ರಿ, ಶಾಸಕನ ಮೇಲೆ ಮಾಡಿದ ಹಲ್ಲೆ ಎಂದು ಪರಿಗಣಿಸಿದ್ದೇನೆ. ಇಂತಹ ಗೂಂಡಾಗಿರಿಗೆಲ್ಲಾ ನಾವು ಹೆದರಲ್ಲ. ನಗರದ ಎಲ್ಲಾ ಶಾಸಕರ ಎಲ್ಲ ಪಕ್ಷಗಳ ಒಪ್ಪಿಗೆ ಪಡೆದು ಪಾದಚಾರಿ ರಸ್ತೆ ಸ್ವಚ್ಛತೆಗೆ ನಿರ್ಧರಿಸಿದ್ದೇವೆ. ಬೆಂಗಳೂರು ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ಡಿಕೆಶಿ ತಿಳಿಸಿದರು.

ರಸ್ತೆ ಕ್ಲೀನ್ ಮಾಡಿದರೆ ಸರ್ಟಿಫಿಕೇಟ್: ಸಿಎಂ

ಎನ್ ಜಿಓ, ಸಂಘ ಸಂಸ್ಥೆಗಳು ನಗರದ ಯಾವುದಾದರೂ ಒಂದು ಏರಿಯಾ ಅಥವಾ ನಾಲ್ಕು ರಸ್ತೆಗಳನ್ನು ಕ್ಲೀನ್ ಮಾಡುತ್ತೇವೆ ಎಂದು ದತ್ತು ತೆಗೆದುಕೊಂಡರೆ ಅಂತಹವರಿಗೆ ಸರ್ಕಾರದಿಂದ ಸರ್ಟಿಫಿಕೇಟ್ ನೀಡಲಾಗುವುದು. ಎಲ್ಲರೂ ನಾಲ್ಕು ನಾಲ್ಕು ರಸ್ತೆಗಳನ್ನು ದತ್ತುಪಡೆದುಕೊಂಡರೆ ಇಡೀ ಬೆಂಗಳೂರು ಸ್ವಚ್ಛವಾಗುತ್ತದೆ. ಇದಕ್ಕಾಗಿ ಒಂದು ಕಾರ್ಯಕ್ರಮ ರೂಪಿಸಿದರೆ ಸ್ವಾಗತಿಸುತ್ತೇನೆ ಎಂದು ಸಿಎಂ ಹೇಳಿದರು.

PREV
Read more Articles on
click me!

Recommended Stories

ಬೆಂಗಳೂರಿಗರೇ ಗುಡ್‌ನ್ಯೂಸ್: ಸಸಿ ನೆಡಲು ಜಾಗ ಇದೆಯಾ? ಪಾಲಿಕೆಯ ಈ ನಂಬರ್‌ಗೆ ವಾಟ್ಸಪ್ ಮಾಡಿ ಸಾಕು
ಆಗಸ್ಟ್ 5ಕ್ಕೆ ಕಾರಂತ ಬಡಾವಣೆ ನಿವೇಶನಕ್ಕೆ ಅರ್ಜಿ; ಬೆಲೆ ಎಷ್ಟು? ಮಧ್ಯಮ ವರ್ಗಕ್ಕೆ ಸಿಗುತ್ತಾ?