ಸಿಎಂ ಸಿದ್ದರಾಮಯ್ಯ ಜೊತೆ ಕಮಲಾಕರ್‌ ಭಟ್‌ ಇರೋ ಫೋಟೋ ಟ್ವೀಟ್‌ ಮಾಡಿದ ಶಾಸಕ ಸುರೇಶ್‌ಕುಮಾರ್‌!

Published : Feb 04, 2026, 04:39 PM ISTUpdated : Feb 04, 2026, 05:01 PM IST
S Suresh Kumar

ಸಾರಾಂಶ

ಕೊಲೆ ಪ್ರಕರಣದ ಆರೋಪಿ ಕಮಲಾಕರ್ ಭಟ್ ಜೊತೆಗಿನ ಸಂಬಂಧದ ಬಗ್ಗೆ ಶಾಸಕ ಸುರೇಶ್ ಕುಮಾರ್‌ ಮೇಲೆ ಬಿ.ಕೆ. ಹರಿಪ್ರಸಾದ್ ಆರೋಪ ಮಾಡಿದ್ದರು. ಇದಕ್ಕೆ ಫೇಸ್‌ಬುಕ್‌ನಲ್ಲಿ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಸಿದ್ದರಾಮಯ್ಯ ಜೊತೆಗಿನ ಭಟ್ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರು (ಫೆ.4): ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಕಮಲಾಕರ್‌ ಭಟ್‌ನನ್ನು ಬೆಳೆಸಿದ್ದು ಶಾಸಕ ಸುರೇಶ್‌ ಕುಮಾರ್‌, ಆತ ಮಾಡಿದ ಕೃತ್ಯದ ನೈತಿಕ ಹೊಣೆಯನ್ನು ಸುರೇಶ್‌ ಕುಮಾರ್‌ ವಹಿಸಿಕೊಳ್ಳಬೇಕು ಎಂದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಾಸಕ ಸುರೇಶ್‌ ಕುಮಾರ್,'ಸಿದ್ದರಾಮಯ್ಯ ಜೊತೆಗಿನ ಕಮಲಾಕರ್ ಭಟ್ ಪೊಟೋ ಫೋಸ್ಟ್ ಮಾಡಿದ್ದಾರೆ. ಕೊಲೆ‌ ಪ್ರಕರಣದಲ್ಲಿ ಸಿಎಂ ಭಾಗಿಯಾಗಿದ್ದಾರಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಹರಿಪ್ರಸಾದ್‌ಗೆ ಪ್ರಶ್ನಿಸಿ ಪೋಸ್ಟ್ ಮಾಡಿರೋ ಸುರೇಶ್ ಕುಮಾರ್, ಕೊಳೆತ ಮನಸ್ಸಿಗೆ ಕೊಳೆತ ವಿಚಾರಗಳೆ ಬರುವುದು ಎಂದು ಹರಿಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ವಿಮಾನದಲ್ಲಿ ಸಿದ್ದರಾಮಯ್ಯ ಹಾಗೂ ಜ್ಯೋತಿಷಿ ಕಮಲಾಕರ್‌ ಭಟ್‌ ಅಕ್ಕಪಕ್ಕ ಇರುವ, ಕಮಲಾಕರ್‌ ಭಟ್‌ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಅವರು ಪ್ರಕಟಿಸಿದ್ದಾರೆ.

ಇದಕ್ಕೂ ಮುನ್ನ ಫೇಸ್‌ಬುಕ್‌ನಲ್ಲಿ ಬಿಕೆ ಹರಿಪ್ರಸಾದ್‌ ಆರೋಪಕ್ಕೆ ತಿರುಗೇಟು ನೀಡಿ ಸುರೇಶ್‌ ಕುಮಾರ್‌ ದೀರ್ಘಪೋಸ್ಟ್‌ ಪ್ರಕಟಿಸಿದ್ದರು. ಬಿ.ಕೆ. ಹರಿಪ್ರಸಾದ್ ಅವರೇ, ​ನಿಮ್ಮ ಫೇಸ್ಬುಕ್ ಬರಹವನ್ನು ಗಮನಿಸಿದೆ. ಕಾರವಾರದ ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು, ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ "ಬೌದ್ಧಿಕ ದಿವಾಳಿತನ"ವನ್ನು ಎತ್ತಿ ತೋರಿಸುವಂತಿದೆ.

​ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ "ನೈತಿಕ ಹೊಣೆ" ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಿಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ "ನೈತಿಕ ಹೊಣೆ" ಹೊತ್ತಿದ್ದಾರೆಯೇ?

ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ.

​ನೀವು ನನಗೆ ಸಂವಿಧಾನದ ಆರ್ಟಿಕಲ್ 51A(h) ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. "ವೈಜ್ಞಾನಿಕ ಮನೋಭಾವ" ಮತ್ತು "ತಾರ್ಕಿಕತೆ" ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ, ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ "ವೈಜ್ಞಾನಿಕ ಮನೋಭಾವ"? ಇದು ಪಕ್ಕಾ "ಪೂರ್ವಾಗ್ರಹ ಪೀಡಿತ ಮನಸ್ಥಿತಿ". ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ.

​ನಾನು ಜ್ಯೋತಿಷ್ಯವನ್ನಾಗಲಿ ತುಂಬಾ ನಂಬುವನೂ ಅಲ್ಲ ಅಥವಾ ಯಾವುದೇ ಮೂಢನಂಬಿಕೆಯನ್ನಾಗಲಿ ಬೆಂಬಲಿಸುವನೂ ಅಲ್ಲ.

ಆದರೆ, ಧಾರ್ಮಿಕ ನಂಬಿಕೆಗಳಿಗೂ, ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, "ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ" ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ.

​ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ನಿಮ್ಮ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ನೀವು ಉಲ್ಲೇಖಿಸಿದ ಸಂವಿಧಾನಕ್ಕೆ ಮಾಡುವ ದ್ರೋಹ.

ಇನ್ನಾದರೂ ಆಧಾರರಹಿತ ಆರೋಪಗಳನ್ನು ನಿಲ್ಲಿಸಿ, ಘನತೆಯುತ ರಾಜಕಾರಣ ಮಾಡಿ. ಎಂಇಎಸ್ ಕಾಲೇಜಿನಲ್ಲಿ ಮತ್ತು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ನಾವಿಬ್ಬರು ಒಟ್ಟಿಗೆ ಶಿಕ್ಷಣ ಪಡೆದಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲೂ ಇಂದು ಬೇಸರವೆನಿಸುತ್ತದೆ. ಆ ಭಗವಂತ ನಿಮಗೆ ಸದ್ಬುದ್ದಿ ನೀಡಲಿ ಎಂದು ಬೇಸರ ವ್ಯಕ್ತಪಡಿಸಿ ಬರೆದಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಕಾಮಗಾರಿ ನಡೆಯುತ್ತಿರುವಾಗಲೇ 20 ಅಡಿ ಕುಸಿದ ರಸ್ತೆ; ಸುತ್ತಲಿನ ಏರಿಯಾದಲ್ಲಿ ಭಾರೀ ಟ್ರಾಫಿಕ್ ಜಾಮ್!
ಧರ್ಮಸ್ಥಳ 74 ಅಸಹಜ ಸಾವು ಪ್ರಕರಣ: 2 ವಾರದಲ್ಲಿ ವಿವರ ನೀಡುವಂತೆ ಹೈಕೋರ್ಟ್ ಸೂಚನೆ